ಯಾದಗಿರಿಯ ಎಸ್​ಐ ಪರಶುರಾಮ್ ಸಾವಿನ ಸುದ್ದಿ ಮಾಸುವ ಮುನ್ನವೇ, ಬೆಂಗಳೂರಿನ ಸಿಸಿಬಿ ಇನ್​ಸ್ಪೆಕ್ಟರ್ ತಿಮ್ಮೇಗೌಡ ಭಾನುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿರುವುದು, ಪೊಲೀಸ್ ಇಲಾಖೆಯಲ್ಲಿ ಆತಂಕ ಮೂಡಿಸಿದೆ. ಹೈಪ್ರೊಫೈಲ್ ಪ್ರಕರಣಗಳ ಒತ್ತಡದಿಂದ ಅವರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳ ಆತ್ಮಹತ್ಯೆ ಘಟನೆಗಳು ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ. ಅಧಿಕಾರಿಗಳಿಗೆ ಕೆಲಸಕ್ಕೆ ಪೂರಕವಲ್ಲದ ವಾತಾವರಣ ಸೃಷ್ಟಿಯಾಗಿರುವುದು ಈ ಘಟನೆಗಳಿಂದ ಸ್ಪಷ್ಟವಾಗುತ್ತಿದ್ದು, ಅಧಿಕಾರಶಾಹಿಯಲ್ಲಿ ಚಿಂತೆಯ ಕಾಮೋಡ ಕವಿದಿದೆ.
ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳ ಪೈಕಿ ಪೊಲೀಸ್ ಇಲಾಖೆಯ ಉದ್ಯೋಗಿಗಳ ಪ್ರಮಾಣ ಜಾಸ್ತಿ ಇದೆ. ಈ ಆತ್ಮಹತ್ಯೆಗಳಿಗೆ ಕೆಲಸದಲ್ಲಿ ಹೆಚ್ಚಿನ ಒತ್ತಡ, ಹಣಕಾಸಿನ ಅಕ್ರಮಗಳು, ಕೌಟುಂಬಿಕ/ಬಾಹ್ಯ ಸಂಬಂಧಗಳು ಮುಂತಾಗಿ ಹಲವು ಕಾರಣಗಳಿರಬಹುದು. ಆದರೆ ಇವರೆಲ್ಲ ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಹೋಗುತ್ತಿರುವುದು ಖಂಡಿತ ಅಪೇಕ್ಷಣೀಯವಲ್ಲ. ಆಡಳಿತಶಾಹಿಯನ್ನು ಚುರುಕುಗೊಳಿಸುವುದೆಂದರೆ ಕೇವಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದಲ್ಲ ಅಥವಾ ಅವರ ಮೇಲೆ ಅತಿಯಾದ ಒತ್ತಡ ಹೇರುವುದಲ್ಲ. ಸರ್ಕಾರಿ ಇಲಾಖೆಗಳಲ್ಲಿ ಉತ್ತರದಾಯಿತ್ವದ ಕೊರತೆ ಇದ್ದು, ಕೊನೆಯ ಕ್ಷಣದಲ್ಲಿ ತಪ್ಪನ್ನು ಅಧಿಕಾರಿ ಅಥವಾ ಹಿರಿಯ ಸಿಬ್ಬಂದಿಯ ತಲೆಗೆ ಕಟ್ಟಲಾಗುತ್ತದೆ. ಇಲ್ಲವೆ, ಉಸಿರುಗಟ್ಟಿಸುವಂಥ ವಾತಾವರಣ ಸೃಷ್ಟಿಯಾಗುವುದರಿಂದ ಸಿಬ್ಬಂದಿ ಕೈಚೆಲ್ಲುವಂತಾಗುತ್ತದೆ. ಅದೆಷ್ಟೋ ಬಾರಿ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದರೂ ಸೂಕ್ತ ಸ್ಪಂದನೆ ಸಿಗುವುದಿಲ್ಲ. ಅಂಥ ಸಂದರ್ಭದಲ್ಲಿ ಹತಾಶೆಗೆ ಒಳಗಾಗಿ, ಆತ್ಮಹತ್ಯೆಯಂಥ ನಿರ್ಧಾರ ತಳೆಯುತ್ತಾರೆ. ಆತ್ಮಹತ್ಯೆ ನಡೆದ ಬಳಿಕ ತನಿಖೆಯ ಪ್ರಹಸನ ನಡೆಸುವ ಬದಲು, ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪರಿಹರಿಸಲು ಯತ್ನಿಸಬೇಕು. ಈ ದೃಷ್ಟಿಯಲ್ಲಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕು.
ಪೊಲೀಸ್ ಇಲಾಖೆಯಲ್ಲಂತೂ ರಾಜಕೀಯ ಒತ್ತಡ, ಕೆಲಸದ ಒತ್ತಡ, ವಾರದ ರಜೆಗೂ ಪರದಾಟ, ಪದೇಪದೆ ವರ್ಗಾವಣೆಯಂಥ ಸಮಸ್ಯೆಗಳು ತೀವ್ರ ಪ್ರಮಾಣದಲ್ಲಿವೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸರ ಹಿತ ಕಾಯುವಲ್ಲಿಯೇ ವ್ಯವಸ್ಥೆ ವಿಫಲವಾದರೆ, ಪೊಲೀಸ್ ಇಲಾಖೆಯಿಂದ ಉತ್ತಮ ಸೇವೆ ನಿರೀಕ್ಷಿಸಲು ಹೇಗೆ ಸಾಧ್ಯ? ಆದ್ದರಿಂದ, ಇಲಾಖೆಯಲ್ಲಿನ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನಗಳನ್ನು ಕೈಗೊಳ್ಳುವುದು ಅತ್ಯಂತ ಅವಶ್ಯವಾಗಿದೆ.
ಆತ್ಮಹತ್ಯೆ ಘಟನೆಗಳು ಹೆಚ್ಚುತ್ತಿರುವ ಇಂಥ ಸಂದರ್ಭದಲ್ಲಿ ನೌಕರರು ಧೃತಿಗೆಡುವಂತಾಗಬಾರದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ನೌಕರರು ಮತ್ತು ಅಧಿಕಾರಿಗಳ ಮನೋಸ್ಥೈರ್ಯವನ್ನು ಹೆಚ್ಚಿಸಲು ಮುಂದಾಗಬೇಕು. ಅದಕ್ಕಾಗಿ, ಸೂಕ್ತ ಸ್ಪಂದನೆ, ಕೌನ್ಸೆಲಿಂಗ್ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕು. ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರಿ ಅಥವಾ ನೌಕರರ ಆತ್ಮಹತ್ಯೆಯಂಥ ಕಹಿಘಟನೆಗಳು ನಡೆಯದಂತೆ ಕಾಳಜಿ ವಹಿಸಬೇಕು. ನೌಕರವರ್ಗದ ಮನೋಸ್ಥೈರ್ಯ ಕುಸಿದರೆ ಅದರಿಂದ ಇಡೀ ಆಡಳಿತಯಂತ್ರವೇ ಸಂಕಷ್ಟಕ್ಕೆ ಸಿಲುಕುತ್ತದೆ. ಹಾಗಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು, ಪರಿಹಾರದ ಹೆಜ್ಜೆಗಳನ್ನು ಇರಿಸಲಿ.
ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್​​ಗೆ ತಲುಪಿದ ವಿನೇಶ್ ಫೋಗಟ್: ಕೇಂದ್ರಕ್ಕೆ ಟಾಂಗ್ ಕೊಟ್ಟ ಸಾಕ್ಷಿ, ಬಜರಂಗ್‌ ಪೂನಿಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 5 =
Remember me
