ಬೆಂಗಳೂರು:ವಿಧಾನಸಭೆ ಚುನಾವಣೆಯ ಮೂಡ್​ನತ್ತ ರಾಜಕೀಯ ಪಕ್ಷಗಳು ಹೊರಳುತ್ತಿರುವಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರ ನೀಡಿರುವ ತೀರ್ಪು ಈಗ ರಾಜ್ಯದಲ್ಲಿ ಚುನಾವಣಾ ಪರ್ವಕ್ಕೆ ವೇದಿಕೆ ಸೃಷ್ಟಿಸಿದೆ.
ವಿಧಾನ ಪರಿಷತ್​ನ ಏಳು ಸ್ಥಾನ, ರಾಜ್ಯಸಭೆಯ ನಾಲ್ಕು ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಷ್ಟರಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನಂತರ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ವಿಧಾನಸಭೆ ಚುನಾವಣೆ ಪೂರ್ವಭಾವಿಯಾಗಿ ಜನರ ನಾಡಿಮಿಡಿತ ಅರಿಯಲು ರಾಜಕೀಯ ಪಕ್ಷಗಳಿಗೆ ಕ್ವಾರ್ಟರ್ ಫೈನಲ್, ಸೆಮಿಫೈನಲ್ ರೀತಿಯಲ್ಲಿ ಈ ಸ್ಥಳೀಯ ಚುನಾವಣೆಗಳು ನಡೆಯಲಿವೆ. ನಾಯಕತ್ವ ಬಲವರ್ಧನೆ, ಪಕ್ಷ ಸಂಘಟನೆಯಲ್ಲಿ ಚುರುಕುತನ, ಪಕ್ಷಾಂತರ ಚಟುವಟಿಕೆ ಸಹ ತೀವ್ರಗೊಳ್ಳಲಿದೆ.
ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ವಿಚಾರದಲ್ಲಿ ಸುಪ್ರಿಂಕೋರ್ಟ್ ತೀರ್ಪು ನೀಡಿದ್ದು, ಇಡೀ ರಾಷ್ಟ್ರಕ್ಕೆ ಅನ್ವಯ ಎಂದು ಅಭಿಪ್ರಾಯ ನೀಡಿರುವುದರಿಂದ ರಾಜ್ಯದಲ್ಲೂ ಚುನಾವಣೆ ಆಕಾಂಕ್ಷಿಗಳ ಆಸೆ ಹೆಚ್ಚಿಸಿದೆ. ಕ್ಷೇತ್ರ ಪುನರ್ ವಿಂಗಡಣೆ ಕಾರಣಕ್ಕೆ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡಲ್ಪಟ್ಟಿತ್ತು. ಈಗಲೇ ಚುನಾವಣೆ ನಡೆಸುವ ಆಲೋಚನೆಯಲ್ಲಿ ಸರ್ಕಾರವೂ ಇಲ್ಲ. ಆದರೆ ಸುಪ್ರಿಂಕೋರ್ಟ್ ಸೂಚನೆ ಬರುತ್ತಿದ್ದಂತೆ, ಕಾನೂನು ಪಂಡಿತರ ಮೊರೆ ಹೋಗಿದ್ದು, ಅಭಿಪ್ರಾಯ ಸಂಗ್ರಹದಲ್ಲಿ ತೊಡಗಿದೆ.
ಕರ್ನಾಟಕದಲ್ಲಿ ಬಿಬಿಎಂಪಿ ವಾರ್ಡ್​ಗಳ ಮರುವಿಂಗಡನೆ ಸಲುವಾಗಿ ಸದ್ಯಕ್ಕೆ ಚುನಾವಣೆ ಬೇಡ ಎಂಬ ನಿಲುವಿಗೆ ಸರ್ಕಾರ ಬಂದಿತ್ತು. ಆದರೆ ಚುನಾವಣೆಯಲ್ಲಿ ವಿಳಂಬ ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ತೀರ್ಪಿನ ಬಗ್ಗೆ ಅಡ್ವೊಕೇಟ್ ಜನರಲ್ ಹಾಗೂ ಇತರೆ ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಮೇಲಾಗಿ ರಾಜ್ಯ ಚುನಾವಣಾ ಆಯೋಗ ಏನು ತೀರ್ಮಾನ ಕೈಗೊಳ್ಳುತ್ತದೆ ಕಾದು ನೋಡಬೇಕು. ನಾವು ಚುನಾವಣೆಗೆ ಸಿದ್ಧರಿದ್ದೇವೆ. ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.
ವಿಧಾನಪರಿಷತ್​ನ 7 ಸ್ಥಾನ:ವಿಧಾನ ಪರಿಷತ್​ಗೆ ಏಳು ಸದಸ್ಯರನ್ನು ಆಯ್ಕೆ ಮಾಡಲು ವಿಧಾನಸಭೆ ಸದಸ್ಯರು ಮತದಾರರಾಗಿರುವ ಚುನಾವಣೆ ಜೂನ್ 3ರಂದು ನಡೆಯಲಿದೆ. ಸರಾಸರಿ 29 ಶಾಸಕರು ಒಬ್ಬ ಪರಿಷತ್ ಸದಸ್ಯರನ್ನು ಆರಿಸಬಹುದಾಗಿದ್ದು, ಬಹುತೇಕ ಅವಿರೋಧ ಆಯ್ಕೆ ಸಾಧ್ಯತೆ ಹೆಚ್ಚಿದೆ.
ರಾಷ್ಟ್ರಪತಿ ಚುನಾವಣೆ:ರಾಷ್ಟ್ರಪತಿ ಸ್ಥಾನಕ್ಕೂ ಚುನಾವಣೆ ನಡೆಯಲಿದ್ದು, ಜುಲೈ 25ರಂದು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಅವಧಿ ಪೂರೈಸಲಿದ್ದು, ಅಷ್ಟರೊಳಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ರಾಜ್ಯದಿಂದಲೂ ಸ್ಪರ್ಧಿ ಇರಬಹುದೆಂಬ ಊಹಾಪೋಹವಿದೆ.
ತಜ್ಞರ ಜತೆ ಆಯೋಗ ಇಂದು ಸಭೆ:ಸುಪ್ರೀಂಕೋರ್ಟ್ ತೀರ್ಪಿನ ಕುರಿತಂತೆ ರಾಜ್ಯ ಚುನಾವಣಾ ಆಯೋಗ ಕಾನೂನು ತಜ್ಞರ ಜತೆ ಬುಧವಾರ ಸಭೆ ನಡೆಸಲು ನಿರ್ಧರಿಸಿದೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮುಂದೆ ರಾಜ್ಯದ ಅರ್ಜಿ ಬಾಕಿ ಇದೆ. ಅದೇ ರೀತಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮುಂದೆ ಆಯೋಗದ ಅರ್ಜಿ ಇದೆ. ಕಾನೂನು ತಜ್ಞರ ಸಲಹೆಯಂತೆ ಆಯೋಗ ನಡೆದುಕೊಳ್ಳಲಿದೆ. ಚುನಾವಣೆ ನಡೆಸಲು ನಾವು ಸಜ್ಜಾಗಿದ್ದೇವೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ‘ವಿಜಯವಾಣಿ’ಗೆ ತಿಳಿಸಿದರು.
ಸುಪ್ರೀಂ ಹೇಳಿದ್ದೇನು?:ಮರುವಿಂಗಡನೆ ಪ್ರಕ್ರಿಯೆಗಳನ್ನು ಐದು ವರ್ಷದ ಅವಧಿಗೆ ಮುನ್ನವೇ ಪೂರ್ಣಗೊಳಿಸಬೇಕಾಗುತ್ತದೆ ಮತ್ತು ಸರಿಯಾದ ಸಮಯಕ್ಕೆ ಚುನಾವಣೆ ನಡೆಸಲು ಆಯೋಗಕ್ಕೆ ಎಲ್ಲಾ ಸಹಕಾರವನ್ನು ಸರ್ಕಾರ ನೀಡಬೇಕಾಗುತ್ತದೆ. ಮಧ್ಯಪ್ರದೇಶ ಚುನಾವಣಾ ಆಯೋಗ 2 ವಾರಗಳಲ್ಲಿ ಚುನಾವಣೆ ದಿನಾಂಕದ ನೋಟಿಫಿಕೇಶನ್ ಹೊರಡಿಸಬೇಕು. ಇಂಥದ್ದೇ ಮಾದರಿಯ ಪ್ರಕರಣಗಳು ಬೇರೆ ರಾಜ್ಯಗಳಲ್ಲಿದ್ದರೆ ಅಲ್ಲಿಗೂ ಈ ತೀರ್ಪು ಅನ್ವಯ ಆಗಲಿದೆ ಎಂದು ನ್ಯಾ. ಎ. ಎಂ. ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶ ಸಂಬಂಧ ರಾಜ್ಯ ಚುನಾವಣಾ ಆಯೋಗ ತೀರ್ವನಿಸಬೇಕಿದೆ. ಆಯೋಗದ ನಿರ್ಧಾರಕ್ಕೆ ಸರ್ಕಾರ ಬದ್ಧ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಬಿಬಿಎಂಪಿ ಚುನಾವಣೆ ಕುರಿತ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಆದೇಶ ನಮಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಸರ್ಕಾರ ಈ ಬಗ್ಗೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ, ಸ್ಪಷ್ಟನೆ ಪಡೆದುಕೊಳ್ಳಬೇಕಾಗುತ್ತದೆ
|ಅಶೋಕ್ ಹಾರನಹಳ್ಳಿಹಿರಿಯ ವಕೀಲ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ರಾಜ್ಯ ಸರ್ಕಾರ ಅಗತ್ಯ ತಯಾರಿ ಮಾಡಿಕೊಂಡಿದ್ದು, ಬಿಜೆಪಿಯೂ ಸಜ್ಜಾಗಿದೆ. ಹಿಂಜರಿಯುವ ಪ್ರಶ್ನೆಯೇ ಇಲ್ಲ. ಸಂಘಟನಾತ್ಮಕವಾಗಿ ಬಲಿಷ್ಠರಾಗಿದ್ದೇವೆ.
|ಆರ್.ಅಶೋಕ್ಕಂದಾಯ ಸಚಿವ
ಎಲ್ಲ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಬಿಜೆಪಿ ಚುನಾವಣೆ ತಡ ಮಾಡಿದ್ದಕ್ಕೆ ಒಬಿಸಿಗೆ ಅನ್ಯಾಯ ಆಗಿದೆ. 243 ವಾರ್ಡ್ ಪ್ರಸ್ತಾಪವೂ ಅಸಿಂಧುವಾಗಿದೆ.
|ರಾಮಲಿಂಗಾ ರೆಡ್ಡಿಕೆಪಿಸಿಸಿ ಕಾರ್ಯಾಧ್ಯಕ್ಷ
ರಾಜ್ಯಸಭೆಯ 4 ಸ್ಥಾನ:ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹಾಲಿ ಸದಸ್ಯರ ಅವಧಿ ಜೂನ್ 30ಕ್ಕೆ ಕೊನೆಗೊಳ್ಳುತ್ತಿದೆ. ಜೈರಾಮ್ ರಮೇಶ್, ನಿರ್ಮಲಾ ಸೀತಾರಾಮನ್, ಕೆ.ಸಿ.ರಾಮಮೂರ್ತಿ ಹಾಲಿ ಸದಸ್ಯರಾಗಿದ್ದು, ಒಂದು ಸ್ಥಾನ ಖಾಲಿ ಇದೆ. ಪ್ರಾಶಸ್ತ್ಯ ಮತಗಳ ಆಧಾರದಲ್ಲಿ ಶಾಸಕರು ಮತ ಚಲಾವಣೆ ಮಾಡಲಿದ್ದಾರೆ.
ಜಿಪಂ, ತಾಪಂ ಸಮರ:ಮೀಸಲು ಸಮಸ್ಯೆ ಕಾರಣ ಮುಂದೂಡಲ್ಪಟ್ಟಿದ್ದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸುವುದು ಈಗ ಸರ್ಕಾರಕ್ಕೆ ಅನಿವಾರ್ಯವಾಗಲಿದೆ. ಈ ಚುನಾವಣೆ ಯಾವಾಗ ನಡೆಸಬೇಕೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ ಕೋರ್ಟ್ ಹೇಳಿದಂತೆ ಮುಂದುವರಿದರೆ 1181 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ 3385 ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಜುಲೈ- ಆಗಸ್ಟ್ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಬಿಬಿಎಂಪಿ ಮಹಾ ಕದನ:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಕ್ಷೇತ್ರ ಪುನರ್ ವಿಂಗಡಣೆ ಮಾಡಿ ನಡೆಸಬೇಕೆಂದು ರಾಜ್ಯ ಸರ್ಕಾರ ಬಯಸಿದೆ. ಹಾಲಿ ಇರುವ 198 ವಾರ್ಡ್​ಗಳ ಬದಲು 243 ವಾರ್ಡ್​ಗೆ ಚುನಾವಣೆ ನಡೆಸಲು ಅಗತ್ಯ ಪೂರ್ವ ತಯಾರಿಯೂ ನಡೆದಿತ್ತು. ಇದೀಗ ವಾರ್ಡ್ ಮೀಸಲು ಹಂಚಿಕೆ ಸೇರಿ ಎಲ್ಲ ಪ್ರಕ್ರಿಯೆಯನ್ನು ಕನಿಷ್ಠ ಕಾಲಮಿತಿಯಲ್ಲಿ ಮುಗಿಸಿದರೆ ಸೆಪ್ಟೆಂಬರ್ ವೇಳೆಗೆ ಚುನಾವಣೆ ನಡೆಸುವ ಸಾಧ್ಯತೆಗಳಿವೆ.
ಕರ್ನಾಟಕದಿಂದ ಪ್ರಿಯಾಂಕಾ?:ಜೂನ್​ನಲ್ಲಿ ರಾಜ್ಯಸಭೆಯಲ್ಲಿ ತೆರವಾಗುವ ಸ್ಥಾನಗಳಿಗೆ ಶೀಘ್ರವೇ ಚುನಾವಣೆ ಘೊಷಣೆಯಾಗಲಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಕರ್ನಾಟಕದಿಂದ ಆಯ್ಕೆ ಮಾಡಿ ಕಳುಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶೇಷ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನಿರಾಯಾಸವಾಗಿ ಗೆಲುವು ಸಾಧಿಸಲು ಸಾಧ್ಯವಿರುವ ಒಂದು ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನು ಆಯ್ಕೆ ಮಾಡುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಾಭ ಪಡೆಯುವ ಜತೆಗೆ ಹೈಕಮಾಂಡ್ ಮತ್ತಷ್ಟು ವಿಶ್ವಾಸಗಳಿಸುವ ಬಯಕೆ ಡಿಕೆಶಿಗಿದೆ ಎನ್ನಲಾಗಿದೆ.
ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
