| ರುದ್ರಣ್ಣ ಹರ್ತಿಕೋಟೆ ಬೆಂಗಳೂರುರಾಜ್ಯದ ವಿವಿಧೆಡೆ ಕೃಷಿ ಭೂಮಿ ಸ್ವಾಧೀನ ವಿಚಾರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆದಿರುವ ಅನ್ನದಾತರ ಪ್ರತಿಭಟನೆ, ಮುಂದಿನ ತಿಂಗಳು ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಲಕ್ಷಣಗಳು ಗೋಚರಿಸಿವೆ.
ಭೂಮಿಗೆ ಸಂಬಂಧಿಸಿದಂತೆ ರೈತರು ಮೂರು ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದಲೇ ಸರ್ಕಾರ ಏನಾದರೂ ಪರಿಹಾರ ರೂಪಿಸಬಹುದೆಂಬ ಕೊನೆಯ ಆಸೆಯ ನ್ನಿಟ್ಟುಕೊಂಡು ಎದುರು ನೋಡುತ್ತಿದ್ದಾರೆ.ಬಗರ್​ಹುಕುಂ ಸಾಗುವಳಿ, ಉದ್ದಿಮೆಗಳಿಗಾಗಿ ಸ್ವಾಧೀನ ಹಾಗೂ ಅರಣ್ಯ ಭೂಮಿ ಸಮಸ್ಯೆಗಳಿವೆ. ವಿವಿಧ ಭಾಗಗಳಲ್ಲಿ ಭೂಮಿ ಉಳಿಸಿಕೊಳ್ಳುವುದಕ್ಕೆ ರೈತರು ಹೋರಾಟ ನಡೆಸಿದ್ದಾರೆ. ನವೆಂಬರ್​ನಲ್ಲಿ ಎಲ್ಲವನ್ನೂ ಸೇರಿಸಿ ದೊಡ್ಡಮಟ್ಟದ ಹೋರಾಟಕ್ಕೆ ತೀರ್ಮಾನ ಮಾಡಿದ್ದಾರೆ.
ಎಲ್ಲಿ ಹೋರಾಟ?:ಬೆಂಗಳೂರು ಸುತ್ತಮುತ್ತ ನೈಸ್ ಅಕ್ರಮದ ಬಗ್ಗೆ ರೈತರ ಹೋರಾಟ ನಡೆದಿದೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಬಳಿಯಲ್ಲಿ ಕೈಗಾರಿಕೆಗಾಗಿ ಸ್ವಾಧೀನ ಮಾಡಿಕೊಂಡಿರುವ 1,700 ಎಕರೆ ಭೂಮಿಯನ್ನು ಬಿಟ್ಟುಕೊಡುವುದಿಲ್ಲವೆಂದು ರೈತರು 560ಕ್ಕೂ ಹೆಚ್ಚು ದಿನದಿಂದ ಹೋರಾಟ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಉಕ್ಕು ಕಾರ್ಖಾನೆಗಳಿಗಾಗಿ ಸ್ವಾಧೀನ ಮಾಡಿಕೊಂಡಿದ್ದ 12 ಸಾವಿರ ಎಕರೆ ಭೂಮಿ ಕೊಡುವುದಿಲ್ಲ ವೆಂದು ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪಟ್ಟು ಹಿಡಿದಿದ್ದಾರೆ. ಪರಿಹಾರದ ವಿಚಾರ ಸುಪ್ರೀಂಕೋರ್ಟ್ ತನಕ ಹೋಗಿತ್ತು. ಈಗ ಮಿತ್ತಲ್, ಬ್ರಹ್ಮಿಣಿ ಕಂಪೆನಿಗಳು ಹಿಂದೆ ಸರಿದಿವೆ. ತುಮಕೂರಿನಲ್ಲಿ 8 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಪ್ರಕಟವಾಗಿದೆ. ಬೆಂಗಳೂರು-ಚೆನ್ನೈ ಕಾರಿಡಾರ್, ಧಾರವಾಡದ ಸುವರ್ಣ ಕಾರಿಡಾರ್, ಗದಗ, ಬೆಳಗಾವಿಗಳಲ್ಲಿ ಭೂಮಿ ಸ್ವಾಧೀನದ ಸಮಸ್ಯೆ ಇದೆ.
ಬಗರ್​ಹುಕುಂ ಸಾಗುವಳಿಯ ಸಮಸ್ಯೆ ಇಡೀ ರಾಜ್ಯಾದ್ಯಂತ ಇದ್ದು, ಇನ್ನೂ 25 ಲಕ್ಷ ಅರ್ಜಿಗಳು ಇತ್ಯರ್ಥವಾಗಬೇಕಾಗಿದೆ. ಇದಲ್ಲದೇ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳ ನಡುವಿನ ಸಮಸ್ಯೆಯಿಂದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ತುಮಕೂರು ಜಿಲ್ಲೆಯ ಚೇಳೂರು ಹಾಗೂ ಇನ್ನೂ ಕೆಲವೆಡೆ ಸಮೀಕ್ಷೆ ನಡೆಯದೇ ಒಕ್ಕಲೆಬ್ಬಿಸುವ ಭೀತಿ ಎಂಟು-ಹತ್ತು ತಿಂಗಳಿಗೂ ಹೆಚ್ಚು ಕಾಲದಿಂದ ಕಂಡುಬಂದಿದೆ.
ರೈತರಿಗೆ ಭೂಮಿ ಇಲ್ಲ, ಉದ್ದಿಮೆದಾರರಿಗೆ ಭೂಮಿ ಎಂಬ ಭಾವನೆ ಬೆಳೆಯುತ್ತಿದೆ. ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಎರಡು ಬಾರಿ ಮನವಿ ಮಾಡಿದ್ದೇವೆ. ಆ ನಿಟ್ಟಿನಲ್ಲಿ ಸಿಎಂ ತಕ್ಷಣ ಕ್ರಮಕೈಗೊಳ್ಳಬೇಕು. ರೈತರಿಂದ ಹೊಸದಾಗಿ ಎಲ್ಲಿಯೂ ಭೂಮಿ ಕಿತ್ತುಕೊಳ್ಳಬಾರದು.
| ಜೆ.ಸಿ. ಬಯ್ಯಾರೆಡ್ಡಿ, ಪ್ರಾಂತ ರೈತ ಸಂಘ ಅಧ್ಯಕ್ಷ
ಬಗರ್​ಹುಕುಂ ರೈತರಿಗೆ ಭೂಮಿಯ ಹಕ್ಕು ನೀಡಲು ನೂರೆಂಟು ಅಡ್ಡಿಗಳಿವೆ. ಸರ್ಕಾರ ಬಡವರಿಗೆ ಭೂಮಿಯನ್ನು ಉಳಿಸಿಕೊಡುವ ಕಡೆ ಗಮನ ಹರಿಸಬೇಕು. ಒಂದು ವರ್ಷಕ್ಕೂ ಹೆಚ್ಚು ದಿನಗಳಿಂದ ರಾಜ್ಯದ ವಿವಿಧೆಡೆ ನಡೆದಿರುವ ಹೋರಾಟಗಳಿಗೆ ಸರ್ಕಾರ ರ್ತಾಕ ಅಂತ್ಯ ಕಾಣಿಸಬೇಕು.
| ಕುಮಾರ್ ಸಮತಲ ವಸತಿ, ಭೂಮಿ ಹಕ್ಕು ವಂಚಿತರ ಹೋರಾಟ ಸಮಿತಿ
ಅನಗತ್ಯ ಸ್ವಾಧೀನ ಮಾಡಿಕೊಂಡು ರೈತರನ್ನು ವಂಚಿಸುವುದಕ್ಕೆ ಕೆಐಎಡಿಬಿ ತೆರೆ ಎಳೆಯಬೇಕು. ಇದುವರೆಗೂ ಬಳಕೆಯಾಗಿರುವ ಭೂಮಿಯ ಕುರಿತು ಶ್ವೇತಪತ್ರ ಹೊರಡಿಸಬೇಕು. ರೈತರಿಂದ ಭೂಮಿ ಕಿತ್ತುಕೊಳ್ಳುವ ದಾಹ ನಿಲ್ಲಬೇಕು.
| ಯಶವಂತ್, ರೈತಪರ ಹೋರಾಟಗಾರ
ಸಮಸ್ಯೆ ಹೇಗೆ?:ಉದ್ದಿಮೆಗಳಿಗಾಗಿ 1995 ರಿಂದ ಕೆಐಎಡಿಬಿ ಭೂಮಿ ವಶಪಡಿಸಿಕೊಳ್ಳುತ್ತಿದೆ. ಸ್ವಾಧೀನಕ್ಕೆ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿರುವ ಪೈಕಿ ಅಂದಾಜು 2 ಲಕ್ಷ ಎಕರೆ ಬಳಕೆಯೇ ಆಗಿಲ್ಲವೆಂಬ ಮಾಹಿತಿ ಇದೆ. ಆದರೂ ಮತ್ತೆ ಮತ್ತೆ ಬೇರೆ ಕಡೆಗಳಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಕೆಲಸ ನಡೆದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. 2 ವರ್ಷದಲ್ಲಿ ಬಳಕೆಯಾಗದಿದ್ದರೆ ವಾಪಸ್ ಪಡೆಯಬೇಕೆಂಬ ನಿಯಮ ಜಾರಿಯಾಗುತ್ತಿಲ್ಲವೆಂಬುದು ರೈತರ ಸಿಟ್ಟು. ಆದ್ದರಿಂದಲೇ ಕೆಐಎಡಿಬಿ ಇದುವರೆಗೂ ವಶಪಡಿಸಿಕೊಂಡು ಬಳಕೆಯಾಗಿರುವ ಜಮೀನಿನ ಕುರಿತು ಶ್ವೇತಪತ್ರ ಹೊರಡಿಸುವಂತೆ ಒತ್ತಾಯವೂ ಇದೆ.
ಬಗರ್​ಹುಕುಂನಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಆರು ತಿಂಗಳಿನಲ್ಲಿ ವಿಲೇವಾರಿ ಮಾಡುವಂತೆ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಬಹುತೇಕ ಅರ್ಜಿಗಳು ಬಗರ್​ಹುಕುಂ ಹಾಗೂ ಅರಣ್ಯ ಸಮಿತಿಗಳ ಮುಂದಿವೆ. ಅವುಗಳಲ್ಲಿ ಶೇ.80ರಷ್ಟು ಗೊಂದಲದಲ್ಲಿವೆ. ನಗರ ಪ್ರದೇಶಗಳ ಸುತ್ತಮುತ್ತ ಇಂತಿಷ್ಟು ಕಿ.ಮೀ. ವ್ಯಾಪ್ತಿಯಲ್ಲಿ ಸಕ್ರಮ ಮಾಡುವಂತಿಲ್ಲ ಎಂದಿದೆ. ಅಂತಹ ಪ್ರದೇಶದಲ್ಲಿ ಅಂದಾಜು 80 ಸಾವಿರ ಎಕರೆಯಷ್ಟು ರೈತರ ಸ್ವಾಧೀನದಲ್ಲಿದೆ. ಇಂತಹ ಕಡೆ ಏನು ಮಾಡಬೇಕೆಂಬ ಪ್ರಶ್ನೆಯೂ ಇದೆ. ನಿಯಮದ ಪ್ರಕಾರ ಸಕ್ರಮ ಮಾಡಲಾಗದು ಎಂಬ ವಾದ ಸರ್ಕಾರದ್ದು. ಆರು ತಿಂಗಳಲ್ಲಿ ವಿಲೇವಾರಿ ಎಂಬುದೇ ಭೂಮಿಯನ್ನು ಕಿತ್ತುಕೊಳ್ಳುವ ಪ್ರಯತ್ನವೆಂಬ ಅಭಿಪ್ರಾಯ ರೈತರಲ್ಲಿ ಬೇರೂರಿದೆ. ಒತ್ತುವರಿ ತೆರವು ಮಾಡುವ ರೀತಿಯಲ್ಲಿ ತೆರವಾದರೆ ಗತಿ ಏನು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.
ನಿಗದಿಯಾಗದ ಸಭೆ:ಭೂಮಿಯ ಸಮಸ್ಯೆಯನ್ನು ರೈತ ಸಂಘಟನೆಗಳ ಪ್ರಮುಖರು ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿ ಗಮನಕ್ಕೂ ತಂದಿದ್ದಾರೆ. ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೂ ಸಭೆ ನಿಗದಿಯಾಗಿಲ್ಲವೆಂಬುದು ರೈತ ಸಂಘಟನೆಗಳ ಆಕ್ರೋಶವಾಗಿದೆ.
ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ವಿವಾದ; ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ

ಹಮಾಸ್​ ದಾಳಿ: ಐವರು ಹಂತಕರನ್ನು ಸ್ವತಃ ಕೊಂದ ಎದೆಗಾತಿ; 20 ಉಗ್ರರ ಹತ್ಯೆಗೆ ನೇತೃತ್ವ ವಹಿಸಿದ ದಿಟ್ಟ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − four =
Remember me
