ನಾಡಹಬ್ಬದ ಅತಿಥಿಯಾಗಿ ವಿಜಯಪುರಕ್ಕೆ ಬಂದಿದ್ದ ಬಿ.ಎಂ. ಶ್ರೀಕಂಠಯ್ಯನವರಿಗೆ ಕಾರ್ಯಕ್ರಮದ ಸಂಘಟಕರು ‘ನೀವು ವಿಜಯಪುರಕ್ಕೆ ಬಂದಿದ್ದೀರಿ. ಇಲ್ಲಿನ ಜಗತ್ಪ್ರಸಿದ್ಧ ಗೋಳಗುಮ್ಮಟ ನೋಡಿ. ನಾಳೆ ಕರೆದುಕೊಂಡು ಹೋಗುತ್ತೇವೆ’ ಎಂದಾಗ ಬಿ.ಎಂ.ಶ್ರೀಯವರು, ‘ಗೋಳಗುಮ್ಮಟ ನೋಡೋಣ. ಆದರೆ ಅದಕ್ಕಿಂತಲೂ ಮುಖ್ಯವಾಗಿರುವ ವಚನ ಗುಮ್ಮಟವನ್ನು ಮೊದಲು ನೋಡಬೇಕು’ ಎಂದಾಗ ಸಂಘಟಕರು ಗಾಬರಿ ಬಿದ್ದರು. ಅವರು ಹೇಳಿದ ‘ವಚನಗುಮ್ಮಟ’ವೇ ‘ವಚನ ಪಿತಾಮಹ’ ಎಂದೇ ಖ್ಯಾತರಾದ ರಾವಬಹದ್ದೂರ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ. ಡಾ. ಫ.ಗು. ಹಳಕಟ್ಟಿ.
ಎಸ್.ಎಸ್. ಒಡೆಯರ್ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿಗಳಾಗಿದ್ದಾಗ ಫ.ಗು. ಹಳಕಟ್ಟಿಯವರ ಸೇವೆಯನ್ನು ಗಮನಿಸಿ, ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿದರು. ನಂತರ ಊಟಕ್ಕೆ ಕುಳಿತಾಗ ಒಡೆಯರ್ ಅವರು ಹಳಕಟ್ಟಿಯವರಿಗೆ ‘ನಿಮ್ಮ ಕೋಟು ತೆಗೆಯಿರಿ, ಸೆಕೆ ಇದೆ. ಆರಾಮಾಗಿ ಊಟ ಮಾಡಿ’ ಎಂದರು. ಹಳಕಟ್ಟಿಯವರು ಕೋಟು ತೆಗೆದಾಗ ಕಂಡಿದ್ದು ಹರಿದ ಭಾಗದಲ್ಲೆಲ್ಲಾ ಹೊಲಿಗೆ ಹಾಕಿದ್ದ ಅಂಗಿ. ಎಲ್ಲರೂ ಆಶ್ಚರ್ಯಗೊಂಡರು. ಇದು ಹಳಕಟ್ಟಿಯವರು ಬದುಕಿದ ರೀತಿ. ಕನ್ನಡ ನಾಡು-ನುಡಿಯ ಅಭಿಮಾನಿ, ಲೇಖಕ, ವೀರಶೈವ ಮಹಾಸಭೆ ಮತ್ತು ಶಿವಯೋಗ ಮಂದಿರ ಸ್ಥಾಪನೆಯಲ್ಲಿ ಸಕ್ರಿಯರಾಗಿದ್ದ ಧಾರವಾಡದ ಗುರುಬಸಪ್ಪ ಹಳಕಟ್ಟಿಯವರ ಪುತ್ರನಾಗಿ ಜುಲೈ 2, 1880 ರಲ್ಲಿ ಜನಿಸಿದ ಫಕೀರಪ್ಪ, ತಂದೆಯ ಸಮಾಜ ಸೇವಾಸಕ್ತ ಶರಣ ಗುಣಗಳನ್ನು ಬಳುವಳಿಯಾಗಿ ಪಡೆದರು. ತಮ್ಮ ಮಾವ, ಕೆ.ಎಲ್.ಇ ಸ್ಥಾಪಕರಲ್ಲೊಬ್ಬರಾದ ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿಯವರ ಸಲಹೆ ಪಡೆದು ವಿಜಯಪುರದಲ್ಲಿ 1904ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು.
ಬಿಎಲ್​ಡಿಇ ಆರಂಭ:1904ರಲ್ಲಿ ಧಾರವಾಡದಲ್ಲಿ ಸಮಾವೇಶಗೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭೆ ಪ್ರಥಮ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಿರಸಂಗಿ ಲಿಂಗರಾಜರು ‘ಕರ್ನಾಟಕದಲ್ಲಿ ಲಿಂಗಾಯತರ ಸ್ಥಿತಿ-ಗತಿ ತೀವ್ರ ದುಸ್ತರವಾಗಿದೆ. ಸಮಾಜವನ್ನು ಮೇಲೆತ್ತಲು ಜಿಲ್ಲ್ಲೆಗೊಂದರಂತೆ ಲಿಂಗಾಯತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕು’ ಎಂದು ಹೇಳಿದ್ದರು. ಇದನ್ನು ಮನಸ್ಸಿಗೆ ತೆಗೆದುಕೊಂಡ ಹಳಕಟ್ಟಿಯವರು, ವಕೀಲಿ ವೃತ್ತಿ ಮಾಡುತ್ತಲೇ ಜಿಲ್ಲೆಯ ಧಣಿಗಳು, ದೇಸಾಯಿಯವರ ಸಹಕಾರದಿಂದ 1910ರಲ್ಲಿ ಬಿಜಾಪುರ ಲಿಂಗಾಯತ ಡಿಸ್ಟ್ರಿಕ್ಟ್ ಎಜ್ಯುಕೇಶನ್ ಅಸೋಸಿಯೇಷನ್ (ಬಿಎಲ್​ಡಿಇ) ಆರಂಭಿಸಿದರು. ಅದುವರೆಗೂ ಶಿಕ್ಷಣ ಕಲಿಯಲು ಕೊಲ್ಹಾಪುರ, ಪುಣೆ, ಮುಂಬೈಗೆ ತೆರಳುತ್ತಿದ್ದ ಈ ಭಾಗದ ಜನರಿಗೆ ಈ ಸಂಸ್ಥೆ ಇಲ್ಲೇ ಅವಕಾಶ ಒದಗಿಸಿತು.
ಮರಾಠಿಮಯವಾಗಿದ್ದ ವಿಜಯಪುರದಲ್ಲಿ ಮುನ್ಸಿಪಲ್ ಸ್ಕೂಲ್ ಬೋರ್ಡ್ ಅಧ್ಯಕ್ಷರಾಗಿ ಏಳು ಕನ್ನಡ ಗಂಡು ಮಕ್ಕಳ ಶಾಲೆಯನ್ನು ಆರಂಭಿಸಿ ಕನ್ನಡದ ಕಹಳೆ ಊದಿದ ಹಳಕಟ್ಟಿಯವರು, ಹೆಣ್ಣು ಮಕ್ಕಳಿಗಾಗಿಯೇ ಮೂರು ಪ್ರತ್ಯೇಕ ಕನ್ನಡ ಶಾಲೆಗಳನ್ನು ಆರಂಭಿಸಿದರು. 1912ರಲ್ಲಿ ‘ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್’ ಆರಂಭಿಸಿದರು. ಅಲ್ಲದೆ, ಧಾರ್ವಿುಕ ಜಾಗೃತಿ ಮೂಡಿಸಲು ಕಲ್ಯಾಣದ ಶಿವಶರಣ ಸಿದ್ಧರಾಮೇಶ್ವರರ ನೆನಪಿನಲ್ಲಿ ‘ಸಿದ್ಧೇಶ್ವರ ಸಂಸ್ಥೆ’ ಹುಟ್ಟುಹಾಕಿದರು. ಈ ಮೂರು ಸಂಸ್ಥೆಗಳು ಶತಮಾನೋತ್ಸವ ಆಚರಿಸಿ, ಯಶಸ್ವಿಯಾಗಿ ಮುಂದುವರಿದಿವೆ.
ವಚನ ತಾಡೋಲೆಗಳ ಸಂರಕ್ಷಣೆಗೆ ನಿರ್ಧಾರ:ಒಮ್ಮೆ ಹಳಕಟ್ಟಿಯವರು ವಿಜಯಪುರದ ಶಿವಲಿಂಗಪ್ಪ ಮಂಚಾಲಿಯವರ ಮನೆಗೆ ಹೋದಾಗ ಅಲ್ಲಿ ಶಟಸ್ಥಲ ತಿಲಕ ಮತ್ತು ಪ್ರಭುದೇವರ ವಚನ ತಾಳೆಗರಿಗಳನ್ನು ನೋಡಿ ಆಕರ್ಷಿತರಾದರು. ಆ ತಾಡೋಲೆಗಳಲ್ಲಿದ್ದ ಅದ್ಭುತ ಸಾಹಿತ್ಯ ಹಳಕಟ್ಟಿಯವರ ಮನಕಲಕಿತು. ‘ನಮ್ಮ ನಿರ್ಲಕ್ಷ್ಯಂದ ಅನಾಥವಾಗಿರುವ ಇಂತಹ ತಾಡೋಲೆಗಳು ಗೆದ್ದಲು ಹುಳುಗಳಿಗೆ ಆಹಾರವಾಗುತ್ತಿದೆ. ಹೀಗೆ ಬಿಟ್ಟರೆ ಕೊಳೆತು, ಒಂದು ದೊಡ್ಡ ಸಾಹಿತ್ಯ ಪರಂಪರೆ ಬೆಳಕಿಗೆ ಬಾರದೆ ಹೋಗುತ್ತದೆ’ ಎಂದು ಕೊರಗಿ ಅಂದಿನಿಂದ ಅವರು ಸಂಪೂರ್ಣವಾಗಿ ವಚನ ಸಾಹಿತ್ಯ ರಕ್ಷಣೆ, ಪ್ರಚಾರಕ್ಕೆ ತೊಡಗಿಸಿಕೊಂಡರು. ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹುಡುಕಿ ತಂದು, ಅದರಲ್ಲಿನ ಅರ್ಥ ಬಿಡಿಸಿ ಬರೆದರು. ತಾವು ಸಂಗ್ರಹಿಸಿದ ರಾಶಿ-ರಾಶಿ ವಚನಗಳನ್ನು ಮುದ್ರಿಸಿ, ಈ ಸಾಹಿತ್ಯ ಜನರಿಗೆ ತಲುಪಲು 1925ರಲ್ಲಿ ‘ಹಿತ ಚಿಂತಕ ಮುದ್ರಣಾಲಯ’ ಆರಂಭಿಸಿದರು. ಮುದ್ರಣ ಯಂತ್ರ ಖರೀದಿಸಲು ಆರ್ಥಿಕ ತೊಂದರೆ ಉಂಟಾದಾಗ ಮನೆ ಯನ್ನೇ ಮಾರಿ, ಬಾಡಿಗೆ ಮನೆಯಲ್ಲಿ ಜೀವನ ಸಾಗಿಸಿದರು.
ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಆಗುಹೋಗುಗಳ ಕುರಿತು ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ‘ನವ ಕರ್ನಾಟಕ’ ಎಂಬ ಪತ್ರಿಕೆಯನ್ನು ಹಳಕಟ್ಟಿಯವರು ಆರಂಭಿಸಿದರು. ಇದು ಕರ್ನಾಟಕ ಏಕೀಕರಣಕ್ಕೆ ಅವರ ಅಮೂಲ್ಯ ಕೊಡುಗೆ. ವಿಜಯಪುರದಲ್ಲಿ ಭೂತನಾಳ ಕೆರೆ ಸ್ಥಾಪನೆ: ಹಳಕಟ್ಟಿಯವರು ವಿಜಯಪುರ ನಗರಸಭೆ ಅಧ್ಯಕ್ಷರಾದಾಗ ಬೆಳೆಯುತ್ತಿರುವ ನಗರಕ್ಕೆ ಕುಡಿಯುವ ನೀರು ಒದಗಿಸಲು ಸರ್ ಎಂ. ವಿಶ್ವೇಶ್ವರಯ್ಯನವರನ್ನು ಕರೆಯಿಸಿ, ಅವರ ತಾಂತ್ರಿಕ ಸಹಾಯ ಪಡೆದು ನಗರದ ಹೊರವಲಯದಲ್ಲಿ ಭೂತನಾಳ ಕೆರೆಯನ್ನು ಸ್ಥಾಪಿಸಿದ್ದು ಅವರ ದೂರದೃಷ್ಟಿಗೆ ಸಾಕ್ಷಿ. ಈ ಕೆರೆಯು ನೂರು ವರ್ಷಗಳ ನಂತರ ಇಂದಿಗೂ ನಗರದ ಶೇ.30 ಭಾಗಕ್ಕೆ ಶುದ್ಧ ಕುಡಿಯುವ ನೀರು ಒದಗಿಸುತ್ತಿದೆ. ಮುಂಬೈ ವಿಧಾನ ಪರಿಷತ್ ಸದಸ್ಯರಾಗಿ ಬಿಜಾಪುರದಲ್ಲಿ ಬರಗಾಲ ನಿವಾರಣಾ ಸಂಸ್ಥೆ ಆರಂಭಿಸಿ, ಕೃಷಿ ಪರ್ಯಾಯ ಚಟುವಟಿಕೆ ಕೇಂದ್ರವಾಗಿಸಿದರು.
ಸ್ಥಿತಪ್ರಜ್ಞ ವ್ಯಕ್ತಿತ್ವ:ದಿಲ್ಲಿಯಲ್ಲಿದ್ದ ಹಿರಿಯ ಮಗ, ತಂತ್ರಜ್ಞ ಅಪಘಾತದಿಂದ ತೀರಿಕೊಂಡಾಗಲೂ ‘ಶಿವನ ಸೊಲ್ಲು, ಶಿವನಿಗೆ ಸಲ್ಲಿತು’ ಎಂದು ಸ್ಥಿತಪ್ರಜ್ಞತೆ ತೋರಿದ ಹಳಕಟ್ಟಿ ಮಹಾನ್ ಶರಣರು. ಹೊಟ್ಟೆಯ ಶಸ್ತ್ರಚಿಕಿತ್ಸೆ ಆದಾಗ, ರೈಲು ಪ್ರಯಾಣದ ಸಂದರ್ಭದಲ್ಲಿ ಕಾಲು ಮುರಿದಾಗಲೂ ವಚನ ಸಾಹಿತ್ಯ ಪ್ರಕಟಣೆ ಕಾರ್ಯ ನಿಲ್ಲಿಸಲಿಲ್ಲ. ಬಡತನದಲ್ಲಿ ಬಾಡಿಗೆ ಮನೆಯಲ್ಲಿ ಬದುಕು ಸಾಗಿಸಿ, ಮುರುಕು ಸೈಕಲ್​ನಲ್ಲಿ ಸುತ್ತುತ್ತಿದ್ದ ಫಕೀರಪ್ಪ ಹಳಕಟ್ಟಿ ‘ಬರಿಗೈ ಫಕೀರ’ರಾಗಿಯೇ 1964ರಲ್ಲಿ 84ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು.
15 ಸಮಗ್ರ ಸಂಪುಟ ಬಿಡುಗಡೆ:ಹಳಕಟ್ಟಿಯವರು ಸ್ಥಾಪಿಸಿದ ಬಿಎಲ್​ಡಿಇ ಸಂಸ್ಥೆ ಅಧ್ಯಕ್ಷರಾದ ಎಂ.ಬಿ. ಪಾಟೀಲ ಅವರು ಹಳಕಟ್ಟಿ ಸ್ಮಾರಕ ಭವನ ನಿರ್ವಿುಸಿ ವಚನ ಸಾಹಿತ್ಯ ಸಂಶೋಧನ ಕೇಂದ್ರ ಆರಂಭಿಸಿದ್ದಾರೆ. ಹಳಕಟ್ಟಿಯವರು ಜೀವಿತಾವಧಿಯಲ್ಲಿ ಪ್ರಕಟಿಸಿದ ಎಲ್ಲ ಸಾಹಿತ್ಯವನ್ನು 15 ಸಮಗ್ರ ಸಂಪುಟಗಳಲ್ಲಿ ಹತ್ತು ಸಾವಿರ ಪುಟಗಳಲ್ಲಿ ಹೊರತಂದಿದ್ದಾರೆ. ಅವರ ನೆನಪಿನಲ್ಲಿ ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲಾಗಿದೆ.
250 ವಚನಕಾರರ ವಚನ ಸಾಹಿತ್ಯ ಮುದ್ರಣ:ಹಳಕಟ್ಟಿಯವರು ಸ್ವತಃ ಮೊಳೆಗಳನ್ನು ಜೋಡಿಸಿ, ಅಚ್ಚು ಹಾಕಿ, ಪೆಡಲ್ ತುಳಿದು, ಮುದ್ರಿಸಿ ಪ್ರಕಟಿಸಿದ ಸಾಹಿತ್ಯದಿಂದ 250 ವಚನಕಾರರ ವಚನಗಳನ್ನು, ಸಾಹಿತ್ಯವನ್ನು ಹೊರತಂದರು. ಆ ಮುಂಚೆ ಕೇವಲ 50 ವಚನಕಾರರ ವಚನಗಳು ಬೆಳಕು ಕಂಡಿದ್ದವು. ಇದು ವಚನ ಸಾಹಿತ್ಯಕ್ಕೆ ಅವರು ನೀಡಿದ ಅಮೋಘ ಕೊಡುಗೆ. ಆ ಕಾರಣಕ್ಕಾಗಿಯೇ ಅವರಿಗೆ ‘ವಚನ ಪಿತಾಮಹ’ ಎನ್ನುವ ಅನ್ವರ್ಥಕನಾಮ.
(ಲೇಖಕರು ವಿಜಯಪುರ ಬಿಎಲ್​ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ಸಹಕಾರ್ಯದರ್ಶಿ)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − twelve =
Remember me
