ಕೃಷಿಗೆ ಕ್ಷೇತ್ರಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಕೃಷಿ ವಿಜ್ಞಾನಿಗಳ ಕ್ಷೇತ್ರ ಕಾರ್ಯ ಕಡ್ಡಾಯ ಮಾಡುವುದು, ಸಿರಿಧಾನ್ಯ ಬೆಳೆಗಳ ಉತ್ಪಾದನೆ- ಮೌಲ್ಯವರ್ಧನೆ- ಮಾರುಕಟ್ಟೆ ಹಾಗೂ ರಫ್ತು ಉತ್ತೇಜನಕ್ಕೆ ಅಂತಾರಾಷ್ಟ್ರೀಯ ಸಿರಿಧಾನ್ಯ ವ್ಯಾಪಾರ ಮೇಳ ಆಯೋಜನೆ, ನ್ಯಾನೋ ಗೊಬ್ಬರ ಉತ್ಪಾದನೆ ಮತ್ತು ಬೆಳೆ ವಿಮೆಯಂಥ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಕೃಷಿ ಸಚಿವ ಬಿ.ಸಿ. ಪಾಟೀಲ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈ ಬಗ್ಗೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ 247 ನ್ಯೂಸ್’ ಜತೆ ನಡೆದ ಸಂವಾದದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಂವಾದದ ಪೂರ್ಣಪಾಠ ಇಲ್ಲಿದೆ.
ದೇಶ, ರಾಜ್ಯದ ನಿವ್ವಳ ಆಂತರಿಕ ಉತ್ಪನ್ನ (ಜಿಡಿಪಿ), ಆರ್ಥಿಕತೆ ವೃದ್ಧಿಯಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿರುವ ಕೃಷಿಗೆ ಒತ್ತು ನೀಡಲು ಅಪೇಕ್ಷಿಸಿ, ಇಲಾಖೆಯಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳ ಭರ್ತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.
‘ವಿಜಯವಾಣಿ’ ಸಂವಾದದಲ್ಲಿ ಮಾತನಾಡಿದ ಅವರು, ಈಗಾಗಲೇ 300 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ಭರ್ತಿಗೆ ಅನುಮತಿ ನೀಡಲಾಗಿದೆ. ಖಾಲಿಯಿರುವ ಎಲ್ಲ ಹುದ್ದೆಗಳಲ್ಲದಿದ್ದರೂ ಶೇಕಡ 60ರಷ್ಟಾದರೂ ತುಂಬಿಕೊಳ್ಳಲು ಒಪ್ಪಿದರೆ, ಇಲಾಖೆ ಕೆಲಸ-ಕಾರ್ಯ ಸುಗಮವಾಗಿ ಸಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಇಲಾಖೆಯ ಒಟ್ಟು ಮಂಜೂರಾತಿ ಬಲ 8,980, ಭರ್ತಿಯಾಗಿರುವುದು 3,887. ಖಾಲಿ ಹುದ್ದೆಗಳ ಸಂಖ್ಯೆ 5,093. ಈ ಪಾಟಿ ಸ್ಥಾನಗಳನ್ನು ಖಾಲಿಯಿಟ್ಟುಕೊಂಡು ಯೋಜನೆಗಳ ಅನುಷ್ಠಾನ, ರೈತರ ಕುಂದು-ಕೊರತೆಗಳಿಗೆ ಸಕಾಲಿಕ ಸ್ಪಂದನೆ ಕಷ್ಟಸಾಧ್ಯವೆಂದರು.
ಪ್ರತಿ ಗ್ರಾಮ ಪಂಚಾಯಿತಿಗೊಬ್ಬರಂತೆ ಒಟ್ಟು 5 ಸಾವಿರ ಕೃಷಿ ಡಿಪ್ಲೊಮಾ ಪದವೀಧರರನ್ನು ಹೊರಗುತ್ತಿಗೆಯಡಿ ನೇಮಿಸಿಕೊಂಡು, ಮಾಸಿಕ 12,000 ರೂ. ಗೌರವ ಸಂಭಾವನೆ ನೀಡಲು ಅನುಮೋದನೆ ಕೋರಿದ ಮತ್ತೊಂದು ಪ್ರಸ್ತಾವನೆಯೂ ಆರ್ಥಿಕ ಇಲಾಖೆ ಮುಂದಿದೆ.
ಕ್ಷೇತ್ರ ಕಾರ್ಯ ಕಡ್ಡಾಯ:ಕೃಷಿ ವಿಜ್ಞಾನಿಗಳು ವಿಶ್ವವಿದ್ಯಾಲಯದ ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಳ್ಳದೆ ಕ್ಷೇತ್ರ ಕಾರ್ಯ ಮಾಡುವುದು ಕಡ್ಡಾಯ, ಎಷ್ಟೇ ವಿರೋಧ ಬಂದರೂ ಈ ನಿಲುವು ಬದಲಾಯಿಸುವುದಿಲ್ಲ. ಈಗಾಗಲೇ ಹೊರಡಿಸಿದ ಸುತ್ತೋಲೆ ಪ್ರಕಾರ ಸಹಾಯಕ ಪ್ರಾಧ್ಯಾಪಕರು ಪ್ರತಿ 15 ದಿನಗಳಿಗೊಮ್ಮೆ ರೈತ ಸಂಪರ್ಕ ಕೇಂದ್ರ, ಪ್ರಾಧ್ಯಾಪಕರು ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಬೇಕು. ಈ ಕುರಿತು ವಿವಿ ಕುಲಪತಿಗಳು ಮಾಸಿಕ ವರದಿ ಸಲ್ಲಿಸಬೇಕು.
ವಿವಿ ಸಂಶೋಧಿಸಿದ ಹೊಸ ತಳಿಗಳ ಪ್ರಚಾರ, ರೈತರೊಡನೆ ಒಡನಾಟ, ಇಲಾಖೆ ಕಾರ್ಯವಿಧಾನ, ಸುಧಾರಣಾ ಕ್ರಮಗಳು ಹೀಗೆ ಬಹೂಪಯೋಗಿ ಉದ್ದೇಶವಿದೆ. ಈ ಸುತ್ತೋಲೆ ವಿರುದ್ಧ ಧಾರವಾಡ ಕೃಷಿ ವಿಜ್ಞಾನ ವಿವಿಯಲ್ಲಿ ಚಳವಳಿ ನಡೆದವು. ಸುತ್ತೋಲೆ ವಾಪಸ್ ಪ್ರಶ್ನೆಯೇ ಇಲ್ಲ.
ನಾಲ್ಕು ವಿವಿಗಳ ಸಂಶೋಧನೆಯ ಫಲ ಹೊಸ ತಳಿಗಳು ಅಭಿವೃದ್ಧಿಯಾಗುತ್ತಿವೆ. ಆದರೆ ರೈತರಿಗೆ ತಲುಪುತ್ತಿಲ್ಲ, ಪ್ರಚಾರದ ಕೊರತೆ ಇದಕ್ಕೆ ಕಾರಣ. ಬಹುರಾಷ್ಟ್ರೀಯ ಕಂಪನಿಗಳು ವ್ಯಾಪಕ ಪ್ರಚಾರದ ಮೂಲಕ ರೈತರನ್ನು ಸೆಳೆಯುತ್ತಿದ್ದು, ವಿವಿಗಳ ಪ್ರಯತ್ನ ಮತ್ತು ಸಂಶೋಧನೆಯ ಫಲ ರೈತರಿಗೆ ಮುಟ್ಟಬೇಕು ಎನ್ನುವುದು ಸುತ್ತೋಲೆಯ ಮುಖ್ಯ ಕಾಳಜಿ ಎಂದು ಸಮರ್ಥಿಸಿಕೊಂಡರು.
ಸಿರಿಧಾನ್ಯ ಮೇಳದಿಂದ ವ್ಯಾಪಕ ನಿರೀಕ್ಷೆ:ಸಿರಿಧಾನ್ಯ ಬೆಳೆಗಳ ಉತ್ಪಾದನೆ, ಮೌಲ್ಯವರ್ಧನೆ, ಮಾರುಕಟ್ಟೆ, ರಫ್ತು ನೆಲೆಯಲ್ಲಿ 2023ರ ಜನವರಿ 20 ರಿಂದ 22ರವರೆಗೆ ಬೆಂಗಳೂರಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ವ್ಯಾಪಾರ ಮೇಳ ಮಹತ್ವದ ವೇದಿಕೆಯಾಗಲಿದೆ. ಯೂರೋಪ್​ನ ಬಯೋಟೆಕ್ ಸಮಾವೇಶದಲ್ಲಿ ಪಾಲ್ಗೊಂಡ ಅವಕಾಶ ಬಳಸಿಕೊಂಡು ಈ ಮೇಳದ ಬಗ್ಗೆ ಜಾಗತಿಕ ಕಂಪನಿಗಳು, ತಜ್ಞರೊಂದಿಗೆ ರ್ಚಚಿಸಿ ಆಹ್ವಾನಿಸಿದ್ದು, ಸಕಾರಾತ್ಮಕ ಸ್ಪಂದನೆ ಲಭಿಸಿದೆ.
ಹಿಂದೆ, ಜೋಳ, ರಾಗಿ, ನವಣೆ ಮತ್ತಿತರ ಒರಟು ಧಾನ್ಯಗಳು ಬಡವರ ಆಹಾರ, ಅಕ್ಕಿ ಉಳ್ಳವರದು ಎಂದಾಗಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಆಹಾರಭದ್ರತೆ ಚಿಂತೆ ದೂರವಾಗಿ ಆಹಾರದ ಪೌಷ್ಟಿಕತೆ ಖಾತರಿ ಮುನ್ನೆಲೆಗೆ ಬಂದಿದೆ ಎಂದರು.
ದೇಶದಲ್ಲಿ ಬೆಳೆಯುವ ಸಿರಿಧಾನ್ಯದತ್ತ ವಿಶ್ವದ ಒಲವು ಹೆಚ್ಚಿದೆ. ಸಿರಿಧಾನ್ಯಕ್ಕೆ ಪ್ರಾಶಸ್ಱ ನೀಡಿದ ರಾಜ್ಯ ನಮ್ಮದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಆಶಯದಂತೆ 2023ರ ವೇಳೆಗೆ ರೈತರ ಆದಾಯ ದ್ವಿಗುಣದಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎಂಬ ವಿಶ್ವಾಸವನ್ನು ಬಿ.ಸಿ.ಪಾಟೀಲ್ ವ್ಯಕ್ತಪಡಿಸಿದರು.
ಕಟಾವು ಮಾನದಂಡ ಬದಲಾವಣೆಗೆ ಮನವಿ:ಬೆಳೆ ವಿಮೆ ಪರಿಹಾರ ಪಾವತಿಗೆ ಅನುಸರಿಸುವ ಹಿಂದಿನ ಏಳು ವರ್ಷಗಳ ಬೆಳೆ ಕಟಾವು ಮಾನದಂಡ ಬದಲಾಯಿಸಿ, ಹಂಗಾಮುವಾರು ಕಟಾವು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಮೊರೆಯಿಡಲಾಗಿದೆ. ಬೆಳೆ ವಿಮಾ ಕಂಪನಿಗಳು ಪ್ರತಿ ವರ್ಷ ಹೆಚ್ಚು ಲಾಭ ಪಡೆದಿದ್ದು, ರೈತರಿಗೆ ಕಡಿಮೆಯಾಗಿದೆ ಎನ್ನುವುದನ್ನು ಒಪ್ಪಲಾಗದು, ಪ್ರತಿ ವರ್ಷವೂ ಏರುಪೇರಾಗಿದೆ. 2016-17ರಲ್ಲಿ ವಿಮಾ ಕಂಪನಿಗಳಿಗೆ 9,443 ಕೋಟಿ ರೂ. ಸಂದಾಯವಾಗಿದ್ದರೆ,1,853 ಕೋಟಿ ರೂ. ಪರಿಹಾರ ರೈತರಿಗೆ ಪಾವತಿಯಾಗಿದೆ. ಆದರೆ 2017-18ರಲ್ಲಿ 1,520 ಕೋಟಿ ರೂ ಮೊತ್ತದ ಕಂತು ಭರ್ತಿಯಾಗಿದ್ದು, 2,598 ಕೋಟಿ ರೂ. ಪರಿಹಾರ ರೈತರಿಗೆ ದಕ್ಕಿದೆ ಎಂದು ತುಲನಾತ್ಮಕ ವಿವರಣೆ ನೀಡಿದರು. ರೈತರ ಬ್ಯಾಂಕ್ ಖಾತೆ ಹೊಂದಾಣಿಕೆಯಾಗುತ್ತಿಲ್ಲ ಮತ್ತಿತರ ಕಾರಣಗಳನ್ನು ನೀಡಿ ಎರಡು ವರ್ಷಗಳ ಹಿಂದೆ 100 ಕೋಟಿ ರೂ. ಎಸ್ಕ್ರೋ ಖಾತೆಯಲ್ಲಿ ಉಳಿಸಿಕೊಂಡಿದ್ದರು. ಅಧಿಕಾರಿಗಳಿಗೆ ತಿಳಿಹೇಳಿ ಕೆಲಸ ತೆಗೆದುಕೊಂಡಿರುವೆ. ರೈತರ ಯಾವ ಖಾತೆಯಿಂದ ವಿಮಾ ಕಂತು ಮುರಿದುಕೊಳ್ಳಲಾಗಿದೆಯೋ ಅದೇ ಸಂಖ್ಯೆ ಮೂಲಕ ವಿಳಾಸ ಪತ್ತೆ ಹಚ್ಚಿ, ಡಂಗುರ ಸಾರಿ ವಿಮೆ ನೆರವು ಪಡೆಯಲು ತಿಳಿಸಿದ್ದು, 99 ಕೋಟಿ ರೂ. ಪಾವತಿ ಸಾಧ್ಯವಾಯಿತು ಎಂದು ಸಾರ್ಥಕತೆಯ ಅನುಭವವನ್ನು ಬಿ.ಸಿ.ಪಾಟೀಲ್ ಹಂಚಿಕೊಂಡರು.
ಬರಲಿದೆ ನ್ಯಾನೋ ಡಿಎಪಿ:ನ್ಯಾನೋ ಯೂರಿಯಾ (ದ್ರವರೂಪ) ಆಯಿತು, ಮುಂದಿನ ದಿನಗಳಲ್ಲಿ ನ್ಯಾನೋ ಡಿಎಪಿ ಬರಲಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರಮವಹಿಸಿದ್ದು, ರಾಜ್ಯದಲ್ಲಿ ನ್ಯಾನೋ ಯೂರಿಯಾ ಉತ್ಪಾದನಾ ಘಟಕ ಕಾರ್ಯಾರಂಭಿಸಿದೆ. ಯೂರಿಯಾ ಕ್ಷಮತೆ ಶೇ.54ರಷ್ಟಿದ್ದರೆ, ನ್ಯಾನೋ ಶೇ.83ರಷ್ಟಿದೆ. ವೆಚ್ಚವೂ ಕಡಿಮೆ, ಇಳುವರಿ ಹೆಚ್ಚಿದ್ದು, ರೈತರು ನ್ಯಾನೋ ಯೂರಿಯಾ ಬಳಸಬೇಕು. ತುಮಕೂರು, ಹಾವೇರಿ, ಧಾರವಾಡ ಜಿಲ್ಲೆಗಳ ರೈತರು ಗರಿಷ್ಠ ಪ್ರಮಾಣದಲ್ಲಿ ಬಳಸಿ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಬಿ.ಸಿ.ಪಾಟೀಲ್ ನಿದರ್ಶನವನ್ನಿತ್ತರು.
ರಾಜೀನಾಮೆ ಸವಾಲು:ನೀರಾವರಿ ಪಂಪ್​ಸೆಟ್​ಗಳಿಗೆ ಮೀಟರ್ ಅವಳಡಿಕೆ, ವಿದ್ಯುತ್ ಕ್ಷೇತ್ರ ಖಾಸಗೀಕರಣ, ಉಚಿತ ವಿದ್ಯುತ್ ಪೂರೈಕೆ ಕಡಿತದಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ರಾಜಕೀಯ ಕಾರಣಕ್ಕೆ ಅಪಪ್ರಚಾರ ಮಾಡಲಾಗುತ್ತಿದ್ದು, ಕೆಲವು ಸಂಘಟನೆಗಳು ರೈತರನ್ನು ದಾರಿ ತಪ್ಪಿಸಲು ಹವಣಿಸಿವೆ. ಖಾಸಗೀಕರಣಕ್ಕೆ ಮುಂದಾದರೆ ಸಚಿವ ಪದವಿಗೆ ರಾಜೀನಾಮೆ ನೀಡುವೆ ಎಂದು ಬಿ.ಸಿ.ಪಾಟೀಲ್ ಸವಾಲು ಹಾಕಿದರು.
ತಾತ್ಸಾರಕ್ಕೆ ಬೇಸರ…:ದೇಶಕ್ಕೆ ಅನ್ನ ನೀಡುವ ರೈತರೊಂದಿಗೆ ನೇರ, ನಿಕಟ ಸಂಬಂಧ ಹೊಂದಿದ ಕೃಷಿ ಇಲಾಖೆ ಬಗ್ಗೆ ಆರ್ಥಿಕ ಇಲಾಖೆಯ ತಾತ್ಸಾರ ಬೇಸರ ಉಂಟು ಮಾಡಿದೆ. ಹೊಸ ತಾಲೂಕುಗಳಿಗೆ ತಹಸೀಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ನೇಮಕ ಸಂದರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕರ ನೇಮಕ ಕೇಳಿದರೆ, ಕೃಷಿ ಇಲಾಖೆ ತುರ್ತು ಅಗತ್ಯವಿಲ್ಲವೆಂಬ ಉಪೇಕ್ಷೆಯ ಉತ್ತರ ದೊರೆತಿದೆ. ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ಭರ್ತಿ ಪ್ರಸ್ತಾವನೆಗೆ ಅನುಮತಿ ಪಡೆಯಲು ಬೆವರಿಳಿಸಿದರೆ, ಗ್ರಾ.ಪಂ.ಗೊಬ್ಬ ಡಿಪ್ಲೊಮಾ ಪದವೀಧರರ ನೇಮಕದ ಕಡತ ಆರ್ಥಿಕ ಇಲಾಖೆಯಲ್ಲಿ ಒಂದು ವರ್ಷದಿಂದ ಧೂಳು ತಿನ್ನುತ್ತಾ ಬಿದ್ದಿದೆ ಎಂದು ಬಿ.ಸಿ.ಪಾಟೀಲ್ ಅಸಹನೆ ತೋಡಿಕೊಂಡರು.
ವೈಜ್ಞಾನಿಕ ಬೆಲೆ ನಿಶ್ಚಿತ:ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು ಎಂಬ ಅನ್ನದಾತರ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಲು ರೈತ ಉತ್ಪಾದಕರ ಸಂಸ್ಥೆ (ಎಫ್​ಪಿಒ)ಗಳು ಶಕ್ತವಾಗಿವೆ. ಕೃಷಿ ಯಾಂತ್ರೀಕರಣ, ತಂತ್ರಜ್ಞಾನ ಬಳಕೆ, ಕೊಯ್ಲೋತ್ತರ ತಾಂತ್ರಿಕತೆಗೆ ಒತ್ತು, ಆಹಾರಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಜತೆಗೆ ರಫ್ತಿಗೆ ಎಫ್​ಪಿಒ ನೆರವಾಗಲಿದೆ. ಕೆಪೆಕ್ ನೋಡಲ್ ಏಜನ್ಸಿಯಾಗಿ ಕಾರ್ಯನಿರ್ವಹಿಸಲಿದ್ದು, ಅಪೆಡಾ ಮೂಲಕ ಕೇಂದ್ರ ಸರ್ಕಾರ ಶೇ.90ರಷ್ಟು, ಉಳಿದ ಪಾಲು ರಾಜ್ಯ ಸರ್ಕಾರ ಭರಿಸಲಿದೆ. ಕೃಷಿ ಕ್ಷೇತ್ರದಲ್ಲಿ ರಾಜ್ಯದ ಹೊಸ ಉಪಕ್ರಮಗಳು, ಕಿಸಾನ್ ಸಮ್ಮಾನ್ ನಿಧಿ ಪಾವತಿ ವ್ಯವಸ್ಥೆಗೆ ಕೇಂದ್ರ ಮೆಚ್ಚಿ 100 ಎಫ್​ಪಿಗಳ ಜತೆಗೆ ಹೆಚ್ಚುವರಿ 100 ಎಫ್​ಪಿಒಗಳನ್ನು ಮಂಜೂರು ಮಾಡಿದೆ.
ಡ್ರೋನ್ ಬಳಕೆಯಿಂದ ನೀಗಲಿದೆ ಸಮಸ್ಯೆ:ಕೃಷಿ ಕೂಲಿಕಾರರು ಸಿಗುತ್ತಿಲ್ಲ, ಸಕಾಲಕ್ಕೆ ರಸಗೊಬ್ಬರ, ಕೀಟನಾಶಕ ಸಿಂಪಡಣೆ ಸಾಧ್ಯವಾಗುತ್ತಿಲ್ಲ ಎಂಬ ಕೊರಗು ನೀಗಿಸಲು ಕೇಂದ್ರ ಉತ್ಸುಕವಾಗಿದೆ. ಕ್ರಿಮಿನಾಶಕ ಸಿಂಪಡಣೆಗೆ ಡ್ರೋನ್ ಬಳಸಲು ಕೃಷಿ ವಿವಿಗಳಿಗೆ ಶೇ.100, ಕೃಷಿ ವಿಜ್ಞಾನ ಕೇಂದ್ರಗಳಿಗೆ ಶೇ.75, ಕೃಷಿ ಪದವೀಧರರಿಗೆ ಶೇ.50ರಷ್ಟು ಸಬ್ಸಿಡಿ ನೀಡಲಿದೆ. ಪ್ರತಿ ಡೋನ್​ಗೆ 10 ಲಕ್ಷ ರೂ. ವೆಚ್ಚವಾಗಲಿದೆ. ಒಂದು ಎಕರೆಗೆ ಕ್ರಿಮಿನಾಶಕ ಸಿಂಪಡಿಸಲು 300 ರೂ. ಖರ್ಚಾಗಲಿದ್ದು, ಎಂಟು ನಿಮಿಷದಲ್ಲಿ ಡ್ರೋನ್ ಈ ಕಾರ್ಯ ಪೂರ್ಣಗೊಳಿಸಲಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಕಣ್ಣಮುಂದಿನ ಮಾದರಿ:ತುಂಡು ಭೂಮಿ, ತುಸು ನೀರನ್ನೇ ಬಳಸಿಕೊಂಡು ರೈತನನ್ನು ಸ್ವಾವಲಂಬಿಯಾಗಿಸುವ ಇಸ್ರೇಲ್ ಮಾದರಿ ಬೇಸಾಯದಿಂದ ಸರ್ಕಾರ ಹಿಂದೆ ಸರಿದಿದೆ. ಎಲ್ಲೋ ಇರುವ ಕೃಷಿ ಪದ್ಧತಿಗಿಂತ ರಾಜ್ಯ ರೈತರಿಗೆ ಕಣ್ಣಿಗೆ ಕಾಣುವ, ಪ್ರಾಯೋಗಿಕವಾಗಿ ಅನುಸರಿಸಲು ಸರಳೀಕೃತವಾಗಿರುವ ಕೋಲಾರ ರೈತರ ಯಶೋಗಾಥೆಗಳನ್ನೇ ನೂತನ ಕೃಷಿ ನೀತಿಯಲ್ಲಿ ಅಳವಡಿಸಿ, ರೈತರಿಗೆ ಸ್ಥಳೀಯವಾಗಿಯೇ ಮಾಹಿತಿ ಮಹಾಪೂರ ಹರಿಸಲು ಸರ್ಕಾರ ಪ್ರಾಶಸ್ತ್ಯ ಕಲ್ಪಿಸಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 1 =
Remember me
