ಬೆಂಗಳೂರು:ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹಠಾತ್​ ಹೃದಯಾಘಾತಕ್ಕೆ ತುರ್ತು ಪ್ರಾಥಮಿಕ ಚಿಕಿತ್ಸೆಗಾಗಿ ವಿಎಡಿ ಸಾಧನ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್​ ಗುಂಡೂರಾವ್​ ಮಾಹಿತಿ ನೀಡಿದರು.
“ವಿಜಯವಾಣಿ’ಯೊಂದಿಗೆ ಶನಿವಾರ ಸಂವಾದ ನಡೆಸಿದ ಅವರು, ವೈದ್ಯಕಿಯ ಪರಿಭಾಷೆಯಲ್ಲಿ “ಗೋಲ್ಡನ್​ ಅವರ್​’ ಎಂದು ಕರೆಯುವ ಅವಧಿಯಲ್ಲಿ ತುರ್ತು ಪ್ರಾಥಮಿಕ ಚಿಕಿತ್ಸೆ ಲಭಿಸಿದರೆ ಅಂತಹ ವ್ಯಕ್ತಿ ಬದುಕುಳಿಯಬಲ್ಲ ಎಂದರು.
ಯಾವುದೇ ವ್ಯಕ್ತಿಯಲ್ಲಿ ಹೃದಯಾಘಾತವಾಗುವ ಲಕ್ಷಣಗಳು ಗೋಚರಿಸಿದರೆ ಹೃದಯದ ಪರಿಚಲನೆಗೆ ಸಹಾಯ ಮಾಡುವ ಎಲೆಕ್ಟೋಮೆಕಾನಿಕ್​ ಸಾಧನ (ವಿಎಡಿ) ಬಳಸಬಹುದಾಗಿದೆ. ಈ ಸಾಧನ ಬಳಕೆ ಬಗ್ಗೆ ಸ್ಥಳಿಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ ಎಂದರು.
ದರ ಫಲಕ ಪ್ರದರ್ಶನ ಕಡ್ಡಾಯ:ಕಾಯ್ದೆ ರೀತ್ಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಫಲಕ ಪ್ರದರ್ಶನ ಕಡ್ಡಾಯವಾಗಿದೆ. ಈ ಬಗ್ಗೆ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಮತ್ತೊಮ್ಮೆ ನೆನಪಿಸಿ, ಫಲಕ ಹಾಕಲು ತಿಳಿಸಲಾಗುವುದು. ಚಿಕಿತ್ಸೆಗೆ ಬರುವ ಜನರಿಗೂ ಸೂಕ್ತ ಮಾಹಿತಿ ದೊರೆತು, ಹಣ ಹೊಂದಿಸಿಕೊಳ್ಳಲು ನೆರವಾಗುತ್ತದೆ ಎಂದರು. ಭ್ರೂಣಗಳ ಪತ್ತೆ, ಹೆಣ್ಣು ಭ್ರೂಣ ಹತ್ಯೆ ಕಳವಳಕಾರಿಮಟ್ಟದಲ್ಲಿದ್ದು, ಬೀದರ್​ ಜಿಲ್ಲೆಯಲ್ಲಿ ಹೆಣ್ಣು ಶಿಶುಗಳ ಸಂಖ್ಯೆ ಕುಸಿತವೇ ನಿದರ್ಶನ. ಲಿಂಗಾನುಪಾತ ವ್ಯತ್ಯಾಸ ಗಂಭೀರವಾಗಿದ್ದರೂ ಕಾಯ್ದೆ ರೀತ್ಯ ಕೇಸ್​, ಯಾವುದೇ ಕ್ರಮ ಕೈಗೊಳ್ಳದಿರುವುದು ಗಮನಕ್ಕೆ ಬಂದಿದೆ. ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಕಾಯ್ದೆ ಪರಿಣಾಮಕಾರಿ ಜಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮವಹಿಸಲಾಗುತ್ತದೆ. ಕ್ರಮಕೈಗೊಂಡಾಗ ಪ್ರಭಾವಿಗಳ ಒತ್ತಡವು ಕೈಕಟ್ಟಿ ಹಾಕುತ್ತದೆ ಎಂಬ ಕಟುಸತ್ಯವನ್ನು ದಿನೇಶ್​ ಗುಂಡೂರಾವ್​ ಒಪ್ಪಿಕೊಂಡರು.
ಗೃಹ ಆರೋಗ್ಯ ಕಾರ್ಯಕ್ರಮ:ತುಮಕೂರು, ಮೈಸೂರು, ದಣ ಕನ್ನಡ, ಬೆಳಗಾವಿ, ಗದಗ ಸೇರಿ 8 ಜಿಲ್ಲೆಗಳಲ್ಲಿ “ಗೃಹ ಆರೋಗ್ಯ’ ಕಾರ್ಯಕ್ರಮ ಜಾರಿಗೊಳಿಸಲಾಗುತ್ತದೆ. ಪ್ರತಿಯೊಬ್ಬರ ತೀವ್ರತರ ಆರೋಗ್ಯ ತಪಾಸಣೆಗೆ ಪ್ರತಿ ಮನೆಗೆ ಭೇಟಿ, ರಕ್ತದೊತ್ತಡ, ಮಧುಮೇಹ ಮುಂತಾದ ಸಣ್ಣಪುಟ್ಟ ಕಾಯಿಲೆ ಕಂಡುಬಂದರೆ ತಿಂಗಳಿಗೆ ಬೇಕಾಗುವಷ್ಟು ಔಷಧ ಉಚಿತವಾಗಿ ಪೂರೈಸಲಾಗುತ್ತದೆ. ಜತೆಗೆ ವೈದ್ಯರು, ಸಿಬ್ಬಂದಿ ಸಹಿತ ಆರೋಗ್ಯ ತಪಾಸಣೆ ಉಪಕರಣಗಳ ಒಳಗೊಂಡ ಒಟ್ಟು 80 ಸಂಚಾರಿ ಟಕಗಳು ಕಾರ್ಯಾಚರಣೆಗೆ ಇಳಿಯಲಿದ್ದು, ಆಯಾ ಜಿಲ್ಲೆಯ ಭೌಗೋಳಿಕ ವಿಸ್ತರಣೆಗೆ ಅನುಗುಣವಾಗಿ ಒಂದರಿಂದ ಮೂರು ಸಂಚಾರಿ ಟಕಗಳು ಕಾರ್ಯನಿರ್ವಹಿಸಲಿವೆ ಎಂದು ಸಚಿವರು ವಿವರಿಸಿದರು. ಪುನೀತ್​ ರಾಜ್​ಕುಮಾರ್​ ಹೆಸರಿನಲ್ಲಿ ಹೃದಯಜ್ಯೋತಿ, ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಗೆ “ಆಶಾಕಿರಣ’ ಕಾರ್ಯಕ್ರಮದಡಿ ಇನ್ನೂ ನಾಲ್ಕು ಜಿಲ್ಲೆಗಳ ಸೇರ್ಪಡೆಗೆ ಕ್ರಮವಹಿಸಲಾಗುವುದು ಎಂದರು.
270 ಹೊಸ ಆ್ಯಂಬುಲೆನ್ಸ್​ ಸೇರ್ಪಡೆ:ಸಾರ್ವಜನಿಕ ಆರೋಗ್ಯ ಸೇವೆಗಳ ಜಾಲಕ್ಕೆ 270 ಹೊಸ ಅಂಬುಲೆನ್ಸ್​ ಸೇರ್ಪಡೆಯಾಗಿವೆ. ತುರ್ತು ಚಿಕಿತ್ಸೆ ಸೇವೆ ಒದಗಿಸುವ 108 ಅಂಬುಲೆನ್ಸ್​ ಸೇವೆ ಸುಧಾರಣೆಗೆ ತಾಂತ್ರಿಕ ಸಲಹಾ ಸಮಿತಿ ರಚಿಸಿದ್ದು, ಒಂದು ತಿಂಗಳೊಳಗೆ ವರದಿ ತರಿಸಿಕೊಂಡು ಕ್ರಮವಹಿಸಲಾಗುವುದು. ಅಲ್ಲದೆ, ತುರ್ತು ಸೇವೆಯ ಸಹಾಯವಾಣಿ 104 ಬಹುತೇಕ ನಿಷ್ಕ್ರಿಯವಾಗಿದ್ದು,ಪುನಶ್ಚೇತನಕ್ಕಾಗಿ ಟೆಂಡರ್​ ಕರೆಯಲಾಗಿದೆ ಎಂದುಸಚಿವರು ತಿಳಿಸಿದರು.
ನಮ್ಮ ಕ್ಲಿನಿಕ್​ನಲ್ಲಿ ಹೊಸ ಪ್ರಯೋಗ:ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಆರಂಭಿಸಿರುವ “ನಮ್ಮ ಕ್ಲಿನಿಕ್​’ ವೇಳಾಪಟ್ಟಿಗೆ ಸಂಬಂಧಿಸಿ ಹೊಸ ಪ್ರಯೋಗ ಮಾಡುವ ಆಲೋಚನೆಯಿದೆ. ಎಲ್ಲರಿಗೂ ಅನುಕೂಲ ಕಲ್ಪಿಸಲೆಂದು ಈಗಿನ ವೇಳಾಪಟ್ಟಿ ಪರಿಷ್ಕರಿಸಿ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ತೆರೆದಿಡಲು ಸೂಚಿಸಲಾಗುವುದು. ಬೆಳಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆ ಸಾಮಾನ್ಯ ಸಿಬ್ಬಂದಿ ಕ್ಲಿನಿಕ್​ಗಳಲ್ಲಿ ಹಾಜರಿದ್ದು, ಮಧ್ಯಾಹ್ನ 12 ರಿಂದ ರಾತ್ರಿ 8ರವರೆಗೆ ವೈದ್ಯರು, ಶುಶ್ರೂಷಕ ಸಿಬ್ಬಂದಿ ಕರ್ತವ್ಯದಲ್ಲಿರಲಿದ್ದಾರೆ ಎಂದು ಸಚಿವರು ಮಾಹಿತಿ ಹಂಚಿಕೊಂಡರು.
“ಇ-ಆಸ್ಪತ್ರೆ’ ಅನುಷ್ಠಾನ:ರೋಗಿಗಳ ದಾಖಲು, ಚಿಕಿತ್ಸೆ ವಿವರ, ಚಿಕಿತ್ಸೆ ನೀಡಿದ ವೈದ್ಯರು, ಕರ್ತವ್ಯಪರತೆ, ಔಷಧ ಮತ್ತು ಮಾತ್ರೆಗಳ ವಿತರಣೆಯಿಂದ ಪ್ರತಿಯೊಂದು ದತ್ತಾಂಶ ಸಂಗ್ರಹಣೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರಲು “ಇ-ಆಸ್ಪತ್ರೆ’ ವ್ಯವಸ್ಥೆಗೆ ಇಷ್ಟರಲ್ಲೇ ಟೆಂಡರ್​ ಕರೆಯಲು ತೀರ್ಮಾನಿಸಲಾಗಿದ್ದು, ಅಳವಡಿಕೆಗೆ ಒಂದೂವರೆ ವರ್ಷ ಕಾಲಾವಕಾಶ ಹಿಡಿಯಲಿದೆ ಎಂದು ದಿನೇಶ್​ ಹೇಳಿದರು.
ತಾರ್ಕಿಕ ಅಂತ್ಯ ನಿಶ್ಚಿತ:ಕರೊನಾ ಅಕ್ರಮದ ತನಿಖೆಗೆ ಹೈಕೋರ್ಟ್​ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿರುವುದು ರಾಜಕೀಯ ದ್ವೇಷಕ್ಕಲ್ಲ ಎಂದ ದಿನೇಶ್​ ಗುಂಡೂರಾವ್​, ಕರೊನಾ ನಿರ್ವಹಣೆ ಖರೀದಿಗಳಲ್ಲಿ ಅವ್ಯವಹಾರವಾಗಿದೆ ಎಂಬ ಕಾಂಗ್ರೆಸ್​ ನಿಲುವು ಬದಲಾಗಿಲ್ಲ. ಪುರಾವೆ ಸಹಿತ ಅನೇಕ ದೂರುಗಳ ಸಲ್ಲಿಕೆ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯೂ ಈ ವಿಷಯವನ್ನು ಬಹಿರಂಗಪಡಿಸಿದೆ ಎಂದರು.
ಮೇಲ್ದರ್ಜೆಗೇರಿದ ಕೇಂದ್ರಗಳಿಗೆ ಸೌಲಭ್ಯ:ಹಿಂದಿನ ಸರ್ಕಾರ 30 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತಿಸಿದೆ. ಸಿಎಂ ಈಗಾಗಲೆ ಬಜೆಟ್​ನಲ್ಲಿ ಘೋಷಿಸಿದಂತೆ ಮೊದಲ ಹಂತದಲ್ಲಿ 23 ಸಮುದಾಯ ಆರೋಗ್ಯ ಕೇಂದ್ರಗಳಿಗೆ ವೈದ್ಯರು, ಅರೆವೈದ್ಯಕಿಯ, ತಾಂತ್ರಿಕ, ಡಿ ಗ್ರೂಪ್​ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು.
ಅನುದಾನ ಕಡಿತವಿಲ್ಲ:ಗ್ಯಾರಂಟಿಗಳಿಂದಾಗಿ ಆರೋಗ್ಯ ಇಲಾಖೆಗೆ ಅನುದಾನ ಕಡಿತವಾಗಿಲ್ಲ. ಇರುವ ವ್ಯವಸ್ಥೆಯನ್ನು ಸರಿಪಡಿಸಲು ಆದ್ಯತೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಇಲಾಖೆ ಪ್ರಗತಿ ಪರಿಶೀಲಿಸಿದ್ದು, ಕಳೆದ ವರ್ಷ ನೀಡಿದ ಅನುದಾನದಲ್ಲಿ ಶೇ.70 ಬಳಸಿರುವುದನ್ನು ಗಮನಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಗುಂಡೂರಾವ್​ ಸ್ಪಷ್ಟಪಡಿಸಿದರು.
ಬಸ್​ನಲ್ಲಿನ ಚಿಲ್ಲರೆ ಸಮಸ್ಯೆಗೆ ಕಂಡಕ್ಟರ್ ಕೊರಳಲ್ಲೇ ಪರಿಹಾರ!; ಅಂತೂ ಜಾರಿಗೆ ಬಂತು ಹಳೇ ಬೇಡಿಕೆ…

ಅಬ್ಬಬ್ಬಾ.. ಇದೇನಿದು ‘ಸರ್ಪ’ರೈಸ್!: ದೇವರಕೋಣೆಯಲ್ಲಿ ಕಾಳಿಂಗ ಸರ್ಪ, ಸ್ಕೂಲ್​ಬ್ಯಾಗ್​ನಲ್ಲಿ ನಾಗರಹಾವು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 + 9 =
Remember me
