ರಾಜ್ಯದಲ್ಲಿ ಪುನರ್ವಸು ಮಳೆ ಆರ್ಭಟ ದಿನೇದಿನೆ ಹೆಚ್ಚುತ್ತಿದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಜತೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಸಂಪೂರ್ಣ ತತ್ತರಿಸಿವೆ. ಸಾವಿರಾರು ಎಕರೆ ಕೃಷಿ ಭೂಮಿ, ನೂರಾರು ಮನೆಗಳು ಜಲಾವೃತವಾಗಿದ್ದು, ಸಂಪರ್ಕ ಕಳೆದುಕೊಂಡ ನೂರಾರು ಗ್ರಾಮಗಳು ದ್ವೀಪದಂತಾಗಿವೆ. ನದಿ, ಕೆರೆ, ಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಮಂಗಳವಾರ ಗುಡ್ಡ ಜರಿದ ಪರಿಣಾಮ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರ ದುರಂತ ಬೆಚ್ಚಿಬೀಳಿಸಿದ್ದು, ಶಿರೂರು ಗ್ರಾಮದಲ್ಲಿ ಮೌನ ಆವರಿಸಿದೆ. ಘಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ನೂರು ಮೀಟರ್​ಗಿಂತ ಹೆಚ್ಚು ಜಾಗ ಮಣ್ಣು, ಕಲ್ಲು, ಬಂಡೆಯಿಂದ ಮುಚ್ಚಿಹೋಗಿದೆ. ಕೆಲ ವರ್ಷಗಳ ಹಿಂದಷ್ಟೇ ಕೊಡಗು ಜಿಲ್ಲೆ ಭೂಕುಸಿತ ದುರಂತಕ್ಕೆ ಸಾಕ್ಷಿಯಾಗಿತ್ತು.
ಮಳೆಗೆ ಸಂಬಂಧಿಸಿದ ಅವಘಡಗಳು ಭಿನ್ನ. ಆದರೆ, ಭೂಕುಸಿತ, ಗುಡ್ಡ ಜರಿಯುವುದು ಸೇರಿದಂತೆ ಮುಂತಾದ ಘಟನೆಗಳಿಗೆ ಪ್ರಕೃತಿಯಲ್ಲಿ ಮಾನವನ ಅತಿಯಾದ ಹಸ್ತಕ್ಷೇಪ ಮತ್ತು ಮೀತಿಮೀರಿದ ಸ್ವಾರ್ಥ ಕಾರಣ. ಅಭಿವೃದ್ಧಿಯ ಪ್ರಕ್ರಿಯೆ ಎಂದಿಗೂ ಏಕಮಾರ್ಗದಲ್ಲಿ ಸಾಗಬಾರದು. ಪ್ರಕೃತಿಕೇಂದ್ರಿತ ವಿಕಾಸವನ್ನು ಮರೆತ ಪರಿಣಾಮವೇ ಹವಾಮಾನ ಬದಲಾವಣೆ, ಅದಕ್ಕೆ ಸಂಬಂಧಿಸಿದ ಹಲವು ಅಡ್ಡಪರಿಣಾಮಗಳನ್ನು ಮನುಕುಲ ಅನುಭವಿಸುತ್ತಿದೆ. ಅಭಿವೃದ್ಧಿ ಮತ್ತು ನಿಸರ್ಗದ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ನಮ್ಮ ಸರ್ಕಾರದ ನೀತಿಗಳು ವಿಫಲವಾಗಿರುವುದು ಸ್ಪಷ್ಟ. ಮಾನವ ಪ್ರಕೃತಿಯ ಒಂದು ಭಾಗ ಮಾತ್ರ. ಉಳಿದ ಜೀವಸಂಕುಲಕ್ಕೂ ಪ್ರಕೃತಿಯ ಮೇಲೆ ಬದುಕು ರೂಪಿಸಿಕೊಳ್ಳುವ ಹಕ್ಕು ಇದೆ ಎಂಬುದನ್ನು ಮರೆತ ಮಾನವನ ಅತಿಯಾದ ವಾಣಿಜ್ಯ ಚಟುವಟಿಕೆಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಕಡಿದಾದ ಬೆಟ್ಟಗುಡ್ಡಗಳನ್ನು ಕೊರೆದು ರೆಸಾರ್ಟ್, ರಸ್ತೆ ಸೇರಿದಂತೆ ಹಲವು ನಿರ್ಮಾಣ ಕಾಮಗಾರಿಗಳು ಕೈಗೊಳ್ಳುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದ್ದರೂ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಆಯಾ ಭೌಗೋಳಿಕ ಪ್ರದೇಶಕ್ಕೆ ಅದರದ್ದೇ ಆದ ವೈಶಿಷ್ಟ್ಯವಿರುತ್ತದೆ. ಅದನ್ನು ಕಡೆಗಣಿಸಿ, ಮಣ್ಣಿನ ಸಂರಚನೆಯ ಪ್ರಕ್ರಿಯೆಗೂ ಧಕ್ಕೆ ಮಾಡಿ, ಬೆಟ್ಟಗುಡ್ಡಗಳ ಬುಡದಲ್ಲಿ ಕಟ್ಟಡಗಳು ಕಟ್ಟಿದರೆ ಅಪಾಯವಲ್ಲದೆ ಇನ್ನೇನಾದಿತು? ಪ್ರಕೃತಿಯ ದೃಷ್ಟಿಯಲ್ಲಿ ಸೂಕ್ಷ್ಮವಾಗಿರುವ ಪ್ರದೇಶಗಳಲ್ಲಿ ಮಾನವನ ಅತಿಯಾದ ಹಸ್ತಕ್ಷೇಪ ನಿಲ್ಲದಿದ್ದಲ್ಲಿ ಮುಂದಿನ ದಿನಗಳು ಮತ್ತಷ್ಟು ಭೀಕರ. ಅಲ್ಲದೆ, ಈ ವರ್ಷ ಲಾ ನಿನೋ ಪರಿಣಾಮ ಏಷ್ಯಾದ ಇತರ ರಾಷ್ಟ್ರಗಳಿಗಿಂತ ಭಾರತದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಹಾಗಾಗಿ, ಮುಂಬರುವ ದಿನಗಳಲ್ಲಿ ಇನ್ನಷ್ಟು ಎಚ್ಚರ ವಹಿಸಬೇಕಿದೆ.
ಶಿರೂರು ದುರಂತ ಪಾಠವಾಗಬೇಕಿದ್ದು, ಪ್ರಕೃತಿಗೆ ಧಕ್ಕೆ ಒದಗಿಸುವ ತಥಾಕಥಿಕ ಅಭಿವೃದ್ಧಿ ನೀತಿಗಳನ್ನು ಬದಲಿಸಬೇಕಿದೆ. ಪ್ರಕೃತಿ ಉಳಿದರೆ ಮನುಕುಲ, ಜೀವವೈವಿಧ್ಯ ಅಸ್ತಿತ್ವ ಕಾಯ್ದುಕೊಳ್ಳಲು ಸಾಧ್ಯ. ಈ ವಿವೇಚನೆಯನ್ನು ಮರೆತು, ಪ್ರಕೃತಿಯನ್ನು ಕೆಣಕುವ ದುಸ್ಸಾಹಸ ಮಾಡಬಾರದು.
ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ವಿಧೇಯಕಕ್ಕೆ ತಾತ್ಕಾಲಿಕ ತಡೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 8 =
Remember me
