ನಾವು ಅಳಿದರೂ, ಮಾಡಿದ ಸತ್ಕಾರ್ಯಗಳಿಂದಲೇ ನಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂಬುದಕ್ಕೆ ಅದೆಷ್ಟೋ ಮಹನೀಯರು ಸಾಕ್ಷಿಯಾಗಿದ್ದಾರೆ. ಅವರಂತೆ ಮಹಾನ್ ಸಾಧನೆ ಮಾಡಲು ನಮಗೆ ಆಗದಿದ್ದರೂ ಹಿರಿಯರು ತೋರಿದ ಸನ್ಮಾರ್ಗದಲ್ಲಿ ನಡೆದು ಹೆತ್ತ-ತಂದೆ ತಾಯಿಗೆ ಉತ್ತಮ ಮಕ್ಕಳಾಗಿ ಸಮಾಜಕ್ಕೆ ಒಳ್ಳೆಯ ಪ್ರಜೆಯಾಗಿ ಬದುಕನ್ನು ನಡೆಸಿ ನಮ್ಮ ಹೆಸರಿಗೂ ಸಾರ್ಥಕತೆ ತರುವ ಪ್ರಯತ್ನ ನಮ್ಮದಾಗಲಿ. ನಮ್ಮ ಹೆಸರನ್ನೂ ಒಂದಷ್ಟು ಜನ ಉತ್ತಮ ಭಾವನೆಯಿಂದ ನೆನಪಿಸಿಕೊಳ್ಳುವಂತಾಗಲಿ. ನಿತ್ಯದ ಜೀವನದಲ್ಲಿ ನಮ್ಮನ್ನು ನಾವು ಪರಿಚಯಿಸಿಕೊಳ್ಳುವುದು ನಮ್ಮ ಹೆಸರಿನ ಮೂಲಕ. ಹೆಸರಿನ ಜೊತೆ ಮನೆ, ಊರು, ವಿದ್ಯಾಭ್ಯಾಸ, ಉದ್ಯೋಗ ಇತ್ಯಾದಿಗಳನ್ನೆಲ್ಲ ಹೇಳಿಕೊಂಡು ಪರಿಚಯವನ್ನು ಇನ್ನಷ್ಟು ವಿಸ್ತರಿಸಿ ನಮ್ಮ ವ್ಯಕ್ತಿತ್ವವನ್ನು ಅವರ ಮುಂದೆ ಸಾಧ್ಯವಾಗುವಷ್ಟರ ಮಟ್ಟಿಗೆ ತೆರೆದಿಡುತ್ತೇವೆ.
ಶಾಲೆಗೆ ಹೊಸ ಟೀಚರ್ ಬಂದಾಗ ಮಕ್ಕಳ ಪರಿಚಯವನ್ನು ಮಾಡಿಕೊಳ್ಳುವಂತೆ ಹೇಳುತ್ತಾರೆ. ಮಕ್ಕಳೆಲ್ಲ ಎದ್ದು ನಿಂತು ಶಿಸ್ತಿನಿಂದ ಕಿರಣ, ದಿನೇಶ, ಕವಿತಾ, ಸವಿತಾ ಹೀಗೆ ಹೆಸರು ಮಾತ್ರವಲ್ಲದೆ ತಮ್ಮ ಮನೆ ಅಥವಾ ಕುಟುಂಬ ಇತ್ಯಾದಿ ಹೆಸರನ್ನು ಹೇಳಿಕೊಳ್ಳುತ್ತಾರೆ. ನಮ್ಮನ್ನು ನಾವೇ ಪರಿಚಯಿಸಿಕೊಳ್ಳುವುದಕ್ಕಿಂತ ನಮ್ಮನ್ನು ಇತರರು ಪರಿಚಯಿಸುವಾಗ ಮನದಲ್ಲಿ ಏನೋ ಉತ್ಸಾಹ- ಹುಮ್ಮಸ್ಸು ಹೊಮ್ಮುತ್ತಿರುತ್ತದೆ. ಇನ್ನು ಕೆಲವರನ್ನು ಪರಿಚಯಿಸುವುದೇ ಬೇಡ. ಅವರ ಹೆಸರು ಕೇಳಿದಾಕ್ಷಣ ಅವರ ವ್ಯಕ್ತಿತ್ವವೇ ಕಣ್ಣಿಗೆ ಕಟ್ಟಿದಂತಾಗುತ್ತದೆ. ಸಚಿನ್ ಎಂದರೆ ಸಾಕು, ಕ್ರಿಕೆಟ್ ದಿಗ್ಗಜ ಎಂದು ಮನದಲ್ಲಿ ಮೂಡುತ್ತದೆ. ರಾಜ್​ಕುಮಾರ್ ಎಂದಾಗ ಕನ್ನಡದ ಅಪ್ರತಿಮ ನಟಸಾರ್ವಭೌಮ ಎಂದು ತಿಳಿಯುತ್ತದೆ. ಹೀಗೆ ಅನೇಕರು ತಾವು ಮಾಡಿದ ಸಾಧನೆ ಹಾಗೂ ಮಹತ್ಕಾರ್ಯಗಳಿಂದ ಹೆಸರಿಗೆ ಮತ್ತಷ್ಟು ಮೌಲ್ಯ, ಗೌರವ ದೊರಕುವಂತೆ ಮಾಡಿದ್ದಾರೆ.
ರಾಮ- ಲಕ್ಷ್ಮಣ, ಸೀತಾ ಎಂದೊಡನೆ ಆ ಹೆಸರು ಆಪ್ಯಾಯಮಾನವಾಗಿ ಮನದಲ್ಲಿ ಸಂತೋಷ, ಸಾತ್ವಿಕ ಭಾವನೆ ಮೂಡುತ್ತದೆ. ರಾವಣ, ಕುಂಭಕರ್ಣ, ದುರ್ಯೋಧನ ಎಂದಾಗ ಮನದಲ್ಲಿ ಕೋಪ, ಅಸಹನೆಯ ಭಾವ ಉಂಟಾಗುತ್ತದೆ. ಕೆಲವು ಹೆಸರುಗಳು ನಮಗೆ ಇಷ್ಟವಾಗಿ, ಆತ್ಮೀಯವಾಗಿ ಇರುತ್ತವೆ. ಮತ್ತೆ ಕೆಲವು ಹೆಸರುಗಳನ್ನು ಕೇಳಿದಾಗ ಮನದಲ್ಲಿ ತಳಮಳ, ಅಸಹ್ಯ ಉಂಟಾಗುತ್ತದೆ. ನಮಗೆ ಅನ್ಯಾಯ, ಮೋಸ, ನೋವನ್ನುಂಟು ಮಾಡಿದವರ ಹೆಸರನ್ನು ಕೇಳಿದಾಗ ಮನಸ್ಸು ಬೇಸರಗೊಳ್ಳುವುದಂತೂ ಸತ್ಯ. ನಮ್ಮ ಕಷ್ಟಕ್ಕೆ ಸ್ಪಂದಿಸಿದವರು, ನಮ್ಮ ಖುಷಿಗೆ ಕಾರಣರಾದವರ ಹೆಸರನ್ನು ಕೇಳಿದಾಗ ಮುಖವು ಕಮಲದ ಹೂವಿನಂತೆ ಅರಳುತ್ತದೆ.
ಹೆಸರೆಂದರೆ ಹಾಗೇ. ಇತರರಿಗಿಂತ ವಿಶಿಷ್ಟವಾಗಿ ಇರಬೇಕೆಂದು ಎಲ್ಲರೂ ಬಯಸುತ್ತಾರೆ. ಇಲ್ಲದಿದ್ದರೆ ಎಲ್ಲರಿಗೂ ಇಷ್ಟವಾಗುವ ಹೆಸರು ತನ್ನದಾಗಿರಬೇಕೆಂದು ಆಸೆ ಪಡುತ್ತಾರೆ. ಇಂದಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಹೊಸ ರೀತಿಯ ಹೆಸರನ್ನು ಇಡಬೇಕೆಂಬ ಆಸೆ ಎಲ್ಲ ತಂದೆ-ತಾಯಿಯರದ್ದು. ಮಕ್ಕಳಿಗೆ ಹೆಸರು ಇಡಲು ಕೂಡ ಈವೆಂಟ್ ಮ್ಯಾನೇಜ್​ವೆುಂಟ್​ಗಳು ಸಹಕರಿಸುತ್ತವೆ. ಮಕ್ಕಳ ನಾಮಕರಣ ಆಯೋಜನೆ ಮಾತ್ರವಲ್ಲದೆ ಮಗುವಿಗೆ ಒಪ್ಪಿಗೆಯಾಗುವ ಹೆಸರನ್ನು ಹುಡುಕಿ, ಅದರ ಅರ್ಥವನ್ನು ತಿಳಿಸಿ ತಂದೆ-ತಾಯಂದಿರ ಹೆಗಲಿನ ಭಾರ ಕಡಿಮೆ ಮಾಡುತ್ತಾರಲ್ಲದೆ ಅದರ ಜೊತೆಗೆ ತಮ್ಮ ವ್ಯವಸ್ಥಗೆ ತಕ್ಕಂತೆ ಫೀಸು ಪಡೆದು ಜೇಬಿನ ಭಾರವನ್ನೂ ಕಡಿಮೆ ಮಾಡುತ್ತಾರೆ.
ಹಿಂದೆ ನಮ್ಮ ಕ್ಷೇತ್ರದಲ್ಲಿ ರಮೇಶ, ಸತೀಶ, ಉಮೇಶ, ದಿನೇಶ ಹೀಗೆ ಕೊನೆಯಲ್ಲಿ ಶ ಅಕ್ಷರದಿಂದ ಕೊನೆಗೊಳ್ಳುವ ಹೆಸರಿನವರೇ ಹೆಚ್ಚಾಗಿದ್ದರು. ಜೊತೆಗೆ ಬಹುತೇಕರ ಹೆಸರುಗಳು ಒಂದಲ್ಲ ಒಂದು ದೇವರ ಹೆಸರೇ ಆಗಿರುತ್ತಿತ್ತು. ಮಕ್ಕಳ ನಾಮಕರಣ ಮಾಡುವಾಗ ಇತರ ಧರ್ವಿುಯರಿಗಿಂತ ನಮ್ಮ ಸನಾತನ ಧರ್ವಿುಯರಿಗೆ ಹೆಸರು ಹುಡುಕುವುದು ಬಹಳ ಸುಲಭ. ಯಾಕೆಂದರೆ ನಮ್ಮಲ್ಲಿ ಮುಕ್ಕೋಟಿ ದೇವಾನುದೇವತೆಗಳು ಇರುವುದರಿಂದ ಅದರಲ್ಲಿ ಒಂದು ಹೆಸರನ್ನು ಆಯ್ಕೆ ಮಾಡುವುದು ಬಹು ಸುಲಭ. ಆಗಾಗ ನಮ್ಮ ಮನೆಯಲ್ಲಿ ಹೇಳುತ್ತಿದ್ದೆ. ನೂರು ಮಕ್ಕಳನ್ನು ಹೆತ್ತ ಗಾಂಧಾರಿ ಧೃತರಾಷ್ಟ್ರ ದಂಪತಿಯ ಬಗ್ಗೆ ಯೋಚಿಸಿದರೆ ಆ ಮಕ್ಕಳಿಗೆ ಹೆಸರು ಇಡಲು ಎಷ್ಟು ಕಷ್ಟಪಟ್ಟಿರಬಹುದು ಎಂದು ನನಗೆ ಆಶ್ಚರ್ಯವಾಗುವುದು. ದುರ್ಯೂೕಧನ, ದುಶ್ಯಾಸನ, ದುಃಸಹ, ಕೊನೆಯಲ್ಲಿ ದುಶ್ಯಲಾ ಹೀಗೆ ಎಲ್ಲಾ ಮಕ್ಕಳಿಗೂ ಹೆಸರು ಹುಡುಕಲು ಏನೇನೆಲ್ಲಾ ಮಾಡಿರಬಹುದು ಎಂದೆನಿಸುತ್ತದೆ.
ಇಂದಿನ ದಿನಗಳಲ್ಲಿ ಒಬ್ಬ ಮಗ ಅಥವಾ ಮಗಳಿಗೆ ಹೆಸರು ಹುಡುಕಲು ಮಗು ಹುಟ್ಟುವ ಮುಂಚೆಯೇ ಸಾಕಷ್ಟು ತಯಾರಿಯಾಗುತ್ತದೆ. ಹೆಣ್ಣಾದರೆ ಹೀಗಿರಲಿ, ಗಂಡಾದರೆ ಹೀಗಿರಲಿ ಎಂದು ಹೆಸರಿನ ಪಟ್ಟಿಯನ್ನೇ ತಯಾರಿಸುತ್ತಾರೆ. ಗೂಗಲ್​ನಲ್ಲಿ ಹುಡುಕುತ್ತಾರೆ. ಬಂಧು-ಬಳಗವನ್ನು ಕೇಳುತ್ತಾರೆ. ಇದ್ದ-ಬದ್ದ ಪುಸ್ತಕಗಳಲ್ಲಿ ಹೆಸರು ಮಾತ್ರವಲ್ಲದೆ ಅದರ ಅರ್ಥವನ್ನೂ ಹುಡುಕುತ್ತಾರೆ. ಇನ್ನು ಕೆಲವರು ಹೆಸರು ಹುಡುಕುವ ಪ್ರಮೇಯವೇ ಬೇಡವೆಂದು ಗಂಡ-ಹೆಂಡತಿಯ ಅಕ್ಷರವನ್ನು ಸೇರಿಸಿಕೊಂಡು ಹೊಸ ಹೆಸರನ್ನೇ ಸೃಷ್ಟಿ ಮಾಡುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದವರು ರಷ್ಯಾ, ಫ್ರೆಂಚ್, ಬ್ರಿಟಿಷ್ ಹೆಸರುಗಳನ್ನೂ ಇಡುತ್ತಾರೆ. ಸಂಸ್ಕೃತ ಪದಗಳನ್ನು ಹುಡುಕಿ, ಅರ್ಥವನ್ನು ಕಂಡುಕೊಂಡು ಮಕ್ಕಳಿಗೆ ಹೆಸರನ್ನಿಟ್ಟು ಖುಷಿ ಪಡುತ್ತಾರೆ. ನಾಮಕರಣದ ಸಂದರ್ಭ ಹೆಸರಿನ ಜೊತೆ ಅದರ ಅರ್ಥವನ್ನೂ ಪ್ರಕಟಪಡಿಸುವ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಚಿಕ್ಕ-ಚೊಕ್ಕವಾಗಿರುವ ಹೆಸರನ್ನೇ ಇತ್ತೀಚಿನ ದಿನಗಳಲ್ಲಿ ಇಷ್ಟಪಡುತ್ತಾರೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಇರುತ್ತಿದ್ದ ಉದ್ದುದ್ದ ಹೆಸರುಗಳೆಲ್ಲ ಈಗ ಬಹಳಷ್ಟು ಸಣ್ಣದಾಗಿವೆ. ಉದಾಹರಣೆಗೆ, ಮಿತ್ತಮಜಲು ಸೂರ್ಯನಾರಾಯಣ ಶರ್ಮಾ ಹೆಸರನ್ನು ಈಗ ಎಂ.ಎಸ್. ಶರ್ವ, ತಿಪ್ಪೇಸ್ವಾಮಿ ನಿಜಲಿಂಗಪ್ಪ ಗೌಡ ಇದನ್ನು ಟಿ.ಎನ್. ಗೌಡ ಎಂದಷ್ಟೇ ಹೇಳುತ್ತಾರೆ. ಎರಡು ಮೂರು ಅಕ್ಷರಗಳಿರುವ ಹೆಸರನ್ನೇ ಹುಡುಕುವುದು ಜಾಸ್ತಿಯಾಗಿದೆ.
ಹೆಸರಿನ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಮನೆಯಲ್ಲಿರುವ ಅಜ್ಜ-ಅಜ್ಜಿಯೋ, ಹಿರಿಯರೋ ಮಕ್ಕಳಿಗೆಲ್ಲ ತಾವೇ ಪ್ರತ್ಯೇಕ ಹೆಸರಿಟ್ಟು ಅದರಂತೇ ಕರೆಯುವುದುಂಟು. ನಮ್ಮ ಚಿಕ್ಕಪ್ಪ ಒಬ್ಬರು ಮನೆಗೆ ಬರುವ ನೆಂಟರ, ಆಪ್ತರ ಮಕ್ಕಳಿಗೆಲ್ಲ ತಮಗೆ ಇಷ್ಟವಾಗುವ ಹೆಸರನ್ನು ಇಟ್ಟು ಕರೆಯುತ್ತಿದ್ದರು. ಪುಟ್ಟ, ಅಮ್ಮಿ, ಗುಂಡ… ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಿದ್ದರು. ತಾವೇ ಹೆಸರಿಟ್ಟು ಕರೆಯುವುದನ್ನು ಅವರು ಆನಂದಿಸುತ್ತಿದ್ದರು. ಆಗ ನಾವು ಚಿಕ್ಕಪ್ಪ ಇಟ್ಟ ಹೆಸರನ್ನು ಕೂಗಿ ನಮ್ಮ ಓರಗೆಯ ಮಕ್ಕಳನ್ನೆಲ್ಲ ತಮಾಷೆ ಮಾಡುತ್ತಿದ್ದೆವು.
ಆಗೆಲ್ಲ ರಾಶಿ, ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ಮೊದಲ ಅಕ್ಷರ ಕೇಳಿ ಅದರಿಂದ ಪ್ರಾರಂಭವಾಗುವ ಹೆಸರನ್ನು ಇಡುತ್ತಿದ್ದರು. ಆ ಹೆಸರನ್ನು ಕರೆಯಲು ಅಥವಾ ಹೇಳಲು ಕಷ್ಟವಾಗುತ್ತದೆಯೆಂದೋ, ಇಷ್ಟವಿಲ್ಲವೆಂದೋ ವ್ಯವಹಾರಕ್ಕಾಗಿ ಇನ್ನೊಂದು ಹೆಸರನ್ನು ಇಡುತ್ತಿದ್ದರು. ಬಹುತೇಕರು ಪುರಾಣದ ಕತೆಗಳಲ್ಲಿ ಬರುವ ಅಥವಾ ದೇವ ದೇವಿಯರ ಹೆಸರನ್ನೇ ಇಡಲು ಬಯಸುತ್ತಿದ್ದರು. ಇತ್ತೀಚೆಗೆ ವಿದ್ಯಾವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ರಚನೆಯ ವಿಷ್ಣು ಸಹಸ್ರನಾಮ- ಸಹಸ್ರನಾಮದ ಅಪೂರ್ವ ಅರ್ಥಗಳು ಎಂಬ ಪುಸ್ತಕವನ್ನು ಓದುತ್ತಿದ್ದೆ. ನಮ್ಮಲ್ಲಿ ಅನೇಕರು ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಮುಂತಾದ ಅನೇಕ ಸಹಸ್ರನಾಮಗಳನ್ನು ಪಾರಾಯಣ ಮಾಡುವವರು ಇದ್ದಾರೆ. ಎಲ್ಲರೂ ಅದರಲ್ಲಿನ ವಿಷಯ, ಪದಗಳ ಅರ್ಥವನ್ನು ತಿಳಿದಿರಲಾರರು. ಆದರೆ ಪಾರ್ಥಸಾರಥಿಯವರು ವಿಷ್ಣು ಸಹಸ್ರನಾಮದ ಅಪೂರ್ವ ಅರ್ಥಗಳನ್ನು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ಒಂದೊಂದು ಪದವೂ ಎಷ್ಟೊಂದು ಮಹತ್ವಪೂರ್ಣ ಅರ್ಥಗಳನ್ನು ಹೊಂದಿದೆ ಎಂದು ತಿಳಿದು ಬಹಳ ಆಶ್ಚರ್ಯವಾಯಿತು.
ಅಚ್ಯುತಃ ಅಂದರೆ ಎಂದಿಗೂ ಚ್ಯುತಿಯಿಲ್ಲದಿರುವವನು, ನಾಶವಿಲ್ಲದಿರುವವನು, ಭರ್ತಾ ಎಂದರೆ ಸಮಸ್ತವನ್ನು ಧಾರಣೆ ಮಾಡಿರುವವನು, ಜಗತ್ತಿನ ಒಡೆಯ, ಪೋಷಕ, ಸರ್ವರ ಹೃದಯ ನಿವಾಸಿ, ಮಹೀಭರ್ತಾ ಎಂದರೆ ಸಮಸ್ತ ಭೂಮಿಯನ್ನು ಹೊತ್ತು ಸಂರಕ್ಷಿಸಿದವನು, ಅನಘಃ ಅಂದರೆ ಪಾಪವಿಲ್ಲವನು, ದುಃಖರಹಿತನು, ಮಾನ್ಯಃ ಎಂದರೆ ಎಲ್ಲರಿಂದಲೂ ಸಮ್ಮಾನಿತನಾದವನು, ಶ್ರೇಷ್ಠರಿಂದ ಮಾನ್ಯನಾದವನು, ಮಾನನೀಯನು, ಮಹಾಸ್ವನಃ ಅಂದರೆ ಶ್ರೇಷ್ಠವಾದ ವೇದಾದಿ ಶಬ್ದಗಳಿಂದ ಪ್ರತಿಪಾದ್ಯನು, ವೇಣುನಾದಪ್ರಿಯ, ಪಾಂಚಜನ್ಯಧಾರಿ, ಧೀರ ಗಂಭೀರ ಮಂಗಳ ಮಾತುಗಳ ಮಧುರ ಮಾಧವನೇ ಮಹಾಸ್ವನ, ದುರಾಧರ್ಷಃ ಎಂದರೆ ಯಾರಿಗೂ ಬಗ್ಗದವನು, ಯಾರ ದೊಡ್ಡಸ್ತಿಕೆಗೂ ಸೊಪ್ಪು ಹಾಕದವನು ಎಂಬಿತ್ಯಾದಿ ಅರ್ಥಗಳನ್ನು ನೀಡುವ ಹಲವು ಪದಗಳಿವೆ. ಈ ಪುಸ್ತಕವನ್ನು ಓದುತ್ತಾ ಹೋದ ಹಾಗೆ ಹೊಸ ಹೊಸ ವಿಷಯಗಳು ತಿಳಿಯುತ್ತವೆ. ವಿಷ್ಣು ಸಹಸ್ರನಾಮವೊಂದರಲ್ಲೇ ಇಷ್ಟೊಂದು ಹೆಸರುಗಳು, ಅವುಗಳ ಅರ್ಥಗಳು ಇವೆಯೆಂದಾದರೆ ಉಳಿದ ಸಹಸ್ರನಾಮ, ಅವುಗಳ ಅರ್ಥಗಳು ಎಷ್ಟೊಂದು ಇರಬಹುದು ಅಲ್ಲವೇ?
ಕೆಲವೊಮ್ಮೆ ಸಂಸ್ಕೃತ ಅಥವಾ ಹೊಸದಾಗಿ ಸೃಷ್ಟಿಸಿದ ಹೆಸರುಗಳನ್ನು ಸರಿಯಾಗಿ ಉಚ್ಛರಿಸಲು ಆಗದೆ ತಡಬಡಾಯಿಸುವುದುಂಟು. ಹೆಸರು ಉಚ್ಛಾರಣೆ ಮಾಡಲಾಗದ ಮಗುವಿನ ಸಂಕಷ್ಟದ ಬಗ್ಗೆ ನಡೆದ ಘಟನೆಯೊಂದು ನೆನಪಾಗುತ್ತದೆ. ಅದೇನೆಂದರೆ ಅಂಗನವಾಡಿಗೆ ಹೋಗುವ ಹುಡುಗನೊಬ್ಬ ಮನೆಗೆ ಬಂದು ಅಮ್ಮನೊಡನೆ ಗಲಾಟೆ ಮಾಡತೊಡಗುತ್ತಾನೆ. ಅಮ್ಮಾ ನನ್ನ ಹೆಸರು ಬೇರೆ ಇಡು, ಸುಲಭದ್ದು ಇಡು, ಎರಡು ಅಕ್ಷರದಲ್ಲಿ ಇರಬೇಕು ಎಂದೆಲ್ಲ ಒಂದೇ ಸಮನೆ ರಂಪ ಮಾಡತೊಡಗಿದ. ಅಮ್ಮನನ್ನು ಕೂತಲ್ಲಿ ಕೂರಲು, ನಿಂತಲ್ಲಿ ನಿಲ್ಲಲು ಬಿಡಲೇ ಇಲ್ಲ.
ಆ ಹುಡುಗನ ತಾಯಿಯೋ ‘ಅಯ್ಯೋ ಏನು ಕತೆ… ಆತನಿಗೆ ಹೆಸರಿಡಲು ಎಷ್ಟು ಕಷ್ಟಪಟ್ಟಿಲ್ಲ. ಜಾತಕ ಬರೆಸಿ, ನಕ್ಷತ್ರಕ್ಕೆ ತಾಳೆಯಾಗುವಂತೆ, ಅಕ್ಕ-ತಂಗಿಯವರ ಬಳಿ ಕೇಳಿ, ಕೊನೆಗೆ ಉಳಿದ ಹತ್ತು ಇಪ್ಪತ್ತು ಹೆಸರುಗಳಲ್ಲಿ ಆಶ್ಲೇಷ ಎಂಬ ಹೆಸರು ಆಗಬಹುದು ಎಂದೆನಿಸಿ ಕೊನೆಗೂ ಆಯ್ಕೆ ಮಾಡಿಯಾಗಿತ್ತು. ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಎಂದೆಲ್ಲ ಸೇರಿ 250-300 ಜನರಿಗೆ ಹಬ್ಬದೂಟ ಮಾಡಿಸಿ ಆಶ್ಲೇಷ ನಾಮಕರಣ ಮಾಡಿಯಾಗಿತ್ತು. ಈಗ ನೋಡಿದರೆ ಸ್ವತಃ ಮಗನೇ ನನಗೆ ಆ ಹೆಸರು ಬೇಡಮ್ಮಾ ಎನ್ನುತ್ತಿದ್ದಾನಲ್ಲ’ ಎಂದು ಚಿಂತೆಗೀಡಾದಳು. ಯಾಕಪ್ಪಾ ಆ ಹೆಸರು ಬೇಡ. ಬಹಳ ಚೆನ್ನಾಗಿಯೇ ಇದೆಯಲ್ಲ. ಆಶ್ಲೇಷ ಎಂದರೆ ನಕ್ಷತ್ರ ಎಂಬಿತ್ಯಾದಿ ವಿವರ ನೀಡಿದಳು. ಆಮೇಲೆ ಯಾಕೆ ಹೆಸರು ಬೇಡ ಎಂದಾಗ ಆ ಹುಡುಗ ತನ್ನ ತೊದಲು ಮಾತಿನಲ್ಲಿ ಅದು.. ಅದು.. ಅಂಗನವಾಡಿಯ ಟೀಚರ್ ಎಲ್ಲರ ಹೆಸರು ಕೇಳಿದರು. ನನಗೆ ನನ್ನ ಹೆಸರು ಹೇಳಲು ಬರಲೇ ಇಲ್ಲ. ಅದಕ್ಕೆ ಸುಮ್ಮನೇ ನಿಂತೆ. ನನಗೆ ಆ ಹೆಸರು ಬೇಡ, ಹೆಸರು ಹೇಳಲು ಕಷ್ಟವಾಗುತ್ತದೆ ಎಂದು ಸಪ್ಪೆ ಮುಖ ಮಾಡಿದ. ವಿಷಯವಿಷ್ಟೇ… ಆಶ್ಲೇಷ್ ಎಂದು ಉಚ್ಛಾರಣೆ ಮಾಡಲು ಆ ಪುಟ್ಟ ಬಾಲಕನಿಗೆ ಕಷ್ಟವಾಗಿತ್ತು. ಎಲ್ಲ ಮಕ್ಕಳು ತಮ್ಮ ತಮ್ಮ ಹೆಸರನ್ನು ಬಹಳ ನಿರರ್ಗಳವಾಗಿ ಸುಲಭವಾಗಿ ಹೇಳುವಾಗ ತನ್ನ ಹೆಸರು ಹೇಳಿಕೊಳ್ಳಲು ಆಗದೆ, ಬೇರೆ ಹೆಸರಿಡು ಎಂದು ಹಠ ಮಾಡಿದ್ದ. ಹೀಗೆ ಹೆಸರಿನಿಂದಾಗಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಸಾಕಷ್ಟು ರಂಪ-ರಾಮಾಯಣಗಳಾಗುವುದುಂಟು.
ಹೆಸರು ಎಂಬುದು ವ್ಯಕ್ತಿತ್ವದ ಕೈಗನ್ನಡಿ. ಅವರ ಹೆಸರಿಗೆ ತಕ್ಕಂಥ ಅವರ ವ್ಯಕ್ತಿತ್ವ ಗುಣನಡತೆಗಳನ್ನೂ ಕಾಣಬಹುದಿತ್ತು. ಹೆಸರು ಮಾತ್ರದಿಂದಲೇ ಅವರನ್ನು ತಿಳಿದುಕೊಳ್ಳಬಹುದಿತ್ತು. ಹೆಚ್ಚಾಗಿ ಹೆಸರಿನ ಮೂಲಕ ಹೆಣ್ಣೋ- ಗಂಡೋ ಎಂದು ಸುಲಭವಾಗಿ ತಿಳಿದುಕೊಳ್ಳಬಹುದಿತ್ತು. ಈಗ ಹಾಗಲ್ಲ. ಕೆಲವು ಹೆಸರುಗಳು ಹೆಣ್ಣಿನದ್ದೋ, ಗಂಡಿನದ್ದೋ ಎಂದು ಊಹಿಸಲೂ ಸಾಧ್ಯವಾಗುವುದಿಲ್ಲ. ಕಿರಣ, ಪೃಥ್ವಿ, ಹೀಗೆ ಹಲವಾರು ಹೆಸರುಗಳು ಇಬ್ಬರಿಗೂ ಬಳಕೆಯಾಗುತ್ತವೆ. ಮನೆಯಲ್ಲಿ ಮಕ್ಕಳನ್ನು ಮುದ್ದಿನಿಂದ ಕರೆಯುವ ಹೆಸರೇ ಬೇರೆ ಇರುತ್ತದೆ. ಒಮ್ಮೊಮ್ಮೆ ಅದೇ ಹೆಸರು ರೂಢಿಯಾಗಿ ನಿಜ ನಾಮ ಏನೆಂದು ಬಹುತೇಕ ಜನರಿಗೆ ತಿಳಿದಿರುವುದಿಲ್ಲ.
ನಮ್ಮ ರಾಷ್ಟ್ರ ಕವಿ ಕುವೆಂಪು ಅವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಹಾಗೆಯೇ ಕವಿ ಹಾಗೂ ಕಾದಂಬರಿಕಾರ ದ.ರಾ. ಬೇಂದ್ರೆಯವರದು ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಎಂದು ಹೆಸರು. ಜೊತೆಗೆ ಅಂಬಿಕಾತನಯದತ್ತ ಎಂಬ ಕಾವ್ಯನಾಮವನ್ನು ಇಟ್ಟುಕೊಂಡಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಬರಹಗಾರರು ತಮ್ಮ ನಿಜನಾಮದ ಬದಲು ಕಾವ್ಯನಾಮದಲ್ಲೇ ಬಲು ಪ್ರಸಿದ್ಧರಾಗಿದ್ದಾರೆ. ಗದುಗಿನ ನಾರಣಪ್ಪ-ಕುಮಾರವ್ಯಾಸ, ನಂದಳಿಕೆ ಲಕ್ಷ್ಮೀನಾರಣಪ್ಪ-ಮುದ್ದಣ, ಪಾಟೀಲ ಪುಟ್ಟಪ್ಪ-ಪಾಪು, ಅರಕಲಗೂಡು ನರಸಿಂಗರಾವ್ ಕೃಷ್ಣರಾವ್-ಅನಕೃ, ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪ- ಡಿವಿಜಿ, ಪುರೋಹಿತ ತಿರುನಾರಾಯಣ ನರಸಿಂಹಚಾರ್ಯ-ಪುತಿನ ಹೀಗೆ ಹೇಳ ಹೊರಟರೆ ಸಾಕಷ್ಟು ಬರಹಗಾರರು ಇದ್ದಾರೆ. ಸಿನೆಮಾ ಕ್ಷೇತ್ರದಲ್ಲೂ ಅನೇಕರು ತಮ್ಮ ನಿಜ ನಾಮದ ಬದಲು ಹೊಸ ಹೆಸರನ್ನು ಇಟ್ಟುಕೊಂಡು ಮಿಂಚುತ್ತಾರೆ. ಕೊನೆ ಕೊನೆಗೆ ಅವರ ಪ್ರಸಿದ್ಧಿ ಎಷ್ಟೆಂದರೆ ಅವರ ನಿಜವಾದ ಹೆಸರು ಏನು ಎಂಬುದು ಯಾರಿಗೂ ತಿಳಿದಿರುವುದಿಲ್ಲ.
ನಾವು ಅಳಿದರೂ, ಮಾಡಿದ ಸತ್ಕಾರ್ಯಗಳಿಂದ ನಮ್ಮ ಹೆಸರು ಶಾಶ್ವತವಾಗಿ ಉಳಿಯುವುದು ಎಂಬುದಕ್ಕೆ ಸಾಕ್ಷಿಯಾಗಿ ಅದೆಷ್ಟೋ ಮಹನೀಯರಿದ್ದಾರೆ. ರಾಮಾಯಣ, ಮಹಾಭಾರತದ ಪುಣ್ಯ ಪುರುಷರು ಮಾತ್ರವಲ್ಲದೆ, ರಾಜ ಅಶೋಕ ಚಕ್ರವರ್ತಿಯಿಂದ ಹಿಡಿದು ಇತ್ತೀಚೆಗೆ ನಿಧನರಾದ ಸಾಕಷ್ಟು ಮಹಾನ್ ವ್ಯಕ್ತಿಗಳು ತಮ್ಮ ಉತ್ತಮ ಜೀವನ, ಸೇವಾ ಕಾರ್ಯ, ಸಾಧನೆಯಿಂದ ಹೆಸರಿಗೂ ಗೌರವವನ್ನು ತಂದುಕೊಟ್ಟು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರಂತೆ ಮಹಾನ್ ಸಾಧನೆ ಮಾಡಲಾಗದಿದ್ದರೂ ಹಿರಿಯರು ತೋರಿದ ಸನ್ಮಾರ್ಗದಲ್ಲಿ ನಡೆದು ಹೆತ್ತ-ತಂದೆ ತಾಯಿಗೆ ಉತ್ತಮ ಮಕ್ಕಳಾಗಿ ಸಮಾಜಕ್ಕೆ ಒಳ್ಳೆಯ ಪ್ರಜೆಯಾಗಿ ಬದುಕನ್ನು ನಡೆಸಿ ನಮ್ಮ ಹೆಸರಿಗೂ ಸಾರ್ಥಕತೆ ತರುವ ಪ್ರಯತ್ನ ನಮ್ಮದಾಗಲಿ. ನಮ್ಮ ಹೆಸರನ್ನೂ ಒಂದಷ್ಟು ಜನ ಉತ್ತಮ ಭಾವನೆಯಿಂದ ನೆನಪಿಸಿಕೊಳ್ಳುವಂತಾಗಲಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
