ಬೆಂಗಳೂರು:ಸಚಿವ ಸ್ಥಾನಕ್ಕೆ ಒತ್ತಡ ತರುವ ಪ್ರಯತ್ನದಲ್ಲಿ ಮುಖ್ಯಮಂತ್ರಿಗೆ ಸಮಾಜದ ಸ್ವಾಮೀಜಿಯಿಂದಲೇ ಮುಜುಗರ ಉಂಟಾದ ಬೆನ್ನಲ್ಲೇ ಎಚ್ಚೆತ್ತ ವೀರಶೈವ ಲಿಂಗಾಯತ ಮಠಗಳ ಸ್ವಾಮೀಜಿಗಳು, ಸಂಘಟಿತರಾಗಿ ಬಿ.ಎಸ್. ಯಡಿಯೂರಪ್ಪ ಬೆನ್ನಿಗೆ ನಿಲ್ಲಲು ಸಂಕಲ್ಪಿಸಿದ್ದಾರೆ. ಯಡಿಯೂರಪ್ಪ ಬೆನ್ನಿಗೆ ವೀರಶೈವ ಲಿಂಗಾಯತ ಸಮುದಾಯ ನಿಲ್ಲಬೇಕೆ ಹೊರತು, ಅವರಿಗೆ ಮುಜುಗರ ತರುವಂತಹ ಪರಿಸ್ಥಿತಿಯನ್ನು ಯಾರೂ ಸೃಷ್ಟಿಸಬಾರದು ಎನ್ನುವ ಭಾವನೆಗಳನ್ನು ಸಮುದಾಯದ ಹಲವು ಸ್ವಾಮೀಜಿಗಳು ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಪೂರ್ಣ ಬಹುಮತ ಬಂದು ಸರ್ಕಾರ ರಚನೆ ಮಾಡಿದ್ದರೆ, ಆಗ ಅಧಿಕಾರಯುತ ವಾಗಿ ಹಕ್ಕೊತ್ತಾಯ ಹೇಳಬಹುದಾಗಿತ್ತು. ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಎಂ ಆಗುವ ಅವಕಾಶ ಲಭ್ಯವಾಗಿದೆ. ಅದನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಸಹಕಾರ ನೀಡಬೇಕು ಎಂದು ಹಿರಿಯ ಸ್ವಾಮೀಜಿಗಳು ತಮ್ಮ ಭಾವನೆಗಳನ್ನು ಸಮುದಾಯದ ಮುಖಂಡರ ಬಳಿ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಹುದ್ದೆಯನ್ನು ಹಾದಿ ಬೀದಿ ಚರ್ಚೆಗೆ ತರುವುದು ಯಾರಿಗೂ ಶೋಭೆ ತರುವುದಿಲ್ಲ. ಹಗ್ಗದ ಮೇಲಿನ ನಡಿಗೆಯಂತೆ ಸರ್ಕಾರವನ್ನು ನಿಭಾಯಿಸುತ್ತಿರುವ ಬಿಎಸ್​ವೈ ಪರಿಸ್ಥಿತಿ ಎಲ್ಲರಿಗೂ ತಿಳಿದಿದ್ದರೂ, ಅಧಿಕಾರದ ಲಾಲಸೆಯಿಂದ ಮತ್ತೆ ಮತ್ತೆ ಒತ್ತಡ ಹಾಕುವುದು, ಸ್ವಾಮೀಜಿಗಳಿಂದ ಹೇಳಿಕೆ ಕೊಡಿಸುವುದು ಸಮಂಜಸವಲ್ಲ. ಇದು ಸೂಕ್ಷ್ಮ ವಿಚಾರವಾಗಿರುವ ಕಾರಣ ನಾವೆಲ್ಲರೂ ಇತಿಮಿತಿ ಅರಿತು ನಡೆದುಕೊಳ್ಳಬೇಕು ಎಂದಿರುವ ಸ್ವಾಮೀಜಿಗಳು, ಈ ಬಗ್ಗೆ ಸಮಾಜದ ಮುಖಂಡರಿಗೂ ಕಿವಿಮಾತು ಹೇಳಿದ್ದಾರೆ. ಸಾರ್ವಜನಿಕ ಸಭೆ, ಸಮಾರಂಭದಲ್ಲಿ ಮಾತನಾಡುವಾಗಲೂ ಎಚ್ಚರಿಕೆ ವಹಿಸಿ ಮಾತನಾಡಬೇಕಾದ ಸ್ಥಿತಿ ಇದೆ.
ಮುಖ್ಯಮಂತ್ರಿ ಹುದ್ದೆಗೆ ಅವಮಾನ ಆಗುವಂತೆ ಮಾತನಾಡಿದರೆ, ಪ್ರತಿಪಕ್ಷಗಳ ಪಾಲಿಗೆ ಆಹಾರವಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ. ರಾಜಕಾರಣಕ್ಕೆ ಧರ್ಮ ಇರಬೇಕೆ ಹೊರತು, ಧರ್ಮದೊಳಗೆ ರಾಜಕೀಯ ಬೆರಸಬಾರದು. ಮುಖ್ಯಮಂತ್ರಿಗಳಿಗೆ ಏನೇ ಹೇಳುವುದಿದ್ದರೆ, ಅದಕ್ಕೆ ವೇದಿಕೆಗಳಿವೆ. ಅದನ್ನು ಬಿಟ್ಟು ಸಾರ್ವಜನಿಕ ವೇದಿಕೆಗಳನ್ನು ರಾಜಕಾರಣಿ ಗಳ ಪರ ಮಸಲತ್ತು ಮಾಡಲು ದುರ್ಬಳಕೆ ಮಾಡಬಾರದು. ಇದರಿಂದಾಗಿ ಇನ್ನುಳಿದ ಸಮುದಾಯದಲ್ಲಿಯೂ ಅಸಹನೆ ಮೂಡುವಂತಾಗುತ್ತದೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಅಧಿಕಾರಕ್ಕಾಗಿ ಬಹಿರಂಗ ಚರ್ಚೆ ಸರಿಯಲ್ಲ
2008ರಲ್ಲಿ ಯಡಿಯೂರಪ್ಪರನ್ನು ಸಿಎಂ ಹುದ್ದೆಯಿಂದ ಇಳಿಸಲು ಮುಂದಾಗಿದ್ದ ಅವಧಿಯಲ್ಲಿ ವೀರಶೈವ ಲಿಂಗಾಯತ ಸಮಾಜ ಅವರ ಬೆನ್ನಿಗೆ ನಿಂತಿತ್ತು. ಪ್ರಮುಖ ಸ್ವಾಮೀಜಿಗಳು ಬಹಿರಂಗವಾಗಿ ಬ್ಯಾಟಿಂಗ್ ಮಾಡಿದ್ದರು. ಬಿಎಸ್​ವೈಗೆ ಸಿಎಂ ಹುದ್ದೆ ಪದವಿ ಆಪತ್ತು ಬಂದರೆ ಮಾತ್ರ, ಬಹಿರಂಗಕ್ಕೆ ಬರಬೇಕೆ ಹೊರತು ಹುದ್ದೆಗಳಿಗಾಗಿ ಅಧಿಕಾರಕ್ಕಾಗಿ ಅಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಸಮುದಾಯದ ಕೆಲಸ ಮಾಡಲು ಸಚಿವರಾಗಿಯೇ ಇರಬೇಕು ಎಂದೇನೂ ಇಲ್ಲ. ಸಮಾಜದ ಮುಖಂಡರಾಗಿಯೂ ಕೆಲಸ ಮಾಡಿಸಿಕೊಳ್ಳಲು ಅವಕಾಶಗಳಿವೆ. ಶಾಸಕರು ಈ ನಿಟ್ಟಿನಲ್ಲಿಯೇ ಯೋಚಿಸಬೇಕೆಂದು ಹಲವು ಶಾಸಕರಿಗೆ ಸೂಚನೆಗಳನ್ನು ಮಠಗಳ ಮೂಲಕ ತಿಳಿಸಲಾಗಿದೆ.
ಕಾವಿಧಾರಿಗಳ ಪರ ಶ್ರೀ ಕ್ಷಮೆ
ಹರಿಹರ ಪಂಚಮಸಾಲಿ ಪೀಠದಲ್ಲಿ ಮಂಗಳವಾರ ನಡೆದ ಘಟನೆಯಿಂದ ಸಿಎಂಗೆ ನೋವಾಗಿದ್ದರೆ, ಕಾವಿಧಾರಿಗಳ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಕಾವಿಧಾರಿಗಳಿಗೆ ಒಂದು ಸೀಮೆ ಇರುತ್ತೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಎಂತಹ ಬಿರುಗಾಳಿ ಬಂದರೂ ಅಲುಗಾಡದ ಬಂಡೆಯಂತೆ ಬಿಎಸ್​ವೈ ಇದ್ದಾರೆ. ಇಂತಹ ಘಟನೆಗಳಿಂದ ಧೃತಿಗೇಡ ಬೇಡಿ ಎಂದು ಬಾಲೇಹೊಸೂರ ದಿಂಗಾಲೇಶ್ವರ ಸ್ವಾಮೀಜಿ ಧೈರ್ಯ ತುಂಬಿದರು. ಯಡಿಯೂರಪ್ಪ ಆಕಳಿದ್ದಂತೆ, ಅವರನ್ನು ರಮಿಸಿ ಹಿಂಡಿಸಿಕೊಳ್ಳಬೇಕು. ಬೆದರಿಸಲು ಯತ್ನಿಸಿದರೆ ಆಕಳು ಹಾಲು ಕೊಡುವುದಿಲ್ಲ ಎಂದು ಪರೋಕ್ಷವಾಗಿ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಗಳಿಗೆ ತಿರುಗೇಟು ನೀಡಿದರು.
ಚುನಾವಣೆ ವೇಳೆ ಮಠಗಳಿಗೆ ತೆರಳಿ ಶ್ರೀಗಳ ಪಾದಕ್ಕೆ ಬಿದ್ದು ಸಹಕಾರ ಮತ್ತು ಬೆಂಬಲ ಕೋರುತ್ತೇವೆ. ಅಧಿಕಾರಕ್ಕೆ ಬಂದ ಮೇಲೆ ಸೌಜನ್ಯದಿಂದ ಅವರ ಅಹವಾಲು ಕೇಳುವುದು ಕರ್ತವ್ಯ. ಆದರೆ, ಕೇಳಿದ್ದೇ ತಪ್ಪು ಎಂದು ಭಾವಿಸಿದರೆ ಹೇಗೆ? ಅಧಿಕಾರದಲ್ಲಿದ್ದವರನ್ನು ಕೇಳದೆ ಸೋತವರನ್ನು ಕೇಳಲು ಸಾಧ್ಯವೇ? ಪ್ರಜೆಗಳ, ಸಮಾಜದ ಅಂಕು ಡೊಂಕು ತಿದ್ದುವ ಶ್ರೀಗಳ ಮಾತನ್ನು ಶಾಂತಿಯಿಂದ ಕೇಳುವ ವ್ಯವದಾನ ರಾಜ್ಯವಾಳುವ ಅರಸನಿಗೆ ಇರಬೇಕು.
| ಡಿ.ಕೆ. ಶಿವಕುಮಾರ್ ಮಾಜಿ ಸಚಿವ

ಇವರನ್ನೇ ಸಚಿವರನ್ನಾಗಿ ಮಾಡಲೇಬೇಕು. ಇಲ್ಲದಿದ್ದರೆ ನಮ್ಮ ಸಮಾಜ ನಿಮ್ಮ ಜತೆ ಬರುವುದಿಲ್ಲ ಎಂಬ ಹೇಳಿಕೆ ಸರಿಯಲ್ಲ. ಅದು ಮುಖ್ಯಮಂತ್ರಿ ಪರಮಾಧಿಕಾರ ಪ್ರಶ್ನೆ ಮಾಡಿದಂತಾಗುತ್ತದೆ.
| ಜಗದೀಶ್ ಶೆಟ್ಟರ್ ಕೈಗಾರಿಕೆ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + nine =
Remember me
