ಸೋಮವಾರ ನಡೆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 90ನೇ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹಲವು ಮಹತ್ವದ ಮಾತುಗಳನ್ನು ಆಡಿದ್ದಾರೆ. ಮುಖ್ಯವಾಗಿ, ಮುಂದಿನ ಹತ್ತು ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಪ್ರಯತ್ನಗಳನ್ನು ಹೆಚ್ಚಿಸಬೇಕಿದೆ, ಜಾಗತಿಕವಾಗಿ ಭಾರತವನ್ನು ಮೂರನೇ ಆರ್ಥಿಕ ಶಕ್ತಿಯಾಗಿಸುವ ಗುರಿಯತ್ತ ಗಮನ ಕೇಂದ್ರೀಕರಿಸಬೇಕಿದೆ ಎಂದಿದ್ದಾರೆ. ಅಲ್ಲದೆ, ಹಲವು ದೇಶಗಳು ರೂಪಾಯಿ ಮೂಲಕ ವಹಿವಾಟು ನಡೆಸಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ರೂಪಾಯಿಗೆ ಜಾಗತಿಕ ಮಾನ್ಯತೆ ಒದಗಿಸಲು ಯತ್ನಿಸುವುದಾಗಿ ಹೇಳಿದ್ದಾರೆ.
2023ರ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಯುಕ್ತ ಅರಬ್ ಸಂಸ್ಥಾನಗಳಿಗೆ (ಯುಎಇ) ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು ನಡೆಸಲು ಒಪ್ಪಂದ ಮಾಡಿಕೊಳ್ಳಲಾಯಿತು. ಭಾರತದ ಪಾಲಿಗೆ ಯುಎಇ ಮೂರನೆಯ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿರುವುದರಿಂದ, ಆ ದೇಶದ ಜತೆ ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು ನಡೆಸುವ ಒಪ್ಪಂದ ಮಹತ್ವದ್ದು.
ರಷ್ಯಾ ದೇಶವು ಯೂಕ್ರೇನ್ ಮೇಲೆ ದಾಳಿ ನಡೆಸಿದ ನಂತರದಲ್ಲಿ ಪಾಶ್ಚಿಮಾತ್ಯ ದೇಶಗಳು ಒಟ್ಟಾಗಿ ರಷ್ಯಾದ ಮೇಲೆ ಹಲವು ನಿರ್ಬಂಧಗಳನ್ನು ಹೇರಿದ್ದು ಗೊತ್ತಿರುವಂಥದ್ದೆ. ಈ ಸಂದರ್ಭದಲ್ಲಿ ಭಾರತವು ರೂಪಾಯಿ ಬಳಸಿ ವಹಿವಾಟು ನಡೆಸುವ ವಿಚಾರವಾಗಿ ರಷ್ಯಾದೊಂದಿಗೆ ಒಪ್ಪಂದವೊಂದು ಮಾಡಿಕೊಂಡಿದ್ದು ಗಮನಾರ್ಹ. ಇಂಡೋನೇಷ್ಯಾ ಮತ್ತು ತಾಂಜೇನಿಯಾ ಜತೆ ಕೂಡ ಸ್ಥಳೀಯ ಕರೆನ್ಸಿಯಲ್ಲಿ ವಹಿವಾಟು ನಡೆಸುವ ಬಗ್ಗೆ ಮಾತುಕತೆಗಳು ನಡೆದಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ದ್ವಿಪಕ್ಷೀಯ ವಹಿವಾಟುಗಳಲ್ಲಿ ರೂಪಾಯಿ ಬಳಕೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಆರಂಭಿಕ ಹೆಜ್ಜೆ ಇರಿಸಲಾಗಿದೆಯಾದರೂ, ಈ ದಾರಿಯಲ್ಲಿ ಇನ್ನಷ್ಟು ಕ್ರಮಿಸಬೇಕಿದೆ ಎಂಬುದು ಸ್ಪಷ್ಟ. ಅಮೆರಿಕನ್ ಡಾಲರ್ ಹೊರತುಪಡಿಸಿ ಹೆಚ್ಚಿನ ಅಂತಾರಾಷ್ಟ್ರೀಯ ಕರೆನ್ಸಿಗಳ ಎದುರು ಭಾರತೀಯ ರೂಪಾಯಿ ಹೆಚ್ಚು ಸ್ಥಿರವಾಗಿರುವುದನ್ನು ಇತರ ರಾಷ್ಟ್ರಗಳು ಗಮನಿಸಿವೆ. ಹಾಗಾಗಿಯೇ, ರೂಪಾಯಿಯಲ್ಲಿ ವಹಿವಾಟು ನಡೆಸಲು ಅವು ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆ. ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶ ದೊಂದಿಗೆ ಕೂಡ ಈಗಾಗಲೇ ರೂಪಾಯಿ ಮೂಲಕ ವಹಿವಾಟು ಆರಂಭಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಬಳಕೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆರ್​ಬಿಐನ ಸಮಿತಿ 2023ರಲ್ಲಿಯೇ ಕೇಂದ್ರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ರೂಪಾಯಿಯಲ್ಲಿ ಮಾಡುವ ಪಾವತಿಗಳಿಗೆ ಏಕರೂಪದ ಮಾದರಿಯೊಂದನ್ನು ರೂಪಿಸುವುದು, ಪಾವತಿಗಳಲ್ಲಿ ರೂಪಾಯಿಯನ್ನು ಬಳಕೆ ಮಾಡುವ ರಫ್ತುದಾರರಿಗೆ ಉತ್ತೇಜನ ನೀಡುವುದು, ಭಾರತದ ಪಾವತಿ ವ್ಯವಸ್ಥೆಯನ್ನು ಇತರ ದೇಶಗಳ ಪಾವತಿ ವ್ಯವಸ್ಥೆಗಳ ಜತೆ ಒಂದಾಗಿಸುವುದು ಸೇರಿದಂತೆ ಹಲವು ಪೂರಕ ಕ್ರಮಗಳನ್ನು ಕೈಗೊಳ್ಳಬೇಕೆಂಬ ಆರ್​ಬಿಐನ ಸಲಹೆಯನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದೆ. ‘ಮತ್ತಷ್ಟು ರಾಷ್ಟ್ರಗಳೊಂದಿಗೆ ರೂಪಾಯಿಯಲ್ಲಿ ವಹಿವಾಟು ನಡೆಸಲು ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಮಾರ್ಚ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ನಿಟ್ಟಿನಲ್ಲಿ ಕೆಲ ಸವಾಲುಗಳೂ ಇದ್ದು, ಅವುಗಳನ್ನು ಪರಿಹರಿಸಿಕೊಳ್ಳಬೇಕಿದೆ. ವ್ಯಾಪಾರ ವಹಿವಾಟಿನ ಗಾತ್ರ ವಿಸ್ತರಿಸಲು ಕೂಡ ಗಮನ ಹರಿಸಬೇಕಿದೆ.
ಡಿಕೆ ಬ್ರದರ್ಸ್​ ಕೋಟೆಯಲ್ಲಿ ಅಮಿತ್ ಶಾ ಬೃಹತ್ ರೋಡ್​ ಶೋ..!ಫೋಟೋಗಳು ಇಲ್ಲಿವೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + two =
Remember me
