ನಮ್ಮಲ್ಲಿ ಆಗಾಗ ಟೋಲ್ ವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅತೃಪ್ತಿ, ಅಸಮಾಧಾನಗಳು ವ್ಯಕ್ತವಾಗುತ್ತಿರುತ್ತವೆ. ಜನರಿಂದ ಹಣ ಸುಲಿಗೆಯಾಗುತ್ತದೆ ಎಂಬ ಆರೋಪವಂತೂ ಸಾಮಾನ್ಯ. ಈ ನಿಟ್ಟಿನಲ್ಲಿ ಈ ಒಟ್ಟಾರೆ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ಕೇಂದ್ರ ಸರ್ಕಾರ ತಂದಿದ್ದು, ಇನ್ನಷ್ಟು ಸುಧಾರಣೆಗಳಿಗೆ ಆಲೋಚಿಸಿರುವುದು ಸ್ವಾಗತಾರ್ಹ. ಇನ್ನೊ ಒಂದು ವರ್ಷದಲ್ಲಿ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಅಂದರೆ, ಜಿಪಿಎಸ್ ವ್ಯವಸ್ಥೆ ಬಂದ ನಂತರದಲ್ಲಿ ಈಗಿನ ಹಾಗೆ ಭೌತಿಕ ಟೋಲ್ ಬೂತ್​ಗಳು ಇರುವುದಿಲ್ಲ; ವಾಹನಗಳು ಕಾಲವ್ಯಯವಿಲ್ಲದೆ ಸಾಗಬಹುದು. ಈಗ ಟೋಲ್​ಗಳಲ್ಲಿ ವಾಹನಗಳಿಗೆ ಫಾಸ್ಟಾ್ಯಗ್ ಕಡ್ಡಾಯಗೊಳಿಸಲಾಗಿದ್ದು, ಶೇ.93 ವಾಹನಗಳು ಇದನ್ನು ಅಳವಡಿಸಿಕೊಂಡಿವೆ. ಹೊಸ ವಾಹನಗಳಲ್ಲಿ ಫಾಸ್ಟಾ್ಯಗ್ ಅಳವಡಿಸಿರಬೇಕಾಗುತ್ತದೆ ಎಂದು ಸರ್ಕಾರ ಸೂಚನೆ ನೀಡಿದೆ. ಟೋಲ್ ಬೂತ್​ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದರಿಂದ ಅಪಾರ ಪ್ರಮಾಣದಲ್ಲಿ ಇಂಧನ ಪೋಲಾಗುತ್ತದೆಯಲ್ಲದೆ, ಅಮೂಲ್ಯ ಮಾನವ ಸಂಪನ್ಮೂಲ ಸಹ ವ್ಯರ್ಥವಾಗುತ್ತದೆ. ಈ ಹಿನ್ನೆಲೆಯಲ್ಲಿ ಟೋಲ್​ರಹಿತ ವ್ಯವಸ್ಥೆ ಉತ್ತಮ ಉಪಾಯ. ಸಚಿವ ಗಡ್ಕರಿ ಹೇಳಿದ ಪ್ರಕಾರ, ವಾಹನದ ಮೇಲಿರುವ ಜಿಪಿಎಸ್ ಇಮೇಜಿಂಗ್ ಮೂಲಕ ಟೋಲ್ ಹಣವನ್ನು ಸಂಗ್ರಹಿಸಲಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಕರೊನಾ ಕಾರಣದಿಂದ ಆದ ಸಾವಿಗಿಂತ ರಸ್ತೆ ಅಪಘಾತಗಳಲ್ಲಿ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂಬ ಆತಂಕಕಾರಿ ವಿಷಯವನ್ನೂ ನಿತಿನ್ ಗಡ್ಕರಿ ಅವರು ಬಹಿರಂಗಪಡಿಸಿದ್ದಾರೆ. ಕರೊನಾದಿಂದಾಗಿ 1.46 ಲಕ್ಷ ಜನರು ಸಾವನ್ನಪ್ಪಿದ್ದರೆ, ರಸ್ತೆ ಅಪಘಾತಗಳಲ್ಲಿ 1.5 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದೂ ಅವರು ಹೇಳಿದ್ದಾರೆ.
ಟೋಲ್ ವ್ಯವಸ್ಥೆಗೆ ಹೊಸ ರೂಪ ಕೊಡುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಇದರ ಜತೆಗೆ, ಈ ಇಡೀ ವ್ಯವಸ್ಥೆ ಜನಸ್ನೇಹಿಯಾಗಿರುವಂತೆ ನೋಡಿಕೊಳ್ಳಬೇಕಾದುದೂ ಮುಖ್ಯ. ಯಾವುದೇ ದೇಶದ ಅಭಿವೃದ್ಧಿಯಲ್ಲಿ ರಸ್ತೆ ಸಂಪರ್ಕವೂ ಮುಖ್ಯ ಪಾತ್ರ ವಹಿಸುತ್ತದೆ. ಅದರಲ್ಲೂ, ಸರಕು ಸಾಗಾಣಿಕೆಗೆ ರಸ್ತೆ ಮಾರ್ಗವನ್ನು ಹೆಚ್ಚು ಅವಲಂಬಿಸಿರುವ ಭಾರತದಂತಹ ದೇಶಕ್ಕೆ ಈ ಮಾತು ಹೆಚ್ಚು ಅನ್ವಯ. ಕೇವಲ ಸರ್ಕಾರವೊಂದರಿಂದಲೇ ರಸ್ತೆಗಳನ್ನು ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಖಾಸಗಿಯವರನ್ನೂ ಈ ಕಾರ್ಯದಲ್ಲಿ ತೊಡಗಿಸುವ ನೀತಿ ಅನುಷ್ಠಾನಕ್ಕೆ ಬಂತು. ಆದರೆ ಈ ಕಾರಣಕ್ಕೆ ಬೇರೆ ಬೇರೆ ಹೆಸರಲ್ಲಿ ಜನರಿಂದ ವಸೂಲು ಮಾಡುವುದು ಎಷ್ಟು ಸರಿ? ವಾಹನ ಖರೀದಿಸುವಾಗಲೇ ರಸ್ತೆ ತೆರಿಗೆ ಕಟ್ಟಲಾಗಿರುತ್ತದೆಯಾದರೂ, ನಂತರವೂ ಶುಲ್ಕವೇಕೆ ಎಂಬುದು ಸಾರ್ವಜನಿಕರ ಪ್ರಶ್ನೆ. ರಾಜ್ಯ ವಿಧಾನಸಭೆಯಲ್ಲಿ ಹಾಲಿ ಅಧಿವೇಶನದಲ್ಲಿ ಸಹ ಅವೈಜ್ಞಾನಿಕ ಟೋಲ್ ವ್ಯವಸ್ಥೆ ಬಗ್ಗೆ ಬಿರುಸಿನ ಚರ್ಚೆಯಾಗಿದೆ; ನಿಗದಿಂತ ಅಂತರಕ್ಕಿಂತ ಮೊದಲೇ ಟೋಲ್ ಬೂತ್ ಇರುವ ಬಗ್ಗೆ ಶಾಸಕರು ಗಮನ ಸೆಳೆದಿದ್ದು, ಈ ನ್ಯೂನತೆ ಸರಿಪಡಿಸಲು ಆಗ್ರಹ ವ್ಯಕ್ತವಾಗಿದೆ. ಜನರು ಮತ್ತು ಜನಪ್ರತಿನಿಧಿಗಳ ಭಾವನೆಗಳನ್ನು ಗಮನಿಸಿ ಕೇಂದ್ರ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಲಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 15 =
Remember me
