ನವದೆಹಲಿ:ಕರ್ನಾಟಕದಲ್ಲಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದುವರಿದಿರುವ ನಡುವೆಯೇ, ಕೇಂದ್ರ ಸರ್ಕಾರ ವಿದ್ಯುತ್ ಬಳಕೆ ಬಗ್ಗೆ ಹೊಸ ನೀತಿಯೊಂದನ್ನು ಘೋಷಿಸಿದೆ. ಪ್ರಸ್ತಾವಿತ ಹೊಸ ವಿದ್ಯುತ್ ದರ ನೀತಿಯು ಬಳಕೆಯ ಅವಧಿ ಆಧರಿಸಿ ದರದಲ್ಲಿ ಏರಿಳಿತಕ್ಕೆ ಸಲಹೆ ನೀಡಿದೆ. ಹಗಲಿನ ಅವಧಿಯಲ್ಲಿ (ಟಿಒಡಿ- ಟೈಮ್ ಆಫ್ ಡೇ) ಬಳಕೆಯಾಗುವ ವಿದ್ಯುತ್​ಗೆ ಶೇ.10ರಿಂದ 20ರವರೆಗೆ ದರ ತಗ್ಗಿಸಲು ಮತ್ತು ಹೆಚ್ಚು ವಿದ್ಯುತ್ ಬಳಕೆಯಾಗುವ ರಾತ್ರಿ ವೇಳೆ ದರವನ್ನು ಶೇ.10ರಿಂದ 20ರವರೆಗೆ ಹೆಚ್ಚಿಸಲು ಈ ನೀತಿ ಶಿಫಾರಸು ಮಾಡಿದೆ. ರಾತ್ರಿಯ ವೇಳೆ ಗ್ರಿಡ್ ಮೇಲಿನ ಅವಲಂಬನೆ ತಗ್ಗಿಸುವುದು ಈ ನೀತಿಯ ಉದ್ದೇಶವಾಗಿದೆ. ಜತೆಗೆ ಪರ್ಯಾಯ ಇಂಧನ ಮೂಲ ಹೆಚ್ಚಾಗಿ ಬಳಸಲು ಉತ್ತೇಜಿಸುತ್ತದೆ ಎಂದು ಇಂಧನ ಸಚಿವಾಲಯ ತಿಳಿಸಿದೆ.
ಹೊಸ ದರ ನೀತಿ ಎರಡು ಹಂತದಲ್ಲಿ ಜಾರಿಯಾಗಲಿದ್ದು, ಮುಂದಿನ ವರ್ಷ ಏಪ್ರಿಲ್​ನಲ್ಲಿ ಚಾಲನೆಗೆ ಬರಲಿರುವ ಮೊದಲ ಹಂತದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ (10 ಕಿಲೋವಾಟ್ ಅಥವಾ ಅಧಿಕ ಬಳಕೆಯ) ಅನ್ವಯ ಆಗಲಿದೆ. ಎರಡನೇ ಹಂತದಲ್ಲಿ 2025ರ ಏಪ್ರಿಲ್​ನಿಂದ ಜಾರಿಗೆ ಬರಲಿದ್ದು, ಕೃಷಿ ವಲಯ ಹೊರತುಪಡಿಸಿ ಇತರ ಗ್ರಾಹಕರಿಗೆ ಅನ್ವಯ ಆಗಲಿದೆ.
2030ರ ವೇಳೆಗೆ ನವೀಕರಿಸಬಹುದಾದ ಇಂಧನ ಮೂಲದಿಂದ ವಿದ್ಯುತ್ ಪಡೆಯುವುದನ್ನು ಶೇ. 65ಕ್ಕೆ ಹೆಚ್ಚಿಸುವ ಹಾಗೂ 2070ರ ವೇಳೆಗೆ ಶೂನ್ಯಇಂಗಾಲ ಎಂಬ ಗುರಿ ಸಾಧನೆಗೆ ಹೊಸ ನೀತಿ ಪೂರಕವಾಗಿದೆ. ಸಮಯೋಚಿತವಾಗಿ ವಿದ್ಯುತ್ ಬಳಕೆ ಮಾಡುವುದರಿಂದ ಗ್ರಾಹಕರಿಗೂ ಲಾಭದಾಯಕವಾಗಲಿದೆ.
| ಆರ್.ಕೆ. ಸಿಂಗ್, ಕೇಂದ್ರ ಇಂಧನ ಸಚಿವ
ಶೇ. 20 ರಿಯಾಯಿತಿ ಹೇಗೆ?:ವಿದ್ಯುತ್ ಬೇಡಿಕೆ ಹೆಚ್ಚಿರುವ ರಾತ್ರಿ ವೇಳೆಯಲ್ಲಿ ವಾಷಿಂಗ್ ಮಷಿನ್, ಎಲೆಕ್ಟ್ರಿಕ್ ಒಲೆ, ಎಲೆಕ್ಟ್ರಿಕ್ ಗೀಸರ್ ಇನ್ನಿತರ ವಿದ್ಯುದುಪಕರಣಗಳನ್ನು ಬಳಸದಿರುವುದರಿಂದ ಅಥವಾ ಕಡಿಮೆ ಬಳಸುವುದರಿಂದ ದರದಲ್ಲಿ ಶೇ.10ರಿಂದ 20ರವರೆಗೆ ರಿಯಾಯಿತಿ ಪಡೆಯಬಹುದು. ಸ್ಮಾರ್ಟ್ ಮೀಟರ್ ರೀಡಿಂಗ್ ಅನ್ನು ಪ್ರತಿದಿನ ವಿದ್ಯುತ್ ಕಾರ್ಯಾಲಯದಿಂದಲೇ ಗಮನಿಸಲಾಗುವುದು ಮತ್ತು ಅದನ್ನು ಗ್ರಾಹಕರ ಗಮನಕ್ಕೂ ತರಲಾಗುವುದು. ಇದರಿಂದ ಅವರು ಬಳಕೆಯ ವಿಷಯದಲ್ಲಿ ಹೆಚ್ಚು ಜಾಗರೂಕವಾಗಿರಲು ಸಾಧ್ಯವಾಗಲಿದೆ ಎಂದು ಸಚಿವಾಲಯ ಹೇಳಿದೆ.
ಸ್ಮಾರ್ಟ್ ಮೀಟರ್ ಅಗತ್ಯ:ಟಿಒಡಿಯನ್ನು ಮಾನದಂಡವಾಗಿಸಿಕೊಳ್ಳಲು ಹೊಸ ಸ್ಮಾರ್ಟ್ ಮೀಟರ್ ಅಳವಡಿಕೆ ಅಗತ್ಯ. ಇದರ ಅಳವಡಿಕೆ ಪೂರ್ಣಗೊಂಡ ನಂತರ ಹೊಸ ದರ ನೀತಿಯೂ ಜಾರಿ ಆಗಲಿದೆ. ಸ್ಮಾರ್ಟ್ ಮೀಟರ್​ಗೆ ಸಂಬಂಧಿಸಿದ ನಿಯಮವನ್ನು ಶೀಘ್ರದಲ್ಲೇ ಸ್ಪಷ್ಟಪಡಿಸಲಾಗುವುದು ಎಂದು ಸಚಿವಾಲಯ ಹೇಳಿದೆ.
ದಂಡ ಪ್ರಮಾಣ ಇಳಿಕೆ:ಹಣಕಾಸು ವರ್ಷದ ಅವಧಿಯಲ್ಲಿ ಮಂಜೂರಾದ ಗರಿಷ್ಠ ಲೋಡ್​ಗಿಂತ ಮೂರು ಬಾರಿ ಹೆಚ್ಚು ವಿದ್ಯುತ್ ಬಳಕೆ ಆಗಿದ್ದರೆ ಆಗ ಲೋಡ್ ಪ್ರಮಾಣವನ್ನು ಪರಿಷ್ಕರಿಸಲಾಗುವುದು. ಗ್ರಾಹಕರಿಗೆ ಕಿರಿಕಿರಿ ತಪ್ಪಿಸುವ ದೃಷ್ಟಿಯಿಂದ, ಲೋಡ್​ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದಲ್ಲಿ ವಿಧಿಸುವ ದಂಡವನ್ನು ಹೊಸ ನೀತಿಯಲ್ಲಿ ತಗ್ಗಿಸಲಾಗಿದೆ. ಸ್ಮಾರ್ಟ್ ಮೀಟರ್​ನಲ್ಲಿ ದಾಖಲಾದ ಗರಿಷ್ಠ ಲೋಡ್​ಗೆ ಹಿಂದಿನ ಅವಧಿಗೆ ಅನ್ವಯವಾಗುವಂತೆ ಯಾವುದೇ ದಂಡ ಇರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.
ದರ ವಿಂಗಡಣೆ ತರ್ಕ:ವಿದ್ಯುಚ್ಛಕ್ತಿ ತಿದ್ದುಪಡಿ-2020ರ ಕಾಯ್ದೆಯ ಗ್ರಾಹಕರ ಹಕ್ಕು ನಿಯಮದ ಅನ್ವಯ ವಿದ್ಯುತ್ ದರವನ್ನು ಪರಿಷ್ಕರಿಸಲಾಗಿದ್ದು, ವಿದ್ಯುತ್ ಬಳಕೆ ಅವಧಿಯನ್ನು ಎರಡು ಭಾಗವಾಗಿ (ಹಗಲಿನಲ್ಲಿ ಎಂಟು ತಾಸು) ವಿಂಗಡಿಸಲಾಗಿದೆ. ಈ ಎಂಟು ತಾಸು ಯಾವ ಸಮಯದಿಂದ ಆರಂಭ ಮತ್ತು ಮುಕ್ತಾಯ ಎಂಬುದನ್ನು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳು (ಎಸ್​ಇಆರ್​ಸಿ) ನಿರ್ಧರಿಸಲಿವೆ. ಹಗಲು ಹೊತ್ತಿನಲ್ಲಿ ಸೌರಶಕ್ತಿ ಬಳಕೆಯನ್ನು ಅವಲಂಬಿಸಬಹುದು ಮತ್ತು ಇದು ಅಗ್ಗವೂ ಆಗಿದೆ. ರಾತ್ರಿಯ ವೇಳೆ ಸೌರಶಕ್ತಿಯೇತರ ಮೂಲಗಳಾದ ಜಲ, ಉಷ್ಣ, ಹಾಗೂ ಅನಿಲ ಮೂಲದ ವಿದ್ಯುತ್ ಬಳಕೆ ಹೆಚ್ಚಿರುವ ಕಾರಣ ಇವುಗಳ ದರ ಹೆಚ್ಚು ಇರುತ್ತದೆ. ಹೀಗಾಗಿ ಹಗಲು ಹೊತ್ತಿನಲ್ಲಿ ವಿದ್ಯುತ್ ದರ ಕಡಿಮೆ ಮತ್ತು ರಾತ್ರಿ ಹೊತ್ತಿನಲ್ಲಿ ಹೆಚ್ಚು ಎಂಬುದು ಹೊಸ ನೀತಿಯ ಹಿಂದಿನ ತರ್ಕ. ಈಗಾಗಲೇ ಹಲವು ಎಸ್​ಇಆರ್​ಸಿಗಳು ಟಿಒಡಿ ಸೂತ್ರದಂತೆ ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳಿಗೆ ದರವನ್ನು ಜಾರಿ ಮಾಡಿವೆ ಎಂದು ಇಂಧನ ಸಚಿವಾಲಯ ತಿಳಿಸಿದೆ.
ಮುಂಗಾರು ಮತ್ತಷ್ಟು ಚುರುಕು: ರಾಜ್ಯದ ಎಲ್ಲೆಲ್ಲಿ ಎಷ್ಟು ದಿನ ಆರೆಂಜ್ ಅಲರ್ಟ್?

ಇಬ್ಬರು ಮಕ್ಕಳ ತಾಯಿಯ ಕುತ್ತಿಗೆಗೆ ಇರಿದು, ತನ್ನ ಕುತ್ತಿಗೆಗೂ ಚುಚ್ಚಿಕೊಂಡ!; ಸಾಯಲೆತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದವನ ಕೃತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 10 =
Remember me
