|ಮಂಜುನಾಥ ಕೋಳಿಗುಡ್ಡಬೆಳಗಾವಿ
ಕರೊನಾ ತಂದ ಸಂಕಷ್ಟದಿಂದಾಗಿ ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ, ಬೆಲೆ ಸಿಗದೆ ಪರಿತಪಿಸಿದ್ದ ರಾಜ್ಯದ ರೈತರಿಗೀಗ ತೈಲ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಪರೋಕ್ಷವಾಗಿ ಯಾಂತ್ರೀಕೃತ ಕೃಷಿಯ ಮೇಲೆ ಕಾಮೋಡ ಕವಿಸಿದೆ. ಕೃಷಿ ಚಟುವಟಿಕೆಗಳಿಗೆ ಯಂತ್ರವನ್ನೇ ಅವಲಂಬಿಸಿರುವ ಸಣ್ಣ, ಮಧ್ಯಮ ಹಂತದ ರೈತರು ಒಟ್ಟಾರೆ ವೆಚ್ಚದಲ್ಲಿ ಅರ್ಧಕ್ಕೂ ಹೆಚ್ಚು ಮೊತ್ತವನ್ನು ಯಂತ್ರದ ಬಾಡಿಗೆಗೆ ಸುರಿಯುವಂತಾಗಿದೆ.
ಆರ್ಥಿಕ ಹೊರೆ:ರಾಜ್ಯದಲ್ಲಿ ಸುಮಾರು 5.65 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಮತ್ತು ನೀರಾವರಿ ಕೃಷಿ ಭೂಮಿಯಲ್ಲಿ ಉಳುಮೆ, ಬಿತ್ತನೆ, ಒಕ್ಕಣಿಕೆ ಸೇರಿದಂತೆ ಎಲ್ಲ ರೀತಿಯ ಕೃಷಿ ಚಟುವಟಿಕೆಗಳಿಗಾಗಿ ಬಹುತೇಕ ರೈತರು ಬಾಡಿಗೆ ಯಂತ್ರೋಪಕರಣಗಳನ್ನೇ ಅವಲಂಬಿಸಿದ್ದಾರೆ. 20ರಿಂದ 50 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರು ಸ್ವಂತ ಟ್ರ್ಯಾಕ್ಟರ್, ಯಂತ್ರೋಪಕರಣ ಹೊಂದಿದ್ದಾರೆ. ಇವರೂ ಸಹ ತೈಲ ಬೆಲೆ ಏರಿಕೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. 2021ರ ಜನವರಿಯಿಂದ ಫೆ.17ರ ಅವಧಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರದಲ್ಲಿ 12 ರೂ. ಏರಿಕೆಯಾಗಿದೆ. ಹೀಗಾಗಿ ಬಾಡಿಗೆಗೆ ಟ್ರ್ಯಾಕ್ಟರ್ ನೀಡುವ ಮಾಲೀಕರು ಯಂತ್ರೋಪಕರಣದ ಬಾಡಿಗೆ ದರ ಏರಿಸಿದ್ದಾರೆ. ಈ ಮೊದಲು ಟ್ರ್ಯಾಕ್ಟರ್ ಚಾಲಿತ ನೇಗಿಲು, ರೂಟ್​ವೇಟರ್, ಕಲ್ಟಿವೇಟರ್​ಗಳ ಬಾಡಿಗೆ ದರ ಗಂಟೆಗೆ 650ರಿಂದ 800 ರೂ. ವರೆಗೆ ಇತ್ತು. ಈಗ ಗಂಟೆಗೆ 800 ರಿಂದ 1,000 ರೂ.ಗೆ ಏರಿಕೆ ಮಾಡಿದ್ದಾರೆ. ಅಂದರೆ, ಗಂಟೆಗೆ ಸರಾಸರಿ 200ರಿಂದ 350 ರೂ.ವರೆಗೆ ಹೆಚ್ಚಿಸಿದ್ದಾರೆ. ಅಲ್ಲದೆ, ಪವರ್ ಟಿಲ್ಲರ್ ದಿನದ ಬಾಡಿಗೆ 1,750 ರೂ.ನಿಂದ 2,500 ರೂ.ಗೆ ಹೆಚ್ಚಿದೆ. ‘ಇದರಿಂದ ರೈತ ವಲಯ ಕಂಗೆಡುವಂತಾಗಿದೆ’ ಎನ್ನುತ್ತಾರೆ ರಾಮದುರ್ಗದ ರೈತ ಪಾಂಡುರಂಗ ನಾಯಿಕ.
ಬಾಡಿಗೆ ಏರಿಕೆ ಅನಿವಾರ್ಯ:ಕಳೆದ ನಾಲ್ಕೈದು ತಿಂಗಳ ಅವಧಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 20 ರೂ. ಏರಿಕೆಯಾಗಿದೆ. ಹೀಗಾಗಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ದರ ಏರಿಕೆ ಅನಿವಾರ್ಯವಾಗಿದೆ. ಟ್ರ್ಯಾಕ್ಟರ್ ಖರೀದಿಗೆ ಮಾಡಿರುವ ಬ್ಯಾಂಕ್ ಸಾಲ, ಚಾಲಕರ ವೇತನ, ನಿರ್ವಹಣೆ ಸೇರಿದಂತೆ ಸಾಕಷ್ಟು ಖರ್ಚುಗಳು ಬರುತ್ತಿವೆ. ಇನ್ನು, ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಿದ ಬಳಿಕ ನಮಗೆ ಬಾಡಿಗೆ ನೀಡುತ್ತಾರೆ. ಇದಕ್ಕಾಗಿ ಕನಿಷ್ಠ 5 ತಿಂಗಳು ಕಾಯಬೇಕು. ಸದ್ಯದ ಪರಿಸ್ಥಿತಿಯಲ್ಲಿ ಟ್ರ್ಯಾಕ್ಟರ್ ಬಾಡಿಗೆ ಹಿಂದಿನಷ್ಟೇ ಪಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಮೂಡಲಗಿ ತಾಲೂಕಿನ ಟ್ರ್ಯಾಕ್ಟರ್ ಮಾಲೀಕ ನಿಂಗಪ್ಪ ಹೊರಟ್ಟಿ ಮತ್ತು ಶ್ರೀಕಾಂತ ದೇಸಾಯಿ.
1 ಎಕರೆ ಹೊಲ ಉಳುಮೆಗೆ ಟ್ರ್ಯಾಕ್ಟರ್​ನಲ್ಲಿ ನೇಗಿಲು, ರೂಟ್​ವೇಟರ್ ಮಾಡಲು 3 ರಿಂದ 4 ಗಂಟೆ ಸಮಯ ಬೇಕು. ಬಾಡಿಗೆ ದರ ಏರಿಕೆಯಿಂದಾಗಿ ಕನಿಷ್ಠ 3,500 ರೂ. ಹೆಚ್ಚುವರಿ ಖರ್ಚು ಮಾಡಬೇಕಾಗಿದೆ. ಇನ್ನು, ಬಿತ್ತನೆ ಬೀಜ ಕೆ.ಜಿ.ಗೆ ಕನಿಷ್ಠ 500 ರೂ., ಕಾರ್ವಿುಕರಿಗೆ ಒಂದು ದಿನಕ್ಕೆ 350 ರೂ. ಕೂಲಿ ಸೇರಿದಂತೆ ಒಂದು ಎಕರೆಗೆ ಅಂದಾಜು 24 ಸಾವಿರ ರೂ. ವರೆಗೆ ಖರ್ಚು ಮಾಡಬೇಕಾಗಿದೆ. ಹೇಗೆ ಹಣ ಹೊಂದಿಸುವುದೆಂದು ತೋಚುತ್ತಿಲ್ಲ.
|ಮಂಜುನಾಥ ಕೊಪ್ಪದಕುಲಗೋಡ ಗ್ರಾಮದ ರೈತ.
ಬೆಂಗಳೂರು:ಕರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜನಜೀವನ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಅಗತ್ಯವಸ್ತುಗಳ ದರ ಏರಿಕೆ ಜನಸಾಮಾನ್ಯರ ಬದುಕಿನ ಭಾರ ಹೆಚ್ಚಿಸಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಶತಕದ ಅಂಚಿಗೆ ಒಂದು ನಿಂತಿದ್ದರೆ ಲೀಟರ್ ಅಡುಗೆ ಎಣ್ಣೆ ದರ 150 ರೂ.ಹೊಸ್ತಿಲಿನಲ್ಲಿದೆ. ಪ್ರತಿ ಕೆಜಿ ತೊಗರಿಬೇಳೆ 125 ರೂ.ಗೆ ಮುಟ್ಟಿದೆ. ಸಿಮೆಂಟ್, ಸ್ಟೀಲ್ ಬೆಲೆ ನಿರಂತರ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಕಳೆದ 10 ತಿಂಗಳಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ಅಂದಾಜು 175 ರೂ. ಹೆಚ್ಚಳವಾಗಿದೆ. ಪ್ರಸ್ತುತ ಸಬ್ಸಿಡಿ ರಹಿತ ಸಿಲಿಂಡರ್ 772 ರೂ. ಇದೆ. 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ 1,575 ರೂ. ಇದೆ.
ಕಳೆದ ಫೆ.1ರಂದು ಪ್ರತಿ ಲೀಟರ್ ಗ್ಯಾಸ್ ಮೇಲೆ 5 ರೂ. ಹೆಚ್ಚಿಸಲಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್​ಗೆ ಗ್ಯಾಸ್​ಗೆ 49 ರೂ.ಇದೆ. ಪ್ರತಿ ತಿಂಗಳು 1ನೇ ತಾರೀಕು ಆಟೋ ಗ್ಯಾಸ್ ದರದಲ್ಲಿ ಸರಾಸರಿ 3-5 ರೂ.ಹೆಚ್ಚಳವಾಗುತ್ತಿದೆ. 2020ರ ಜೂನ್​ನಿಂದ ಈವರೆಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಸರಾಸರಿ 20 ರೂ ಹೆಚ್ಚಳವಾಗಿದೆ.ಬುಧವಾರ ಪೆಟ್ರೋಲ್, ಡೀಸೆಲ್ ದರ ಲೀಟರ್​ಗೆ ತಲಾ 25 ಪೈಸೆ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 100 ರೂ.ದಾಟಿದ್ದರೆ, ಮಧ್ಯ ಪ್ರದೇಶದಲ್ಲಿ ಸೆಂಚುರಿಗೆ ಇನ್ನು 10 ಪೈಸೆಯಷ್ಟೇ ಬಾಕಿ ಇದೆ. ಚಿನ್ನದ ಬೆಲೆ 10 ಗ್ರಾಂಗೆ 717 ರೂ. ಇಳಿದಿದೆ.
5 ತಿಂಗಳ ಹಿಂದೆ ಸಿಮೆಂಟ್ ಬೆಲೆ (50 ಕೆಜಿಯ ಚೀಲ)320 ರೂ. ಇತ್ತು. ಈಗ 430 ರೂ. ಆಗಿದೆ. ಒಂದು ಟನ್ ಸ್ಟೀಲ್​ಗೆ 43 ಸಾವಿರ ಇತ್ತು. ಈಗ 57 ಸಾವಿರ ರೂ. ಆಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳದಿಂದ ಸಾಗಣೆ ದರ ಹೆಚ್ಚಾಗಿ ಬೆಲೆ ಏರಿಕೆ ಆಗುತ್ತಿದೆ. ಸ್ಟೀಲ್ ಮತ್ತು ಸಿಮೆಂಟ್ ದರ ನಿಯಂತ್ರಣ ಪ್ರಾಧಿಕಾರ ರಚಿಸಿ ದರಕ್ಕೆ ಕಡಿವಾಣ ಹಾಕದಿದ್ದರೆ ಸಾರ್ವಜನಿಕರಿಗೆ ಮತ್ತಷ್ಟು ಹೊರೆ ಬೀಳಲಿದೆ.
|ಅಬ್ದುಲ್ ಸತ್ತಾರ್ಪ್ರಧಾನ ಕಾರ್ಯದರ್ಶಿ, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ಕೇಂದ್ರ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
