|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯದಲ್ಲಿ ನಕಲಿ ಹಾಗೂ ಕಾಳಸಂತೆಯಲ್ಲಿ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜಗಳ ಮಾರಾಟ ಮಾಡುವ ಪ್ರಕರಣಗಳು ಹೆಚ್ಚುತ್ತ ಸರ್ಕಾರಕ್ಕೆ ಮತ್ತು ರೈತರಿಗೆ ನಷ್ಟವನ್ನುಂಟು ಮಾಡುತ್ತಿದ್ದು, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ಕಾಳಸಂತೆ ಹಾಗೂ ನಕಲಿ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಕೃಷಿ ಇಲಾಖೆಯಲ್ಲಿ ಜಾಗೃತ ದಳವನ್ನು ಬಲಪಡಿಸಿದೆ. ಆದರೆ, ಇದರಲ್ಲಿ ಅಂತಾರಾಜ್ಯ ಜಾಲ ಇರುವುದರಿಂದ ಅದನ್ನು ಬುಡಸಮೇತ ಕಿತ್ತು ಹಾಕಬೇಕೆಂದೇ ಸಿಐಡಿಗೆ ನೀಡಲಾಗಿದೆ. ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ನಕಲಿಯಾದರೆ ಅದು ರೈತರ ಪಾಲಿಗೆ ದೊಡ್ಡ ಹೊರೆಯಾಗುತ್ತದೆ. ಇವುಗಳನ್ನು ಬಳಸಿದರೆ ಕೃಷಿ ಉತ್ಪಾದನೆ ಶೇ.40ರಷ್ಟು ಕುಸಿತವಾಗುತ್ತದೆ. ಪ್ರತಿವರ್ಷ ರಸಗೊಬ್ಬರ ಹಾಗೂ ಕೀಟನಾಶಕದ ಸಾವಿರಾರು ಕೋಟಿ ರೂ.ಗಳ ವಹಿವಾಟು ರಾಜ್ಯದಲ್ಲಿಯೇ ನಡೆಯುತ್ತದೆ. ಕೇಂದ್ರ ಸರ್ಕಾರ ಸಾಕಷ್ಟು ಸಬ್ಸಿಡಿ ನೀಡುತ್ತದೆ. ಇಡೀ ದೇಶದಲ್ಲಿ ರೈತರು ಬಳಸುವ ರಸಗೊಬ್ಬರಕ್ಕೆ ವಾರ್ಷಿಕ ಅಂದಾಜು 2.89 ಲಕ್ಷ ಕೋಟಿ ರೂ. ಸಬ್ಸಿಡಿ ನೀಡಲಾಗುತ್ತದೆ.
ಮಾಹಿತಿ ಕೇಳಿದ ಸಿಐಡಿ:ಈ ವರ್ಷವೇ ರಾಜ್ಯದಲ್ಲಿ 103 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ನಕಲಿ ರಸಗೊಬ್ಬರದ 11 ಪ್ರಕರಣಗಳಲ್ಲಿ ಅಂತಾರಾಜ್ಯ ನಂಟು ಇರುವುದನ್ನು ಮನಗಂಡು ಸಿಐಡಿಗೆ ವಹಿಸುವ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಪತ್ರ ಬರೆದಿದ್ದರು. ಅವರ ಕಚೇರಿಯಿಂದ ಕೆಲವೊಂದು ಮಾಹಿತಿ, ಎಫ್​ಐಆರ್ ಪ್ರತಿಗಳು ಹಾಗೂ ವಿವರ ಕೋರಿ ಪತ್ರ ಬಂದ ಹಿನ್ನೆಲೆಯಲ್ಲಿ ಅವುಗಳೆಲ್ಲವನ್ನೂ ರವಾನಿಸಲಾಗಿದೆ. ಸಿಐಡಿ ಸದ್ಯದಲ್ಲಿಯೇ ತನಿಖೆ ಆರಂಭಿಸಲಿದೆ.
ಅಧಿಕಾರಿಗಳ ಪಾತ್ರ:ಕೃಷಿ ಇಲಾಖೆಯಲ್ಲಿ ಜಾಗೃತದಳ ರಚನೆಯಾದ ನಂತರ ಪತ್ತೆ ಹಚ್ಚುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ದೂರು ಇದ್ದರೂ ಸರಿಯಾಗಿ ಪರಿಶೀಲನೆ ನಡೆಸುತ್ತಿಲ್ಲ. ಪ್ರಯೋಗಾಲಯದಲ್ಲಿ ಸಮರ್ಪಕ ಪರೀಕ್ಷೆ ಆಗುತ್ತಿಲ್ಲ. ದಾಳಿಗಳನ್ನು ನಡೆಸುವಲ್ಲಿಯೂ ಲೋಪಗಳಿವೆ ಎಂಬ ದೂರುಗಳಿದ್ದವು. ಆದ್ದರಿಂದಲೇ ಸಿಐಡಿ ಮೂಲಕ ತನಿಖೆ ನಡೆಸಿದರೆ ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಇದೆ.
ಜಾಗೃತದಳದವನ್ನು ಬಲಗೊಳಿಸಿದ ನಂತರ ದಾಳಿ ನಡೆಸಿ ಮೊಕದ್ದಮೆ ದಾಖಲಿಸಲಾಗುತ್ತಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ನಕಲಿ ವಸ್ತುಗಳ ಮಾರಾಟ ಮಟ್ಟ ಹಾಕಲೇಬೇಕಾಗಿದೆ. ಅಂತಾರಾಜ್ಯ ಜಾಲ ಇರುವುದರಿಂದ ಸಿಐಡಿಗೆ ಒಪ್ಪಿಸಿದ್ದೇವೆ. ಆದಷ್ಟು ಬೇಗ ಮೂಲ ಪತ್ತೆಯಾಗಿ ಸಂಪೂರ್ಣ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ.
|ಬಿ.ಸಿ. ಪಾಟೀಲ್ಕೃಷಿ ಸಚಿವ
ಇನ್ನೂ ಆಗದ ಆ್ಯಪ್:ರಸಗೊಬ್ಬರ ಮಾರಾಟದ ಮೇಲೆ ನಿಯಂತ್ರಣಕ್ಕಾಗಿ ಪ್ರತ್ಯೇಕ ಆಪ್ ಸಿದ್ಧಪಡಿಸಲಾಗುತ್ತಿದೆ. ಆದರೆ, ಅದು ಇನ್ನೂ ಆಗಿಲ್ಲ. ಪಿಡಿ ಕಾಯ್ದೆಯನ್ನು ಸಹ ಮುಂದಿನ ಅಧಿವೇಶನದಲ್ಲಿ ತರಲಾಗುತ್ತದೆ. ಆಪ್ ಮತ್ತು ಕಾಯ್ದೆ ಬಂದರೆ ಸಾಕಷ್ಟು ನಿಯಂತ್ರಣ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವಿದೆ. ರಾಜ್ಯದಲ್ಲಿ ಅಂದಾಜು 10 ಸಾವಿರ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರಿದ್ದಾರೆ. ವಾರ್ಷಿಕ 22 ಸಾವಿರ ಕೋಟಿ ರೂ.ಗಳಷ್ಟು ಮೊತ್ತದ ವಹಿವಾಟು ನಡೆಯುತ್ತಿದೆ.
ಪ್ರಕರಣಗಳ ಪ್ರಮಾಣ:ಮೂರು ವರ್ಷಗಳಲ್ಲಿ ನಕಲಿ ರಸಗೊಬ್ಬರ ಮಾರಾಟದ 315 ಪ್ರಕರಣಗಳು ಪತ್ತೆಯಾಗಿವೆ. 28.57 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 295 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. 248 ಪರವಾನಗಿ ಅಮಾನತು ಮಾಡಿದ್ದು, 35 ರದ್ದು ಮಾಡಲಾಗಿದೆ. 2022-23 ರಲ್ಲಿ ಈವರೆಗೆ 103 ಪ್ರಕರಣಗಳು ವರದಿಯಾಗಿವೆ.
ಯಾವ ಭಾಗದಲ್ಲಿ ಹೆಚ್ಚು?:ನಕಲಿ ರಸಗೊಬ್ಬರ ಮಾರಾಟ ಪ್ರಕರಣಗಳು ಕೋಲಾರ, ಯಾದಗಿರಿ, ಕೊಪ್ಪಳ, ಗದಗ, ಬೀದರ್, ವಿಜಯನಗರ, ಚಿತ್ರದುರ್ಗ, ಕೊಡಗು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ.
ನೆರೆ ರಾಜ್ಯಗಳಿಂದ ಸಾಗಣೆ:ನಕಲಿ ರಸಗೊಬ್ಬರ ಹಾಗೂ ಕೀಟನಾಶಕ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಭಾಗದಿಂದ ರಾಜ್ಯಕ್ಕೆ ಬರುತ್ತಿದೆ; ರಾಜ್ಯದಲ್ಲಿ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚಾಗಿ ಮಾರಾಟವಾಗುತ್ತದೆ ಎಂಬ ಆರೋಪಗಳಿವೆ.
ಸಬ್ಸಿಡಿ ಎಷ್ಟು?:ಡಿಎಪಿ ಮೇಲೆ 2500.65 ರೂ., ಎಂಒಪಿ ಮೇಲೆ 759.30 ರೂ., ಕಾಂಪ್ಲೆಕ್ಸ್- 1734.45 ರೂ. ಹಾಗೂ ಯೂರಿಯಾಗೆ 1400 ರೂ. ಸಬ್ಸಿಡಿ ನೀಡಲಾಗುತ್ತದೆ. ಮಾರ್ಚ್​ನಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿಯನ್ನು ಹೆಚ್ಚಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eight =
Remember me
