ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ಕಲುಷಿತ ನೀರು ಸೇವಿಸಿ ಎಂಟು ಜನರು ಮೃತಪಟ್ಟ ಕಹಿಘಟನೆಯ ನೆನಪು ಮಾಸುವ ಮುನ್ನವೇ ಈಗ ಮುಳಬಾಗಿಲಿನಲ್ಲಿ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದು, ಏಳು ಜನರು ಅಸ್ವಸ್ಥಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಒಬ್ಬ ಮಹಿಳೆ ಸಾವಿಗೀಡಾಗಿದ್ದು, ಹತ್ತು ಜನರು ಅಸ್ವಸ್ಥಗೊಂಡಿದ್ದಾರೆ. ಮೇಲಿಂದ ಮೇಲೆ ಇಂಥ ಘಟನೆಗಳು ವರದಿಯಾಗುತ್ತಿರುವುದು ನಿಜಕ್ಕೂ ಶೋಚನೀಯ. ಕೆಲವೇ ದಿನಗಳ ಹಿಂದೆ ಕಲಬುರಗಿಯಲ್ಲೂ ಇಂತಹ ಪ್ರಕರಣಗಳು ವರದಿಯಾಗಿದ್ದವು. ಮೂಲಸೌಕರ್ಯವಾದ ಕುಡಿಯುವ ನೀರಿನ ಪೂರೈಕೆಯಲ್ಲೂ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯಕ್ಕೆ ಜನರು ಪ್ರಾಣ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.
ಇಂಥ ಘಟನೆಗಳಿಗೆ ಮುಖ್ಯ ಕಾರಣವೆಂದರೆ ಕುಡಿಯುವ ನೀರಿನ ಪೈಪ್​ಗಳ ದುಸ್ಥಿತಿ. ಅವುಗಳಲ್ಲಿ ಪೂರೈಕೆಯಾಗುವ ನೀರಿನ ಜತೆ ಕೊಳಚೆ ನೀರು ಸೇರಿಕೊಂಡು ಅನಾಹುತ ಸಂಭವಿಸುತ್ತಿವೆ. ಇನ್ನು ಕೆಲವೆಡೆ, ಕುಡಿಯುವ ನೀರಿನ ಟ್ಯಾಂಕ್​ಗಳನ್ನು ವರ್ಷಗಟ್ಟಲೇ ಸ್ವಚ್ಛಗೊಳಿಸದಿರುವುದು ಕೂಡ ಕಾರಣವಾಗಿದೆ. ರಾಜ್ಯದಲ್ಲಿ ಈ ಬಾರಿ ಭೀಕರವಾದ ಬರಗಾಲವಿತ್ತು. ಈಗ ಮುಂಗಾರಿನ ಆಗಮನದಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಮಳೆ ವ್ಯಾಪಿಸುತ್ತಿದೆ. ಆದರೆ, ಬರಗಾಲದ ಅವಧಿಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಾಗ ಮನುಷ್ಯರ ಪ್ರಾಣಕ್ಕೆ ಕಂಟಕವಾಗುವ ಅನೇಕ ರಾಸಾಯನಿಕಗಳು ನೀರಿಗೆ ಸೇರಿ ಅದು ಕಲುಷಿತವಾಗುತ್ತದೆ. ಅಲ್ಲದೆ, ಮಳೆಗಾಲ ಆರಂಭವಾಗುತ್ತಿದ್ದಂತೆ ಚರಂಡಿಗಳು ತುಂಬಿ ಹರಿದು, ಕಲ್ಮಶ ನೀರು ಕುಡಿಯುವ ನೀರಿನ ಜತೆಗೆ ಸೇರಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತದೆ. ಶುದ್ಧ ನೀರು ಪೂರೈಸುವಲ್ಲಿ ವ್ಯವಸ್ಥೆಯ ವೈಫಲ್ಯ ಇಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಅಲ್ಲದೆ, ನದಿ, ಹಳ್ಳ, ಕೆರೆ ಸೇರಿ ಜಲಮೂಲಗಳಿಗೆ ಅಪಾರ ಪ್ರಮಾಣದ ತ್ಯಾಜ್ಯ ಸೇರುತ್ತಿರುವುದು ಇಂಥ ದುರಂತಗಳ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಜಲಮೂಲಗಳ ನೈರ್ಮಲ್ಯ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲಿ ಶುಚಿತ್ವ ಕಾಯ್ದುಕೊಳ್ಳುವುದು ಅಗತ್ಯ. ದುರಂತ ಸಂಭವಿಸಿದಾಗ ಮಾತ್ರ ಎಚ್ಚೆತ್ತುಕೊಂಡು ಸ್ಪಂದಿಸುವ ಸರ್ಕಾರ, ದೀರ್ಘಕಾಲಿನ ಪರಿಹಾರ ಕ್ರಮಗಳ ಬಗ್ಗೆ ಗಮನ ಹರಿಸುವುದಿಲ್ಲ. ಇದರಿಂದ ಸಮಸ್ಯೆ ಪರಿಹಾರ ಕಾಣದೆ ಸಮಸ್ಯೆಯಾಗಿಯೇ ಉಳಿದುಕೊಳ್ಳುತ್ತದೆ. ಅಧಿಕಾರಿಗಳು ಜಡತ್ವ ಬಿಟ್ಟು ಕ್ರಿಯಾಶೀಲತೆ ಮತ್ತು ಕಳಕಳಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹಲವು ಸಭೆಗಳಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸೂಚನೆ ನೀಡಿದರೂ, ಅದು ಪಾಲನೆಯಾಗುತ್ತಿಲ್ಲ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ಈ ದಿಸೆಯಲ್ಲಿ ಸರ್ಕಾರಿ ಅಧಿಕಾರಿಗಳ ಹೊಣೆಗಾರಿಕೆ ದೊಡ್ಡದಿದೆ. ಅದನ್ನು ಸರಿಯಾಗಿ ನಿಭಾಯಿಸದೇ ಇರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಮುಂಬರುವ ದಿನಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯನ್ನು ಖಾತ್ರಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಇಂಥ ದುರಂತಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಮಳೆಗಾಲ ಈಗಷ್ಟೇ ಅಡಿ ಇಟ್ಟಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಇನ್ನಷ್ಟು ಮುತುವರ್ಜಿ ವಹಿಸಬೇಕಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕಿದೆ.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:2 × four =
Remember me
