ಆರ್​.ತುಳಸಿಕುಮಾರ್​
ಬೆಂಗಳೂರು:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ (ಒಡಿಒಪಿ) ಯೋಜನೆ ಜಾರಿಯಿಂದಾಗಿ ಮಂಡ್ಯದ ಆಲೆಮನೆಗಳು ಗತವೈಭವದತ್ತ ಹೆಜ್ಜೆ ಹಾಕಿದೆ. ಇದಕ್ಕೆ ಇನ್ನಷ್ಟು ಸಹಕಾರ ನೀಡುವಲ್ಲಿ ಪ್ರಧಾನಮಂತ್ರಿ ಔಪಚಾರಿಕ ಕಿರು ಆಹಾರಸಂಸ್ಕರಣಾ ಉದ್ದಿಮೆ (ಪಿಎಂಎಫ್​ಎಂಇ) ಯೋಜನೆ ಕೂಡ ಮಂಡ್ಯದ ಬೆಲ್ಲದ ಸವಿಯನ್ನು ರಾಜ್ಯದ ಹೊರಗಿನವರೂ ಸವಿಯುವಂತೆ ಮಾಡಿದೆ.
ದಶಕದ ಹಿಂದೆ ಸಕ್ಕರೆ ನಾಡು ಮಂಡ್ಯದಲ್ಲಿ 4 ಸಾವಿರಕ್ಕೂ ಹೆಚ್ಚು ಆಲೆಮನೆಗಳು ಇದ್ದವು. ಪ್ರಸ್ತುತ ಅವುಗಳ ಸಂಖ್ಯೆ 850ಕ್ಕೆ ಇಳಿದಿದೆ. ಬದಲಾದ ಪರಿಸ್ಥಿತಿಯಲ್ಲಿ ತಂತ್ರಜ್ಞಾನ ಅಳವಡಿಕೆಯಲ್ಲಿ ಹಿಂದುಳಿದಿದ್ದು ಹಾಗೂ ಹೊಸತನಕ್ಕೆ ತೆರದುಕೊಳ್ಳದ ಕಾರಣ ಆಲೆಮನೆಗಳು ಮೂಲೆಗುಂಪಾಗಿದ್ದವು. ಈ ಕಸುಬನ್ನೇ ಆಶ್ರಯಿಸಿದ್ದ ಸಹಸ್ರಾರು ಮಂದಿಯ ಬದುಕು ಕೂಡ ಅತಂತ್ರವಾಗಿತ್ತು. ಆದರೆ, ಎರಡು ವರ್ಷದ ಹಿಂದೆ ಒಡಿಒಪಿ ಯೋಜನೆ ಅಡಿಯಲ್ಲಿ ಮಂಡ್ಯದ ಬೆಲ್ಲ ಉದ್ಯಮವನ್ನು ಪ್ರೋತ್ಸಾಹಿಸಲು ಕೃಷಿ ಇಲಾಖೆ ಮುಂದಾಯಿತು. ಇದಕ್ಕೆ ಸ್ಥಳೀಯರಿಂದ ಹೆಚ್ಚಿನ ಸ್ಪಂದನೆಯನ್ನು ಪಡೆಯಲು ಪಿಎಂಎಫ್​ಎಂಇ ಕಾರ್ಯಕ್ರಮವನ್ನು ಜೋಡಿಸಿಕೊಳ್ಳಲಾಯಿತು. ಇದರ ಪರಿಣಾಮ ಎರಡೇ ವರ್ಷದಲ್ಲಿ 150 ಆಲೆಮನೆಗಳು ಪುನಶ್ಚೇತನಗೊಂಡಿವೆ. ಇದರ ಯಶಸ್ಸು ಆಧರಿಸಿ ಕೃಷಿ ಇಲಾಖೆ ಕೂಡ ಇನ್ನಷ್ಟು ಆಲೆಮನೆಗಳನ್ನು ಮೇಲ್ದರ್ಜೆಗೇರಿಸುವತ್ತ ಚಿತ್ತ ಹರಿಸಿದೆ.
ಸಬ್ಸಿಡಿಯಿಂದ ಉದ್ಯಮಕ್ಕೆ ಬಲ:
ಒಂದು ಆಲೆಮನೆಯನ್ನು ಪುನಶ್ಚೇತನಗೊಳಿಸಲು ಅಂದಾಜು 30 ಲಕ್ಷ ರೂ. ಅಗತ್ಯವಿದೆ. ಇದರ ಅರ್ಧದಷ್ಟು ಹಣವನ್ನು ಸಬ್ಸಿಡಿ ರೂಪದಲ್ಲಿ ಲಭಿಸಲಿದೆ. ಉಳಿದ ಹಣವನ್ನು ಉದ್ದಿಮೆದಾರರು ಬ್ಯಾಂಕ್ ಸಾಲ ಮೂಲಕ ಬಳಸಿಕೊಳ್ಳಲು ಅವಕಾಶ ಇದೆ. ಇದರ ಯಶಸ್ಸು ಮಂಡ್ಯ ಜಿಲ್ಲೆಯ ಇತರೆಡೆಗೂ ಹಬ್ಬಿದ ಬಳಿಕ ಇನ್ನೂ 2-3 ವರ್ಷ ಕಾಲ ವಾರ್ಷಿಕ 150 ಆಲೆಮನೆಗಳನ್ನು ಮೇಲ್ದರ್ಜೆಗೇರಿಸಲು ಇಲಾಖೆ ಮುಂದಾಗಿದೆ.
ಆಲೆಮನೆಯಲ್ಲಿ ಬೆಲ್ಲ ತಯಾರಿಕೆ ಜತೆಗೆ ಉತ್ಪನ್ನವನ್ನು ಮಾರಾಟ ಮಾಡಲು ರೈತರಿಗೆ ತರಬೇತಿ ನೀಡಲಾಗುತ್ತದೆ. ಸಂಸ್ಕರಣೆ ಕಾರ್ಯದಿಂದಾಗಿ ಹೆಚ್ಚಿನ ಆದಾಯ ಕಂಡುಕೊಳ್ಳಲು ಸಾಧ್ಯವಾಗಿದೆ. ಇದಲ್ಲದೆ ರೈತ ಸಹಕಾರ ಸಂಘಗಳು, ಸ್ವಸಹಾಯ ಸಂಘಗಳಿಗೂ ತರಬೇತಿ ನೀಡಿ ಒಟ್ಟಿಗೆ ವಹಿವಾಟು ನಡೆಸಲು ವೇದಿಕೆ ಕಲ್ಪಿಸಲಾಗಿದೆ. ಇದೆಲ್ಲದರ ಪರಿಣಾಮ ಆಲೆಮನೆಗಳಿಗೆ ಆನೆಬಲ ದೊರೆತಿರುವ ಜತೆಗೆ ಬೆಲ್ಲ ತಯಾರಿಕೆ ಹಾಗೂ ಮಾರಾಟಕ್ಕೆ ಬೇಡಿಕೆ ದೊರೆತಿದೆ. ಕೆಲ ಆಲೆಮನೆಗಳು ತಮ್ಮ ಉತ್ಪನ್ನವನ್ನು ರಫ್ತು ಮಾಡಿ ಹೆಚ್ಚಿನ ಲಾಭ ಪಡೆದಿದ್ದಾರೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ರಾಜ್ಯದೆಲ್ಲೆಡೆ ಮಂಡ್ಯ ಬೆಲ್ಲ ಪರಿಷೆಗೆ ಸಿದ್ಧತೆ:
ಗ್ರಾಮೀಣ ಸಾಂಪ್ರದಾಯಿಕ ಸಿಹಿ ತಿನಿಸುಗಳಲ್ಲಿ ಯಥೇಚ್ಚವಾಗಿ ಉಪಯೋಗಿಸುವ ‘ಬೆಲ್ಲ’ ಪದಾರ್ಥಕ್ಕೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮಧುಮೇಹ ನಿಯಂತ್ರಿಸಲು ಸಕ್ಕರೆ ಬದಲು ಬೆಲ್ಲ ಬಳಕೆಯಾಗುತ್ತಿದೆ. ಆಯುರ್ವೇದ ಔಷಧ ತಯಾರಿಕೆಯಲ್ಲೂ ಬೆಲ್ಲಕ್ಕೆ ವಿಶೇಷ ಸ್ಥಾನ ಉಂಟು. ಈ ಎಲ್ಲ ಅಂಶಗಳನ್ನು ಆಧರಿಸಿ ಕೃಷಿ ಇಲಾಖೆ ಇತ್ತೀಚಿಗೆ ಮಂಡ್ಯದಲ್ಲಿ ಬೆಲ್ಲ ಪರಿಷೆ ಆಯೋಜಿಸಿ ಮೆಚ್ಚುಗೆ ಗಳಿಸಿದೆ. ಈಗ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲೂ ಮಂಡ್ಯ ಬೆಲ್ಲ ಪರಿಷೆ ಆಯೋಜಿಸಲು ಚಿಂತನೆ ನಡೆದಿದೆ.
25ಕ್ಕೂ ವಿಧದ ಬೆಲ್ಲ ತಯಾರಿಕೆ:
ಮಂಡ್ಯದ ಆಲೆಮನೆಗಳು ಪುನಶ್ಚೇತನ ಪಡೆದ ಬಳಿಕ ಅಲ್ಲೀಗ ಬೆಲ್ಲವನ್ನು ವಿವಿಧ ಆಕಾರ, ರುಚಿ ಹಾಗೂ ರಾಸಾಯನಿಕಮುಕ್ತ ಮಾದರಿಯಲ್ಲಿ ತಯಾರಿಸಲಾಗುತ್ತಿದೆ. ಬಕೆಟ್ ಬೆಲ್ಲ, ಆಣಿ ಬೆಲ್ಲ, ಉಂಡೆ ಬೆಲ್ಲ, ಪೇಡಾ ಬಲ್ಲ, ಮೊಟ್ಟೆ ಬೆಲ್ಲ, ಪುಡಿ ಬೆಲ್ಲ, ಗರಿಅಚ್ಚು ಬೆಲ್ಲ, ಕುರಿಕಾಲು ಬೆಲ್ಲ, ಅಚ್ಚು ಬೆಲ್ಲ ಸೇರಿದಂತೆ 25ಕ್ಕೂ ವಿಧದ ಬೆಲ್ಲದ ಮಾದರಿಗಳು ಗ್ರಾಹಕರಿಗೆ ಲಭ್ಯವಿದೆ.
ಬೆಲ್ಲದ ವಿಶೇಷತೆ:
* ರಕ್ತ ಶುದ್ಧೀಕರಣ, ಮಲಬದ್ಧತೆ, ಜೀರ್ಣತೆ, ಕೀಲು ನೋವು, ಕೆಮ್ಮು, ಶ್ವಾಸ ಸಂಬಂಧಿ ಕಾಯಿಲೆಗಳಿಗೆ ಔಷಧೀಯ ಗುಣವಾಗಿ ಬಳಕೆ.* ಬೆಲ್ಲ ಉತ್ತಮ ಸಿಹಿಕಾರಕ ಹಾಗೂ ಆರೋಗ್ಯಕರ ಆಹಾರ ಎಂಬ ಹಿರಿಮೆ.* ಆಯುರ್ವೇದ ಔಷಧ ತಯಾರಿಕೆಯಲ್ಲಿ ವಿಶೇಷವಾಗಿ ಉಪಯೋಗ.* ಬೆಲ್ಲದಲ್ಲಿ ಸಕ್ಕರೆಯಲ್ಲಿರುವ ಸುಕ್ರೋಸ್ ಅಂಶ ಕಡಿಮೆಯಿಂದಾಗಿ ಬಳಕೆಗೆ ಅಡ್ಡಿಯಿಲ್ಲ.
ಒಂದು ಜಿಲ್ಲೆ ಒಂದು ಉತ್ಪನ್ನ ಹಾಗೂ ಪಿಎಂಎಫ್​​ಎಂಇ ಕಾರ್ಯಕ್ರಮ ಜಾರಿಯಿಂದಾಗಿ ಮಂಡ್ಯದ ಬೆಲ್ಲಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಆಲೆಮನೆಗಳು ಮೊದಲಿನಂತೆ ನಿರ್ವಹಿಸಲು ಸಬ್ಸಿಡಿ ಲಭ್ಯವಿರುವುದರಿಂದ ರೈತರಿಂದ ಸ್ಪಂದನೆ ವ್ಯಕ್ತವಾಗಿದೆ. ಉತ್ಪಾದನೆ ಹಾಗೂ ರ್ತು ಕೂಡ ದುಪ್ಪಟ್ಟಾಗಿದೆ. ಜಿಲ್ಲೆಯಲ್ಲಿ ಕಬ್ಬು ಉತ್ಪಾದನೆ ಉತ್ತಮವಾಗಿದ್ದು, ಬೇಡಿಕೆಯಷ್ಟು ಬೆಲ್ಲ ಪೂರೈಸಲು ಯಾವುದೇ ಅಡ್ಡಿ ಆಗದು.– ಗಿರೀಶ್ ಗೌಡ, ಮಂಡ್ಯ ಕೃಷಿ ಅಧಿಕಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
