|ಜಗನ್ನಾಥ ಕೆ.ಎಸ್./ ಶ್ರೀಹರ್ಷ ತುಮಕೂರು
ಸ್ಮಾರ್ಟ್ ಸಿಟಿ ಅಭಿವೃದ್ಧಿ ಗುಂಗಿನಲ್ಲಿರುವ ತುಮಕೂರು ನಗರ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಜಿ.ಬಿ. ಜ್ಯೋತಿ ಗಣೇಶ್​ಗೆ ಎದುರಾಳಿ ಪಕ್ಷಗಳಿಗಿಂತ ಸ್ವಪಕ್ಷೀಯರ ಫೈಟ್ ಎದುರಿಸುವುದೇ ಸವಾಲಾಗಿದೆ. ಪಕ್ಷದೊಳಗಿನ ಫೈಟ್ ಅವರ ಓಟಕ್ಕೆ ಸ್ವಲ್ಪ ಬ್ರೇಕ್ ಹಾಕಿದೆ. ಮೃದುಸ್ವಭಾವದ ಜ್ಯೋತಿಗಣೇಶ್​ಗೆ ಅಭಿವೃದ್ಧಿ ಕಾರ್ಯಗಳು ಕೈಹಿಡಿಯುವ ನಂಬಿಕೆ, ಎಲ್ಲರ ವಿಶ್ವಾಸದೊಂದಿಗೆ ದಡಮುಟ್ಟುವ ಭರವಸೆ ಇದೆ. 4 ಬಾರಿ ಶಾಸಕರಾಗಿ 2 ಬಾರಿ ಸಚಿವರಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಕೂಡ ಸ್ಪರ್ಧೆ ಖಚಿತ ಎಂದು ಹೇಳುತ್ತಿರುವುದು ಕಮಲದಲ್ಲಿ ಮತ್ತೆ ಟಿಕೆಟ್ ‘ಫೈಟ್’ನ ಅನುಮಾನ ಮೂಡಿಸಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಇಲ್ಲಿ ಟಿಕೆಟ್ ನೀಡುವುದು ಪಕ್ಕಾ ಎನಿಸಿದ್ದರೂ ಮಾಜಿ ಶಾಸಕ ಎಸ್.ರಫೀಕ್ ಅಹ್ಮದ್ ಟಿಕೆಟ್ ಪಡೆಯುವುದು ಅಷ್ಟು ಸುಲಭವಿಲ್ಲ. 2 ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿ ಸೋತಿರುವ ಎನ್.ಗೋವಿಂದರಾಜು ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆಯಿದ್ದು, ಅನುಕಂಪ ಕೈಹಿಡಿಯುವ ನಂಬಿಕೆ ಅವರಿಗಿದೆ. ಆದರೆ, ಆಟಿಕಾ ಬಾಬು ಹೆಸರು ತೇಲಿಬಿಟ್ಟಿರುವ ಎಚ್.ಡಿ. ಕುಮಾರಸ್ವಾಮಿ ನಡೆ ಕುತೂಹಲ ಮೂಡಿಸಿದೆ. ಎಎಪಿಯ ಡಾ.ವಿಶ್ವನಾಥ್ ಕೂಡ ಸ್ಪರ್ಧೆ ಬಯಸಿದ್ದಾರೆ.
ತಿಪಟೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದಿರುವ ಬಿ.ಸಿ. ನಾಗೇಶ್ ಶಿಕ್ಷಣ ಸಚಿವರಾದ ನಂತರ ಉದ್ಭವಿಸಿರುವ ವಿವಾದಗಳು ಸ್ವಕ್ಷೇತ್ರದಲ್ಲಿಯೂ ಚುನಾವಣಾ ಅಸ್ತ್ರವಾಗಿವೆೆ. ಕಾಂಗ್ರೆಸ್ ಪ್ರಬಲವಾಗಿದ್ದು ಮಾಜಿ ಶಾಸಕ ಕೆ. ಷಡಕ್ಷರಿ, ಟೂಡಾ ಶಶಿಧರ್, ಕೆ.ಟಿ.ಶಾಂತಕುಮಾರ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಯಾರಿಗೆ ಟಿಕೆಟ್ ಸಿಕ್ಕರೂ ಬಿಜೆಪಿಗೆ ಎದುರಾಳಿ ಕಾಂಗ್ರೆಸ್ ಮಾತ್ರ. ಇಡೀ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಕುಂದಿರುವ ಏಕೈಕ ಕ್ಷೇತ್ರ ತಿಪಟೂರು ಮಾತ್ರ. ಕಾಂಗ್ರೆಸ್​ನಲ್ಲಿ ಟಿಕೆಟ್ ಕೈತಪ್ಪಿದವರು ಜೆಡಿಎಸ್ ಹುರಿಯಾಳಾಗುವ ಸಾಧ್ಯತೆಯಿದೆ.
ಪಾವಗಡ ಕಾಂಗ್ರೆಸ್ ಶಾಸಕ ವೆಂಕಟರವಣಪ್ಪ ವಯಸ್ಸಿನ ಕಾರಣಕ್ಕೆ ಸ್ಪರ್ಧಿಸದೇ ತಮ್ಮ ಪುತ್ರ ವೆಂಕಟೇಶ್​ಗೆ ಟಿಕೆಟ್ ಕೇಳಿದ್ದಾರೆ. ಮಾಜಿ ಸಂಸದ ಬಿ.ಎನ್. ಚಂದ್ರಪ್ಪರನ್ನು ಕಣಕ್ಕಿಳಿಸಲು ತೆರೆಮರೆಯ ಪ್ರಯತ್ನ ಕೂಡ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಂದ ನಡೆದಿದೆ. ಜೆಡಿಎಸ್​ನಿಂದ ಕೆ.ಎಂ. ತಿಮ್ಮರಾಯಪ್ಪ ಅಭ್ಯರ್ಥಿಯಾಗಲಿದ್ದು, ನೇರ ಜಿದ್ದಾಜಿದ್ದಿ ನಡೆಯಲಿದೆ. ಬಿಜೆಪಿ ಇನ್ನೂ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿದೆ.
ತ್ರಿಕೋನ ಸ್ಪರ್ಧೆಯ ಲಾಭ ಪಡೆದು 10 ಸಾವಿರ ಮತಗಳ ಅಂತರದಲ್ಲಿ ಗೆದ್ದು ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿಗೆ ಈ ಬಾರಿ ಅಷ್ಟು ಸಲೀಸಲ್ಲ ಎಂಬ ವಾತಾವರಣ ಕ್ಷೇತ್ರದಲ್ಲಿದೆ. ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸಗಳಾಗಿದ್ದರೂ ಬಿಜೆಪಿ ಕಾರ್ಯಕರ್ತರಲ್ಲಿ ಅಷ್ಟೊಂದು ಉತ್ಸಾಹ ಕಾಣಿಸುತ್ತಿಲ್ಲ. ಜೆಡಿಎಸ್​ನಿಂದ ಮಾಜಿ ಶಾಸಕ ಸಿ.ಬಿ. ಸುರೇಶ್​ಬಾಬು ಕಣಕ್ಕಿಳಿಯುವುದು ಫಿಕ್ಸ್, ಸಕಲ ಸಂಪನ್ಮೂಲ ಬಳಸಿದರೆ ಟ್ರೆಂಡ್ ಬದಲಿಸುವ ಅವಕಾಶ ಇದೆ ಎಂಬ ಮಾತಿದೆ. 2018ರ ಚುನಾವಣೆ ನಂತರ ಕಾಂಗ್ರೆಸ್ ಅಭ್ಯರ್ಥಿ ಟಿ.ಜೆ.ಸಂತೋಷ್ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಡಾ.ಸಾಸಲು ಸತೀಶ್ ಕೂಡ ಕ್ಷೇತ್ರದಲ್ಲಿಲ್ಲ. ಹಾಗಾಗಿ, ಡಾ.ಎಸ್.ಜಿ.ಪರಮೇಶ್ವರಪ್ಪ, ಯಳನಡು ಸಿದ್ಧರಾಮಯ್ಯ, ಹೊಸಳ್ಳಿ ಅಶೋಕ್ ಮತ್ತಿತರರು ಟಿಕೆಟ್​ಗಾಗಿ ಕಾದಿದ್ದಾರೆ.
ಒಕ್ಕಲಿಗರು ಹೆಚ್ಚಾಗಿರುವ ತುರುವೇಕೆರೆಯಲ್ಲಿ ಬಿಜೆಪಿ ಶಾಸಕ ಮಸಾಲಾ ಜಯರಾಂಗೆ ಪೈಪೋಟಿ ನೀಡಲು ಜೆಡಿಎಸ್​ನ ಎಂ.ಟಿ. ಕೃಷ್ಣಪ್ಪ ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಬೆಮೆಲ್ ಕಾಂತರಾಜುರನ್ನು ಹೊರಗಿನಿಂದ ಕರೆದುಕೊಂಡು ಬಂದಿದ್ದು ಸ್ಥಳೀಯವಾಗಿ ಭಿನ್ನಮತ ಸ್ಪೋಟವಾಗಿದೆ. ನಟ ಜಗ್ಗೇಶ್ ರಾಜ್ಯಸಭೆಗೆ ಆಯ್ಕೆಯಾಗಿದ್ದು ಹಾಗೂ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ ಕೂಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದ್ದು ಮಸಾಲೆಗೆ ಲಾಭವಾಗಬಹುದು. ನನ್ನ ಕೊನೆಯ ಚುನಾವಣೆ ಎಂದು ಎಂ.ಟಿ.ಕೃಷ್ಣಪ್ಪ ಈಗಾಗಲೆ ಘೊಷಿಸಿದ್ದು, ಈ ಅನುಕಂಪದ ಜತೆಗೆ ದಳಪತಿಗಳ ವರ್ಚಸ್ಸು ನಂಬಿದ್ದಾರೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಚಿತ ಎನ್ನುವಂತಿದೆ.
ಮುಂಬರುವ ಚುನಾವಣೆಯಲ್ಲಿ ಅತಿ ಹೆಚ್ಚಿನ ಪ್ರತಿಷ್ಠೆಯ ಕ್ಷೇತ್ರವಾಗಿ ಕುಣಿಗಲ್ ಗೋಚರವಾಗಲಿದೆ. ಹಾಲಿ ಶಾಸಕ ಡಾ. ಎಚ್.ಡಿ.ರಂಗನಾಥ್ ಕಾಂಗ್ರೆಸ್ ಹುರಿಯಾಳಾಗಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಬಿ. ರಾಮಸ್ವಾಮಿಗೌಡ ಕೂಡ ಟಿಕೆಟ್ ಕೇಳುತ್ತಿದ್ದಾರೆ. ರಾಜ್ಯ ರಾಜಕಾರಣಕ್ಕೆ ವಾಪಸಾಗಿರುವ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಕುಣಿಗಲ್​ನಿಂದ ವಿಧಾನಸಭೆಗೆ ಸ್ಪರ್ಧಿಸುವುದು ಖಚಿತವಾಗಿದ್ದು, ಯಾವ ಪಕ್ಷದಿಂದ ಎಂಬ ಕುತೂಹಲ ಕ್ಷೇತ್ರದಲ್ಲಿದೆ. ಎಸ್​ಪಿಎಂರನ್ನು ಬಿಜೆಪಿ ಸೆಳೆಯುವ ಸಾಧ್ಯತೆ ಹೆಚ್ಚಿದ್ದು, ಇವರು ಕಣಕ್ಕಿಳಿಯುವುದೇ ಆದರೆ ಡಿ.ಕೃಷ್ಣಕುಮಾರ್ ಹಾಗೂ ರಾಜೇಶ್​ಗೌಡ ನಡೆಯೇನು ಎಂಬ ಕುತೂಹಲವಿದೆ. ಜೆಡಿಎಸ್​ನಿಂದ ಮಾಜಿ ಸಚಿವ ಡಿ. ನಾಗರಾಜಯ್ಯ ಅವರೇ ಅಭ್ಯರ್ಥಿ ಎಂದು ಘೊಷಿಸಲಾಗಿದ್ದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಚಿತ.
ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಾ.ಜಿ. ಪರಮೇಶ್ವರ್​ಗೆ ಕೊರಟಗೆರೆಯಲ್ಲಿ ಗೆಲುವು ಸುಲಭವಲ್ಲ ಎಂಬುದು ಜನಜನಿತ. 2013ರ ಸೋಲು ಪರಮೇಶ್ವರ ಸಿಎಂ ಖುರ್ಚಿ ತಪ್ಪಿಸಿದ್ದು ಇಂದಿಗೂ ಅವರಿಗೆ ದುಸ್ವಪ್ನ. ಹಾಗಾಗಿ, ಕ್ಷೇತ್ರ ಬದಲಾಯಿಸುವ ಚಿಂತನೆಯೂ ಅವರಿಗಿದೆ ಎನ್ನಲಾಗಿದೆ. ನೆಲಮಂಗಲ, ಪುಲಕೇಶಿನಗರ ಮೇಲೆ ಕಣ್ಣಿದೆಯಾದರೂ ಹೈಕಮಾಂಡ್ ಮನವೊಲಿಕೆ ಕಷ್ಟವಾಗಬಹುದು. ಜೆಡಿಎಸ್​ನಿಂದ ಮಾಜಿ ಶಾಸಕ ಪಿ.ಆರ್. ಸುಧಾಕರ್​ಲಾಲ್ ಅಭ್ಯರ್ಥಿಯಾಗಲಿದ್ದು, ಕ್ಷೇತ್ರದಲ್ಲಿ ಹಿಡಿತ ಉಳಿಸಿಕೊಂಡಿದ್ದಾರೆ. ಬಿಜೆಪಿ ಗೆಲ್ಲುವ ಛಲದಿಂದ ಜುಲೈ ಅಂತ್ಯಕ್ಕೆ ನಿವೃತ್ತರಾಗಲಿರುವ ಹಿರಿಯ ಐಎಎಸ್ ಅಧಿಕಾರಿಯನ್ನು ಕಣಕ್ಕಿಳಿಸುತ್ತಿರುವುದು ಚುನಾವಣಾ ಕಾವು ಹೆಚ್ಚಿಸಿದೆ.
ಜಿದ್ದಾಜಿದ್ದಿ ಕ್ಷೇತ್ರಗಳಲ್ಲಿ ಒಂದಾದ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಡಿ.ಸಿ. ಗೌರಿಶಂಕರ್​ಗೆ ಈ ಬಾರಿ ಅಖಾಡ ಅಷ್ಟು ಸುಲಭವಿಲ್ಲ. ಕರೊನಾ ಸಂಕಷ್ಟದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರ ಸುತ್ತಿರುವ ಗೌರಿಗೆ ಜನ ಕೈಬಿಡುವುದಿಲ್ಲವೆಂಬ ಅದಮ್ಯ ವಿಶ್ವಾಸವಿದೆ. ಮಾಜಿ ಶಾಸಕ ಬಿ. ಸುರೇಶಗೌಡ ಕೂಡ ದಿನದ 24 ಗಂಟೆಯೂ ರಾಜಕೀಯ ಮಾಡುತ್ತಿರುವುದರಿಂದ ಜಿದ್ದಾಜಿದ್ದಿ ಖಚಿತ. ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರದಲ್ಲಿ ಮದಗಜಗಳ ಕಾಳಗ ಜೋರಾಗಿದೆ. ಕಾಂಗ್ರೆಸ್ ಸದ್ಯಕ್ಕೆ ಆಟಕ್ಕುಂಟು ಲೆಕ್ಕಕಿಲ್ಲ ಎಂಬ ಸ್ಥಿತಿಯಲ್ಲಿದೆ. ಕಳೆದ ಬಾರಿ ಸೋತಿರುವ ರಾಯಸಂದ್ರ ರವಿಕುಮಾರ್ ಸ್ಥಳೀಯ ಮುಖಂಡರ ಅಸಹಕಾರದಿಂದ ಕ್ಷೇತ್ರದಿಂದ ವಿಮುಖರಾಗಿದ್ದು, ಹೊಸ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಡಬೇಕಿದೆ. ಸದ್ಯಕ್ಕೆ ನೆಲಮಂಗಲ ಮೂಲದ ಬೆಮೆಲ್ ಕಾಂತರಾಜು ಹೆಸರು ಕೇಳಿಬಂದಿದೆ. ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆಯಾದರೆ ಇಲ್ಲಿಯೂ ಕಮಲ ಅರಳಬಹುದು.
ಶಿರಾ ಉಪಚುನಾವಣೆಯಲ್ಲಿ ಅಚ್ಚರಿಯ ರೀತಿ ಬಿಜೆಪಿ ಗೆಲುವು ಸಾಧಿಸಿ, ಡಾ.ಸಿ.ಎಂ. ರಾಜೇಶ್​ಗೌಡ ಶಾಸಕರಾಗಿದ್ದು ಈಗ ಇತಿಹಾಸ. ಸಾರ್ವತ್ರಿಕ ಚುನಾವಣೆಯಲ್ಲಿ ಶಿರಾದಲ್ಲಿ ಬಿಜೆಪಿ ಗೆಲುವು ಸುಲಭವಲ್ಲ ಎಂಬ ಮಾತಿದೆ. ಕಾಂಗ್ರೆಸ್​ನಲ್ಲಿ ಟಿಕೆಟ್​ಗೆ ಫೈಟ್ ಜೋರಾಗಿದ್ದು, ಮಾಜಿ ಸಚಿವ ಟಿ.ಬಿ. ಜಯಚಂದ್ರಗೆ ಬದಲಾಗಿ ಕಾಡುಗೊಲ್ಲ ಸಮುದಾಯದ ಡಾ.ಸಾಸಲು ಸತೀಶ್​ಗೆ ಟಿಕೆಟ್ ನೀಡಲು ಕಾಂಗ್ರೆಸ್ ಚಿಂತಿಸಿದೆ ಎಂಬ ಮಾತಿದೆ. ಸತೀಶ್ರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದು ಇದಕ್ಕೆ ಪುಷ್ಟಿ ನೀಡಿದೆ. ಬಿ. ಸತ್ಯನಾರಾಯಣ ನಂತರ ಶಿರಾದಲ್ಲಿ ಅನಾಥವಾಗಿರುವ ಜೆಡಿಎಸ್​ಗೆ ಸಾರಥಿ ಇನ್ನೂ ಸಿಕ್ಕಿಲ್ಲ, ಯಾರೇ ಅಭ್ಯರ್ಥಿಯಾದರೂ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಚಿತ.
ಜೆಡಿಎಸ್ ವರಿಷ್ಠರು ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಗುರಿ ಮಾಡಿರುವ ಕ್ಷೇತ್ರಗಳಲ್ಲಿ ಪೈಕಿ ಮಧುಗಿರಿ ಮೊದಲನೆಯದು ಎಂಬ ಮಾತಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎನ್. ರಾಜಣ್ಣ ಕಣಕ್ಕಿಳಿದರೆ ವಿವಿಧ ರಾಜಕೀಯ ಕಾರಣ ಗಳಿಂದಾಗಿ ಅವರ ಸೋಲಿಗೆ ಜೆಡಿಎಸ್ ವರಿಷ್ಠರು ಟೊಂಕ ಕಟ್ಟಿ ನಿಲ್ಲಲಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಹಿಡಿತ ರಾಜಣ್ಣ ಶಕ್ತಿಯಾಗಿದೆ. ಇದು ಕೊನೆಯ ಚುನಾವಣೆ ಎಂದು ಕೆಎನ್​ಆರ್ ಘೊಷಿಸಿದ್ದು, ಅನುಕಂಪ ಬರಬಹುದು. ಜೆಡಿಎಸ್ ಶಾಸಕ ಎಂ.ವಿ. ವೀರಭದ್ರಯ್ಯ ಮೃದು ಸ್ವಭಾವದ ಮೂಲಕವೇ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದು ನೇರ ಫೈಟ್ ನಡೆಯಲಿದೆ.
ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ಎಸ್.ಆರ್. ಶ್ರೀನಿವಾಸ್ ಜೆಡಿಎಸ್​ನಿಂದ ಉಚ್ಚಾಟನೆಯಾಗಿದ್ದು ಕಾಂಗ್ರೆಸ್ ಪಡಸಾಲೆಯಲ್ಲಿ ನಿಂತಿದ್ದಾರೆ. ವಾಸು ಸೋಲಿಸುವುದೇ ಗುರಿಯಾಗಿಸಿಕೊಂಡಿರುವ ಜೆಡಿಎಸ್ ವರಿಷ್ಠರು ತುರುವೇಕೆರೆ ಕ್ಷೇತ್ರದ ನಾಗರಾಜು ಅಭ್ಯರ್ಥಿ ಎಂದು ಘೊಷಿಸಿದ್ದು ಕ್ಷೇತ್ರದಲ್ಲಿ ರಂಪ, ರಾಮಾಯಣ ನಡೆಯುತ್ತಿದೆ. ಜೆಡಿಎಸ್ ಜಗಳದ ಲಾಭ ಪಡೆಯಲು ಬಿಜೆಪಿಗೆ ಅವಕಾಶ ವಿದ್ದರೂ ಕ್ಷೇತ್ರದಲ್ಲಿ ಸರಿಯಾದ ಮೇಟಿಯ ಅಗತ್ಯವಿದೆ. ಬೆಟ್ಟಸ್ವಾಮಿ, ಚಂದ್ರಶೇಖರ್​ಬಾಬು, ದಿಲೀಪಕುಮಾರ್ ಟಿಕೆಟ್ ಆಕಾಂಕ್ಷಿಗಳಾಗಿದ್ದು ಯಾರಿಗೆ ಸಿಗಲಿದೆ ಎಂಬುದರ ಮೇಲೆ ಸೋಲು-ಗೆಲುವಿನ ಲೆಕ್ಕಾಚಾರ ನಿರ್ಧಾರವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 4 =
Remember me
