ಬೆಂಗಳೂರು:ಪಂಚ ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಮೆರೆದ ಪ್ರಾಬಲ್ಯದ ಸಂಭ್ರಮದಲ್ಲಿ ಬಿಜೆಪಿ ಮಿಂದೇಳುತ್ತಿದ್ದರೆ, ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದವರ ಪಾಲಿಗೆ ಖುಷಿ ಜತೆಗೆ ಒತ್ತಡವನ್ನೂ ತಂದೊಡ್ಡಿದೆ. ಹಿಂದುಳಿದ ವರ್ಗಗಳ ಮೀಸಲು ಗೊಂದಲ ಬಗೆಹರಿಯುವ ತನಕ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಇಲ್ಲವೆಂದು ಸರ್ಕಾರವೇ ಹೇಳಿಬಿಟ್ಟಿದೆ. ಬಿಬಿಎಂಪಿ ಚುನಾವಣಾ ವ್ಯಾಜ್ಯವು ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು, ಯಾವಾಗ ನಡೆಯುತ್ತದೆ ಎನ್ನುವುದು ಸದ್ಯಕ್ಕೆ ಹೇಳಲಾಗದ ಸ್ಥಿತಿ ತಲೆದೋರಿದೆ.
ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ನಡೆದರೆ ಸೆಮಿಫೈನಲ್ ಎಂದೇ ಬಿಂಬಿತವಾಗಲಿದ್ದು, ಜನರ ನಾಡಿಮಿಡಿತ ತಿಳಿದುಕೊಳ್ಳಲು ಆಡಳಿತ-ಪ್ರತಿಪಕ್ಷಗಳಿಗೆ ಸಾಧ್ಯವಾಗಲಿದೆ. ಗೊಂದಲ, ತಕರಾರಿನಿಂದ ಇವೆರಡೂ ಚುನಾವಣೆಗಳ ಭವಿಷ್ಯ ಡೋಲಾಯಮಾನವಾಗಿದೆ. ಆದರೆ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದು ವರ್ಷವಷ್ಟೇ ಉಳಿದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತವರ ತಂಡಕ್ಕೆ ಅಗ್ನಿಪರೀಕ್ಷೆ ಶುರುವಾಗಿದ್ದು, ಬಜೆಟ್ ಮೂಲಕ ಜನರ ಮನ-ಮನೆ ತಲುಪುವ ಭೂಮಿಕೆ ಸಿದ್ಧಪಡಿಸುವತ್ತ ಗಮನಹರಿಸಿದೆ. ಮುಂಬರುವ ಚುನಾವಣೆಗಳ ಒತ್ತಡದಿಂದ ಪಾರಾಗಲು ಕಾರ್ಯಾದೇಶ ನೀಡಿ, ತ್ವರಿತವಾಗಿ ಜಾರಿಗೆ ಬದ್ಧವೆಂಬ ಸಂದೇಶ ರವಾನಿಸುವ ಕಸರತ್ತು ನಡೆದಿದೆ.
ಕಾಲಮಿತಿಯ ಉತ್ಸಾಹ:ಬೊಮ್ಮಾಯಿ ಅಧಿಕಾರದ ಗದ್ದುಗೆ ಏರಿದ ಹೊಸತರಲ್ಲಿ ಪ್ರಕಟಿಸಿದ ಹೊಸ ಯೋಜನೆಗಳೆಲ್ಲ ಜಾರಿಗೆ ಬಂದರೂ ‘ಜನಾಭಿಪ್ರಾಯ’ ರೂಪುಗೊಂಡಿಲ್ಲವೆಂಬ ಭಾವನೆ ಪಕ್ಷದಲ್ಲಿ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ 2022-23ನೇ ಸಾಲಿನ ಆಯವ್ಯಯ ಪತ್ರದಲ್ಲಿ ಘೋಷಿತ ಪ್ರಮುಖ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಬೊಮ್ಮಾಯಿ ಮುಂದಾಗಿದ್ದಾರೆ. ಅಧಿಕಾರಿಗಳೊಂದಿಗೆ ವಿಶ್ವಾಸ ಗಳಿಸಿಕೊಂಡು, ಪಕ್ಷದೊಂದಿಗೆ ಸಮನ್ವಯ ಸಾಧಿಸುವುದು ದೊಡ್ಡ ಸವಾಲಾಗಿದ್ದು, ಅನುಷ್ಠಾನಕ್ಕೂ ಕಾಲಮಿತಿ ವಿಧಿಸುವ ಉತ್ಸಾಹದಲ್ಲಿದ್ದಾರೆ. ಕಾರ್ಯಾದೇಶ ಹೊರಡಿಸಿದ ಯೋಜನೆಗಳ ಅನುಷ್ಠಾನಕ್ಕೆ 30 ದಿನಗಳ ಕಾಲಮಿತಿ ನಿಗದಿಪಡಿಸಿ, ಪ್ರತಿಯೊಂದು ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡುವುದು ಬೊಮ್ಮಾಯಿ ಬಯಕೆಯಾಗಿದೆ.
ದೊಡ್ಡ ಸವಾಲು:ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿಯಿವೆ ಎಂಬುದನ್ನು ಸಿಎಂ ಬೊಮ್ಮಾಯಿ ಒಪ್ಪಿಕೊಂಡಿದ್ದು, ಆಡಳಿತ ಚುರುಕಿಗೆ ದೊಡ್ಡ ಸವಾಲಾಗಲಿದೆ. ಅನೇಕ ಹಿರಿಯ ಐಎಎಸ್ ಅಧಿಕಾರಿಗಳಿಗೆ ಹಲವು ಇಲಾಖೆಗಳ ಸಮಪ್ರಭಾರ ವಹಿಸಿರುವುದು ಕೆಲಸದ ಒತ್ತಡ ಹೆಚ್ಚಿಸಿದ್ದು, ಪ್ರಗತಿ ಪರಾಮರ್ಶೆಗೆ ತೊಡಕಾಗಿ ಪರಿಣಮಿಸಿದೆ.
ಯೋಜನೆಗಳ ಸಕಾಲಿಕ, ಪರಿಣಾಮಕಾರಿ ಅನುಷ್ಠಾನದಲ್ಲಿ ಇಲಾಖಾಮಟ್ಟದ ಅಧಿಕಾರಿಗಳ ಜತೆಗೆ ತಳಮಟ್ಟದ ಸಿಬ್ಬಂದಿ ಅಷ್ಟೇ ಮುಖ್ಯವಾಗಿದೆ. ಸದ್ಯಕ್ಕೆ ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಅಯುಷ್ ಸೇರಿ 10 ಇಲಾಖೆಗಳ 17,000 ಹುದ್ದೆಗಳ ಭರ್ತಿ ಪ್ರಕ್ರಿಯೆ ವಿವಿಧ ಹಂತದಲ್ಲಿವೆ. ಖಾಲಿಯಿರುವ ಹುದ್ದೆಗಳ ಪ್ರಮಾಣಕ್ಕೆ ಹೋಲಿಸಿದರೆ ಈ ನೇಮಕ ಪ್ರಯತ್ನವು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
ಅಭಿವೃದ್ಧಿಗೆ ಬಲ:ಪದೇ ಪದೆ ಅಪ್ಪಳಿಸಿದ ಪ್ರಕೃತಿ ವಿಕೋಪದ ನೋವಿನಿಂದ ರಾಜ್ಯ ಹೊರಬಂದಿದ್ದು, ಕರೊನಾ ಸಾಂಕ್ರಾಮಿಕ ಪಿಡುಗು ಮುಕ್ತ ಆರ್ಥಿಕತೆ ಏರುಮುಖದ ಹಾದಿ ಹಿಡಿದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸ್ವಂತ ತೆರಿಗೆ ಮೂಲದಲ್ಲಿ ಗುರಿ ಮೀರಿ 7,000 ಕೋಟಿ ರೂ. ಹೆಚ್ಚುವರಿ ಆದಾಯ ಜಮೆಯಾಗಿರುವುದು ಸರ್ಕಾರದ ಆತ್ಮವಿಶ್ವಾಸ ಹೆಚ್ಚಿಸಿದೆ. ಅಲ್ಲದೆ, ಕೇಂದ್ರ ಸರ್ಕಾರ ಮತ್ತಷ್ಟು ಉದಾರವಾಗಲಿದೆ. ರಾಜ್ಯಕ್ಕೆ ಸಂಬಂಧಿಸಿದ ಮಹತ್ವದ ಪ್ರಸ್ತಾಪ ಹಾಗೂ ಯೋಜನೆಗಳಿಗೆ ಅಸ್ತು ಎನ್ನುವ ಆಶಾಭಾವನೆಯಲ್ಲಿದೆ. ಕರೊನಾ ಕಾಲ ಮುಗಿದು, ಅಭಿವೃದ್ಧಿ ಪರ್ವ ಶುರುವಾಗಲಿದೆ. ಚುನಾವಣೆ ಸಮೀಪಿಸುತ್ತಿರುವ ಕಾರಣ ಹೆಚ್ಚೆಚ್ಚು ಅಭಿವೃದ್ಧಿ ಯೋಜನೆಗಳು ಬರಲಿವೆ ಎಂಬ ನಿರೀಕ್ಷೆ ಜನರಲ್ಲಿ ಗರಿಗೆದರಿದೆ.
ಬಿಸಿ ಮುಟ್ಟಿಸಿದ ವರದಿ:ಪ್ರಸಕ್ತ ಆರ್ಥಿಕ ವರ್ಷ (2021-22)ದ ಬಜೆಟ್​ನಲ್ಲಿ ಪ್ರಕಟಿಸಿದ ಯೋಜನೆಗಳ ಕಾರ್ಯಾದೇಶ, ಅನುಷ್ಠಾನದ ಕುರಿತು ಸರ್ಕಾರವೇ ಪ್ರಕಟಿಸಿದ ಕ್ರಮಕೈಗೊಂಡ ವರದಿ ಬಿಸಿ ಮುಟ್ಟಿಸಿದೆ. ಪ್ರಸ್ತಾಪಿಸಿದವುಗಳ ಪೈಕಿ ಶೇ.30 ಯೋಜನೆಗಳಿಗೆ ಆರ್ಥಿಕ ವರ್ಷ ಮುಗಿಯುವ ಒಂದು ತಿಂಗಳು ಮುಂಚೆ ಕಾರ್ಯಾದೇಶ ಹೊರಬಿದ್ದಿದ್ದರೆ, ಹಲವು ಕಾರ್ಯಕ್ರಮಗಳನ್ನು ಕೈಬಿಡಲಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಕೆಲವು ಯೋಜನೆಗಳನ್ನು ಕೈಬಿಟ್ಟಿರುವುದು ಒಪ್ಪಬಹುದು. ಮಂಜೂರು ಮಾಡಿದ ಸಕಾಲಕ್ಕೆ ಬಳಸಿಕೊಳ್ಳುವಲ್ಲೂ ಇಲಾಖೆಗಳು ಮುಗ್ಗರಿಸಿವೆ. ಕ್ರಮಕೈಗೊಂಡ ವರದಿ ಹಾಗೂ ಇಲಾಖಾವಾರು ಮಂದಪ್ರಗತಿಯು ಎಲ್ಲವೂ ಸರಿಯಿಲ್ಲ ಎನ್ನುವುದು ಎತ್ತಿ ತೋರಿಸುತ್ತದೆ ಎಂದು ಸ್ವಪಕ್ಷದ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.
ಕೆಲವರು ಅಧಿಕಾರಿಗಳ ಮೇಲೆ ಹರಿಹಾಯುವ ಮೂಲಕ ಪರೋಕ್ಷವಾಗಿ ಸಿಟ್ಟು ಹೊರಹಾಕಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಳಂಬಕ್ಕೆ ದುಬಾರಿ ಬೆಲೆ ತೆರಬೇಕಾದೀತು ಎಂದು ಎಚ್ಚೆತ್ತುಕೊಂಡಿದ್ದು, ಪ್ರಮುಖ ಯೋಜನೆಗಳಿಗೆ ಹೊಸ ಆರ್ಥಿಕ ವರ್ಷದ ಮೊದಲ ದಿನದಿಂದಲೇ ಕಾರ್ಯಾದೇಶ ಹೊರಡಿಸಲು ಮುಂದಾಗಿದ್ದಾರೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಗೆ ಮೇಲ್ವಿಚಾರಣೆ ಜವಾಬ್ದಾರಿ ಒಪ್ಪಿಸಲು ನಿರ್ಧರಿಸಿ, ಆಡಳಿತ ಯಂತ್ರಾಂಗಕ್ಕೆ ವೇಗದ ಸ್ಪರ್ಶ ನೀಡಲು ಹೊರಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
