|ಹರೀಶ್ ಬೇಲೂರುಬೆಂಗಳೂರು
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸಾವಿರಾರು ನಕಲಿ ವೈದ್ಯಕೀಯ ಕ್ಲಿನಿಕ್​ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಈವರೆಗೆ 50 ಸಾವಿರಕ್ಕೂ ಅಧಿಕ ನಕಲಿ ಕ್ಲಿನಿಕ್​ಗಳು ಇರುವುದು ಬೆಳಕಿಗೆ ಬಂದಿದೆ. ಕೆಲ ಜಿಲ್ಲೆಗಳಲ್ಲಿ 2-3 ಸಾವಿರ ನಕಲಿ ಕ್ಲಿನಿಕ್​ಗಳಿವೆ. ಒಂದು ವೇಳೆ ಇವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಬರುವ ದಿನಗಳಲ್ಲಿ ಬೀದಿ ಬೀದಿಯಲ್ಲೂ ನಕಲಿ ಕ್ಲಿನಿಕ್​ಗಳ ಹಾವಳಿ ಹೆಚ್ಚಾಗಲಿವೆ.
ಕರ್ನಾಟಕ ಆಯುರ್ವೆದಿಕ್ ಮತ್ತು ಯುನಾನಿ ವೈದ್ಯ ಮಂಡಳಿ(ಕೆಎಯುಪಿ) ರಿಜಿಸ್ಟ್ರಾರ್​ಗಳು ಅಧಿಕಾರಾವಧಿಯಲ್ಲಿ ವೈದ್ಯ ವೃತ್ತಿ ನಡೆಸಲು ಅರ್ಹತೆ ಹೊಂದಿಲ್ಲದ 7-8 ಸಾವಿರ ಮಂದಿಗೆ ವೈದ್ಯರ ನೋಂದಣಿ ಪ್ರಮಾಣ ಪತ್ರ ನೀಡಿದ್ದಾರೆ. ಪ್ರತಿ ಪ್ರಮಾಣಪತ್ರಕ್ಕೆ ನಾಲ್ಕೈದು ಲಕ್ಷ ರೂ. ಲಂಚ ಪಡೆದು ಪ್ರಮಾಣ ಪತ್ರ ಕೊಟ್ಟಿರುವ ಬಗ್ಗೆ ಗಂಭೀರ ಆರೋಪಗಳಿವೆ. ಇವುಗಳನ್ನು ಪಡೆದಿರುವ ಬೇನಾಮಿ ವೈದ್ಯರು, 20-30 ವರ್ಷಗಳ ಹಿಂದೆಯೇ ಕ್ಲಿನಿಕ್ ತೆರೆದು ಕೋಟಿ ಕೋಟಿ ಹಣ ಮಾಡಿಕೊಂಡು ಬಡ ರೋಗಿಗಳ ಜೀವದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಅಲ್ಲದೆ, ನಕಲಿ ಕ್ಲಿನಿಕ್​ಗಳಲ್ಲಿ ಚಿಕಿತ್ಸೆ ಪಡೆದಿರುವ ಸಾಕಷ್ಟು ರೋಗಿಗಳು ಈಗಾಗಲೆ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಸರ್ಕಾರಕ್ಕೆ ಇಂಚಿಂಚೂ ಮಾಹಿತಿ ಇದ್ದರೂ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಅನುಮಾನ ಮೂಡಿಸಿದೆ.
ಭ್ರಷ್ಟರ ರಕ್ಷಣೆ?:1998-99ರಲ್ಲಿ ಡಾ.ಶ್ರೀನಿವಾಸವರ್ವ, 2000-2001ರಲ್ಲಿ ಡಾ.ಹನುಮೇಗೌಡ, 2009-10 ರಲ್ಲಿ ಹಾಗೂ 2018ರ ಆಗಸ್ಟ್​ನಿಂದ 2020ರ ಸೆಪ್ಟೆಂಬರ್​ವರೆಗೆ ಡಾ.ವೆಂಕಟರಾಮಯ್ಯ ಕೆಎಯುಪಿ ರಿಜಿಸ್ಟಾರ್ ಆಗಿದ್ದ ಸಂದರ್ಭದಲ್ಲಿ ನೂರಾರು ನಕಲಿ ವೈದ್ಯ ವಿದ್ವತ್ ಪ್ರಮಾಣಪತ್ರ ಕೊಟ್ಟಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಡಾ.ವೆಂಕಟರಾಮಯ್ಯ ಬೇನಾಮಿ ವ್ಯಕ್ತಿಗಳ ಹೆಸರುಗಳನ್ನು ರಿಜಿಸ್ಟ್ರಾರ್​ನಲ್ಲಿ ಸೇರ್ಪಡೆಗೊಳಿಸಲು ಮ್ಯಾನುವಲ್ ನೋಂದಣಿ ರಿಜಿಸ್ಟ್ರರನ್ನೇ ಬದಲಾಯಿಸಿ ಅಕ್ರಮವಾಗಿ 13 ನಕಲಿ ವೈದ್ಯರಿಗೆ ಕ್ಲಿನಿಕ್ ಪರವಾನಗಿ ಹೊಂದಲು ಅರ್ಹರಿದ್ದಾರೆ ಎಂದು ತುಮಕೂರು, ಬಳ್ಳಾರಿ ಮತ್ತು ಕೋಲಾರ ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಸುಳ್ಳು ಶಿಫಾರಸ್ಸು ಪತ್ರ ಕಳುಹಿಸಿರುವುದು ಹಾಗೂ ಒಂದೇ ನೋಂದಣಿ ಸಂಖ್ಯೆಯನ್ನು ಒಬ್ಬರಿಗಿಂತ ಹೆಚ್ಚು ಜನರಿಗೆ ನೋಂದಾಯಿಸಿ ಪ್ರಮಾಣ ಪತ್ರ ಕೊಟ್ಟಿರುವುದು ತಾಂತ್ರಿಕ ಸಮಿತಿ ನಡೆಸಿದ್ದ ವರದಿಯಲ್ಲಿ ದೃಢಪಟ್ಟಿದೆ. ಆದರೂ, ಭ್ರಷ್ಟ ರಿಜಿಸ್ಟ್ರಾರ್​ಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಉದಾಸೀನ ತೋರುತ್ತಿದೆ. ಆಯುಷ್ ಇಲಾಖೆ ಆಯುಕ್ತ, ಕೆಎಯುಪಿ ಪ್ರಭಾರ ರಿಜಿಸ್ಟ್ರಾರ್ ಸೇರಿ ಇತರ ಅಧಿಕಾರಿಗಳೇ ಇವರ ಪರ ನಿಂತಿದ್ದಾರೆ. ನಕಲಿ ಪ್ರಮಾಣಪತ್ರ ನೀಡಿರುವ ರಿಜಿಸ್ಟ್ರಾರ್​ಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ಉಡಾಫೆ ಉತ್ತರ ಕೊಡುತ್ತಾರೆ. ಸರ್ಕಾರಕ್ಕೂ ವರದಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ.
ವ್ಯವಹಾರದ ಮೇಲೆ ನಿಗಾ:ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಆಯುಷ್ ಅಧಿಕಾರಿಗಳಿಗೆ, ಕೆಎಯುಪಿ ನೋಂದಣಾಧಿಕಾರಿಗೆ ಪ್ರತಿ ತಿಂಗಳು ನಕಲಿ ವೈದ್ಯರಿಂದ ಮಾಮೂಲಿ ಹೋಗುತ್ತಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ನಕಲಿ ವೈದ್ಯರು, ಇಲಾಖೆ ಉನ್ನತ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದು, ತಮ್ಮ ಮೇಲೆ ದಾಳಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಉನ್ನತ ಅಧಿಕಾರಿಗಳು ಬಹಳ ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದಂಧೆ ಹೇಗೆ?:ಕೆಎಯುಪಿಯಲ್ಲಿ ಒಮ್ಮೆ ನೋಂದಣಿಯಾದ ವೈದ್ಯರು ನಿಧನರಾದರೆ, ಹೊರ ರಾಜ್ಯಕ್ಕೆ ಅಥವಾ ವಿದೇಶಗಳಿಗೆ ತೆರಳಿದರೆ ಅವರ ನೋಂದಣಿ ರದ್ದಾಗುತ್ತದೆ. ರದ್ದಾದ ನೋಂದಣಿ ಸಂಖ್ಯೆಯನ್ನು ಬೇರೆಯವರಿಗೆ ನೀಡಲು ಅವಕಾಶವಿಲ್ಲ. ಆದರೆ, ಈ ನೋಂದಣಿ ಸಂಖ್ಯೆ ಬಳಸಿಕೊಂಡು ರಿಜಿಸ್ಟ್ರಾರ್​ಗಳು, ಕೆಲವರು ನಕಲಿ ವೈದ್ಯರಿಗೆ ಪ್ರಮಾಣಪತ್ರವನ್ನು ನೀಡಿದ್ದಾರೆ. ಈ ಪ್ರಮಾಣಪತ್ರದಲ್ಲಿ ಹೆಸರು ನಮೂದಿಸಿ ಮತ್ತು ಭಾವಚಿತ್ರ ಅಂಟಿಸಿಕೊಂಡು ನಕಲಿ ಕ್ಲಿನಿಕ್ ತೆರೆದಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಮಾನ್ಯತೆ ಹೊಂದಿದ ಕಾಲೇಜುಗಳಲ್ಲಿ ಐದೂವರೆ ವರ್ಷ ಬ್ಯಾಚುಲರ್ ಆಫ್ ಆಯುರ್ವೆದಿಕ್ ಮೆಡಿಸಿನ್ ಆಂಡ್ ಸರ್ಜರಿ (ಬಿಎಎಂಎಸ್), ಬ್ಯಾಚುಲರ್ ಆಫ್ ಯುನಾನಿ ಮೆಡಿಸಿನ್ ಆಂಡ್ ಸರ್ಜರಿ (ಬಿಯುಎಂಎಸ್) ಹಾಗೂ ಬ್ಯಾಚುಲರ್ ಆಫ್ ಯೋಗ ಆಂಡ್ ನ್ಯಾಚುರೋಪಥಿ (ಬಿವೈಎಎಸ್) ಕೋರ್ಸ್ ಮಗಿಸಿದ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೆಎಯುಪಿಯಲ್ಲಿ ನೋಂದಾಯಿಸಿಕೊಂಡು ಪ್ರಮಾಣಪತ್ರ, ಬಾರ್​ಕೋಡ್ ಮತ್ತು ಗುರುತಿನ ಚೀಟಿ ಪಡೆಯಬೇಕು. ನಕಲಿ ವೈದ್ಯರ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳಲು ಮಂಡಳಿಯಲ್ಲಿ ಜಾರಿಗೆ ತಂದಿದ್ದ ಬಯೋಮೆಟ್ರಿಕ್ ವ್ಯವಸ್ಥೆಗೆ ಗ್ರಹಣ ಬಡಿದಿದೆ. ಇದರಿಂದಾಗಿ ಕೋರ್ಸ್ ಮುಗಿಸಿರುವ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ನೋಂದಣಿ ಮಾಡಲಾಗುತ್ತಿಲ್ಲ.
‘ಅಪ್ಪು ಸರ್ ಕ್ಷಮೆ ಇರಲಿ’ ಎಂದ ರಿಷಬ್​ ಶೆಟ್ಟಿ; ದೂರದೂರಿನಿಂದಲೇ ಹೀಗೆನ್ನಲು ಕಾರಣ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 13 =
Remember me
