ಕರೊನಾ ಸೋಂಕಿನ ಹಾವಳಿ ಕಾಣಿಸಿಕೊಂಡು ಈಗಾಗಲೇ ಒಂದು ವರ್ಷ ಕಳೆದಿದೆ. ನೂರಕ್ಕೂ ಹೆಚ್ಚು ಲಸಿಕೆಗಳ ಸಿದ್ಧತೆ ನಡೆಯುತ್ತಿದೆಯಾದರೂ, ಈ ಎಲ್ಲ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳಲಿದೆ? ಕರೊನಾ ಮತ್ತಷ್ಟು ಹಾನಿ ಮಾಡುವ ಮುನ್ನ ಲಸಿಕೆ ಬಂದೀತೆ? ಎಂಬೆಲ್ಲ ಪ್ರಶ್ನೆಗಳು ಶ್ರೀಸಾಮಾನ್ಯರನ್ನು ಕಾಡುತ್ತಿದ್ದವು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಲಸಿಕೆ ತಯಾರಿಸುತ್ತಿರುವ ದೇಶದ ಮೂರು ಕಂಪನಿಗಳಿಗೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದ್ದರಿಂದ ಸ್ವಾಭಾವಿಕವಾಗಿಯೇ ಜನರಲ್ಲಿ ನಿರೀಕ್ಷೆ ಹೆಚ್ಚಿತ್ತು. ಕೊನೆಗೂ, ಲಸಿಕೆ ಕುರಿತಾಗಿ ಕೆಲವು ಸಕಾರಾತ್ಮಕ ಬೆಳವಣಿಗೆಗಳು ಸಂಭವಿಸಿರುವುದು ಸಮಾಧಾನಕರ. ಅಮೆರಿಕದ ಫೈಜರ್ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಗೆ ಬ್ರಿಟನ್ ಅನುಮೋದನೆ ನೀಡಿದ್ದು ತೀರಾ ಅಗತ್ಯವಿರುವ ತನ್ನ ಪ್ರಜೆಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಮುಂದಿನ ವಾರವೇ ಆರಂಭಿಸುವುದಾಗಿ ಬುಧವಾರ ಘೋಷಿಸಿದೆ. ಈ ವಿಚಾರದಲ್ಲಿ ಅಮೆರಿಕ ಮತ್ತು ಯುರೋಪನ್ನು ಹಿಂದಿಕ್ಕಿರುವ ಬ್ರಿಟನ್, ಕರೊನಾ ಲಸಿಕೆಗೆ ಅಧಿಕೃತ ಸಮ್ಮತಿ ನೀಡಿದ ಮೊದಲ ಪಾಶ್ಚಿಮಾತ್ಯ ದೇಶವೆನಿಸಿದೆ. ‘ಫೈಜರ್ ಲಸಿಕೆಗೆ ನಮ್ಮ ದೇಶದ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿರುವುದು ಜಾಗತಿಕ ಜಯವಾಗಿದೆ’ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ವರ್ಣಿಸಿದ್ದಾರೆ.
ಕರೊನಾಕ್ಕೆ ಜಗತ್ತಿನಾದ್ಯಂತ ಈವರೆಗೆ 15 ಲಕ್ಷಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಈ ನಡುವೆ ಕರ್ನಾಟಕದಲ್ಲಿಯೂ ಕರೊನಾ ಲಸಿಕೆ 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಚಾಲನೆ ನೀಡಿದ್ದಾರೆ. 1600-1800 ಜನರಿಗೆ ಪ್ರಾಯೋಗಿಕವಾಗಿ ಲಸಿಕೆ ನೀಡಲಾಗುತ್ತದೆ. ‘ರಾಜ್ಯದಲ್ಲಿ ಕೊವ್ಯಾಕ್ಸಿನ್ ಲಸಿಕೆ ಯಶಸ್ವಿಯಾಗುವ ನಿರೀಕ್ಷೆಯಿದ್ದು, ಲಸಿಕೆ ವಿತರಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಹಾಗಂತ ಜನರು ಮೈಮರೆಯುವಂತಿಲ್ಲ. ದೇಶದ ಹಲವು ರಾಜ್ಯಗಳಲ್ಲಿ ಕರೊನಾ 2ನೇ ಅಲೆ ಕಾಣಿಸಿಕೊಂಡ ಪರಿಣಾಮ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅಮೆರಿಕದಲ್ಲಂತೂ ಸ್ಥಿತಿ ಶೋಚನೀಯವಾಗಿದೆ. ಅಲ್ಲಿ ಸೋಂಕು ಪ್ರಸರಣದ ವೇಗ ಹೆಚ್ಚಿದ್ದು, ಮರಣ ಪ್ರಮಾಣವೂ ಅಧಿಕಗೊಂಡಿದೆ. ಚಳಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಎರಡನೇ ಅಲೆ ಕಾಣಿಸಿಕೊಳ್ಳುವ ಭೀತಿ ಸೃಷ್ಟಿಯಾಗಿದೆ. ಹಾಗಾಗಿ, ಲಸಿಕೆ ಇನ್ನೂ ಪ್ರಯೋಗ ಹಂತದಲ್ಲಿ ಇರುವುದರಿಂದ ಜನರು ಸುರಕ್ಷತಾ ಕ್ರಮಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು.
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯನ್ನು ರದ್ದು ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ರಸ್ತೆ, ಪಬ್, ಕ್ಲಬ್​ಗಳಲ್ಲಿ ಜನರು ಗುಂಪು-ಗುಂಪಾಗಿ ಸೇರುವುದರಿಂದ ಸೋಂಕು ತೀವ್ರವಾಗಿ ಹಬ್ಬಬಹುದು. ಹಾಗಾಗಿ, ಹೊಸ ವರ್ಷಾಚರಣೆಯನ್ನೇ ರದ್ದುಗೊಳಿಸುವ ಚಿಂತನೆ ಸೂಕ್ತವಾಗಿಯೇ ಇದೆ. ಕರೊನಾ ವಿರುದ್ಧದ ಹೋರಾಟ ನಿರ್ಣಾಯಕ ಹಂತಕ್ಕೆ ಬಂದಿರುವಾಗ ಜನರು ಮತ್ತು ಸರ್ಕಾರದ ಪ್ರತಿ ನಡೆಯೂ ಎಚ್ಚರಿಕೆಯಿಂದ ಕೂಡಿರಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 6 =
Remember me
