ಕೋಲಾರ:ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಕೋಚಿಮುಲ್) ಅಧ್ಯಕ್ಷರ ಮೇಲಿನ ಜಾರಿ ನಿರ್ದೇಶನಾಲಯ (ಇಡಿ) ದಾಳಿ ರಾಜ್ಯ ಸರ್ಕಾರಕ್ಕೆ ಸುತ್ತಿಕೊಳ್ಳುವ ಲಕ್ಷಣಗಳು ಕಂಡುಬಂದಿವೆ. ಶಿಫಾರಸು ಪತ್ರಗಳು, ಫಲಾನುಭವಿಗಳ ಹೇಳಿಕೆ ಆಧರಿಸಿ ರಾಜ್ಯ ಸರ್ಕಾರದ ಪ್ರಭಾವಿ ನಾಯಕರಿಗೂ ಇಡಿ ಶಾಕ್ ನೀಡುವ ಸಾಧ್ಯತೆ ಇದೆ. ಅಭ್ಯರ್ಥಿಗಳನ್ನು ವಿಚಾರಣೆಗೆ ಕರೆದಿರುವ ತನಿಖಾ ಸಂಸ್ಥೆ ಬಳಿಕ ಹುದ್ದೆ ಕೊಡಿಸಲು ಪ್ರಭಾವ ಬೀರಿದವರ ಮೇಲೆ ಮುಗಿಬಿದ್ದರೆ ಅಚ್ಚರಿಯಿಲ್ಲ.
ಕೋಚಿಮುಲ್​ನಲ್ಲಿ ಖಾಲಿಯಿದ್ದ 273 ವಿವಿಧ ಹುದ್ದೆಗಳ ನೇರ ನೇಮಕಾತಿಗೆ 2023 ಸೆಪ್ಟೆಂಬರ್​ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದರಲ್ಲಿ 192 ಹುದ್ದೆಗಳ ನೇಮಕಾತಿಗೆ ತಡೆಯಾಜ್ಞೆ ಆಗಿತ್ತು. ಉಳಿದ 81 ಹುದ್ದೆಗಳಲ್ಲಿ 75 ಹುದ್ದೆಗಳಿಗೆ ಮಾತ್ರ ನ.5ರಂದು ಲಿಖಿತ ಪರೀಕ್ಷೆ ನಡೆದಿತ್ತು. ಇದಾದ ಕೆಲವೇ ದಿನಕ್ಕೆ ಸಂದರ್ಶನ ಮುಗಿಸಿ ನೇಮಕಾತಿ ಪತ್ರ ಕೊಟ್ಟು ಅಭ್ಯರ್ಥಿಗಳನ್ನು ತರಬೇತಿಗೆ ಕಳುಹಿಸಲಾಗಿದೆ. ಹಣಕ್ಕಾಗಿ ಹುದ್ದೆ ಬಿಕರಿ ಮಾಡಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಇಡಿ ಅಧಿಕಾರಿಗಳು, ಕೋಚಿಮುಲ್ ಅಧ್ಯಕ್ಷ ಮತ್ತು ಮಾಲೂರು ಶಾಸಕ ಕೆ.ವೈ. ನಂಜೇಗೌಡ ಮನೆ, ಕಚೇರಿ ದಾಳಿ ನಡೆಸಿದಾಗ ನೇಮಕಾತಿಗೆ ಸಂಬಂಧಿಸಿದ ಹಲವು ಮಾಹಿತಿಗಳು ಬಯಲಾಗಿದ್ದವು.
ಅಭ್ಯರ್ಥಿಗಳ ನೇಮಕಾತಿಗೆ ಶಿಫಾರಸು ಮಾಡಲಾಗಿದೆ ಎನ್ನಲಾದ ದಾಖಲೆ ಪತ್ರವೊಂದು ಇಡಿಗೆ ಲಭ್ಯವಾಗಿದೆ. ಇದು ಸಾರ್ವಜನಿಕ ವಲಯದಲ್ಲೂ ವೈರಲ್ ಆಗಿದ್ದು, ಅಭ್ಯರ್ಥಿಗಳ ಹೆಸರಿನ ಮುಂದೆ ಪ್ರಭಾವಿ ನಾಯಕರ ಹೆಸರು ಉಲ್ಲೇಖಿಸಲಾಗಿತ್ತು. ಮತ್ತೊಂದೆಡೆ, ತನಿಖೆ ಚುರುಕುಗೊಳಿಸಿರುವ ಇಡಿ ಅಧಿಕಾರಿಗಳು, ಮೊದಲ ಹಂತದಲ್ಲಿ ನೇಮಕಾತಿ ಆಗಿರುವ 10 ಅಭ್ಯರ್ಥಿಗಳಿಗೆ ನೋಟಿಸ್ ಕೊಟ್ಟು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ತಲಾ 20ರಿಂದ 30 ಲಕ್ಷ ರೂ. ಪಡೆದು ಹುದ್ದೆ ಮಾರಾಟದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.
ಈಗಾಗಲೇ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಗೋಪಾಲಮೂರ್ತಿ, ಆಡಳಿತಾಧಿಕಾರಿ ನಾಗೇಶ್, ಹಣಕಾಸು ವಿಭಾಗ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಅಭ್ಯರ್ಥಿಗಳು, ಅಧಿಕಾರಿಗಳ ಹೇಳಿಕೆ ಮತ್ತು ಶಿಫಾರಸು ಪತ್ರದ ಆಧಾರದ ಮೇಲೆ 2ನೇ ಹಂತದಲ್ಲಿ ಶಾಸಕ ನಂಜೇಗೌಡ ಮತ್ತು ಅಧಿಕಾರಿ ವರ್ಗಗಳ ವಿಚಾರಣೆಗೆ ಇಡಿ ಬುಲಾವ್ ನೀಡಲಿದೆ. ಇದಾದ ಮೇಲೆ ಶಿಫಾರಸು ಮಾಡಿರುವ ಸರ್ಕಾರ ಪ್ರಭಾವಿ ನಾಯಕರು ಮತ್ತು ಶಾಸಕರಿಗೂ ಇಡಿ ವಿಚಾರಣೆ ಬಿಸಿ ತಟ್ಟುವ ಸಾಧ್ಯತೆಗಳಿವೆ.
ಆರಂಭದಿಂದಲೂ ಅಕ್ರಮದ್ದೇ ಸದ್ದುಅಧಿಸೂಚನೆ ಹೊರಡಿಸಿದ್ದ 81 ಹುದ್ದೆಗಳಲ್ಲಿ 75 ಹುದ್ದೆಗಳಿಗೆ ಮಾತ್ರ ನ.5ರಂದು ಲಿಖಿತ ಪರೀಕ್ಷೆ ನಡೆದಿತ್ತು. ಆರು ಹುದ್ದೆಗಳಿಗೆ ಯಾರೂ ಅರ್ಜಿ ಸಲ್ಲಿಸಿರಲಿಲ್ಲ. ಪರೀಕ್ಷೆಗೆ ಹಾಜರಾಗಿದ್ದ ಅರ್ಹ ಅಭ್ಯರ್ಥಿಗಳಿಗೆ ಡಿ.14, 16 ಹಾಗೂ 18ರಂದು ಸಂದರ್ಶನ ನಡೆಸಲಾಗಿತ್ತು. ಒಕ್ಕೂಟದ ನೇಮಕಾತಿ ಆಯ್ಕೆ ಸಮಿತಿಯಲ್ಲಿ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಬೇಕಾಗಿತ್ತು. ಆದರೆ, ಇದಕ್ಕೂ ಮೊದಲೆ ಆಯ್ಕೆಪಟ್ಟಿ ವೈರಲ್ ಆಗಿತ್ತು. ಮುಜುಗರಕ್ಕೆ ಒಳಗಾದ ಒಕ್ಕೂಟದ ಎಂ.ಡಿ., ಇಂಜಿನಿಯರ್ ವಿಭಾಗದ ಮೇಲ್ವಿಚಾರಕ ಕೆ. ನಾಗೇಶ್ ನೇಮಕಾತಿ ಮೂಲ ಆಯ್ಕೆಪಟ್ಟಿಯಂತೆ ನಕಲಿ ಸೃಷ್ಟಿಸಿ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ ಎಂದು ಡಿಸೆಂಬರ್​ನಲ್ಲಿ ದೂರು ಸಲ್ಲಿಸಿದ್ದರು. ಸ್ಥಳೀಯ ಪೊಲೀಸರು ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು. ಮತ್ತೊಂದೆಡೆ, ಶಾಸಕ ನಂಜೇಗೌಡ ಮತ್ತು ನಿರ್ದೇಶಕರು ಸುದ್ದಿಗೋಷ್ಠಿ ನಡೆಸಿ ನಕಲಿ ಸಂಭವನೀಯ ಪಟ್ಟಿ ಹರಿದಾಡಿದೆ. ಒಕ್ಕೂಟದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಅಂತಿಮ ಪಟ್ಟಿ-ಅಸಲಿ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರುಗಳು ಶೇ.75 ತಾಳೆಯಾದರೆ ಇಡೀ ಆಡಳಿತ ಮಂಡಳಿ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು. ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದರು. ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಪೊಲೀಸ್ ತನಿಖೆ ಮೇಲೆ ಒತ್ತಡಆಡಳಿತ ಮಂಡಳಿ ಒಪ್ಪಿಗೆ ಪಡೆಯುವುದಕ್ಕೂ ಮೊದಲೇ ಸಂಭವನೀಯರ ಆಯ್ಕೆಪಟ್ಟಿ ಸೋರಿಕೆ ಆಗಿರುವ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ದೂರಿನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಒಕ್ಕೂಟದ ಅಧಿಕಾರಿಯೋರ್ವನನ್ನು ವಿಚಾರಣೆಗೆ ಒಳಪಡಿಸಿ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಪಟ್ಟಿ ಬಿಡುಗಡೆ ಕುರಿತು ಮಾಹಿತಿ ನೀಡುತ್ತಿದ್ದಂತೆ ಇದಕ್ಕೆ ನಿರ್ದೇಶಕರು ತಲೆದಂಡ ನೀಡಬೇಕಾಗುತ್ತದೆ ಎಂಬುದನ್ನು ಅರಿತ ಆಡಳಿತ ಮಂಡಳಿ ತನಿಖಾಧಿಕಾರಿಗಳಿಗೆ ತನಿಖೆ ನಿಲ್ಲಿಸುವಂತೆ ಒತ್ತಡ ಹೇರಿದ್ದಾರೆಂಬ ಆರೋಪ ಕೇಳಿಬಂದಿದೆ. ನಿರ್ದೇಶಕರನ್ನು ವಿಚಾರಣೆ ನಡೆಸಿದರೆ ಸತ್ಯಾಸತ್ಯತೆ ಬಹಿರಂಗವಾಗುತ್ತಿತ್ತು. ಪೊಲೀಸ್ ತನಿಖೆ ಮೇಲೆ ಒತ್ತಡ ಇರುವ ಮಾಹಿತಿ ತಿಳಿದ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಡಿಕೆಶಿ, ಡಿಕೆ, ಎಸ್​ಎನ್, ರಮೇಶ್​ಕುಮಾರ್ ಸರ್…ಕೋಚಿಮುಲ್ ನೇಮಕಾತಿ ಸಂಭವನೀಯರ ಪಟ್ಟಿ ಎನ್ನಲಾದ ದಾಖಲೆಯಲ್ಲಿ ಅಭ್ಯರ್ಥಿ ಹೆಸರಿನ ಕಾಲಂನಲ್ಲಿ ಡಿಸಿಎಂ, ರಮೇಶ್​ಕುಮಾರ್ ಸರ್, ಡಿಕೆ, ಎಸ್​ಎನ್ ಹಾಗೂ ನಿರ್ದೇಶಕರ ಹೆಸರನ್ನು ಉಲ್ಲೇಖಿಸಲಾಗಿದೆ. ಅದರಲ್ಲಿಯೂ 3ಬಿ ಅಭ್ಯರ್ಥಿ ಮುಂದೆ ಡಿಕೆಶಿ, ಡಿಕೆ ಎಂದು ಬರೆದಿದ್ದರೆ, ಸಾಮಾನ್ಯ ಅಭ್ಯರ್ಥಿ ಹೆಸರಿನ ಮುಂದೆ ಎಸ್​ಎನ್, ಪ/ಜಾ ಅಭ್ಯರ್ಥಿ ಮುಂದೆ ರಮೇಶ್​ಕುಮಾರ್ ಸರ್ ಎಂದು ಪೆನ್​ನಲ್ಲಿ ಬರೆದಿರುವ ದಾಖಲೆಯೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಇದು ತಾತ್ಕಾಲಿಕ ಆಯ್ಕೆ ಪಟ್ಟಿ ಎಂಬ ಗುಸುಗುಸು ಚರ್ಚೆ ಡಿಸೆಂಬರ್​ನಲ್ಲಿಯೇ ಕೇಳಿಬಂದಿತ್ತು. ಇದರ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಸಂಕಷ್ಟದಲ್ಲಿ ಅಭ್ಯರ್ಥಿಗಳು?ಅಧಿಕಾರ ಮತ್ತು ಹಣ ಬಲ ಬಳಸಿಕೊಂಡು ನೌಕರಿ ಗಿಟ್ಟಿಸಿಕೊಂಡಿರುವ ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಇಡಿ ತನಿಖೆ ಬಿಸಿ ಮುಟ್ಟುತ್ತಿದ್ದಂತೆ ಹಣ ವಾಪಸ್ ಕೊಡುವಂತೆ ಅಭ್ಯರ್ಥಿಗಳು ಮತ್ತು ಅವರ ಪಾಲಕರು ನಿರ್ದೇಶಕರ ಬೆನ್ನತ್ತಿದ್ದಾರೆ. ಅಕ್ರಮ ಸಾಬೀತಾದಲ್ಲಿ ಹಣವೂ ಇಲ್ಲ ಮತ್ತು ನೌಕರಿಯೂ ಇಲ್ಲದೆ ಜೈಲು ಸೇರಬೇಕಾಗುತ್ತದೆ ಎಂಬ ಆತಂಕ ಅಭ್ಯರ್ಥಿಗಳಲ್ಲಿ ಮನೆ ಮಾಡಿದೆ.
1 ತಿಂಗಳು, 4 ಸಭೆ, 80 ಎಕರೆ ಮಂಜೂರುಭೂ ಮಂಜೂರಾತಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಕೆ.ವೈ. ನಂಜೇಗೌಡ, ಇತರ ಸದಸ್ಯರು ಹಾಗೂ ಕಂದಾಯ ಅಧಿಕಾರಿಗಳ ಜತೆ ಶಾಮೀಲಾಗಿ ಒಂದೇ ತಿಂಗಳಲ್ಲಿ ಕೇವಲ 4 ಸಭೆ ನಡೆಸಿ 150 ಕೋಟಿ ರೂ. ಮೌಲ್ಯದ 80 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಸಂಬಂಧಿಕರು, ಆಪ್ತರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ.
ದೆಹಲಿಯಲ್ಲಿ ದಟ್ಟ ಹೊಗೆ: ವಿಮಾನ ಸಂಚಾರದಲ್ಲಿ ವ್ಯತ್ಯಯ, ರನ್​ವೇಯಲ್ಲಿ ದಿನ ಕಳೆದ ಪ್ರಯಾಣಿಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 3 =
Remember me
