ಅಧಿಕಾರ, ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯ ಹೊರತಾಗಿ ನಿಜವಾದ ಅಭಿವೃದ್ಧಿಯನ್ನು ಕಾಣಲು ಅಸಾಧ್ಯ ಎಂಬುದನ್ನು ದೇವರಾಜ ಅರಸು ಅಚಲವಾಗಿ ನಂಬಿದ್ದರು. ಆರ್ಥಿಕ ಸ್ವಾತಂತ್ರ್ಯ ಇಲ್ಲದ ರಾಜಕೀಯ ಸ್ವಾತಂತ್ರ್ಯದಿಂದ ಸರ್ವರನ್ನೊಳಗೊಂಡ ಅಭಿವೃದ್ಧಿಯನ್ನು ಮಾಡಲು ಸಾಧ್ಯ ಇಲ್ಲ ಎನ್ನುವುದು ಅವರಿಗೆ ಗೊತ್ತಿತ್ತು.
ಹಳೆಯ ಜಾಡಿನಲ್ಲಿ ಸಾಗಿದ್ದ ಕರ್ನಾಟಕದ ರಾಜಕೀಯ ಮತ್ತು ಆಡಳಿತ ಎಪ್ಪತ್ತರ ದಶಕದಲ್ಲಿ ಒಂದು ಹೊಸ ತಿರುವನ್ನು ಕಂಡಿತು. ಅದು ರಾಜ್ಯದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ನಾಂದಿ ಹಾಡಿತು. ಇಂತಹದ್ದೊಂದು ಪರಿವರ್ತನೆಯ ಹರಿಕಾರರಾಗಿದ್ದವರು ಕರ್ನಾಟಕವನ್ನು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುನ್ನಡೆಸಿದ್ದ ಡಿ.ದೇವರಾಜ ಅರಸು ಅವರು.
ದೇವರಾಜ ಅರಸು ಅವರ ಹುಟ್ಟೂರು ಮೈಸೂರು. ಸಮಾನ ಅವಕಾಶ ಮತ್ತು ನ್ಯಾಯವನ್ನು ಆಡಳಿತದಲ್ಲಿ ಜಾರಿಗೆ ತಂದಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ ಇದೇ ಮೈಸೂರಿನವರು. ಇಂತಹ ಸಾಮಾಜಿಕ ನ್ಯಾಯದ ಹರಿಕಾರರು ಬಾಳಿ ಬದುಕಿದ ಮೈಸೂರಿಗೆ ನಾನು ಕೂಡ ಸೇರಿದವನು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ.
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಎಂಬ ಸಣ್ಣ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು ದೇವರಾಜ ಅರಸು. ಆ ಕಾಲದ ಕಾಂಗ್ರೆಸ್​ನ ಹಿರಿಯ ನಾಯಕರಾಗಿದ್ದ ಎಚ್.ಎಂ.ಚನ್ನಬಸಪ್ಪನವರ ರಾಜಕೀಯ ಗರಡಿಯಲ್ಲಿ ಬೆಳೆದ ಅರಸು 1941ರಲ್ಲಿ ತಮ್ಮ 25ನೇ ವರ್ಷದಲ್ಲಿಯೇ ಪ್ರಜಾಪ್ರತಿನಿಧಿ ಸಭೆಗೆ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿ ಸದಸ್ಯರಾದವರು. ಬಳಿಕ 1952ರ ಪ್ರಥಮ ಮಹಾಚುನಾವಣೆಯಿಂದ 1978ರವರೆಗೆ ನಡೆದ ಎಲ್ಲ ವಿಧಾನಸಭಾ ಚುನಾವಣೆಗಳಲ್ಲಿ ಅರಸು ಅವರು ಜಯಶಾಲಿಯಾಗಿ ತಮ್ಮ ಜನಪ್ರಿಯತೆಯನ್ನು ಸಾಬೀತುಪಡಿಸಿದ್ದರು.
ಸೂಕ್ಷ್ಮದರ್ಶಕದಲ್ಲಿ ಹುಡುಕುವಷ್ಟು ಸಣ್ಣ ಜಾತಿ ಅವರದ್ದು. ಅವರ ಕುಟುಂಬ ಶ್ರೀಮಂತ ವರ್ಗಕ್ಕೂ ಸೇರಿದ್ದಲ್ಲ. ಈ ರೀತಿ ಜಾತಿ ಮತ್ತು ಹಣದ ಬೆಂಬಲ ಇಲ್ಲದೆ ರಾಜಕೀಯ ಕ್ಷೇತ್ರದ ದೈತ್ಯನಾಗಿ ಅರಸು ಬೆಳೆದ ಪರಿ ಸೋಜಿಗ ಉಂಟುಮಾಡುವಂತಹದ್ದು. ಅರಸು ಜನರ ಮಧ್ಯೆ ಬೆಳೆದು ಬಂದ ಜನನಾಯಕ. ಜಾತಿ ಮೂಲದ ತಾರತಮ್ಯ ಮತ್ತು ವರ್ಗ ಮೂಲದ ಅಸಮಾನತೆಯನ್ನು ಇತರರಂತೆ ಸ್ವಂತ ಅನುಭವಿಸದೆ ಇದ್ದರೂ ಸುತ್ತಲಿನ ಸಮಾಜದಲ್ಲಿ ಬಡತನ, ಅಸ್ಪ ೃ್ಯತೆ, ಅಸಮಾನತೆ, ಅನ್ಯಾಯ, ಅಪಮಾನಗಳಿಗೆ ಬಲಿಯಾಗಿ ನರಳಾಡುತ್ತಿರುವವರನ್ನು ಕಂಡು ಮರುಗಿದವರು.
ಅರಸು ಕೇವಲ ರಾಜಕಾರಣಿಯಾಗಿರಲಿಲ್ಲ. ಅವರಲ್ಲೊಬ್ಬ ಸಮಾನತೆಯ ಕನಸು ಕಾಣುವ ಸಮಾಜ ಸುಧಾರಕನೂ ಇದ್ದ. ಅರಸು ಅವರಿಗೆ ರಾಜಕೀಯ ಎನ್ನುವುದು ಗುರಿಯಾಗಿರಲಿಲ್ಲ. ತಮ್ಮ ಯೋಚನೆ-ಯೋಜನೆಗಳನ್ನು ಅನುಷ್ಠಾನಗೊಳಿಸುವ ಮಾರ್ಗವಾಗಿತ್ತು. ಅಧಿಕಾರ, ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯ ಹೊರತಾಗಿ ನಿಜವಾದ ಅಭಿವೃದ್ಧಿಯನ್ನು ಕಾಣಲು ಅಸಾಧ್ಯ ಎಂಬುದನ್ನು ಅರಸು ಅಚಲವಾಗಿ ನಂಬಿದ್ದರು. ಆರ್ಥಿಕ ಸ್ವಾತಂತ್ರ್ಯ ಇಲ್ಲದ ರಾಜಕೀಯ ಸ್ವಾತಂತ್ರ್ಯದಿಂದ ಸರ್ವರನ್ನೊಳಗೊಂಡ ಅಭಿವೃದ್ಧಿಯನ್ನು ಮಾಡಲು ಸಾಧ್ಯ ಇಲ್ಲ ಎನ್ನುವುದು ಅವರಿಗೆ ಗೊತ್ತಿತ್ತು.
ಬದುಕಿದ್ದಾಗ ಅರಸು ಅವರನ್ನು ಅರ್ಥಮಾಡಿಕೊಂಡವರು ಕಡಿಮೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಏನೆಂಬುದು ರಾಜ್ಯದ ಜನತೆಗೆ ನಂತರದ ದಿನಗಳಲ್ಲಿ ಅರಿವಾಗಿದೆ. ಈ ಬದಲಾವಣೆಯ ಫಲವಾದ ಆತ್ಮಾವಲೋಕನವು ರಾಜ್ಯದ ರಾಜಕಾರಣಕ್ಕೆ ಹೊಸ ದಿಕ್ಕು ತೋರಿಸುತ್ತ ಬಂದಿದೆ. ಸಾಮಾಜಿಕ ನ್ಯಾಯದ ಸಿದ್ಧಾಂತ ಕರ್ನಾಟಕಕ್ಕೆ ಹೊಸತೇನಲ್ಲ. ಹನ್ನೆರಡನೇ ಶತಮಾನದಲ್ಲಿ ನಡೆದ ಬಸವಣ್ಣನವರ ಚಳವಳಿಯೇ ಈ ರಾಜ್ಯದ ಸಾಮಾಜಿಕ ನ್ಯಾಯದ ಮೊದಲ ಹೋರಾಟ. ಆದರೆ ಸಮಕಾಲೀನ ರಾಜಕಾರಣದ ಕೇಂದ್ರಸ್ಥಾನದಲ್ಲಿ ಸಾಮಾಜಿಕ ನ್ಯಾಯ ಕಾಣಿಸಿಕೊಳ್ಳಲು ಅರಸು ಕಾರಣ. ದೇವರಾಜ ಸಾಮಾಜಿಕ ನ್ಯಾಯವನ್ನು ಪಕ್ಕಕ್ಕಿಟ್ಟು ಅರಸು ರಾಜಕಾರಣವನ್ನು ವಿಶ್ಲೇಷಿಸಲಾಗದು.
ದೇವರಾಜ ಅರಸು ಕೇವಲ ಒಬ್ಬ ರಾಜಕಾರಣಿಯಾಗಿರಲಿಲ್ಲ. ತಕ್ಷಣದ ರಾಜಕೀಯದ ಲಾಭ ಕೂಡ ಅವರ ಉದ್ದೇಶವಾಗಿರಲಿಲ್ಲ. ಅವರಲ್ಲೊಬ್ಬ ದೂರಗಾಮಿಯಾಗಿ ಯೋಚನೆ ಮಾಡಬಲ್ಲ ದಾರ್ಶನಿಕ ಇದ್ದ, ಸಮಾಜ ಸುಧಾರಕ ಇದ್ದ. ಅವರು ಜಾರಿಗೆ ತಂದಿರುವ ಯೋಜನೆಗಳೆಲ್ಲವೂ ಭವಿಷ್ಯದ ಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೈಗೊಂಡಿರುವ ನಿರ್ಧಾರಗಳಾಗಿವೆ. ಅಧಿಕಾರ, ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯ ಹೊರತಾಗಿ ನಿಜವಾದ ಅಭಿವೃದ್ಧಿಯನ್ನು ಕಾಣಲು ಅಸಾಧ್ಯ ಎಂಬುದನ್ನು ಅರಸು ಅಚಲವಾಗಿ ನಂಬಿದ್ದರು. ಆರ್ಥಿಕ ಸ್ವಾತಂತ್ರ್ಯ ಇಲ್ಲದ ರಾಜಕೀಯ ಸ್ವಾತಂತ್ರ್ಯದಿಂದ ಸರ್ವರನ್ನೊಳಗೊಂಡ ಅಭಿವೃದ್ಧಿಯನ್ನು ಮಾಡಲು ಸಾಧ್ಯ ಇಲ್ಲ ಎನ್ನುವುದು ಅವರಿಗೆ ಗೊತ್ತಿತ್ತು. ಇದಕ್ಕಾಗಿಯೇ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ನಾಯಕರನ್ನು ಗುರುತಿಸಿ, ಅವಕಾಶ ಕೊಟ್ಟು ರಾಜಕೀಯವಾಗಿ ಬೆಳೆಸಿದರು. ಭೂ ಸುಧಾರಣೆಯ ಮೂಲಕ ಸಂಪತ್ತಿನ ಸಮಾನ ಹಂಚಿಕೆಗೆ ಕಾರಣರಾದರು. ಅದೇ ರೀತಿ ಮೀಸಲಾತಿಯ ಮೂಲಕ ಅವಕಾಶ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸಿ ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಯುವಂತೆ ಮಾಡಿದರು.
ಹಲವು ಯೋಜನೆಗಳ ರೂವಾರಿ: ಪರಿಪೂರ್ಣವಾದ ಅಭಿವೃದ್ಧಿ ಎಂದರೆ ರಸ್ತೆ-ಸೇತುವೆಗಳ ನಿರ್ವಣ, ಉದ್ಯಮಗಳ ಸ್ಥಾಪನೆಯಷ್ಟೇ ಅಲ್ಲ, ಇವುಗಳ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವುದು ಕೂಡ ಆಗಿದೆ. ಇಂತಹದ್ದೊಂದು ಅಭಿವೃದ್ಧಿಯ ಮಾದರಿಯನ್ನು ಕರ್ನಾಟಕದಲ್ಲಿ ಮಾಡಿ ತೋರಿಸಿದರು. ಭೂ ಸುಧಾರಣೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಹಾವನೂರು ಆಯೋಗದ ವರದಿಯ ಅನುಷ್ಠಾನ, ಜೀತಪದ್ಧತಿಯ ನಿಮೂಲನೆ, ಮಲಹೊರುವ ಪದ್ಧತಿಯ ನಿಷೇಧ, ನಿರುದ್ಯೋಗಿಗಳಿಗೆ ಸ್ಟೈಪೆಂಡರಿ ಯೋಜನೆ, ವೃದ್ಧಾಪ್ಯ ವೇತನ, ಋಣಪರಿಹಾರ ಕಾಯ್ದೆ ಜಾರಿ, ಕನಿಷ್ಠ ಕೂಲಿನಿಗದಿ, ಭಾಗ್ಯಜ್ಯೋತಿ ಯೋಜನೆ, ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 58ರಿಂದ 55ಕ್ಕೆ ಇಳಿಕೆ, ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗಾಗಿ ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿ ನಿಲಯಗಳ ಸ್ಥಾಪನೆ… ಹೀಗೆ ಹಲವಾರು ಯೋಜನೆಗಳ ರೂವಾರಿ ದೇವರಾಜ ಅರಸು.
ರಾಷ್ಟ್ರಮಟ್ಟದಲ್ಲಿ ಅನುಷ್ಠಾನ:ಅರಸು ಅವರ ಅನೇಕ ಕಾರ್ಯಕ್ರಮಗಳನ್ನು ನಂತರದ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಮತ್ತು ಬೇರೆಬೇರೆ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತಂದಿರುವುದನ್ನು ಕಾಣಬಹುದು. ಉದಾಹರಣೆಗೆ, ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದ ಬಹಳ ಮುಖ್ಯವಾದ ಕಾರ್ಯಕ್ರಮ- ‘ಉದ್ಯೋಗ ಭರವಸೆ ಯೋಜನೆ’. ಇದು ಇಂದು ರಾಷ್ಟ್ರಮಟ್ಟದ ಯೋಜನೆಯಾಗಿದೆ. ಇದೇ ರೀತಿಯಲ್ಲಿ ಜನತಾ ಮನೆಗಳ ನಿರ್ವಣ, ಕೊಳಗೇರಿ ಅಭಿವೃದ್ಧಿ ಮಂಡಳಿ ಸ್ಥಾಪನೆ, ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ವಿತರಣೆ, ನಿರುದ್ಯೋಗಿಗಳಿಗೆ ಸ್ಟೈಪೆಂಡರಿ, ಲಿಡ್ಕರ್ ಸಂಸ್ಥೆ ಸ್ಥಾಪನೆ, ಭಿಕ್ಷುಕರ ಪುನರ್ವಸತಿ ಕೇಂದ್ರ, ಅಂಗವಿಕಲರಿಗೆ ಮಾಸಾಶನ ಇತ್ಯಾದಿ ಅನೇಕ ಯೋಜನೆಗಳನ್ನು ಅರಸು ಜಾರಿಗೆ ತಂದಿರುವುದನ್ನು ನೋಡಿದರೆ ಅವರಿಗಿದ್ದ ದೂರದೃಷ್ಟಿ ಮತ್ತು ಸಾಮಾಜಿಕ ಕಾಳಜಿಯ ಅರಿವಾಗುತ್ತದೆ.
ಬೆಂಗಳೂರಿಗೆ ಅಭಿವೃದ್ಧಿಯ ಸ್ಪರ್ಶ:ಬೆಂಗಳೂರು ನಗರ ಇಂದು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿದೆ. ಮೊದಲಿಗೆ ಇಂತಹದ್ದೊಂದು ಕನಸು ಕಂಡವರು ದೇವರಾಜ ಅರಸು. ಬೆಂಗಳೂರಿನ ‘ಎಲೆಕ್ಟ್ರಾನಿಕ್ ಸಿಟಿ’ ನಿರ್ವಣಗೊಂಡಿರುವುದು ದೇವರಾಜ ಅರಸು ಅವರ ಕಾಲದಲ್ಲಿ ಎನ್ನುವುದು ಇಂದಿನ ಪೀಳಿಗೆಯ ಬಹಳ ಮಂದಿಗೆ ತಿಳಿದಿಲ್ಲ.
ಈ ರೀತಿ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಸಾಧಿಸಿದ್ದು ದೇವರಾಜ ಅರಸು ಅವರ ಹಿರಿಮೆಯಾಗಿದೆ. ದೂರದೃಷ್ಟಿ, ದಕ್ಷತೆ, ಸಂಕಲ್ಪ ಶಕ್ತಿಗಳೊಂದಿಗೆ ಒಟ್ಟು ಜನಸ್ತೋಮದ ಬದುಕಿನ ದಿಕ್ಕು-ದೆಸೆಯನ್ನೇ ಬದಲಿಸಿದ ದ್ರಷ್ಟಾರ ಅರಸು ಅವರು ಕರ್ನಾಟಕಕ್ಕೆ ದಕ್ಕಿದಂತೆ ಭಾರತದ ಬೇರೆ ಯಾವ ರಾಜ್ಯಕ್ಕೂ ದಕ್ಕಿಲ್ಲ. ಆದರೆ ಅರಸು ಆದೃಷ್ಟವಂತರಲ್ಲ, ಯಾಕೆಂದರೆ ಅವರು ಕೈಗೊಂಡ ಐತಿಹಾಸಿಕ ನಿರ್ಧಾರಗಳ ಬಗ್ಗೆ ವಸ್ತುನಿಷ್ಠ ಮೌಲ್ಯಮಾಪನ ಇಲ್ಲಿಯವರೆಗೆ ನಡೆದಿಲ್ಲ. ಯಾವ ಸಮಾಜವಿಜ್ಞಾನಿಯೂ ಅರಸು ಆಡಳಿತವನ್ನು ಅರ್ಥೈಸುವ ಪ್ರಯತ್ನವನ್ನು ಮಾಡಲಿಲ್ಲ.
ಕೊನೆಯ ದಿನಗಳಲ್ಲಿ ಉದ್ಭವಿಸಿದ ಭಿನ್ನಾಭಿಪ್ರಾಯಗಳಿಂದಾಗಿ ಕಾಂಗ್ರೆಸ್ ಪಕ್ಷದಿಂದ, ತಮ್ಮ ನೆಚ್ಚಿನ ನಾಯಕಿಯಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಂದ ಅವರು ದೂರವಾದರೂ ಅರಸು ಆಡಳಿತದಲ್ಲಿ ಗುಪ್ತಗಾಮಿನಿಯಾಗಿ ಇದ್ದದ್ದು ಕಾಂಗ್ರೆಸ್ ಪಕ್ಷದ ಆಶಯಗಳೇ ಎಂಬುದನ್ನು ಮರೆಯಬಾರದು. ಇಂದಿರಾ ಗಾಂಧಿಯವರ ಜನಪ್ರಿಯ ಕರೆಯಾದ ‘ಗರೀಬಿ ಹಟಾವೋ’ವನ್ನು ಬಹುಬೇಗ ಅರ್ಥಮಾಡಿಕೊಂಡು ಆ ಘೊಷಣೆಗೆ ಸಾಧನೆಯ ರೂಪ ನೀಡಿದವರು ಅರಸು. ಬಹುಷಃ ದೇವರಾಜ ಅರಸು ಅವರಂತೆಯೇ ಆ ಕಾಲದ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳೆಲ್ಲರೂ ನಡೆದುಕೊಂಡಿದ್ದರೆ ಭಾರತದ ಚಿತ್ರಣವೇ ಬದಲಾಗಿಬಿಡುತ್ತಿತ್ತು.
ದೇವರಾಜ ಅರಸು ಅವರ ಚಿಂತನೆಗಳದ್ದು ಗಟ್ಟಿಕಾಳು. ಈ ಚಿಂತನೆಯ ಕಾಳುಗಳು ಮೊಳಕೆಯೊಡೆದು ಬೆಳೆಯುವುದನ್ನು ನೋಡಿ ಆನಂದಿಸಲು ಅರಸು ಉಳಿಯಲಿಲ್ಲ ಎನ್ನುವುದು ವಿಷಾದನೀಯ. ಅವರು ಪ್ರಾರಂಭಿಸಿದ ಪರಿವರ್ತನೆಯ ಪ್ರಯತ್ನವೇ ನಂತರದ ದಿನಗಳಲ್ಲಿ ರೈತ, ದಲಿತ ಮತ್ತು ಭಾಷಾ ಚಳವಳಿಗಳಿಗೆ ಪ್ರೇರಣೆ ಮತ್ತು ಶಕ್ತಿಯಾಗಿತ್ತು ಎನ್ನುವುದನ್ನು ಮರೆಯಬಾರದು. ಅರಸು ಅವರು ಇನ್ನಷ್ಟು ಕಾಲ ಬದುಕಿದ್ದರೆ ರಾಜ್ಯದ ರಾಜಕಾರಣ ಬೇರೆಯೇ ದಾರಿ ಹಿಡಿಯುತ್ತಿತ್ತೋ ಏನೋ?
ಸಾಂಸ್ಕೃತಿಕ ಕ್ಷೇತ್ರಕ್ಕೂ ಕೊಡುಗೆ: ದೇವರಾಜ ಅರಸು ಕಾಲದಲ್ಲಿ ಪರಿವರ್ತನೆಗೆ ಒಳಗಾಗಿದ್ದು ಕೇವಲ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲ. ಸಾಂಸ್ಕೃತಿಕ ಕ್ಷೇತ್ರವನ್ನು ಮುರಿದು ಕಟ್ಟುವ ಪ್ರಕ್ರಿಯೆಗೆ ಚಾಲನೆಗೆ ಸಿಕ್ಕಿದ್ದು ಕೂಡ ಅರಸು ಕಾಲದಲ್ಲಿ. ಮೊದಲ ಬಾರಿಗೆ ಸಾಹಿತ್ಯಕ್ಷೇತ್ರದಲ್ಲಿ ಎಲ್ಲ ಬಗೆಯ ಅನುಭವಲೋಕಗಳ ದನಿಗಳು ಕೇಳಿಬಂದದ್ದು ಅರಸು ಕಾಲದಲ್ಲಿ. ಸಾಂಸ್ಕೃತಿಕವಾಗಿ ನಿರ್ಲಕ್ಷ್ಯಕ್ಕೀಡಾಗಿದ್ದ ತಳಸಮುದಾಯ ತನ್ನ ಅನುಭವಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ದಾಖಲಿಸಲು ಮುಂದಾಗಿದ್ದು ಇದೇ ಕಾಲದಲ್ಲಿ. ಈ ಬದಲಾವಣೆಯೇ ನಂತರದ ದಿನಗಳಲ್ಲಿ ಬಂಡಾಯ ಸಾಹಿತ್ಯ ಪಂಥವಾಗಿ ಬೆಳೆಯಿತು.
ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನವೆಂದರೆ ಪ್ರವಾಹದೆದುರು ಈಜುವುದೇ ಆಗಿದೆ. ಈ ರೀತಿ ಬದಲಾವಣೆಯನ್ನು ತರಲು ಹೊರಟವರು ಅವರು ಬದುಕಿದ್ದಾಗ ಬಹಳ ಜನಪ್ರಿಯರಾಗಿರುವುದಿಲ್ಲ. ಅವರ ಸಾಧನೆಗಳನ್ನು ಗುರುತಿಸಿ ಬೆನ್ನುತಟ್ಟುವವರಿಗಿಂತಲೂ, ಅಂತಹವರನ್ನು ಟೀಕಿಸಿ ಕಾಲೆಳೆಯುವವರ ಸಂಖ್ಯೆಯೇ ಹೆಚ್ಚು. ಇಂತಹವರ ಬಗ್ಗೆ ವರ್ತಮಾನ ಬಹಳ ಕ್ರೂರವಾಗಿರುತ್ತದೆ. ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ ಅವರಿಂದ ಹಿಡಿದು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ವಿ.ಪಿ.ಸಿಂಗ್​ವರೆಗೂ ಇದು ಸತ್ಯ. ಆದರೆ ರಾಗ-ದ್ವೇಷಗಳಿಂದ ಮುಕ್ತವಾದ ಇತಿಹಾಸ ಮಾತ್ರ ಎಲ್ಲವನ್ನೂ ನಿಷ್ಪಕ್ಷಪಾತವಾಗಿ ದಾಖಲಿಸುತ್ತದೆ. ಇಂದು ಬುದ್ಧ, ಬಸವ, ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಎಲ್ಲರೂ ಕೂಡಿ ಸ್ಮರಿಸುತ್ತಾರೆ. ಅದೇ ರೀತಿ ದೇವರಾಜ ಅರಸು ಅವರನ್ನು ಒಂದು ರೀತಿಯಲ್ಲಿ ಪಶ್ಚಾತಾಪದ ದನಿಯಲ್ಲಿ ಎಲ್ಲರೂ ನೆನಪಿಸಿಕೊಳ್ಳುತ್ತಾರೆ.
ಹಲವಾರು ಸಂದರ್ಭಗಳಲ್ಲಿ ನನ್ನ ವಿರುದ್ಧ ಅಸಹನೀಯವಾದ ಟೀಕಾಪ್ರಹಾರಗಳು, ಆಧಾರರಹಿತ ಆರೋಪಗಳು ಕೇಳಿಬಂದಾಗ, ಸಂಚು-ಹುನ್ನಾರಗಳು ನಡೆದಾಗ ಹಿಂದೆಲ್ಲ ಇದೇ ರೀತಿಯ ‘ಶಿಕ್ಷೆಗೆ’ ಒಳಗಾಗಿ ನೊಂದುಕೊಂಡವರ ನೆನಪಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನನಗೆ ದೇವರಾಜ ಅರಸು ಅವರ ಕೊನೆಯ ದಿನಗಳು ಬಹಳ ಕಾಡತೊಡಗಿದೆ. ತಮ್ಮ 34 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಯಾರ ಬದುಕಿನ ಪರಿವರ್ತನೆಗಾಗಿ ಅವರು ಹೋರಾಟ ನಡೆಸಿದ್ದರೋ, ಯಾರಿಗಾಗಿ ಅವರು ಪಟ್ಟಭದ್ರರ ವಿರೋಧಕ್ಕೆ ಎದೆಕೊಟ್ಟು ನಿಂತಿದ್ದರೋ ಅವರೇ ಕೊನೆಗಾಲದಲ್ಲಿ ಅರಸು ಅವರನ್ನು ಕೈಬಿಟ್ಟಿದ್ದರು ಎನ್ನುವುದು ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಇತಿಹಾಸ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಇತಿಹಾಸದಿಂದ ನಾವು ಪಾಠ ಕಲಿಯದೆ ಹೋದರೆ ಮುಂದಿನ ಜನಾಂಗ ನಮ್ಮನ್ನು ಕ್ಷಮಿಸುವುದಿಲ್ಲ.
ಮಂಕಿಪಾಕ್ಸ್, ಝೀಕಾ ವೈರಸ್ ಆತಂಕ: ಮುಂಜಾಗ್ರತಾ ಕ್ರಮ ವಹಿಸಲು ದಿನೇಶ್ ಗುಂಡೂರಾವ್ ಸೂಚನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nineteen =
Remember me
