ಅಶೋಕ ಶೆಟ್ಟರ – ವಿಜಯಪುರ : ಪರೀಕ್ಷೆಗಳು ಹತ್ತಿರ ಬಂದಂತೆಲ್ಲ ಅನೇಕ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ವಿಷಯಗಳ ಬಗ್ಗೆ ಹೆಚ್ಚು ಆತಂಕ ಶುರುವಾಗುತ್ತದೆ. ಆದರೆ, ಅದು ಸತ್ಯವಲ್ಲ ಎನ್ನುವುದನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾಡಿ, ಅದರಲ್ಲಿ ಯಶಸ್ವಿ ಹೆಜ್ಜೆ ಇಟ್ಟಿರುವುದು ಅಗಸ್ತ್ಯ – ಫೌಂಡೇಷನ್ ಸಂಸ್ಥೆಯ ಮುಖಾಂತರ ಲಕ್ಷಾಂತರ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದೆ.
ಇದಕ್ಕೆ ಪೂರಕವಾಗಿಯೇ ಇಲ್ಲಿನ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ವಿಜಯವಾಣಿ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಶಿಕ್ಷಣ ಮೇಳದಲ್ಲಿ ಅಗಸ್ತ್ಯ – ಫೌಂಡೇಷನ್ ನ ವಿಜ್ಞಾನ ಮತ್ತು ಗಣಿತ ಮಾದರಿಗಳ ಪ್ರದರ್ಶನ ಹೆಚ್ಚು ಗಮನ ಸೆಳೆಯುತ್ತಿದೆ.
ಶಿಕ್ಷಣ ಮೇಳಕ್ಕೆ ಹರಿದು ಬರುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕ ಮಾಹಿತಿ ನೀಡುವ ಮಳಿಗೆಗೆ ಭೇಟಿ ಕೊಟ್ಟು ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ತಮ್ಮಲ್ಲಿರುವ ಅನೇಕ ಗೊಂದಲಗಳನ್ನು ಪರಿಹರಿಸಿಕೊಂಡು ಆತ್ಮವಿಶ್ವಾಸದಿಂದ ಹೊರಬರುತ್ತಿದ್ದಾರೆ. ಮಳಿಗೆಯಲ್ಲಿ 120ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಪ್ರತಿಯೊಂದು ಮಾದರಿ ಬಗ್ಗೆ ಸ್ವತಃ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಿಳಿದುಕೊಂಡು ಅದನ್ನು ವೀಕ್ಷಿಸಲು ಬರುವ ಪ್ರತಿಯೊಬ್ಬರಿಗೂ ಮನದಟ್ಟಾಗುವಂತೆ ತಿಳಿಸಿಕೊಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
ಮೂರು ದಿನಗಳ ಈ ಮೇಳದಲ್ಲಿ ಮೊದಲ ಎರಡು ದಿನಗಳಾದ ಸೋಮವಾರ ಹಾಗೂ ಮಂಗಳವಾರ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕ, ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳುತ್ತಿರುವುದು ಕಂಡು ಬಂದಿತು. ಬುಧವಾರವೂ ಸಹ ಇದಕ್ಕೆ ಅವಕಾಶ ಇರುವುದರಿಂದ ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬರುವುದಾಗಿ ಅನೇಕ ಶಿಕ್ಷಕರು ತಿಳಿಸಿದ್ದಾರೆ.
ಅಗಸ್ತ್ಯ – ಫೌಂಡೇಷನ್​ನವರು ವಸ್ತು ಪ್ರದರ್ಶನವಿದೆ ಎನ್ನುವ ಮಾಹಿತಿ ತಿಳಿದು ಬರಿ ವಿಜಯಪುರ ಜಿಲ್ಲೆ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದ ಅನೇಕ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಆಗಮಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದ ದೃಶ್ಯಕ್ಕೆ ವಿಜಯವಾಣಿ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದ ಎಜುಕೇಷನ್ ಎಕ್ಸ್ಪೋ ಸಾಕ್ಷಿಯಾಗಿದ್ದಲ್ಲದೇ ಬಂದವರೆಲ್ಲವರೂ ಈ ಒಂದು ಅವಕಾಶ ಕಲ್ಪಿಸಿದ್ದಕ್ಕಾಗಿ ವಿಜಯವಾಣಿ ಪತ್ರಿಕೆಗೆ ಅಭಿನಂದನೆ ಹೇಳುತ್ತಿದ್ದರು.
ಖಗೋಳದ ಮಾದರಿಗಳಾದ ಗ್ರಹಣಗಳು, ಹಗಲು ರಾತ್ರಿ, ಕಾಲಗಳು, ಚಂದ್ರನ ಮುಖಗಳು, ಅಮವಾಸ್ಯೆ, ಹುಣ್ಣಿಮೆ ಉಂಟಾಗುವ ಮಾದರಿಗಳು. ರಾಸಾಯನಶಾತ್ರದ ಬಗ್ಗೆ 20ಕ್ಕೂ ಹೆಚ್ಚು ಮಾದರಿಗಳು, ಮಾನವ ದೇಹದ ಅಂಗಾಂಗಗಳು ಮೂಳೆಗಳು ಪೀನ ದರ್ಪಣ ನಿಮ್ನ ದರ್ಪಣ, ಮಸೂರಗಳು, ವಿದ್ಯುತ್ ಶಕ್ತಿ, ಆಯಸ್ಕಾಂತದ ಮಾದರಿಗಳು, ಗಣಿತದ ಪ್ರಮೇಯಗಳು, ಎಸಿಡಿಸಿ ಡೈನಮೋ, ಮೋಟರ್‌ಗಳು ಸೇರಿದಂತೆ 120ಕ್ಕೂ ಹೆಚ್ಚು ಮಾದರಿಗಳನ್ನು ನೋಡುವುದಷ್ಟೆ ಅಲ್ಲದೇ 120ಕ್ಕೂ ಹೆಚ್ಚು ವೈಐಎಲ್ ಮಕ್ಕಳಿಂದ ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ತಮಗಿರುವ ಗೊಂದಲವನ್ನು ಬಗೆಹರಿಸಿಕೊಳ್ಳಬಹುದಾಗಿದೆ. ವಿಜಯಪುರದ ಅಗಸ್ತ್ಯ – ಫೌಂಡೇಷನ್ ಮುಖ್ಯಸ್ಥೆ ಗೀತಾ ಪಾಟೀಲ ಅವರ ನೇತೃತ್ವದಲ್ಲಿ 14 ಸಿಬ್ಬಂದಿ ಸಹ ಮಾರ್ಗದರ್ಶನ ನೀಡುತ್ತಿದ್ದಾರೆ.
ವಿಜ್ಞಾನದ ಕೆಲವು ವಿಸ್ಮಯಗಳು ಹಾಗೂ ರಾಸಾಯನಿಕ ಪ್ರಕ್ರಿಯೆಗಳು ನಡೆಯುವಂತದ್ದನ್ನು ಕೆಲವರ ಮನೋದೌರ್ಬಲ್ಯವನ್ನು ಬಳಕೆ ಮಾಡಿಕೊಂಡು ಮುಗ್ದ ಜನರನ್ನು ಪವಾಡ, ಮಾಟ, ತಂತ್ರ ಎದುರಿಸುವುದನ್ನು ನಾವೆಲ್ಲ ನೋಡಿದ್ದೇವೆ. ಇದಕ್ಕೂ ಸಹ ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿಯೇ ಸತ್ಯವನ್ನು ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಚೌಕಾಕಾರದ ಬಾಕ್ಸ್ನಲ್ಲಿ ಕ್ವಾಯಿನ್ ಹಾಕಿದಾಗ ಅದು ಕಾಣದಿರುವುದಕ್ಕೆ ದರ್ಪಣದ ಪ್ರತಿಫಲನ ಎನ್ನುವ ಸತ್ಯವನ್ನು ವಿದ್ಯಾರ್ಥಿಗಳು ತಿಳಿಸಿಕೊಡುತ್ತಾರೆ. ಲಿಂಬೆ ಹಣ್ಣು ಕಟ್ ಮಾಡಿದಾಗ ರಕ್ತ ಬರುತ್ತದೆ ಎಂದು, ಅರಿಷಿಣದಲ್ಲೂ ರಕ್ತ ತೋರಿಸುವ ಬಗೆ ಹೇಗೆ ಎನ್ನುವುದನ್ನು ಹಾಗೆಯೇ ಇದ್ದಿಲಿಗೆ ನೀರು ಹಾಕಿದಾಗ ಬೆಂಕಿ ಏಕೆ ಕಾಣಿಸುತ್ತದೆ ಎನ್ನುವುದು ಹೀಗೆ ಅನೇಕ ವಿಚಾರಗಳಿಗೆ ವೈಜ್ಞಾನಿಕ ಕಾರಣವನ್ನು ಎಲ್ಲರಿಗೂ ಮನದಟ್ಟಾಗುವಂತೆ ಎಳೆಎಳೆಯಾಗಿ ತಿಳಿಸಿಕೊಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
