ಜನಿಸಿದಂದಿನಿಂದಲೂ ಭಾರತದ್ವೇಷವನ್ನು ಸರ್ಕಾರಿನೀತಿಯಾಗಿಯೇ ಮೈಗೂಡಿಸಿಕೊಂಡಿರುವ ಪಾಕಿಸ್ತಾನ, ಭಯೋತ್ಪಾದನೆಗೆ ನಿರಂತರವಾಗಿ ಪ್ರೋತ್ಸಾಹ, ಆಶ್ರಯ ನೀಡುತ್ತಿರುವುದು ಗೊತ್ತಿರುವಂಥದೇ. ಇದೂ ಸಾಲದೆಂಬಂತೆ, ಅಲ್ಲಿನ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿದೆ. ಹೀಗಾಗಿ, ದೇಶ ವಿಭಜನೆ ಆದ ಸಂದರ್ಭಕ್ಕೂ ಈಗಿನದಕ್ಕೂ ಅಲ್ಪಸಂಖ್ಯಾತರ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. ಹಿಂದೆ ಜನಸಂಖ್ಯೆಯ ಶೇ.15ಕ್ಕೂ ಹೆಚ್ಚಿದ್ದ ಈ ಸಮುದಾಯದ ಸಂಖ್ಯೆ ಈಗ 3.6ಕ್ಕೆ ಕುಸಿದಿದೆ. ಪಾಕ್​ನ ಜನಸಂಖ್ಯೆ 20 ಕೋಟಿಗಿಂತ ಹೆಚ್ಚಿಗೆಯಿದೆ. ಅಂದರೆ ಅಲ್ಪಸಂಖ್ಯಾತರ ಪರಿಸ್ಥಿತಿಯನ್ನು ಸುಲಭದಲ್ಲಿ ಊಹಿಸಬಹುದು. ಈ ನಡುವೆ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕಿಯರು ಮತ್ತು ಯುವತಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಮ್​ಗೆ ಮತಾಂತರ ಮಾಡುವ ಕೆಲಸವೂ ಎಗ್ಗಿಲ್ಲದೆ ನಡೆಯುತ್ತಿರುವುದು ಮತ್ತೊಂದು ಕಳವಳಕಾರಿ ಸಂಗತಿ. ಹಿಂದಿನಿಂದಲೂ ಇಂಥದು ನಡೆಯುತ್ತಿದ್ದರೂ ಈಗಂತೂ ಪ್ರತಿ ವರ್ಷ ಏನಿಲ್ಲೆಂದರೂ ಒಂದು ಸಾವಿರ ಮತಾಂತರಗಳು ನಡೆಯುತ್ತವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳಿವೆ.
ಕರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಲಾಕ್​ಡೌನ್ ಸಮಯದಲ್ಲಿ ಯುವತಿಯರ ಮತಾಂತರ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ ಎಂದು ವರದಿಗಳು ಹೇಳುತ್ತವೆ. ಹೀಗೆ ಅಪಹರಿಸಿ ಮತಾಂತರಿಸಲಾದ ಹಿಂದು, ಸಿಖ್ ಹಾಗೂ ಕ್ರಿಶ್ಚಿಯನ್ ಬಾಲಕಿಯರು, ಯುವತಿಯರನ್ನು ವಯಸ್ಸಾದ, ವೃದ್ಧ ವ್ಯಕ್ತಿಗಳಿಗೆ ಮದುವೆ ಮಾಡಿಸಲಾಗುತ್ತಿದೆ. ಬಡ ಯುವತಿಯರ ಮನೆಯವರ ಸಾಲ ತೀರಿಸುವ ಭರವಸೆ ನೀಡಿ ಅಥವಾ ಹಣದ ನೆರವು ನೀಡಿ ಯುವತಿಯರನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗುತ್ತದೆ. ಸಿಂಧ್ ಪ್ರಾಂತ್ಯದಲ್ಲಿ ಇಂಥ ಹಾವಳಿ ಹೆಚ್ಚಿದೆ. ಈ ಬಗ್ಗೆ ಯಾರಾದರೂ ದನಿ ಎತ್ತಿದರೆ ಧರ್ಮನಿಂದನೆ ಆರೋಪ ಹೊರಿಸಲಾಗುತ್ತದೆ. ಹೀಗಾಗಿ ಯಾರೂ ಸಾಕ್ಷಿ ಹೇಳಲು ಸಹ ಮುಂದಾಗುವುದಿಲ್ಲ. 14 ವಯಸ್ಸಿನ ಬಾಲಕಿಯನ್ನು 45 ವರ್ಷ ವಯಸ್ಸಿನ ವ್ಯಕ್ತಿಗೆ ಬಲವಂತವಾಗಿ ಮದುವೆ ಮಾಡಿದ್ದು ಒಂದು ನಿದರ್ಶನವಷ್ಟೆ. ಪಾಕ್ ಕಾನೂನಿನ ಪ್ರಕಾರ, ಹೆಣ್ಣುಮಕ್ಕಳ ಮದುವೆಯ ವಯಸ್ಸು ಕನಿಷ್ಠ 18 ವರ್ಷ. ಆದರೆ, ಬಾಲಕಿಯರನ್ನು ಅಪಹರಿಸಿ ಮದುವೆಯಾಗುವವರು ವಯಸ್ಸಿನ ದಾಖಲೆಗಳನ್ನು ನಕಲು ಮಾಡಿ ಕಾನೂನು ಕಣ್ಣಿಗೆ ಮಣ್ಣೆರಚುತ್ತಿದ್ದಾರೆ.
ಭಾರತ ಸರ್ಕಾರ ಕಳೆದ ವರ್ಷ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಂತರದಲ್ಲಿ ಪಾಕ್​ನಿಂದ ಭಾರತಕ್ಕೆ ಆಸರೆ ಕೋರಿ ಬರುವವರ ಸಂಖ್ಯೆ ಹೆಚ್ಚಿದ್ದು ಅಲ್ಲಿನ ಅಸಹನೀಯ ವಾತಾವರಣ ಸಹಿಸಲಾರದ ಕಾರಣದಿಂದಲೇ. ಇಷ್ಟಿದ್ದರೂ ಪಾಕ್ ಸರ್ಕಾರ ಮಾತ್ರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಿರ್ಲಜ್ಜವಾಗಿ ತನ್ನನ್ನು ಸಮರ್ಥಿಸಿಕೊಳ್ಳುತ್ತದೆ. ಇಂತಹ ಹುಚ್ಚಾಟದಿಂದಾಗಿಯೇ ಜಾಗತಿಕ ವಲಯದಲ್ಲಿ ಆ ದೇಶದ ಹೆಸರು ಸರಿಪಡಿಸಲಾಗದಷ್ಟು ಕೆಟ್ಟಿದ್ದು, ಚೀನಾದಂಥ ಬೆರಳೆಣಿಕೆಯ ದೇಶಗಳು ಮಾತ್ರ ಅದರ ಪರವಾಗಿ ನಿಲ್ಲುತ್ತಿವೆ. ಸಾಲದ ಕೂಪದಲ್ಲಿ ಸಿಲುಕಿ ಮೇಲೇಳಲಾಗದಷ್ಟು ಬಸವಳಿದಿರುವ ಪಾಕಿಸ್ತಾನ, ಇಂಥ ಕಿತಾಪತಿಗಳನ್ನು ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸದಿದ್ದರೆ ಭವಿಷ್ಯದಲ್ಲಿಯೂ ಅದು ಸಾಧನೆ ಮಾಡಲಾಗದು. ಜಗತ್ತಿನ ಕಣ್ಣಲ್ಲಿ ಗೊಂದಲಕಾರಿ, ಅರಾಜಕ, ಉಗ್ರಪ್ರೋತ್ಸಾಹಕ ದೇಶವಾಗಿಯೇ ಉಳಿಯಬೇಕಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 5 =
Remember me
