ಬೆಂಗಳೂರು:ಸೆನ್ಸರ್ ಆಧಾರಿತ ನೀರಾವರಿ ವ್ಯವಸ್ಥೆ, ಔಷಧ ಸಿಂಪಡಿಸುವ ಮಿನಿ ಟ್ಯಾಂಕರ್, ಸೂಕ್ಷ್ಮ ಪೋಷಕಾಂಶಯುಕ್ತ ಭತ್ತ, ಪರಾಗಸ್ಪರ್ಶವಿಲ್ಲದೆ ತೋಟಗಾರಿಕಾ ಬೆಳೆ ಬೆಳೆಯುವ ಪದ್ಧತಿ… ಹೀಗೆ ಹಲವು ವಿಶೇಷಗಳನ್ನು ಒಳಗೊಂಡ ಕೃಷಿ ಮೇಳಕ್ಕೆ ಬುಧವಾರ ಚಾಲನೆ ದೊರೆತಿದೆ.
ಕರೊನಾ ಆತಂಕದ ನಡುವೆಯೇ ಬಳ್ಳಾರಿ ರಸ್ತೆಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಮೂರು ದಿನಗಳ ಕೃಷಿಮೇಳ (ನ.13ರವರೆಗೆ) ಆಯೋಜಿಸಲಾಗಿದೆ. ಕೃಷಿ ಸಂಬಂಧಿತ ತಂತ್ರಜ್ಞಾನ, ಹೊಸ ಬಗೆಯ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಹೆಚ್ಚಿನ ಜನರು ಮೇಳಕ್ಕೆ ಬರುವುದನ್ನು ತಡೆಯಲು ವೆಬ್​ಸೈಟ್, ಸಾಮಾಜಿಕ ಜಾಲತಾಣಗಳ ಮೂಲಕ ಮೇಳದ ನೇರಪ್ರಸಾರ ವ್ಯವಸ್ಥೆ ಮಾಡಲಾಗಿದೆ.
ರೈತರ ಜೇಬು ತುಂಬಿಸುವ ಡ್ರ್ಯಾಗನ್:ತೋಟಗಾರಿಕಾ ಇಲಾಖೆ ಪ್ರೋತ್ಸಾಹದೊಂದಿಗೆ ರಾಜ್ಯದಲ್ಲಿ ನೂರಾರು ಎಕರೆ ಭೂಮಿಯಲ್ಲಿ ದುಬಾರಿ ಡ್ರಾ್ಯಗನ್ ಹಣ್ಣಿನ ಕೃಷಿ ಮಾಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಅದು ಹೆಚ್ಚಾಗುತ್ತಿದ್ದು, ಕರೊನಾ ಕಾಲದಲ್ಲಿ ಅದಕ್ಕೆ ಬೇಡಿಕೆ ಹೆಚ್ಚಿದೆ. ಮೇಳದಲ್ಲಿ ಈ ಹಣ್ಣಿನ ಬೆಳೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ.
ನೀರಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ:ಇದೇ ಮೊದಲ ಬಾರಿಗೆ ಸೆನ್ಸರ್ ಆಧಾರಿತ ನೀರಾವರಿ ಪದ್ಧತಿಯನ್ನು ಮೇಳದಲ್ಲಿ ಪರಿಚಯಿಸಲಾಗಿದೆ. ಹೊಲಗಳಿಗೆ ನೀರು ಹಾಯಿಸಲು ಇದು ಉಪಯುಕ್ತ. ಮೋಟಾರ್​ಗೆ ಮತ್ತು ಹೊಲದಲ್ಲಿ ನೆಲದಡಿ ಸೆನ್ಸರ್ ಅಳವಡಿಸಲಾಗಿರುತ್ತದೆ. ಮಣ್ಣಿನ ತೇವಾಂಶ ಕಡಿಮೆಯಾದ ಕೂಡಲೇ ಮೋಟಾರ್ ತಂತಾನೆ ಚಾಲನೆಗೊಂಡು ಹೊಲಕ್ಕೆ ನೀರು ಹಾಯಿಸುತ್ತದೆ. ಗೊಬ್ಬರ ಹಾಕುವುದಕ್ಕೂ ಇದೇ ಕ್ರಮ ಅನುಸರಿಸಲಾಗುತ್ತದೆ.
ಕೃಷಿಮೇಳದಲ್ಲಿ ಎಲೆಚುಕ್ಕೆ ಮತ್ತು ಎಲೆ ತುಕ್ಕು ರೋಗ ನಿರೋಧಕ, ಹೆಚ್ಚು ಇಳುವರಿ ಕೊಡುವ ನೆಲಗಡಲೆ ಜಿಕೆವಿಕೆ 27, ಅಲಸಂದೆ ಕೆಸಿ 8 ಹಾಗೂ ಮೇವಿನ ಅಲಸಂದೆ ಎಂಎಫ್​ಸಿ 09-03 ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಜತೆಗೆ 17 ನೂತನ ಕೃಷಿ ತಾಂತ್ರಿಕತೆಯನ್ನು ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಲಾಕ್​ಡೌನ್ ಅವಧಿಯಲ್ಲಿ ರೈತರು ಸಾಕಷ್ಟು ಸಂಕಷ್ಟ ಎದುರಿಸಿದರು. ಆಗ ಕೃಷಿ ವಿವಿ ತೋಟಗಾರಿಕಾ ವಿಭಾಗ ರೈತರಿಗೆ ಯಾವೆಲ್ಲ ಬೆಳೆ ಈ ಅವಧಿಗೆ ಪೂರಕ ಎಂಬುದನ್ನು ತಿಳಿಹೇಳಿದ್ದರು. ‘ಸಿ’ ವಿಟಮಿನ್ ಹೆಚ್ಚಿರುವ ನೆಲ್ಲಿ, ಬೆಣ್ಣೆ ಹಣ್ಣು, ಬಾರ್​ಬಾಡ್ಜ್ ಚೆರ್ರಿ, ಎಗ್ ಫ್ರೂಟ್​ಗಳ ಬಗ್ಗೆ ರೈತರಿಗೆ ತಿಳಿಸಿ ಅದರ ಕೃಷಿಗೆ ಉತ್ತೇಜನ ನೀಡಿದ್ದರು. ಹೀಗಾಗಿ ಹಿಂದಿನ 6 ತಿಂಗಳಲ್ಲಿ ಈ ಬೆಳೆಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಶೇ. 20ಕ್ಕೂ ಹೆಚ್ಚಿನ ಭೂಮಿಯಲ್ಲಿ ಕೃಷಿ ಮಾಡಲಾಗಿದೆ. ಮೇಳದಲ್ಲಿ ಈ ಕುರಿತು ವಿವರಣೆ ನೀಡಲಾಗುತ್ತಿದ್ದು, ಬೆಳೆಯುವ ವಿಧಾನ ಸೇರಿ ಇನ್ನಿತರ ವಿಷಯ ತಿಳಿಹೇಳಲಾಗುತ್ತಿದೆ.
ಸೋಂಕಿನಿಂದ ರೋಗಕ್ಕೆ ತುತ್ತಾಗುವ ವರು ಪೌಷ್ಟಿಕ ಆಹಾರ ಸೇವಿಸುವುದು ಅತ್ಯವಶ್ಯ. ಅದರಲ್ಲೂ ಕಬ್ಬಿಣ, ಜಿಂಕ್​ನಂತಹ ಸೂಕ್ಷ್ಮ ಪೋಷಕಾಂಶವುಳ್ಳ ಆಹಾರ ಸೇವನೆ ಲಾಭದಾಯಕ. ಅದಕ್ಕಾಗಿ ಕೃಷಿ ವಿವಿ ‘ಪೌಷ್ಟಿಕ್ 5, 7, 9’ ಎಂಬ ಮೂರು ಬಗೆಯ ಭತ್ತ ಅಭಿವೃದ್ಧಿಪಡಿಸಿದೆ. ಈ ಭತ್ತದಲ್ಲಿ ಸೂಕ್ಷ್ಮ ಪೋಷಕಾಂಶಗಳಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ ಎಂಬುದು ಕೃಷಿ ವಿವಿ ಪ್ರಾಧ್ಯಾಪಕರ ಅಭಿಪ್ರಾಯವಾಗಿದೆ.

ಮಿನಿ ಟ್ಯಾಂಕರ್!
ಬೆಳೆಗಳಿಗೆ ಕೀಟನಾಶಕ ಸಿಂಪಡಣೆ ಮಾಡಲು ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆ ‘ಸಿಕೆ 700’ ಹೆಸರಿನ ಮಿನಿ ಟ್ಯಾಂಕರ್ ತಯಾರಿಸಿದೆ. ಯುದ್ಧ ಟ್ಯಾಂಕರ್ ಮಾದರಿಯ ಯಂತ್ರವನ್ನು 12 ಅಡಿ ಎತ್ತರದ ಬೆಳೆಗಳಿಗೆ ಔಷಧ ಸಿಂಪಡಿಸಲು ಬಳಸ ಬಹುದು. ಇದು ರಿಮೋಟ್ ಮೂಲಕ ಕಾರ್ಯ ನಿರ್ವಹಿಸುತ್ತದೆ.
ಅವ್ಯವಸ್ಥೆಯ ಆಗರ:ಕರೊನಾ ಸೋಂಕು ಹರಡಬಾರದು ಎಂಬ ಮುನ್ನೆಚ್ಚರಿಕೆ ಪ್ರಯುಕ್ತ ಕೃಷಿಮೇಳಕ್ಕೆ 200 ಜನರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡುವುದಾಗಿ ಆಯೋಜಕರು ತಿಳಿಸಿದ್ದರು. ಆದರೆ, ಮೊದಲ ದಿನವೇ 1 ಸಾವಿರಕ್ಕೂ ಹೆಚ್ಚಿನ ರೈತರು ಮತ್ತು ಸಾರ್ವಜನಿಕರು ಮೇಳಕ್ಕೆ ಆಗಮಿಸಿದ್ದರು. ಮೇಳಕ್ಕೆ ಬರುವವರನ್ನು ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಿಸುವುದು, ಅವರ ಮಾಹಿತಿ ಸಂಗ್ರಹಿಸುವ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ. ಬಿಬಿಎಂಪಿಯಿಂದ 4 ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಮೇಳದಲ್ಲಿ 25 ಮಳಿಗೆಗಳನ್ನು ಹಾಕಲಾಗಿತ್ತು. ಆದರೆ ಆ ಮಳಿಗೆಗಳಲ್ಲಿ ಕೃಷಿಗೆ ಅವಶ್ಯವಿರುವ ಮಾಹಿತಿಯನ್ನು ನೀಡದೆ ರೈತರು ನಿರಾಸೆ ಅನುಭವಿಸುವಂತಾಯಿತು.
ಪರಾಗ ಸ್ಪರ್ಶವಿಲ್ಲದ ತೋಟಗಾರಿಕೆ:ಹಿಂದಿನ ಕೆಲ ವರ್ಷಗಳಿಂದ ಕೃಷಿ ವಿಶ್ವವಿದ್ಯಾಲಯ ಸಮಗ್ರ ಕೃಷಿ ಪದ್ಧತಿಯ ಬಗ್ಗೆ ವಿವರಿಸುತ್ತಿದೆ. ಈ ಬಾರಿ ಕೃಷಿ ವಿವಿ ತೋಟಗಾರಿಕಾ ವಿಭಾಗ ಪರಾಗ ಸ್ಪರ್ಶವಿಲ್ಲದ, ಸಮಗ್ರ ತೋಟಗಾರಿಕಾ ಕೃಷಿ ಪದ್ಧತಿಯನ್ನು ಪರಿಚಯಿಸಿದೆ. ಅದರಂತೆ ಒಂದೇ ಜಾಗದಲ್ಲಿ ಬಾಳೆ, ಪಪ್ಪಾಯ ಮತ್ತು ಎಲೆಕೋಸು ಬೆಳೆಯನ್ನು ಬೆಳೆಯುವ ವಿಧಾನ ತಿಳಿಸಲಾಗಿದೆ. ಕ್ಯಾವೆಂಡಿಷ್ ಜಾತಿಯ ಬಾಳೆ ಮತ್ತು ‘ತೈವಾನ್ ರೆಡ್ ಲೇಡಿ’ ಹೆಸರಿನ ಪಪ್ಪಾಯಗಳಿಗೆ ಪರಾಗಸ್ಪರ್ಶದ ಅವಶ್ಯತೆಯಿಲ್ಲ. ಅವುಗಳ ನಡುವೆ ಎಲೆಕೋಸು ಹಾಕಿದರೆ, ಉತ್ತಮ ಫಸಲು ಪಡೆಯಬಹುದು.
ಮೇಳಕ್ಕೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಉಪ ಮಹಾ ನಿರ್ದೇಶಕ ಡಾ.ಎ.ಕೆ. ಸಿಂಗ್ ವರ್ಚುವಲ್ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ಕೃಷಿ ಉತ್ಪನ್ನಗಳ ಶೇಖರಣೆ ಅವಶ್ಯವಾಗಿದೆ. ಅದಕ್ಕಾಗಿ ಪ್ರತಿ ಹಳ್ಳಿಗಳಲ್ಲೂ ಗೋದಾಮು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಕೇಂದ್ರ ಸರ್ಕಾರ ರೈತರ ಅಭಿವೃದ್ಧಿಗೆ ಬದ್ಧವಾಗಿದ್ದು, ಪೂರಕ ಕ್ರಮ ಕೈಗೊಳ್ಳುತ್ತಿದೆ. ದೇಶಾದ್ಯಂತ ಏಕರೂಪ ಮಾರುಕಟ್ಟೆ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೌಷ್ಟಿಕಾಂಶವುಳ್ಳ ಬೆಳೆಗಳಿಗೆ ಒತ್ತು ನೀಡಲಾಗುತ್ತಿದೆ. 70 ಬಗೆಯ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಜನರ ಆರೋಗ್ಯ ಸುಧಾರಿಸಲಿದೆ ಎಂದು ತಿಳಿಸಿದರು. ಕೃಷಿ ವಿವಿ ಕುಲಪತಿ ಡಾ. ಎಸ್.ರಾಜೇಂದ್ರಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ

ಮೇಳ ಆಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ಕೃಷಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ದೊರೆಯುತ್ತಿದೆ. ಆದರೆ, ಕಳೆದ ಬಾರಿಯಷ್ಟು ಉತ್ತಮವಾಗಿಲ್ಲ.
|ಸತೀಶ್ಮಂಡ್ಯ

ಹಣ್ಣು ಬೆಳೆ, ಔಷಧ ಸಿಂಪಡಣೆ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿದೆ. ಆದರೆ, ಇನ್ನಷ್ಟು ಮಾಹಿತಿಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು.
|ಬಸವರಾಜುಹೆಸರಘಟ್ಟ

ಬಾಳೆ, ಅಗಸೆ ಬೀಜ ಸೇರಿ ಇನ್ನಿತರ ತಳಿಗಳ ಬಗೆಗಿನ ಸಮರ್ಪಕ ಮಾಹಿತಿಯೇ ಇಲ್ಲ. ಕೇವಲ ಪ್ರದರ್ಶನಕ್ಕೆಮೇಳವನ್ನು ಆಯೋಜಿಸಲಾಗಿದೆ. ಸಮಯ ವ್ಯರ್ಥ.
|ಸೋಮಶೇಖರ ರೆಡ್ಡಿಆನೇಕಲ್
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 − 8 =
Remember me
