ಬೆಂಗಳೂರು:ನೂರಾರು ವರ್ಷಗಳಿಂದ ಲಭಿಸಬೇಕಿದ್ದ ಎಸ್​ಟಿ ಮೀಸಲಾತಿ ಸೌಲಭ್ಯವನ್ನು ಪಡೆಯಲೇಬೇಕು ಎಂದು ಕುರುಬ ಸಮುದಾಯ 345 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದು, ಕೊಡುವ ಸ್ಥಾನದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೇಡಿಕೆ ಈಡೇರಿಸಲಿ ಎಂದು ಕಾಗಿನೆಲೆ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಆಗ್ರಹಿಸಿದರು.
ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆದ ‘ಕುರುಬರಿಗೆ ಎಸ್​ಟಿ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ಸಮಾರೋಪದಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಆರಂಭಿಸಬೇಕು ಎಂದು ನಿರ್ಧರಿಸಿದಾಗ, ಸಮಾಜದಿಂದ ಇದಕ್ಕೆ ಸ್ಪಂದನೆ ಸಿಗುತ್ತದೆಯೇ ಎಂಬ ಅನುಮಾನ ಇತ್ತು. ಆದರೆ ಹಾಲುಮತ ಸಮುದಾಯದ ನೂರಾರು ಸ್ವಾಮೀಜಿಗಳು, ನಿಮ್ಮ ಬೆನ್ನಿಗೆ ನಾವಿದ್ದೇವೆ ಎಂದರು. ದಾರಿಯುದ್ದಕ್ಕೂ ಜಾತಿ ಮತವೆನ್ನದೆ ಅನೇಕ ಸಮುದಾಯಗಳು ಪಾದಯಾತ್ರೆಯನ್ನು ಸ್ವಾಗತಿಸಿದವು. ಮಹಿಳೆಯರೂ ಪಾದಯಾತ್ರೆಯಲ್ಲಿ ಸಾಗಿಬಂದರು. ಇದು ಯಾವ ವ್ಯಕ್ತಿಯ ಪರ ಹಾಗೂ ವಿರುದ್ಧದ ಸಮಾವೇಶ ಅಲ್ಲ. ಯಾವ ಪಕ್ಷವನ್ನೂ ಎತ್ತಿಕಟ್ಟುವ ಹಾಗೂ ಯಾವ ಪಕ್ಷವನ್ನೂ ಕೀಳಾಗಿಸುವ ಉದ್ದೇಶವೂ ಇಲ್ಲ. ಪಕ್ಷಾತೀತವಾದ ಈ ಸಮಾವೇಶದಿಂದ ಕಟ್ಟಕಡೆಯ ಕುರುಬನಿಗೂ ಸ್ವಾಭಿಮಾನದ ಬದುಕು ಸಿಗಬೇಕು. ಕುರುಬ ಸಮುದಾಯದ ಮೇಲೆ ಯಡಿಯೂರಪ್ಪ ಅವರಿಗೆ ಪ್ರೀತಿ ಇದೆ. ಈ ಹಿಂದೆ ಕನಕ ಜಯಂತಿಗೆ ಸರ್ಕಾರಿ ರಜೆ ಘೋಷಿಸಿದವರು, ಕಾಗಿನೆಲೆ ಅಭಿವೃದ್ಧಿಗೆ 40 ಕೋಟಿ ರೂ. ನೀಡಿದವರು ಅವರೆ, ಆದರೆ ಅದು ನಮಗೆ ಉಪ್ಪಿನಕಾಯಿ ಇದ್ದಂತೆ. ಈಗ ಊಟ ಕೇಳುತ್ತಿದ್ದೇವೆ. ನಮ್ಮ ಸಮಾಜದ ಮೂವರು ಶಾಸಕರೂ ಸೇರಿ 17 ಜನರು ನಿಮ್ಮ ಜತೆ ಬಂದಿದ್ದರಿಂದಲೇ ನಿಮ್ಮ ಸರ್ಕಾರ ರಚನೆ ಆಗಿದೆ. ನೀವು ಮುಖ್ಯಮಂತ್ರಿಯಾಗಿ ಕೊಡುವ ಸ್ಥಾನದಲ್ಲಿದ್ದೀರಿ, ನಾವು ಕೇಳುವವರಾಗಿದ್ದೇವೆ. ಬೇರೆ ಸ್ವಾಮೀಜಿಗಳ ರೀತಿ ನಾವು ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ. ಬ್ಲಾ್ಯಕ್​ವೆುೕಲ್ ಮಾಡುವುದಿಲ್ಲ. ನೀರು ಕೇಳಿದರೆ ಹಾಲು ಕೊಡುವ ಸಮುದಾಯ ನಮ್ಮದು. ಎಸ್​ಟಿ ಮೀಸಲಾತಿಯನ್ನು ಕೊಡಗಿಗೆ ಸೀಮಿತ ಮಾಡಲಾಗಿದೆ. ಅದನ್ನು ರಾಜ್ಯವ್ಯಾಪಿ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಾಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಬಳಿ ತೆರಳಿ ಕೆಲಸ ಮಾಡಿಸಿಕೊಂಡು ಬರುತ್ತೇವೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಲಿ ಎಂದು ಕೆಲಕಾಲ ಹಿಂದಿಯಲ್ಲೆ ಭಾಷಣ ಮಾಡಿದ ಸ್ವಾಮೀಜಿ, ಕರ್ನಾಟಕದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಕುರುಬರು ಸಮಾವೇಶಗೊಂಡಿದ್ದೇವೆ. ನಾವಿಲ್ಲಿ ಆಡಲು ಬಂದಿಲ್ಲ, ಹಕ್ಕು ಕೇಳಲು ಬಂದಿದ್ದೇವೆ. ನಾವು ಕುರುಬರು. ‘ಕುರಿ ಯಾವುದೇ ಕಾರಣಕ್ಕೆ ಕಚಡಾ ತಿನ್ನಲ್ಲ, ಕುರುಬರು ಕೊಟ್ಟ ವಚನ ಮರೆಯಲ್ಲ’ ಎಂಬ ಮಾತಿದೆ. ಕುರುಬ ಸಮಾಜಕ್ಕೆ ಎಸ್​ಟಿ ಮೀಸಲಾತಿಗೆ ಒಪ್ಪಿಗೆ ನೀಡಿ ಸಾಕು. ನಾವು ಅರವತ್ತು ಲಕ್ಷ ಕುರುಬರು ಜೀವನವಿಡೀ ನಿಮ್ಮೊಂದಿಗೆ ನಿಲ್ಲುತ್ತೇವೆ. ಕಾಗಿನೆಲೆ ಸ್ವಾಮೀಜಿ ಹೇಳಿದ್ದನ್ನೇ ಮಾಡುತ್ತಾರೆ, ಮಾಡಿದ್ದನ್ನೇ ಹೇಳುತ್ತಾರೆ. ನಮಗೆ ನಮ್ಮ ಹಕ್ಕು ನೀಡಿ ಸಾಕು ಎಂದರು.
ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಸಿದ್ಧರಾಮಾನಂದಪುರಿ ಸ್ವಾಮೀಜಿ, ಸಚಿವರಾದ ಕೆ.ಎಸ್ ಈಶ್ವರಪ್ಪ, ಎಂಟಿಬಿ ನಾಗರಾಜ್, ಆರ್. ಶಂಕರ್, ಮಾಜಿ ಸಚಿವರಾದ ಎಚ್. ಎಂ. ರೇವಣ್ಣ, ಎಚ್. ವಿಶ್ವನಾಥ್, ಬಂಡೆಪ್ಪ ಕಾಶೆಂಪೂರ್, ಮಾಜಿ ಸಂಸದ ಸಿ.ಎಚ್. ವಿಜಯಶಂಕರ್, ಹೋರಾಟ ಸಮಿತಿಯ ಕೆ. ವಿರೂಪಾಕ್ಷಪ್ಪ, ಮುಕುಡಪ್ಪ ಮತ್ತಿತರರು ಉಪಸ್ಥಿತರಿದ್ದರು.
ಜನರನ್ನು ನೋಡಿ ನೋವಿನ ಮರೆವು:ಪಾದಯಾತ್ರೆಯಿಂದಾಗಿ ದೇಹದಲ್ಲಿ ನೋವು ಆಗಿದ್ದು ನಿಜ. ಆದರೆ ಹತ್ತಾರು ಸಾವಿರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದದ್ದನ್ನು ನೋಡುತ್ತ ಎಲ್ಲ ನೋವನ್ನೂ ಮರೆತಿದ್ದೇನೆ. ನಾನೊಬ್ಬ ಈ ಹೋರಾಟ ಮಾಡುತ್ತಿದ್ದೇನೆ ಎನ್ನುವುದು ತಪ್ಪು. ಪ್ರತಿಯೊಬ್ಬ ಕುರುಬನೂ ತನ್ನ ಹಕ್ಕಿಗಾಗಿ ಕನಕಗುರುಪೀಠದ ಬೆನ್ನಿಗೆ ನಿಂತಿದ್ದಾನೆ ಎಂದು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಹೋರಾಟ ಏಕೆ ಎಂದು ಅನೇಕರು ಪ್ರಶ್ನಿಸುತ್ತಾರೆ. ಈ ಹಿಂದೆ ಎರಡೂ ಕಡೆ ಕಾಂಗ್ರೆಸ್ ಸರ್ಕಾರ ಮತ್ತು ಜನತಾ ಸರ್ಕಾರ ಇದ್ದವಲ್ಲ, ಆಗೇಕೆ ಆಗಲಿಲ್ಲ? ಏಕೆಂದರೆ, ಆಗ ಸಮಾಜವನ್ನು ಎಚ್ಚರಿಸಲು ಯಾರೂ ಇರಲಿಲ್ಲ. ಈಗ ಕಾಗಿನೆಲೆ ಶ್ರೀಗಳ ನೇತೃತ್ವ, ಮಾರ್ಗದರ್ಶನದಲ್ಲಿ ಸಮಾಜ ಎಚ್ಚೆತ್ತಿದೆ. ಸ್ವಾಮೀಜಿಯವರ ಪಾದಯಾತ್ರೆ ವ್ಯರ್ಥವಾಗುವುದಿಲ್ಲ. ಎಸ್​ಟಿ ಮೀಸಲಾತಿ ಲಭಿಸಿಯೇ ತೀರುತ್ತದೆ’ ಎಂದರು. ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್ ಮನವಿ ಸ್ವೀಕರಿಸಿದರು. ಸಮಾವೇಶದ ಕುರಿತು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.
ಪಾದಯಾತ್ರೆ ಆರಂಭದಿಂದಲೂ ಎಲ್ಲಿಯೂ ಕಾಣಿಸಿಕೊಳ್ಳದ ಮಾಜಿ ಸಿಎಂ ನಾಯಕ ಸಿದ್ದರಾಮಯ್ಯ, ಸಮಾವೇಶಕ್ಕೂ ನಿರೀಕ್ಷೆಯಂತೆಯೇ ಗೈರಾಗಿದ್ದರು. ಪಾದಯಾತ್ರೆ ಹಿಂದೆ ಆರೆಸ್ಸೆಸ್ ಇದೆ ಎಂಬುದೂ ಸೇರಿ ಇನ್ನಿತರ ಸಿದ್ದರಾಮಯ್ಯ ಟೀಕೆಗಳ ಕುರಿತು ವೇದಿಕೆಯಿಂದ ಅನೇಕ ನಾಯಕರು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು ಎಚ್. ವಿಶ್ವನಾಥ್ ಮಾತನಾಡುತ್ತ, ಇಷ್ಟು ದೊಡ್ಡ ಸಮಾವೇಶ, ಪಾದಯಾತ್ರೆ ನಡೆಯುತ್ತಿದೆ. ಸಮುದಾಯದ ಬೆಂಬಲ ಪಡೆದು ಉನ್ನತ ಹುದ್ದೆ ಅಲಂಕರಿಸಿದವರು ಬಂದಿಲ್ಲ. ಸ್ವಾಮೀಜಿಗಳ ಆರೋಗ್ಯ ವಿಚಾರಿಸಲೂ ಆಗಮಿಸಿಲ್ಲ ಎಂಬುದು ಬೇಸರ ತಂದಿದೆ ಎಂದರು. ಕೆ.ಎಸ್. ಈಶ್ವರಪ್ಪ ಮಾತನಾಡಿ, ಸಮಾವೇಶಕ್ಕೆ ಆರೆಸ್ಸೆಸ್ ದುಡ್ಡು ಕೊಟ್ಟಿದೆ ಎಂದು ಕೆಲವರು ಹೇಳಿದ್ದು ನೋವಾಗಿದೆ. ಜನರು ಸ್ವಾಮೀಜಿಗಳಿಗೆ ತಮ್ಮ ದುಡ್ಡುಕೊಟ್ಟು ಪಾದಯಾತ್ರೆ ನಡೆದಿದೆ ಎಂಬುದನ್ನು ತಿಳಿಯಬೇಕು ಎಂದರು. ಸಮಿತಿ ರಾಜ್ಯಾಧ್ಯಕ್ಷ ಕೆ. ವಿರೂಪಾಕ್ಷಪ್ಪ ಮಾತನಾಡಿ, ಹೋರಾಟದ ಅವಶ್ಯಕತೆ ಏನಿತ್ತು? ಯಾರ ವಿರುದ್ಧ ಈ ಹೋರಾಟ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಸಂವಿಧಾನ ಬದ್ಧವಾದ ಈ ಸವಲತ್ತುಗಳನ್ನು ಅಂದೇ ನೀಡಬೇಕಿತ್ತು. ಎಲ್ಲ ಪ್ರಧಾನಿಗಳೂ, ಮುಖ್ಯಮಂತ್ರಿಗಳ ವಿರುದ್ಧ ಈ ಹೋರಾಟ ಎಂದು ಇವರಿಗೆ ಹೇಳುತ್ತೇವೆ. ನೀವೇ ವೋಟ್ ಹಾಕಿ ಬೆಳೆಸಿದ, ಉನ್ನತ ಪದವಿ ಹೊಂದಿದ್ದ ರಾಜಕಾರಣಿಗಳು ತಮ್ಮ ಕೆಲಸ ಮಾಡದ್ದರಿಂದ ಈ ಹೋರಾಟ ಮಾಡುತ್ತಿದ್ದೇವೆ ಎಂದರು.
ಅಶೋಕ್ ಖೇಣಿ ಆಗಮನ-ನಿರ್ಗಮನ:ಉದ್ಯಮಿ ಅಶೋಕ್ ಖೇಣಿ ಕಾರ್ಯಕ್ರಮಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದರು. ಐದಾರು ನಿಮಿಷದ ನಂತರ ಬಳಿ ಆಗಮಿಸಿದ ಮಾಜಿ ಸಚಿವ ಎಚ್. ಎಂ. ರೇವಣ್ಣ, ಕಿವಿಯಲ್ಲಿ ಏನೋ ಗುನುಗುಟ್ಟಿ, ಖೇಣಿ ಅವರನ್ನು ಎಬ್ಬಿಸಿ ಕಳಿಸಿದರು. ರೇವಣ್ಣ ಅವರತ್ತ ತಿರುಗಿದ ಮಾಜಿ ಸಚಿವ ಬಂಡಪ್ಪ ಖಾಶೆಂಪುರ, ನೀವು ಮಾಡಿದ್ದು ಸರಿ ಎನ್ನುವಂತೆ ತಲೆಯಾಡಿಸಿದರು.
ಖಡಕ್ ರೊಟ್ಟಿ ಶೇಂಗಾ ಚಟ್ನಿ:ಸಮಾವೇಶಕ್ಕೆ ಸುಮಾರು 5 ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆಯಿಂದ ಒಬ್ಬರಿಗೆ ತಲಾ 2 ರೊಟ್ಟಿಯಂತೆ 9 ಲಕ್ಷ ಖಡಕ್ ರೊಟ್ಟಿ, 5 ಸಾವಿರ ಕೆ.ಜಿ ಶೇಂಗಾ ಚಟ್ನಿ, 17 ಸಾವಿರ ಲೀಟರ್ ಮೊಸರು ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿಜ್ಞಾವಿಧಿ ಬೋಧನೆ:60 ಲಕ್ಷ ಕುರುಬರಿಗಾಗಿ ಸ್ವಾಮೀಜಿಗಳು ಶರೀರದ ನೋವು ಸಹಿಸಿ ಪಾದಯಾತ್ರೆ ಮಾಡಿದ್ದಾರೆ. ಅವರು ತೋರಿಸಿದ ಮಾರ್ಗದಲ್ಲಿ ಎಸ್​ಟಿ ಹೋರಾಟದಲ್ಲಿ ಭಾಗವಹಿಸುತ್ತೇವೆ. ಈ ಮೂಲಕ ದೇವರ ಮೇಲೆ ಪ್ರಮಾಣ ಮಾಡುತ್ತೇವೆ’ ಎಂದು ಸಮಾವೇಶದಲ್ಲಿ ಭಾಗವಹಿಸಿದವರೆಲ್ಲರನ್ನೂ ಎದ್ದು ನಿಲ್ಲಿಸಿ ಪ್ರತಿಜ್ಞಾವಿಧಿಯನ್ನು ಈಶ್ವರಪ್ಪ ಬೋಧಿಸಿದರು.
ಕುರುಬ ಹಾಗೂ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ವಿಚಾರದಲ್ಲಿ ನನಗೆ ಆಘಾತ ಎನಿಸಿದ್ದು, ಸಚಿವರೇ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅವರ ಬಳಿಯೇ ಅಧಿಕಾರ ಇದೆ. ಅವರ ಕೈಯಲ್ಲಿ ಪೆನ್ನು, ಪೇಪರ್ ಇದೆ. ಆದರೂ ಅವರು ಬೀದಿಗೆ ಯಾಕೆ ಇಳಿದಿದ್ದಾರೋ ಗೊತ್ತಾಗುತ್ತಿಲ್ಲ. ಸ್ವಾಮೀಜಿಗಳು ಹೋರಾಟ ಮಾಡುವುದರಲ್ಲಿ ಒಂದು ಅರ್ಥ ಇದೆ. ಅವರಿಗೆ ಧ್ಯೇಯ, ಉದ್ದೇಶ ಇರುತ್ತದೆ. ಆದರೆ ಮಂತ್ರಿಗಳು ಹೋರಾಟ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ.
|ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಗುಡ್ಡಗಾಡುಗಳಲ್ಲಿ, ಗುಡಿಸಲುಗಳಲ್ಲಿ ವಾಸಿಸುವ ಸಮಾಜ ಕುರುಬ ಸಮುದಾಯ. ಸಾಮಾಜಿಕ, ಶೈಕ್ಷಣಿಕವಾಗಿ, ಉದ್ಯೋಗ, ವ್ಯಾಪಾರದಲ್ಲಿ ಸಾಮಾಜಿಕ ನ್ಯಾಯ ಸಿಗಬೇಕು ಎಂದು ಈ ಹೋರಾಟ ಮಾಡುತ್ತಿದ್ದೇವೆ.
|ಎಂಟಿಬಿ ನಾಗರಾಜ್ಸಚಿವ
ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ನಮ್ಮ ಹಕ್ಕುಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇವೆ.
|ಆರ್. ಶಂಕರ್ಸಚಿವ
ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕುರುಬ ಸಮುದಾಯ ಕಂಡರೆ ಬಹಳ ಪ್ರೀತಿ. ಇದೇ ಕಾರಣಕ್ಕೆ ಕನಕ ಜಯಂತಿಗೆ ಸರ್ಕಾರಿ ರಜೆ ಘೋಷಿಸಿದ್ದಾರೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ 40 ಕೋಟಿ ರೂ. ನೀಡಿದ್ದಾರೆ. ಆದರೆ ಅದು ನಮಗೆ ಉಪ್ಪಿನಕಾಯಿಗೆ ಸಮಾನ. ನಮಗೆ ಈಗ ಎಸ್​ಟಿ ಮೀಸಲಾತಿ ಎಂಬ ಊಟ ಬೇಕಿದೆ. ಮೀಸಲಾತಿ ಕಲ್ಪಿಸುವಂತೆ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರನ್ನು ಸಂರ್ಪಸಿ ನಾವು ಒಪ್ಪಿಗೆ ಪಡೆಯುತ್ತೇವೆ. ರಾಜಕೀಯವಲ್ಲದ, ಸಾಮಾಜಿಕ ಹೋರಾಟಕ್ಕೆ ನಿಮ್ಮ ಬೆಂಬಲ ನೀಡಿ.
|ಶ್ರೀ ನಿರಂಜನಾನಂದಪುರಿ ಸ್ವಾಮೀಜಿಕಾಗಿನೆಲೆ ಗುರುಪೀಠ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 4 =
Remember me
