ಮಂಗಳೂರು:ಭಾರತ ಅಭಿವೃದ್ಧಿ ಹೊಂದಬೇಕಾದರೆ, ದೇಶದ ಉತ್ಪಾದನಾ ಕ್ಷೇತ್ರ ವಿಸ್ತಾರವಾಗಬೇಕು. ನಮ್ಮ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಬೇಕು. ರಫ್ತು ಹೆಚ್ಚಾದಾಗ ಭಾರತ ಸಹಜವಾಗಿಯೇ ಅಭಿವೃದ್ಧಿ ಕಾಣಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಶುಕ್ರವಾರ 3,800 ಕೋಟಿ ರೂ. ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದ ಬಳಿಕ, ಸಮಾವೇಶದಲ್ಲಿದ್ದ ಲಕ್ಷಾಂತರ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೂಲಸೌಕರ್ಯ ಇಲ್ಲದೆ ಅಭಿವೃದ್ಧಿ ಸಾಧ್ಯವಾಗದು. ಹೀಗಾಗಿ ಎಂಟು ವರ್ಷಗಳಿಂದ ಮೂಲಸೌಕರ್ಯ ವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರಾಶಸ್ಱ ನೀಡಿ, ಅಭೂತಪೂರ್ವ ಸಾಧನೆ ಮಾಡಿದೆ. ದೇಶದಲ್ಲಿ ಅಭಿವೃದ್ಧಿಯಾಗದ ಕ್ಷೇತ್ರವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಸಾಧನೆ ಮಾಡಲಾಗಿದೆ ಎಂದು ಹೇಳಿದರು.
ಭಾರತ ರಕ್ಷಣಾ ಮತ್ತು ಆರ್ಥಿಕ ಸುರಕ್ಷಾ ಕ್ಷೇತ್ರಕ್ಕೆ ಇಂದು ಮಹತ್ವದ ದಿನ. ಕೊಚ್ಚಿಯಲ್ಲಿ ದೇಶದ ಪ್ರಥಮ ಸ್ವದೇಶಿ ಯುದ್ಧನೌಕೆ ವಿಕ್ರಾಂತ್​ಗೆ ಹಸಿರು ನಿಶಾನೆ, ಮಂಗಳೂರಿನಲ್ಲಿ 3,800 ಕೋಟಿ ರೂ. ವೆಚ್ಚದ ಕಾಮಗಾರಿಗಳ ಚಾಲನೆ ನೀಡುವುದು ಇದಕ್ಕೆ ಸಾಕ್ಷಿ ಎಂದು ಬಣ್ಣಿಸಿದರು.
ಸಾಧನೆಗಳ ಪಟ್ಟಿ ತೆರೆದಿಟ್ಟ ಪ್ರಧಾನಿ:ಜನರು ಗೌರವಯುತವಾಗಿ ಬದುಕಲು ಶೌಚಗೃಹ, ಶುದ್ಧ ಜಲ, ಮನೆ, ಧೂಳುಮುಕ್ತ ವಾತಾವರಣ ಅಗತ್ಯ. ಸ್ವಾತಂತ್ರ್ಯೊತ್ಸವದ ಅಮೃತ ವರ್ಷಾಚರಣೆ ಸಂದರ್ಭದಲ್ಲಿ ಹೇಳಿದ್ದ ಪಂಚಪ್ರಾಣಸೂತ್ರಗಳ ಜಾರಿಗೆ ಸರ್ಕಾರ ಆದ್ಯತೆ ನೀಡಿದೆ. ನಮ್ಮ ಡಬಲ್ ಇಂಜಿನ್ ಸರ್ಕಾರ ಇಂತಹ ವ್ಯವಸ್ಥೆ ಕಲ್ಪಿಸಲು ಸದಾ ಶ್ರಮಿಸುತ್ತಿದೆ ಎಂದರು.
ಸರ್ಕಾರದ ಸಾಧನೆಗಳ ಪಟ್ಟಿಯನ್ನು ಭಾಷಣದಲ್ಲಿ ಪ್ರಸ್ತಾಪಿಸುತ್ತ, ಎಂಟು ವರ್ಷಗಳ ಆಡಳಿತದಲ್ಲಿ ಮೂರು ಕೋಟಿ ಮನೆಗಳನ್ನು ಬಡವರಿಗಾಗಿ ನಿರ್ವಿುಸಿಕೊಡಲಾಗಿದೆ. ರಾಜ್ಯದಲ್ಲಿ ಮೂರು ಲಕ್ಷ ಮನೆಗಳ ನಿರ್ವಣಕ್ಕೆ ಅನುಮೋದನೆ ನೀಡಲಾಗಿದೆ. ಮಧ್ಯಮ ವರ್ಗದ ಜನತೆಗೆ ಮನೆ ನಿರ್ವಿುಸಲು ಕೋಟ್ಯಂತರ ರೂ. ನೆರವು ನೀಡಲಾಗಿದೆ. ಆರು ಕೋಟಿ ಜನರಿಗೆ ನಲ್ಲಿ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 30 ಲಕ್ಷ ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ಆಯುಷ್ಮಾನ್ ಭಾರತ ಯೋಜನೆಯಿಂದ ದೇಶದ 4 ಕೋಟಿ ಬಡವರ ಚಿಕಿತ್ಸಾ ನೆರವು ಭರಿಸಲಾಗಿದೆ. ರಾಜ್ಯದಲ್ಲಿ ಈ ಯೋಜನೆಗೆ 30 ಲಕ್ಷ ಫಲಾನುಭವಿಗಳಿದ್ದಾರೆ ಎಂದು ಪ್ರಧಾನಿ ಹೇಳಿದರು. ಹಿಂದೆ ಅಭಿವೃದ್ಧಿ ಯೋಜನೆಗಳ ಲಾಭ ಶ್ರೀಮಂತ ವರ್ಗಕ್ಕೆ ಸೀಮಿತವಾಗಿತ್ತು. ಆದರೆ ಎಂಟು ವರ್ಷಗಳಲ್ಲಿ ಈ ಚಿತ್ರಣ ಸಂಪೂರ್ಣ ಬದಲಾಗಿದೆ. ಈಗ ಬಡವರಿಗೂ ನ್ಯಾಯ ಸಿಗಲಾರಂಭಿಸಿದೆ. ಬಡವರನ್ನು ಹಿಂದಿನ ಆಡಳಿತಗಳು ನಿರ್ಲಕ್ಷಿಸಿದ್ದವು. ಇಂದು ಕೋಟ್ಯಂತರ ಕೃಷಿಕರು, ವ್ಯಾಪಾರಿಗಳು, ಮೀನುಗಾರರು ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಲು ಸಾಧ್ಯವಾಗಿದೆ ಎಂದು ಪಿಎಂ ಕಿಸಾನ್ ಸಮ್ಮಾನ್, ಮುದ್ರಾ ಮೊದಲಾದ ಯೋಜನೆಗಳನ್ನು ನೆನಪಿಸಿದರು.
ಜನರು ವಿಶ್ವದರ್ಜೆಯ ಮೂಲಸೌಕರ್ಯದ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದ ಪ್ರಧಾನಿ, ಉಡಾನ್​ನಂತಹ ಮಹತ್ವದ ಹೆಜ್ಜೆಯ ಮೂಲಕ ಒಂದು ಕೋಟಿಗೂ ಹೆಚ್ಚು ಜನರು ವಾಯುಮಾರ್ಗದಲ್ಲಿ ಸಂಚಾರಿಸುವಂತಾಗಿದೆ ಎಂದರು. ಸ್ವಚ್ಛ ಆರ್ಥಿಕ ವ್ಯವಸ್ಥೆ ಐತಿಹಾಸಿಕ ಸಾಧನಾ ಪಥದಲ್ಲಿದೆ. ಸಂಶೋಧನೆಗಳು ವಿಶ್ವದ ಗಮನ ಸೆಳೆಯುತ್ತಿದೆ. ಜನರು ಕಡಿಮೆ ದರದಲ್ಲಿ ಇಂಟರ್​ನೆಟ್ ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ 5ಜಿ ಸೌಲಭ್ಯ ಮಹತ್ವದ ಕ್ರಾಂತಿ. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ಇನ್ನಷ್ಟು ವೇಗವಾಗಿ ಕೆಲಸ ಮಾಡುವ ವಿಶ್ವಾಸ ಇದೆ ಎಂದು ತಿಳಿಸಿದರು. ರಾಜ್ಯಪಾಲ ಥಾವರಚಂದ್ ಗೆಹಲೋತ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸರ್ಬಾನಂದ್ ಸೋನಾವಲ್, ಶೋಭಾ ಕರಂದ್ಲಾಜೆ, ಶ್ರೀಪಾದ ಯೆಸ್ಸೊ ನಾಯ್್ಕ ಶಾಂತನು ಠಾಕೂರ್, ರಾಜ್ಯದ ಸಚಿವರಾದ ವಿ.ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಮಂಗಳೂರು ಸಂಸದ ಹಾಗೂ ಕರಾವಳಿಯ ಶಾಸಕರು ಉಪಸ್ಥಿತರಿದ್ದರು.
ಗ್ರೀನ್ ಗ್ರೋಥ್, ಗ್ರೀನ್ ಜಾಬ್:ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭ ಗ್ರೀನ್ ಗ್ರೋಥ್ ಮತ್ತು ಗ್ರೀನ್ ಜಾಬ್ ಜತೆ ದೇಶ ಮುನ್ನಡೆಯಲಿದೆ ಎಂದು ಪ್ರಧಾನಿ ಮೋದಿ ವಿಶ್ಲೇಷಿಸಿದರು. ಇಂದಿನ ಭಾರತ ಆಧುನಿಕ ಮೂಲಸೌಲಭ್ಯ ಹೆಚ್ಚಳದತ್ತ ದೃಷ್ಟಿ ನೆಟ್ಟಿದೆ. ಎಂಟು ವರ್ಷಗಳಲ್ಲಿ ರೈಲ್ವೆ ವಿದ್ಯುತ್ ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಅಭಿವೃದ್ಧಿ ಹೊಂದಿದ ಭಾರತ, ಉದ್ಯೋಗಾವಕಾಶಗಳ ಬಾಗಿಲನ್ನೂ ತೆರೆಯಲಿದೆ. ದೇಶದ ತೈಲಾಗಾರಗಳು ನದಿ ನೀರನ್ನೇ ಅವಲಂಬಿಸಿದ್ದವು. ಆದರೆ ಹೊಸ ಯೋಜನೆ ಜಾರಿ ಮೂಲಕ ನದಿ ನೀರಿನ ಬಳಕೆ ಕಡಿಮೆಯಾಗಲಿದೆ. ಕರ್ನಾಟಕಕ್ಕೆ ಸಾಗರ ಮಾಲಾದಂತಹ ಯೋಜನೆಯ ಗರಿಷ್ಠ ಲಾಭ ಸಿಗಲಿದೆ. ಎಂಟು ವರ್ಷಗಳಲ್ಲಿ 17 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳು, ಬೆಂಗಳೂರು-ಮೈಸೂರು, ಬೆಂಗಳೂರು-ಪುಣೆ 6 ಲೇನ್ ಕಾರಿಡಾರ್ ಸಹಿತ ಹಲವು ಕಾಮಗಾರಿಗಳ ಯಶಸ್ವಿ ಅನುಷ್ಠಾನ ಮಾಡಲಾಗಿದೆ ಎಂದರು.
ಮಂಗಳೂರಿಗೆ ಅವಕಾಶದ ಬಾಗಿಲು ತೆರೆದುಕೊಳ್ಳಲಿದೆ. ದೇಶದ ಹಲವು ಯಶಸ್ವಿ ಉದ್ಯಮಿಗಳು ಕರ್ನಾಟಕದವರು. ರಾಜ್ಯದ ಹಲವು ತೀರ್ಥಕ್ಷೇತ್ರಗಳು ಪ್ರಸಿದ್ಧ. ವೀರ ವನಿತೆಯರಾದ ರಾಣಿ ಅಬ್ಬಕ್ಕ ಮತ್ತು ಚೆನ್ನಬೈರಾ ದೇವಿಯವರ ಕೊಡುಗೆ ಸ್ಮರಣೀಯ. ಕರಾವಳಿಗೆ ಬಂದಾಗಲೆಲ್ಲ ರಾಷ್ಟ್ರಭಕ್ತಿಯ ಪ್ರೇರಣೆ ಪಡೆದಿದ್ದೇನೆ.
|ನರೇಂದ್ರ ಮೋದಿಪ್ರಧಾನಿ
ರಾಜ್ಯಕ್ಕೆ ಗರಿಷ್ಠ ಲಾಭ:ಅಭಿವೃದ್ಧಿ ಮಂತ್ರದೊಂದಿಗೆ ಹೆಜ್ಜೆ ಇರಿಸಿದ್ದೇ ರಸ್ತೆ, ರೈಲು, ಸಮುದ್ರ ಮಾರ್ಗಗಳ ಅಭಿವೃದ್ಧಿಗೆ ಕಾರಣ ಎಂದು ವಿಶ್ಲೇಷಿಸಿದ ನರೇಂದ್ರ ಮೋದಿ, ಎಂಟು ವರ್ಷಗಳಲ್ಲಿ ಭಾರತದ ಸಾಮರ್ಥ್ಯ ದುಪ್ಪಟ್ಟು ಹೆಚ್ಚಾಗಿದೆ. ಮಂಗಳೂರು ಬಂದರಿನಲ್ಲಿ ಹೊಸ ಸೌಲಭ್ಯಗಳ ಅನುಷ್ಠಾನ ಮೂಲಕ ಇಲ್ಲಿನ ಸಾಮರ್ಥ್ಯ ಹೆಚ್ಚಲಿದೆ. ದೇಶದಲ್ಲಿ ಯಶಸ್ವಿಯಾದ ಅನೇಕ ಯೋಜನೆಗಳ ಲಾಭ ರಾಜ್ಯದ ಜನಕ್ಕೂ ಸಿಗಲಿದೆ. ಕರ್ನಾಟಕ ಗರಿಷ್ಠ ಸಂಖ್ಯೆಯ ಫಲಾನುಭವಿಗಳು ಕೇಂದ್ರದ ಹಲವು ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಂದರು.
ಪರಶುರಾಮ, ಕೃಷ್ಣನ ವಿಗ್ರಹ ಸ್ಮರಣಿಕೆ:ಕೇಂದ್ರ ಬಂದರು ಸಚಿವ ಸರ್ಬಾನಂದ್ ಸೋನಾವಾಲ್ ಎನ್​ಎಂಪಿಎ ಪರವಾಗಿ ಮೋದಿ ಅವರಿಗೆ ಸಾಂಪ್ರದಾಯಿಕ ಕೊಡಗು ಪೇಟ ತೊಡಿಸಿ, ರೇಷ್ಮೆ ಶಾಲು ಹೊದಿಸಿ ಸನ್ಮಾನಿಸಿದರು. ಉಡುಪಿಯ ಕೃಷ್ಣನ ವಿಗ್ರಹವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ನಂತರ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಸುನೀಲ್ ಕುಮಾರ್ ಹಾಗೂ ದ.ಕ. ಸಂಸದರು ‘ಕೊಡಲಿಯೆತ್ತಿ ವೀರಭಂಗಿಯಲ್ಲಿರುವ ಪರಶುರಾಮ’ನ ವಿಗ್ರಹ ಕಾಣಿಕೆ ನೀಡಿ ಮಂಗಳೂರು ಮಲ್ಲಿಗೆ ಹಾರ ಹಾಕಿ ಗೌರವಿಸಿದರು.
ಮೋದಿ ರೋಡ್ ಶೋ:ಪ್ರಧಾನಿ ಮೋದಿ ರೋಡ್ ಶೋ ಸಮಾವೇಶದ ವೇದಿಕೆ ಮುಂಭಾಗ ಮತ್ತೊಮ್ಮೆ ಮ್ಯಾಜಿಕ್ ಸೃಷ್ಟಿಸಿತು. ಆಗಮನ ಮತ್ತು ನಿರ್ಗಮನ ಸಂದರ್ಭ ವೇದಿಕೆಯಿಂದ ಸುಮಾರು ಅರ್ಧ ಕಿ.ಮೀ. ದೂರ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ನಿರ್ವಿುಸಿದ ರಕ್ಷಣಾ ಬೇಲಿಯ ಹೊರಗೆ ನಿಂತ ಸಾರ್ವಜನಿಕರಿಗೆ ಪ್ರಧಾನಿ ಮೋದಿ ಕೈ ಬೀಸಿ ಪ್ರೀತಿ ತೋರ್ಪಡಿಸಿದರು. ಕಾರು ಸಭಾಂಗಣ ಪ್ರವೇಶ ವೇಳೆ ಒಂದು ಕಡೆ ಬ್ಯಾರಿಕೇಡ್ ಮಗುಚಿ ಹಾಕಿದ ಜನಸಾಗರ ಮೈದಾನ ಕಡೆ ಧಾವಿಸಿತು.
ಹೆದ್ದಾರಿಯಲ್ಲಿ ಹೆದ್ದೆರೆಯಂತೆ ಸಾಗಿ ಬಂದ ಜನ:ಮಂಗಳೂರು ನಗರದ ಬಂಗ್ರಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಆಯೋಜಿಸಿದ್ದ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬೆಳಗ್ಗೆ 9 ಗಂಟೆಯಿಂದಲೇ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಿಂದ ಹೆದ್ದಾರಿಯಲ್ಲಿ ಹೆದ್ದೆರೆಯಂತೆ ಜನ ಸಾಗಿ ಬಂದರು. ಸಂಜೆ 3.30ಕ್ಕೆ ಪ್ರಧಾನಿ ನಿರ್ಗಮಿಸಿದರೂ, ಸಂಜೆ 7 ಗಂಟೆಯವರೆಗೂ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಮುಂದುವರಿದಿದ್ದು ಜನಸ್ತೋಮಕ್ಕೆ ಸಾಕ್ಷಿ ಹೇಳಿತು. ಸಮಾವೇಶಕ್ಕೆ ಬೆಳಗ್ಗೆ 9 ಗಂಟೆ ಮೊದಲೇ ಜನರು ಬರಲಾರಂಭಿಸಿದ್ದರು. ವಿವಿಐಪಿ, ವಿಐಪಿ ಪ್ರವೇಶ ದ್ವಾರ ಹೊರತುಪಡಿಸಿ ಸಭಾಂಗಣದ ಹಿಂಭಾಗದಲ್ಲಿ ಎಡ ಹಾಗೂ ಬಲಭಾಗದಲ್ಲಿ ಸಾರ್ವಜನಿಕರಿಗೆ ಪ್ರವೇಶಿಸಲು ಅವಕಾಶವಿತ್ತು. 10.30ರಿಂದ ಸಾರ್ವಜನಿಕರ ಪ್ರವೇಶ ದ್ವಾರದಲ್ಲಿ ಬರುವವರ ಸಂಖ್ಯೆ ಹೆಚ್ಚಾಗಿದ್ದು, 11.45- 12 ಗಂಟೆ ವೇಳೆಗೆ ಎಲ್ಲ ಕುರ್ಚಿಗಳು ಭರ್ತಿಯಾಗಿದ್ದವು.
ಹವಾಮಾನ ವೈಪರೀತ್ಯ, ಪ್ರಧಾನ ಮಾರ್ಗ ಬದಲು:ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮೋದಿ ಭಾಗವಹಿಸಿ ನಂತರ ನೇರವಾಗಿ ರಸ್ತೆ ಮೂಲಕ ಎನ್​ಎಂಪಿಟಿಗೆ ತೆರಳಿದರು. ಹೆಲಿಕಾಪ್ಟರ್ ಮೂಲಕ ಅಲ್ಲಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರು ಪ್ರಯಾಣಿಸಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್​ನಲ್ಲಿ ತೆರಳುವುದು ಸಾಧ್ಯವಾಗಲಿಲ್ಲ. ಮೋದಿ ಪ್ರಯಾಣ ಕೊನೇ ಕ್ಷಣದಲ್ಲಿ ಬದಲಾಗಿದ್ದು, ಎನ್​ಎಂಪಿಎಯಿಂದ ಹೆಲಿಕಾಪ್ಟರ್ ಬದಲು ರಸ್ತೆ ಮೂಲಕ ಕೂಳೂರು -ಕೆಪಿಟಿ ಜಂಕ್ಷನ್ – ಬೋಂದೆಲ್ – ಕಾವೂರು ಮಾರ್ಗವಾಗಿ ವಿಮಾನ ನಿಲ್ದಾಣ ತಲುಪಿದರು. ಅಲ್ಲಿಂದ ವಿಶೇಷ ವಿಮಾನ ಮೂಲಕ ದೆಹಲಿಗೆ ನಿರ್ಗಮಿಸಿದರು.
ಕರೊನಾ ಗೆದ್ದಿರುವುದಕ್ಕೆ ಜಿಡಿಪಿ ಸಾಕ್ಷಿ:ಭಾರತ ಕರೊನಾ ವಿರುದ್ಧ ಹೋರಾಡಿ ಗೆದ್ದಿದೆ ಎಂದ ಪ್ರಧಾನಿ, ಎಲ್ಲ ದೇಶಗಳು ಆರ್ಥಿಕ ಹಿಂಜರಿತ ಅನುಭವಿಸುತ್ತಿರುವಾಗ ಭಾರತದ ಆರ್ಥಿಕತೆ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಇತ್ತೀಚೆಗೆ ಪ್ರಕಟವಾದ ಜಿಡಿಪಿ ಅಂಕಿಅಂಶ ಸಾಕ್ಷಿ. ಕರೊನಾ ನಂತರ 50 ಲಕ್ಷ ಕೋಟಿ ರಫ್ತು ಗುರಿ ಸಾಧಿಸಿದ್ದೇವೆ. ಸೇವಾ ವಲಯದಲ್ಲೂ ಚೇತರಿಕೆ ಕಂಡುಬಂದಿದೆ. ಎಲೆಕ್ಟ್ರಾನಿಕ್ಸ್, ಗೊಂಬೆ ಮತ್ತಿತರ ವಸ್ತುಗಳ ರಫ್ತು ಹೆಚ್ಚಳವಾಗಿದೆ. ಕರಾವಳಿಗರ ರಾಷ್ಟ್ರಭಕ್ತಿಯ ಬಗ್ಗೆ ಮೋದಿ ವಿಶೇಷ ಉಲ್ಲೇಖ ಮಾಡಿ ಈ ದೇಶಭಕ್ತಿ ಅಭಿವೃದ್ಧಿಯ ಚೈತನ್ಯವಾಗಬೇಕೆಂದು ಆಶಿಸಿದರು.
ಇಂದಿನ ಯುವಕರಿಗೆ ಹೆಂಡತಿ ಎಂದರೆ ‘ಎಂದೆಂದಿಗೂ ಆಹ್ವಾನಿಸಲಾದ ಚಿಂತೆ’!; ಹೈಕೋರ್ಟ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 1 =
Remember me
