| ಕೀರ್ತಿನಾರಾಯಣ ಸಿ. ಬೆಂಗಳೂರುಕೆಲವೇ ಕೆಲವು ವ್ಯಕ್ತಿಗಳು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​ಟಿಐ) ಪದೇಪದೆ ಸಾವಿರಾರು ಅರ್ಜಿಗಳನ್ನು ಸಲ್ಲಿಸುವ ಮುಖೇನ ಆರ್​ಟಿಐ ಅಸ್ತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಚಾರವನ್ನು ‘ವಿಜಯವಾಣಿ’ ಬಹಿರಂಗಗೊಳಿಸಿ ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಪರ-ವಿರೋಧದ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಆರ್​ಟಿಐ ಅಕ್ರಮಕ್ಕೆ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಹಿಂಬಾಗಿಲಿನ ಮೂಲಕ ಕುಮ್ಮಕ್ಕು ಕೊಟ್ಟು ಕಾಯ್ದೆ ದುರ್ಬಳಕೆಗೆ ಕಾರಣರಾಗುತ್ತಿರುವ ಆಘಾತಕಾರಿ ಸಂಗತಿ ಸಾಕ್ಷ್ಯಸಮೇತ ಬೆಳಕಿಗೆ ಬಂದಿದೆ.
ವೈಯಕ್ತಿಕ ದ್ವೇಷ ಸಾಧನೆಗಾಗಿ ಸರ್ಕಾರಿ ಇಲಾಖೆಯೊಳಗಿರುವ ಅಧಿಕಾರಿ ಮತ್ತು ಸಿಬ್ಬಂದಿಯೇ ಕೆಲವೊಮ್ಮೆ ಒಬ್ಬರ ಮೇಲೆ ಇನ್ನೊಬ್ಬರು ಸಾಮಾಜಿಕ ಕಾರ್ಯಕರ್ತರು ಎನಿಸಿಕೊಂಡವರ ಮೂಲಕ ಆರ್​ಟಿಐ ಅರ್ಜಿಗಳನ್ನು ಹಾಕಿಸುತ್ತಾರೆ. ಅರ್ಜಿ ಹಾಕುವ ವ್ಯಕ್ತಿಗೆ ತಲಾ ಇಂತಿಷ್ಟು ಹಣ ಕೊಡುವ ವ್ಯವಸ್ಥೆಯೂ ಜಾರಿಯಲ್ಲಿದೆ ಎಂಬುದು ಕರ್ನಾಟಕ ಮಾಹಿತಿ ಆಯೋಗದ ಪೂರ್ಣಪೀಠದ ವಿಚಾರಣೆ ಸಂದರ್ಭದಲ್ಲಿ ಸಾಕ್ಷ್ಯಸಮೇತ ದಾಖಲಾಗಿದೆ. ಇದರೊಂದಿಗೆ ಆರ್​ಟಿಐ ಅಸ್ತ್ರ ದುರ್ಬಳಕೆಯಾಗುತ್ತಿರುವುದು ನಿಜವೆಂಬುದು ಜಗಜ್ಜಾಹೀರಾಗಿದೆ.
ಇದೇ ವೇಳೆ ಆರ್​ಟಿಐ ಕಾಯ್ದೆ 2005ರ ಸೆಕ್ಷನ್ 4 (1)(ಎ) (ಬಿ) ಅನ್ವಯ ಪ್ರಕರಣದ ವಿಚಾರಣೆ ವೇಳೆ ನಡೆದ ವಾದ-ಪ್ರತಿವಾದ ಹಾಗೂ ಪೂರ್ಣಪೀಠ ಅವಲೋಕಿಸಿದ (ಅಬ್ಸರ್ವೆಷನ್) ವಿಚಾರಗಳನ್ನು ಗಮನಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪೂರ್ಣಪೀಠ ತಿಳಿಸಿದೆ. ಜತೆಗೆ, ಆರ್​ಟಿಐ ಕಾಯ್ದೆಯನ್ವಯ ಇರುವಂತಹ ಮಾನದಂಡಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರುವಂತೆ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳಿಗೆ ಸೂಚನೆ ನೀಡುವಂತೆ ನಿರ್ದೇಶಿಸಿದೆ. ಈ ಬಗ್ಗೆ 3 ತಿಂಗಳಲ್ಲಿ ವರದಿ ಕೊಡುವಂತೆಯೂ ಹೇಳಿರುವುದರಿಂದ ಆರ್​ಟಿಐ ದುರ್ಬಳಕೆಗೆ ಬ್ರೇಕ್ ಬೀಳುವ ಆಶಾಭಾವನೆ ವ್ಯಕ್ತವಾಗಿದೆ. ‘ಮೇಸ್ತ್ರಿ’ಯಾಗಿದ್ದವ ಆ ವೃತ್ತಿಯನ್ನೇ ಬಿಟ್ಟು ಸರ್ಕಾರಿ ಇಲಾಖೆಗಳಿಗೆ ಆರ್​ಟಿಐ ಅರ್ಜಿ ಹಾಕುವುದನ್ನೇ ಕಾಯಕ ಮಾಡಿಕೊಂಡಿರುವ ಕುತೂಹಲಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಆರ್​ಟಿಐ ಕಾರ್ಯಕರ್ತರಿಗೆ ಮಾಹಿತಿ ಕೊಡುವ ಅಧಿಕಾರಿ ಮತ್ತು ಸಿಬ್ಬಂದಿಯಿದ್ದಾರೆ. ಅವರು ಕೊಡುವ ಮಾಹಿತಿ ಆಧಾರದ ಮೇಲೆಯೇ ಆರ್​ಟಿಐ ಅರ್ಜಿಗಳು ಸಲ್ಲಿಕೆಯಾಗುತ್ತವೆ ಎಂಬುದು ಈ ಪ್ರಕರಣದಿಂದ ರುಜುವಾತಾಗಿದೆ. ಆರ್​ಟಿಐ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದಲೇ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪೂರ್ಣಪೀಠ, ಈ ದುರ್ಬಳಕೆ ತಡೆಯಲು ಪಾಲಿಸಬೇಕಾದ ಮಾನದಂಡಗಳ ಕುರಿತು ಅ.12ರಂದು ಆದೇಶ ಹೊರಡಿಸಿದೆ.
ಕರ್ನಾಟಕ ಮಾಹಿತಿ ಆಯೋಗದಲ್ಲಿ ಅಂದಾಜು 42 ಸಾವಿರ ಮೇಲ್ಮನವಿಗಳು ವಿಚಾರಣೆಗೆ ಬಾಕಿ ಉಳಿದಿವೆ. ಇದರಲ್ಲಿ 15 ಜನ ಸಲ್ಲಿಸಿರುವ 18,134 ಪ್ರಕರಣಗಳಿದ್ದು, ಈ ಪೈಕಿ 12,392 ಅರ್ಜಿಗಳು ಮೂವರಿಗೆ ಸೇರಿವೆ. ಬೆರಳೆಣಿಕೆ ವ್ಯಕ್ತಿಗಳು ಸಲ್ಲಿಸಿರುವ ಸಾವಿರಾರು ಅರ್ಜಿಗಳು ಬಾಕಿ ಉಳಿದಿರುವುದರಿಂದ ಸಾಮಾನ್ಯ ಜನರು, ರೈತರು ಸಲ್ಲಿಸುವ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ ಎಂಬ ಕಾರಣಕ್ಕಾಗಿ 2023 ಆ.31ರವರೆಗೆ ವಿಚಾರಣೆಗೆ ಬಾಕಿ ಉಳಿದಿರುವ 300ಕ್ಕಿಂತ ಮೇಲ್ಪಟ್ಟು ಮೇಲ್ಮನವಿಗಳನ್ನು ಸಲ್ಲಿಸಿರುವ ಅರ್ಜಿದಾರರ ಪಟ್ಟಿ ಸಿದ್ಧಪಡಿಸಿಕೊಂಡು ಅದರಂತೆ ಪ್ರತಿವಾರ ಪೂರ್ಣಪೀಠದಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಸಾರ್ವಜನಿಕ ಹಿತಾಸಕ್ತಿ ಇಲ್ಲವೆಂಬ ಕಾರಣಕ್ಕೆ ಮೂವರು ಸಲ್ಲಿಸಿದ್ದ 12,382 ಅರ್ಜಿಗಳನ್ನು ಪೂರ್ಣಪೀಠ ಈಗಾಗಲೇ ವಜಾಗೊಳಿಸಿದೆ.
ಇದೇ ರೀತಿ 26 ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಕೆ.ಎಲ್. ಲಿಂಗರಾಜು ಎಂಬುವರ 809 ಮೇಲ್ಮನವಿಗಳು ವಿಚಾರಣೆಗೆ ಬಾಕಿ ಉಳಿದಿದ್ದವು. ಇದಕ್ಕೂ ಮುಂಚೆಯೇ ಇದೇ ವ್ಯಕ್ತಿ ಸಲ್ಲಿಸಿದ್ದ 2,157 ಎರಡನೇ ಮೇಲ್ಮನವಿಗಳನ್ನು ಆಯೋಗ ಇತ್ಯರ್ಥಪಡಿಸಿತ್ತು. ಪದೇಪದೆ ಮೇಲ್ಮನವಿಗಳನ್ನು ಸಲ್ಲಿಸುವ ಅಭ್ಯಾಸ ಹೊಂದಿದ್ದರಿಂದ ಅನುಮಾನ ವ್ಯಕ್ತಪಡಿಸಿದ ಮುಖ್ಯ ಮಾಹಿತಿ ಆಯುಕ್ತ ಎನ್.ಸಿ. ಶ್ರೀನಿವಾಸ, ಮಾಹಿತಿ ಆಯುಕ್ತರಾದ ಎಚ್.ಸಿ. ಸತ್ಯನ್ ಹಾಗೂ ಡಾ.ಎಸ್.ಬಿ. ಬೊಮ್ಮನಹಳ್ಳಿ ನೇತೃತ್ವದ ಪೂರ್ಣಪೀಠದ ವಿಚಾರಣೆಯಲ್ಲಿ ಅರ್ಜಿದಾರನ ಹೇಳಿಕೆಯಿಂದಲೇ ಸರ್ಕಾರಿ ಅಧಿಕಾರಿಗಳ ಕುಮ್ಮಕ್ಕು, ಹಣದ ಸಹಾಯ ಬಯಲಾಗಿದೆ. ಹೀಗಾಗಿ ಈ ಎಲ್ಲ ಮೇಲ್ಮನವಿಗಳನ್ನು ಪೀಠ ವಜಾಗೊಳಿಸಿದೆ.
ಲಿಂಗರಾಜು ಸಲ್ಲಿಸಿದ್ದ ಮೇಲ್ಮನವಿಗಳ ವಿವರ:ಕಂದಾಯ-355, ಆರ್​ಡಿಪಿಆರ್-110, ಇಂಧನ-80, ಗೃಹ-65, ನಗರಾಭಿವೃದ್ಧಿ-37, ಸಮಾಜಕಲ್ಯಾಣ-36, ಹಣಕಾಸು-21, ಸಿಬ್ಬಂದಿ ಮತ್ತು ಆಡಳಿತ-12, ಕಾನೂನು-16, ಶಿಕ್ಷಣ-10, ಆರೋಗ್ಯ-10, ಪಿಡಬ್ಲುಡಿ-8, ಅರಣ್ಯ-8, ತೋಟಗಾರಿಕೆ-8, ಮಹಿಳಾ/ಮಕ್ಕಳ-7, ಸಾರಿಗೆ-6, ಸಹಕಾರ-5, ಕಾರ್ವಿುಕ-5, ಜಲಸಂಪನ್ಮೂಲ-5, ಕೃಷಿ-4, ಪಶುಸಂಗೋಪನೆ-4, ಆಹಾರ-2, ವಸತಿ-2, ಪ್ರವಾಸೋದ್ಯಮ-1, ಕೈಗಾರಿಕೆ-1, ಸಂಸದೀಯ-1.
ಅರ್ಜಿ ಹಾಕಲು ಹಣ:ಸೆ.20ರಂದು ಖುದ್ದಾಗಿ ಅಥವಾ ವಿಡಿಯೋ ಕಾನ್ಪೆರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರ ಕೆ.ಎಲ್.ಲಿಂಗರಾಜುಗೆ ಪೂರ್ಣಪೀಠ ನೋಟಿಸ್ ಜಾರಿ ಮಾಡಿತ್ತು. ಅದರಂತೆ ಆತ ವಿಡಿಯೋ ಕಾನ್ಪೆರೆನ್ಸ್​ನಲ್ಲಿ ಹಾಜರಾಗಿದ್ದ. ಪೂರ್ಣಪೀಠ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಪ್ರತಿವಾದಿ ಅಧಿಕಾರಿಗಳು ಸೇವೆ ಸಲ್ಲಿಸುತ್ತಿರುವ ಕಚೇರಿಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಯೇ ಅರ್ಜಿ ಹಾಕಿಸಿ ಮಾಹಿತಿ ಕೇಳಿಸಿದರು. ಕೊಳ್ಳೇಗಾಲ ತಹಸೀಲ್ದಾರ್ ಕಚೇರಿಯಲ್ಲಿ ಚುನಾವಣಾ ಶಿರಸ್ತೇದಾರ್ ಆಗಿ ಕೆಲಸ ಮಾಡಿ ವಜಾಗೊಂಡಿರುವ ಶ್ರೀನಿವಾಸ್ ಮತ್ತು ಬೇರೆಬೇರೆ ಅಧಿಕಾರಿ ಮತ್ತು ಸಿಬ್ಬಂದಿಯೇ
ಆರ್​ಟಿಐ ಅರ್ಜಿಗಳು ಹಾಗೂ ಮೇಲ್ಮನವಿಗಳನ್ನು ತನ್ನ ಮೂಲಕ ಹಾಕಿಸಿದ್ದಾರೆ. ಎಲ್ಲ ಸರ್ಕಾರಿ ಕಚೇರಿ ಗಳಲ್ಲಿ ಅಲ್ಲಿನ ಸಿಬ್ಬಂದಿಯೇ ಮಾಹಿತಿದಾರರು. ಅವರು ಕೊಡುವ ಮಾಹಿತಿ ಆಧರಿಸಿ ಆರ್​ಟಿಐ ಅರ್ಜಿ ಹಾಕುತ್ತೇನೆ. ಪ್ರತಿ ಅರ್ಜಿಗೆ 150 ರೂ. ಕೊಡುತ್ತಾರೆ. ಮೊದಲು ಮೇಸ್ತ್ರಿ ಕೆಲಸ ಮಾಡುತ್ತಿದ್ದೆ. ಈ ಕ್ಷೇತ್ರಕ್ಕೆ ಬಂದ ನಂತರ ಆ ವೃತ್ತಿ ಬಿಟ್ಟೆ ಎಂದು ಲಿಂಗರಾಜು ಹೇಳಿಕೆ ದಾಖಲಿಸಿದ್ದಾನೆ.
‘ಆರ್​ಟಿಒ ಅಸ್ತ್ರ ದುರ್ಬಳಕೆ’ ಶೀರ್ಷಿಕೆಯಡಿ ಅ.7ರಂದು ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಕೆಲವೇ ಕೆಲವು ವ್ಯಕ್ತಿಗಳೂ ಪದೇಪದೆ ಅರ್ಜಿಗಳನ್ನು ಹಾಕುತ್ತಿರುವ ಬಗ್ಗೆ ವಿವರಿಸಲಾಗಿತ್ತು. ವರದಿ ಆಧರಿಸಿ ತನಿಖೆ ನಡೆಸುವಂತೆ ವಿಧಾನಸೌಧ ಪೊಲೀಸ್ ಠಾಣೆಗೆ ಸಾಮಾಜಿಕ ಕಾರ್ಯಕರ್ತ ಎಚ್.ಎಂ. ವೆಂಕಟೇಶ್ ದೂರು ಕೊಟ್ಟಿದ್ದಾರೆ.
ಇಡೀ ಹೇಳಿಕೆ ಚಿತ್ರೀಕರಣ:ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರ ಲಿಂಗರಾಜು ನೀಡಿದ ಬಹಿರಂಗ ಹೇಳಿಕೆಗಳನ್ನು ಪೂರ್ಣಪೀಠ ವಿಡಿಯೋ ರೆಕಾರ್ಡ್ ಮಾಡಿಕೊಂಡಿದೆ. ಅರ್ಜಿದಾರ ಸುಳ್ಳು ಹೇಳಿಕೆಗಳನ್ನು ನೀಡುತ್ತಿರಬಹುದೆಂಬ ಅನುಮಾನ ದಿಂದ ಪೂರ್ಣಪೀಠ, ಎಲ್ಲ ಪ್ರಕ್ರಿಯೆ ವಿಡಿಯೋ ಚಿತ್ರೀಕರಣವಾಗುತ್ತಿದೆ ಎಂದು ತಿಳಿಸಿದ ನಂತರವೂ ಆತ ತನ್ನ ಹೇಳಿಕೆಗಳನ್ನು ಬದಲಾಯಿಸಿಲ್ಲ. ತಾನು ಹೇಳಿದ್ದೆಲ್ಲವೂ ಸತ್ಯ ಎಂದೇ ಒಪ್ಪಿಕೊಂಡಿದ್ದಾನೆ. ತಾನು ಸ್ವಯಂಪ್ರೇರಿತವಾಗಿ ಮೇಲ್ಮನವಿ ಸಲ್ಲಿಸಿಲ್ಲ. ಬೇರೊಬ್ಬರ ಒತ್ತಾಯದಿಂದ ಹಾಗೂ ಆರ್ಥಿಕ ಲಾಭದ ಉದ್ದೇಶದಿಂದ ಮೇಲ್ಮನವಿಗಳನ್ನು ಸಲ್ಲಿಸಿದ್ದೇನೆ ಎಂದು ವಿಚಾರಣೆ ವೇಳೆ ಹೇಳಿದ್ದಾಗಿ ಪೂರ್ಣಪೀಠ ಆದೇಶದಲ್ಲಿ ಉಲ್ಲೇಖ ಮಾಡಿದೆ.
ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

ಜೊಮ್ಯಾಟೊ ಫುಡ್ ಡೆಲಿವರಿಗೆ ಸ್ಟೈಲಿಶ್ ಬೈಕು, ಚಂದದ ಯುವತಿ!; ಏನಿದರ ರಹಸ್ಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − seven =
Remember me
