ರಾಜ್ಯದಲ್ಲಿ ಮಾ. 25ರಿಂದ ಏ. 6ರವರೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶವನ್ನು ಮೇ 9ರಂದು ಗುರುವಾರ ಬೆಳಗ್ಗೆ ಅಧಿಕಾರಿಗಳು ಪ್ರಕಟಿಸಲಿದ್ದಾರೆ. ಅದೇ ವೇಳೆಗೆ ಫಲಿತಾಂಶವನ್ನು ಅಧಿಕೃತ ವೆಬ್​ಸೈಟ್​ನಲ್ಲಿಯೂ ಮಂಡಳಿ ಪ್ರಕಟಿಸಲಿದೆ. ಸುಮಾರು 8.69 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದು ಫಲಿತಾಂಶಕ್ಕಾಗಿ ಅವರು ಮತ್ತು ಅವರ ಪಾಲಕರು ಕಾದು ಕುಳಿತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಫಲಿತಾಂಶ ಏನಾಗಬಹುದು, ಎಷ್ಟು ಅಂಕಗಳು ಬರಬಹುದು ಎಂಬ ಆತಂಕ-ಒತ್ತಡ ಸೃಷ್ಟಿಯಾಗುವುದು ಸಹಜ. ಎಲ್ಲ ಕಾಲಘಟ್ಟಗಳಲ್ಲಿ ಎಲ್ಲರೂ ಈ ಪರೀಕ್ಷಾ ಫಲಿತಾಂಶದ ಅಗ್ನಿಪರೀಕ್ಷೆಯನ್ನು ಅನುಭವಿಸಿಯೇ ಇದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಒತ್ತಡ, ಆತಂಕ, ಭಯ ತುಸು ಹೆಚ್ಚಾಗಿಯೇ ಕಾಡುತ್ತಿದೆ. ಕೇವಲ ವಿದ್ಯಾರ್ಥಿಗಳಿಗಲ್ಲ, ಅವರ ಪಾಲಕರಿಗೂ. ಮಕ್ಕಳು ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಲಿ ಎಂದು ಪಾಲಕರು ಬಯಸುವುದು ಖಂಡಿತ ತಪ್ಪಲ್ಲ. ಆದರೆ ಇದೆಲ್ಲಕ್ಕಿಂತ ಮೊದಲು ತಮ್ಮ ಮಕ್ಕಳು ಅಂಕಗಳಿಕೆಯ ಯಂತ್ರಗಳಲ್ಲ ಎಂಬುದನ್ನು ಎಲ್ಲ ಪಾಲಕರು ಮನದಟ್ಟು ಮಾಡಿಕೊಳ್ಳಬೇಕು. ಕಡಿಮೆ ಅಂಕ ಗಳಿಸಿದ್ದಕ್ಕೆ ಮಕ್ಕಳನ್ನು ಹೀಯಾಳಿಸಬಾರದು. ಬೇರೆ ವಿದ್ಯಾರ್ಥಿಗಳ ಉದಾಹರಣೆ ಕೊಟ್ಟು ಸ್ವಂತ ಮಕ್ಕಳನ್ನು ಅವಮಾನ ಮಾಡುವುದು, ಹೆಚ್ಚು ಅಂಕ ಗಳಿಸದಿದ್ದರೆ ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಗುವುದಿಲ್ಲ ಎಂದು ಭಯಪಡಿಸುವುದು ಸರಿಯಲ್ಲ. ಪ್ರತಿಯೊಂದು ಮಗುವಿನ ವಿದ್ಯಾರ್ಜನೆಯ ಸಾಮರ್ಥ್ಯೂ ಭಿನ್ನವಾಗಿರುತ್ತದೆ. ವಿಷಯಗ್ರಹಿಕೆಯ ಶಕ್ತಿ ಬೇರೆಬೇರೆಯಾಗಿರುತ್ತದೆ. ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡುವುದು, ಅವರಿಗೆ ಬೇಕಾದ ಪುಸ್ತಕ-ಪರಿಕರ ವ್ಯವಸ್ಥೆ ಮಾಡಿಕೊಡುವುದು, ಹೆಚ್ಚಿನ ತರಬೇತಿ ಅಗತ್ಯವಿದ್ದರೆ ಕೋಚಿಂಗ್​ಗೆ ಸೇರಿಸುವುದು, ಎಷ್ಟು ಅಂಕ ಗಳಿಸಿದ್ದಾರೋ ಅದರ ಆಧಾರದ ಮೇಲೆ ಸಾಧ್ಯವಾದಷ್ಟು ಒಳ್ಳೆಯ ಕಾಲೇಜಿಗೆ ಸೇರಿಸುವುದು ಇವಿಷ್ಟೇ ಪಾಲಕರು ಮಾಡಬೇಕಾದ ಕೆಲಸಗಳು.
ಒಳ್ಳೆಯ ಅಂಕ ಗಳಿಸುವುದು ಒಂದು ಕಡೆಯಾದರೆ, ಒಳ್ಳೆಯ ಅಂಕ ಗಳಿಸದಿದ್ದರೂ ಬದುಕಿನಲ್ಲಿ ಯಶಸ್ವಿಯಾಗುವುದು ಇನ್ನೊಂದು ಕಡೆ. ಹೆಚ್ಚು ಅಂಕ ಗಳಿಸಿದವರೆಲ್ಲರೂ ಜೀವನದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗದು. ಕಡಿಮೆ ಅಂಕ ಗಳಿಸಿದವರು ಜೀವನ ನಿರ್ವಹಣೆಯಲ್ಲಿ ಎಡವಿಬಿಟ್ಟಿದ್ದಾರೆ ಎನ್ನಲಾಗದು. ಪರೀಕ್ಷಾ ಫಲಿತಾಂಶದಲ್ಲಿ ನಿರಾಸೆಯಾದರೂ ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಜೀವನದ ಪರೀಕ್ಷೆಯಲ್ಲಿ ಪಾಸಾದವರು ಬೇಕಾದಷ್ಟು ಜನ ಇದ್ದಾರೆ. ತಮಗಿರುವ ಸಾಮರ್ಥ್ಯ- ಕೌಶಲವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು, ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬಹುದು. ಆ ಕಾರ್ಯದಲ್ಲಿ ಪರೀಕ್ಷೆಯ ಅಂಕ ಗಳಿಕೆ ಹೆಚ್ಚು ಸಹಾಯಕ್ಕೆ ಬರುವುದಿಲ್ಲ. ಇದನ್ನು ವಿದ್ಯಾರ್ಥಿಗಳು ನೆನಪಿನಲ್ಲಿಡಬೇಕು. ಇತ್ತೀಚಿನ ವರ್ಷಗಳಲ್ಲಂತೂ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದರೂ ನಿರಾಸೆಯಿಂದ ಅಳುತ್ತ ಕುಳಿತುಕೊಳ್ಳುವ ಮಕ್ಕಳು ಹೆಚ್ಚಾಗಿದ್ದಾರೆ. ಇದಕ್ಕೆ ಪಾಲಕರ ಒತ್ತಡ ಕಾರಣವೋ, ಶಾಲೆಯಲ್ಲಿನ ಪರಿಸರ ಕಾರಣವೋ, ಮಕ್ಕಳದೇ ಆಂತರಿಕ ತಿಳಿವಳಿಕೆಯ ಮಟ್ಟ ಕಾರಣವೋ ತಿಳಿಯದು. ಇನ್ನು ಫೇಲಾದ ವಿದ್ಯಾರ್ಥಿಗಳಂತೂ ಜೀವ ಕಳೆದುಕೊಳ್ಳುವ ಹಂತಕ್ಕೆ ಹೋದ ಉದಾಹರಣೆಗಳಿವೆ. ಈ ರೀತಿಯ ಕೃತ್ಯಕ್ಕೆ ಕೈಹಾಕುವುದು ಹೇಡಿತನದ ಲಕ್ಷಣ. ನಿರೀಕ್ಷೆ ಮಾಡಿದಷ್ಟು ಅಂಕ ಬರದಿದ್ದರೆ ಧೃತಿಗೆಡಬಾರದು. ಇಷ್ಟಾದರೂ ಬಂತಲ್ಲ, ಮುಂದಿನ ಪರೀಕ್ಷೆಯಲ್ಲಿ ಇದಕ್ಕಿಂತ ಹೆಚ್ಚು ತೆಗೆದರಾಯಿತು ಎಂದುಕೊಳ್ಳಬೇಕು. ಲಭಿಸಿದ ಫಲಿತಾಂಶದ ಆಧಾರದ ಮೇಲೆ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಚಿಂತನೆ ಪ್ರಾರಂಭಿಸಬೇಕು.
ಕಾಶ್ಮೀರದಲ್ಲಿ ಮುಂದುವರಿದ ಸೇನಾ ಕಾರ್ಯಾಚರಣೆ: ಓರ್ವ ಉಗ್ರನ ಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 2 =
Remember me
