| ಸಿ.ಎಚ್. ಹನುಮಂತರಾಯ
ನಮ್ಮ ರಾಜ್ಯದ ಪೊಲೀಸ್ ವ್ಯವಸ್ಥೆಯಲ್ಲಿ ಬಹುಮುಖ್ಯವಾದ ಅಂಗ ಗೂಢಚರ ವಿಭಾಗ. ಮುಖ್ಯಮಂತ್ರಿ ತಮ್ಮ ಬಳಿ ಹೊಂದಿರುವ ಹತ್ತಾರು ಖಾತೆಗಳಲ್ಲಿ ಇದೂ ಒಂದು. ಹಲವು ವರಿಷ್ಠ ಪೊಲೀಸ್ ಅಧಿಕಾರಿಗಳು ಹಾಗೂ ಅವರ ಅಧೀನದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಗುಪ್ತಚರರು ಕಾರ್ಯ ನಿರ್ವಹಿಸುತ್ತಾರೆ. ಈ ಇಲಾಖೆ ಸಾರ್ವಜನಿಕ ಪ್ರಾಮುಖ್ಯತೆ ಮತ್ತು ರಾಜ್ಯದ ಮೇಲೆ ಪರಿಣಾಮ ಬೀರಬಹುದಾದ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಗುಟ್ಟಾಗಿ ಸಂಗ್ರಹಿಸುವ ಹೊಣೆಗಾರಿಕೆ ಹೊತ್ತಿದೆ. ಗುಪ್ತಚರರು ಅಥವಾ ಬೇಹುಗಾರರು ಸಮಾಜವನ್ನು ದಿಗ್ಭಾ›ಂತಗೊಳಿಸುವ ಅಪರಾಧಗಳ ಕುರಿತು ಗಾಳಿಯ ಹಿಂದಾದರೂ ಬಿದ್ದು ಸುಳಿವು ಕಂಡು ಹಿಡಿಯುವಷ್ಟು ಪರಿಣತರಿರುತ್ತಾರೆ!
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸುವ ಕೆಲಸವನ್ನು ಪೊಲೀಸ್ ಇಲಾಖೆ ಸಮಾಧಾನಕರವಾಗಿ ಮಾಡುತ್ತಿದ್ದರೂ, ಗುಪ್ತಚರ ಇಲಾಖೆ, ಗುಪ್ತಚರ ಮಾಹಿತಿಯನ್ನು ಕಲೆ ಹಾಕುವಲ್ಲಿ ವಿಫಲವಾಗಿದೆ. ಈ ಹಗರಣದಲ್ಲಿ ಭಾವೋದ್ರೇಕ ಮತ್ತು ರಕ್ತ ಹೆಪ್ಪುಗಟ್ಟುವಷ್ಟು ಭಯಾನಕ ವಿಚಾರಗಳಿದ್ದು, ಈ ಸಂಬಂಧ ತನಿಖೆಗೆ ಪೂರಕವಾಗುವ ಯಾವುದೇ ಮಾಹಿತಿಯನ್ನು ಗುಪ್ತಚರ ಇಲಾಖೆ ಒದಗಿಸಲಾಗದೇ ಇರುವುದು ವಿಷಾದನೀಯ.
ತನಿಖೆಯ ಪ್ರಾರಂಭದಲ್ಲಿ ಆರೋಪಿಯ ತಂದೆಯಾದ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ರೇವಣ್ಣ ಅವರನ್ನು ಮಾಧ್ಯಮದವರು ವಿಡಿಯೊ ಕುರಿತು ಪ್ರಶ್ನಿಸಿದಾಗ, ‘ನಾಲ್ಕೈದು ವರ್ಷಗಳ ಹಿಂದಿನ ವಿಡಿಯೊ ಇಟ್ಟುಕೊಂಡು, ಈಗ ಪ್ರಕರಣ ದಾಖಲಿಸಿ ರಾಜಕೀಯ ಮಾಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಪೂರ್ವ ನಿಗದಿಯಂತೆ ಚುನಾವಣೆ ಮುಗಿದ ನಂತರ ವಿದೇಶಕ್ಕೆ ಹೋಗಿದ್ದಾನೆ. ಅವನಿಗೆ ತನ್ನ ವಿರುದ್ಧ ಎಫ್​ಐಆರ್ ದಾಖಲಾಗಿರುವ ವಿಚಾರ ತಿಳಿದಿರಲಿಲ್ಲ, ಹಾಗಾಗಿ ಹೊರಗೆ ಹೋಗಿದ್ದಾನೆ. ಎಲ್ಲೇ ಇದ್ದರೂ ವಿಚಾರಣೆಗೆ ಕರೆದಾಗ ಬರುತ್ತಾನೆ’ ಎಂದು ಹಿಂದು-ಮುಂದು ನೋಡದೆ ಹೇಳಿಯೇ ಬಿಟ್ಟರು.
ಇದನ್ನು ರೇವಣ್ಣ ಮಾತಿನ ಚೆಂದಕ್ಕೆ ಹೇಳಿದ್ದಾರೆಂದು ಯಾರೂ ಭಾವಿಸುವಂತಿರಲಿಲ್ಲ. ರೇವಣ್ಣನವರೇ ಬಂಧನಕ್ಕೊಳಗಾಗಿ ಬಂಧನದಲ್ಲಿದ್ದಾಗ ವಿಡಿಯೊ ನಾಲ್ಕೈದು ವರ್ಷಗಳಷ್ಟು ಹಿಂದಿನದ್ದೆಂದು ಮಾಧ್ಯಮದ ಮುಂದೆ ಹೇಳಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಏನನ್ನೂ ಹೆಕ್ಕಿ ತೆಗೆಯಲಾಗದೇ ಇರುವುದು ತನಿಖೆಯನ್ನು ಪ್ರಾಥಮಿಕ ಹಂತದಲ್ಲೇ ದುರ್ಬಲಗೊಳಿಸಿದೆ.
ಪ್ರಜ್ವಲ್ ರೇವಣ್ಣನವರ ಲೈಂಗಿಕ ಹಗರಣದ ಬಗ್ಗೆ, ಪೆನ್​ಡ್ರೖೆವ್ ಬಗ್ಗೆ ಪ್ರಧಾನಮಂತ್ರಿಯವರಿಗೆ 2023ರ ಡಿಸೆಂಬರ್ 13ರಂದೇ ಮಾಹಿತಿ ಇತ್ತೆಂಬುದು ಬೆಳಕಿಗೆ ಬಂದಿರುವ ವಿಚಾರ.

ಬಿಜೆಪಿ ಮುಖಂಡ ಹಾಗೂ ಹೈಕೋರ್ಟ್ ವಕೀಲ ಜಿ. ದೇವರಾಜೇಗೌಡರು ಪ್ರಜ್ವಲ್ ರೇವಣ್ಣನವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಲ್ಲದೆ ಇದನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಕಳೆದ ಡಿಸೆಂಬರ್​ನಲ್ಲಿ ಪತ್ರ ಬರೆದು ಗಮನಕ್ಕೆ ತಂದಿದ್ದನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಕೇಂದ್ರ ಬಿಜೆಪಿ ಮುಖಂಡರ ಮುಂದಿಟ್ಟರು. ಈ ವಿಷಯದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಇದೆಲ್ಲಾ ನಡೆದದ್ದರ ಉದ್ದೇಶ ಪ್ರಜ್ವಲ್ ರೇವಣ್ಣ ಅವರು ಲೋಕಸಭಾ ಚುನಾವಣೆಯ ಅಭ್ಯರ್ಥಿಯಾದರೆ ಅಪಾಯವನ್ನು ನಾವೂ ಸೇರಿ ಆಹ್ವಾನ ಮಾಡಿದಂತಾಗುತ್ತದೆ ಎಂದು ಮನವರಿಕೆ ಮಾಡಿಕೊಡುವುದಾಗಿತ್ತು.
ಅಶ್ಲೀಲ ವಿಡಿಯೋಗಳ ಬಗ್ಗೆ ಕಳೆದೊಂದು ವರ್ಷದಿಂದ ಬಿಜೆಪಿ, ಜೆಡಿಎಸ್ ನಾಯಕರ ಮಧ್ಯೆ ಚರ್ಚೆಗಳು ನಡೆದಿದ್ದು, ನಂತರ, ಕೆಲವು ಪ್ರಮುಖ ನಾಯಕರಿಗೆ ಮತ್ತು ಸಂಸದರಿಗೆ ವಿಡಿಯೋಗಳನ್ನು ಒಳಗೊಂಡ ಪೆನ್​ಡ್ರೖೆವ್ ದೊರಕಿದ್ದರೂ ತಮಗ್ಯಾಕೆಂದು ಸುಮ್ಮನಿದ್ದರು. ಸಂತ್ರಸ್ತ ಮಹಿಳೆಯರು ತಮ್ಮ ಹೆಸರು ಹಾಗೂ ವಿವರಗಳು ಬಹಿರಂಗವಾಗುವ ಭಯದಿಂದ ಮಾತನಾಡಲಿಲ್ಲ. ಅಲ್ಲದೆ ಟಿಕೆಟ್ ಹಂಚಿಕೆ ಸಮಯದಲ್ಲಿ ಪ್ರಜ್ವಲ್ ರೇವಣ್ಣನವರ ಕುರಿತು ಸ್ಥಳೀಯ ಬಿಜೆಪಿ ಘಟಕ ಹಾಗೂ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್​ಗೆ ದೂರು ನೀಡಿದ್ದರು ಮತ್ತು ಪೆನ್​ಡ್ರೖೆವ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಇದೆಲ್ಲದರ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡುವ ಕುರಿತು ಎಚ್ಚರಿಕೆಯಿಂದರಲು ಸೂಚಿಸಿದ್ದರೂ, ಜೆಡಿಎಸ್ ವರಿಷ್ಠರು ಒಪ್ಪಲಿಲ್ಲ. ಇದೆಲ್ಲಾ ಹಾಸನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಹಂಚಿಕೆ ಮಾಡುವ ಕೆಲವು ವಾರ ಅಥವಾ ತಿಂಗಳುಗಳ ಹಿಂದೆ ಸಂಭವಿಸಿದ ವಿದ್ಯಮಾನಗಳು ಎಂಬುದು ಸರ್ವವಿದಿತ.
ಈ ಹಗರಣವನ್ನು ರಾಜ್ಯ ಗುಪ್ತಚರ ಇಲಾಖೆ ತಕ್ಷಣವೇ ಕಾರ್ಯೋನ್ಮುಖವಾಗಿ ಬಯಲು ಮಾಡಬಹುದಾಗಿತ್ತು. ಹಾಗಾಗದೇ ಹೋದದ್ದು ಇಲಾಖೆಯ ವೈಫಲ್ಯವೆಂದೇ ಹೇಳಬೇಕು. ಕಾರಣ, ಒಂದು ಸಂಜ್ಞೇಯ ಅಪರಾಧವನ್ನು ದಾಖಲಿಸಿಕೊಳ್ಳಲು ಆಧರಿಸಿಕೊಳ್ಳಬಹುದಾದ ಸಂಗತಿಗಳು ಕಣ್ಣೆದುರಿಗೇ ಹರಿದಾಡುತ್ತಿದ್ದವು. ಇವನ್ನು ಗೌಣಗೊಳಿಸುವ ಸಂಗತಿಗಳು ಪ್ರಜ್ವಲ್ ರೇವಣ್ಣ ಅವರ ವತಿಯಿಂದಲೇ 2023ರ ಜೂನ್ 2ರಂದು ಜರುಗಿದ್ದವು. ಆ ದಿನ ಪ್ರಜ್ವಲ್ ರೇವಣ್ಣ ಬೆಂಗಳೂರಿನ 20ನೇ ಅಪರ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ಒಂದು ಅಸಲು ದಾವೆಯನ್ನು 89 ಪ್ರತಿವಾದಿಗಳ ವಿರುದ್ಧ ದಾಖಲಿಸಿದರು. ಇದರಲ್ಲಿನ ಪ್ರತಿವಾದಿಗಳ ಪೈಕಿ 48 ವಿದ್ಯುನ್ಮಾನ, 28 ಪತ್ರಿಕಾ, 7 ಡಿಜಿಟಲ್, ನಾಲ್ಕು ಸಾಮಾಜಿಕ ಮಾಧ್ಯಮಗಳು ಮತ್ತು ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಅವರನ್ನೂ ಒಳಗೊಂಡಂತೆ ಇಬ್ಬರು ವ್ಯಕ್ತಿಗಳಿದ್ದರು.
ನ್ಯಾಯಾಲಯವು ದಾವೆ ದಾಖಲಾದ ಮಾರನೆಯ ದಿನವೇ ಅಂದರೆ 2023ರ ಜೂನ್ 2ರಂದು ಏಕಪಕ್ಷೀಯ ಮಧ್ಯಂತರ ಆದೇಶ ಹೊರಡಿಸಿ, ವಾದಿಯನ್ನು ಕುರಿತಂತೆ ಪ್ರತಿವಾದಿಗಳು ವಿಡಿಯೊ, ವಿಡಿಯೊ ಫೂಟೇಜ್, ಪಿಕ್ಚರ್, ಇಮೇಜಸ್, ಫೋಟೋಗ್ರಾಫ್ ಇತ್ಯಾದಿಗಳನ್ನು ಪ್ರಸಾರ ಮಾಡಬಾರದು, ಮುದ್ರಿಸಬಾರದು, ಪ್ರಕಟಿಸಬಾರದು, ಪೋಸ್ಟಿಂಗ್ ಮಾಡಬಾರದು, ಟ್ರಾನ್ಸಿ್ಮಟ್ ಮಾಡಬಾರದು, ವೆಬ್ ಹೋಸ್ಟಿಂಗ್ ಮಾಡಬಾರದು, ಶೇರಿಂಗ್ ಮಾಡಬಾರದು ಎಂದು ಆದೇಶಿಸಿತು.
ತದನಂತರ ಕೆಲವು ಪ್ರತಿವಾದಿಗಳು ಕೋರ್ಟ್​ಗೆ ಹಾಜರಾಗಿ ತಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸಿದರು. ವಾದಿಯು (ಪ್ರಜ್ವಲ್), ಮಾರ್ಫ್ಡ್ ವಿಡಿಯೊ ಕಾರ್ತಿಕ್ ವಶದಲ್ಲಿದೆ ಎಂದು ಗುಮಾನಿಪಟ್ಟಿದ್ದರಾದರೂ ಕಾರ್ತಿಕ್ ಮಾತ್ರ ಕೋರ್ಟ್ ನೋಟಿಸ್ ಪಡೆದು ಲಿಖಿತ ಹೇಳಿಕೆಯನ್ನು ಇದುವರೆಗೂ ಹಾಜರುಪಡಿಸದೇ ಇರುವುದು ಗಮನಾರ್ಹ. 2024ರ ಏಪ್ರಿಲ್ 22ರಿಂದ ಈಚೆಗೆ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಹೀನಕೃತ್ಯಗಳು ಒಂದು ಟಿವಿ ಚಾನೆಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯರ ಊಹೆಗೆ ಏನನ್ನೂ ಬಿಡದೆ ಪ್ರಸಾರಗೊಂಡವು.
ಇದರಿಂದ ವಿಚಲಿತಗೊಂಡ ಪ್ರಜ್ವಲ್ ರೇವಣ್ಣ 2024ರ ಏಪ್ರಿಲ್ 28ರಂದು ಬೆಂಗಳೂರಿಗೆ ಧಾವಿಸಿ ವಕೀಲರನ್ನು ಸಂರ್ಪಸಿ ಪ್ರಮಾಣ ಪತ್ರವನ್ನು ಸಿದ್ಧ ಮಾಡಿ 2024ರ ಜೂನ್ 20ಕ್ಕೆ ನಿಗದಿಯಾಗಿದ್ದ ಸಿವಿಲ್ ದಾವೆಯನ್ನು 2024ರ ಏಪ್ರಿಲ್ 27ಕ್ಕೆ ಮುಂಗಡವಾಗಿ ತಂದುಕೊಂಡು, ಟಿ.ವಿ.ಚಾನೆಲ್​ನಲ್ಲಿ ವಿಡಿಯೊ ಮತ್ತು ಸುದ್ದಿ ಪ್ರಸರಣಗೊಳ್ಳದಂತೆ ಪೊಲೀಸ್ ಮುಖಾಂತರ ನಿರ್ಬಂಧಿಸಲು ಮಧ್ಯಂತರ ಅರ್ಜಿಯನ್ನು ದಾಖಲಿಸಿದರು. ಅಂದೇ ವಾದವನ್ನು ಆಲಿಸಿದ ನ್ಯಾಯಾಲಯ ಸಂಜೆ ಹೊತ್ತಿಗೆ ಅರ್ಜಿಯನ್ನು ತಿರಸ್ಕರಿಸಿತು. ಮುಂದೆ ಪ್ರಜ್ವಲ್ ರೇವಣ್ಣ ಅವರಿಗೆ ದಿಕ್ಕು ತೋಚದಂತಾಗಿ, ಆ ರಾತ್ರಿಯೇ ವಿದೇಶಕ್ಕೆ ಹಾರಿ ತಲೆತಪ್ಪಿಸಿಕೊಳ್ಳುವ ಕಾರಣಕ್ಕಾಗಿ ಇಲ್ಲಿಂದ ಕಾಲು ಕಿತ್ತರು.
ಪ್ರಜ್ವಲ್ ರೇವಣ್ಣ ಸಿವಿಲ್ ದಾವೆಯನ್ನು ದಾಖಲಿಸಿದ್ದ ಉದ್ದೇಶವೇ, ತನ್ನ ಮಾಜಿ ಕಾರು ಚಾಲಕನ ವಶದಲ್ಲಿದ್ದ ಪೆನ್​ಡ್ರೖೆವ್ ಅಥವಾ ವಿಡಿಯೊ ಹೊರಬರದಂತೆ ನೋಡಿಕೊಳ್ಳುವುದಾಗಿತ್ತು. ಆದರೆ, ಅದನ್ನು ನೇರವಾಗಿ ಹೇಳದೇ ಮಾರ್ಫ್ಡ್
ವಿಡಿಯೊ ಇರುವ ಪೆನ್​ಡ್ರೖೆವ್ ಅವರಲ್ಲಿ ಇರಬಹುದೆಂದು ಅರ್ಜಿಯಲ್ಲಿ ಹೇಳಿಕೊಂಡರು. ಅವರ ಈ ಹೇಳಿಕೆಗಳಿಂದ ಕಾರ್ತಿಕ್ ಅವರನ್ನು ಗುಪ್ತಚರ ಇಲಾಖೆ ಅನುಮಾನಿಸಲೇಬೇಕಿತ್ತು. ಈ ಅನುಮಾನದ ಜಾಡು ಹಿಡಿದು ಕಾರ್ತಿಕ್ ಮನೆಗೆ ಅನಿರೀಕ್ಷಿತ ದಾಳಿ ನಡೆಸಿ ಪೆನ್​ಡ್ರೖೆವ್ ಅಥವಾ ವಿಡಿಯೊಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿತ್ತು. ಹೀಗಾಗಿದ್ದರೆ, ಅದೆಷ್ಟೋ ಸಂತ್ರಸ್ತೆಯರ ಗೋಪ್ಯತೆ ಮತ್ತು ಖಾಸಗಿತನದ ರಕ್ಷಣೆ ಆಗುತ್ತಿತ್ತು. ಆದರೆ, ಗುಪ್ತಚರ ಇಲಾಖೆ ಈ ಸಾಧ್ಯತೆಯನ್ನು ಕೈಚೆಲ್ಲಿತು. ಪರಿಣಾಮ 2023ರ ಜೂನ್ ತಿಂಗಳಲ್ಲಿ ಬೆಳಕಿಗೆ ಬರಲು ಸಾಧ್ಯವಿದ್ದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣ ಸುಮಾರು ಒಂದು ವರ್ಷದ ನಂತರ ಬೆಳಕು ಕಾಣಲು ತಿಣುಕುತ್ತಿದೆ. ಆದರೆ, ಸಂತ್ರಸ್ತೆಯರು ಬಯಲುಗೊಂಡಿದ್ದಾರೆ! ಇವಿಷ್ಟಕ್ಕೂ ಗುಪ್ತಚರ ಇಲಾಖೆಯ ಕಾರ್ಯ ವೈಖರಿ, ನಿರ್ಲಕ್ಷ್ಯವೇ ಕಾರಣವಾಗಿರುವುದು ದುರದೃಷ್ಟಕರ.
(ಲೇಖಕರು ರಾಜ್ಯದ ಹಿರಿಯ ವಕೀಲರು)


ಸಂಸದ ಪ್ರಜ್ವಲ್ ರೇವಣ್ಣನ​ ಹೊಸ ವಿಡಿಯೋ ರಿಲೀಸ್: ಕುಮಾರಸ್ವಾಮಿ ಫಸ್ಟ್‌ ರಿಯಾಕ್ಷನ್‌..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
