| ಪರಶುರಾಮ ಭಾಸಗಿ ವಿಜಯಪುರ
ರೈತರಿಗೆ ಬೆಳೆಸಾಲ, ರಾಸಾಯನಿಕ ಗೊಬ್ಬರ, ಔಷಧ, ಬಿತ್ತನೆ ಬೀಜ ಮುಂತಾದವುಗಳನ್ನು ಪೂರೈಸುವ ಮೂಲಕ ಕೃಷಿಯಲ್ಲಿ ಕ್ರಾಂತಿ ರೂಪಿಸುವುದರಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಭ್ರಷ್ಟಾಚಾರದ ಕೂಪಗಳಾಗುತ್ತಿವೆ!
ಹೌದು, ಬಬಲೇಶ್ವರ ತಾಲೂಕಿನ ಸಾರವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಬರೋಬ್ಬರಿ 1,76,18,014.44 (ಒಂದು ಕೋಟಿ ಎಪ್ಪತ್ತಾರು ಲಕ್ಷ ಹದಿನೆಂಟು ಸಾವಿರದ ಹದಿನಾಲ್ಕು ರೂಪಾಯಿ ನಲ್ವತ್ನಾಲ್ಕು ಪೈಸೆ) ದುರುಪಯೋಗ ಪಡಿಸಿಕೊಳ್ಳಲಾಗಿದೆ.
2021-22ನೇ ಸಾಲಿನ ಶಾಸನಬದ್ದ ಆಡಿಟ್ ವರದಿಯಲ್ಲಿ ಈ ಅಂಶ ಪತ್ತೆಯಾಗಿದ್ದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ಮಲ್ಲಪ್ಪ ಪಾರಶೆಟ್ಟಿ ಹಾಗೂ ಲೆಕ್ಕಿಗ ಶಿವಾನಂದ ಊರ್ಫ್ ಶಿವನಗೌಡ ಶ್ರೀಶೈಲ ಪಾರಶೆಟ್ಟಿ ಆರೋಪಿಯಾಗಿದ್ದಾರೆ. ಸಂಘದ ಉಪಾಧ್ಯಕ್ಷ ಬಸನಗೌಡ ರಾಮನಗೌಡ ಬಿರಾದಾರ ಎಂಬುವರು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.
ಸಾರವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ಮಲ್ಲಪ್ಪ ಪಾರಶೆಟ್ಟಿ ಹಾಗೂ ಲೆಕ್ಕಿಗ ಶಿವಾನಂದ ಊರ್ಫ್ ಶಿವನಗೌಡ ಶ್ರೀಶೈಲ ಪಾರಶೆಟ್ಟಿ ಸಾಮೂಹಿಕವಾಗಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. 2021-22ನೇ ಸಾಲಿಗೆ ಸಂಬಂಧಿಸಿದಂತೆ ಇಬ್ಬರೂ ಹಣ ದುರ್ಬಳಿಕೆ ಮಾಡಿಕೊಂಡಿದ್ದು, ಇದರಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ಮಲ್ಪಪ್ಪ ಪಾರಶೆಟ್ಟಿ ಮೃತರಾಗಿದ್ದಾರೆ. ಹೀಗಾಗಿ ಈಗಿರುವ ಹಣದ ದುರ್ಬಳಿಕೆಗೆ ಸಂಬಂಧಿಸಿದಂತೆ ಲೆಕ್ಕಿಗ ಶಿವಾನಂದ ಊರ್ಫ್ ಶಿವನಗೌಡ ಶ್ರೀಶೈಲ ಪಾರಶೆಟ್ಟಿ ಅವರನ್ನು ಸಂಪೂರ್ಣ ಜವಾಬ್ದಾರರನ್ನಾಗಿಸಲಾಗಿದೆ.ಈ ಹಿಂದೆಯೇ ಅಂದರೆ 2023 ಆ.31ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಶಿವಾನಂದನ ಮೇಲೆ ಪ್ರಕರಣ ದಾಖಲಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಆ ಬಗ್ಗೆ ಠರಾವು ಕೂಡ ಮಂಡಿಸಲಾಗಿತ್ತು. ಬಳಿಕ 2023, ಸೆ.2ರಂದು ಬಬಲೇಶ್ವರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಹಣ ದುರುಪಯೋಗ ಆಗಿರುವುದು ಆಡಿಟ್ ರಿಪೋರ್ಟ್‌ನಲ್ಲಿ ತಿಳಿದು ಬಂತು. ಹಣ ಮರುಪಾವತಿಸಲು ಸಮಯಾವಕಾಶ ಕಲ್ಪಿಸಲಾಗಿತ್ತು. ಹಣ ಸಂದಾಯ ಮಾಡಲಾಗಲ್ಲ ಎಂದು ಹೇಳಿದ್ದರಿಂದ ದೂರು ದಾಖಲಿಸಲಾಗಿದೆ. ಇಲಾಖೆಯ ಆಂತರಿಕ ನ್ಯಾಯಾಲಯದ ಮುಂದೆ ಪ್ರಕರಣದ ವಿಚಾರಣೆ ನಡೆಯುತ್ತಿದೆ.|ಬಸನಗೌಡ ರಾಮನಗೌಡ ಬಿರಾದಾರ, ದೂರುದಾರ
ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದೆ. ಈಗಾಗಲೇ ಪಿಕೆಪಿಎಸ್‌ನ ಸೆಕ್ರೆಟರಿಯನ್ನು ಬದಲು ಮಾಡಲಾಗಿದೆ. ಆರೋಪಿತರ ಆಸ್ತಿಯನ್ನು ಆದೇಶ ಪೂರ್ವ ಜಫ್ತಿ (ಎಬಿಜೆ) ಮಾಡಿಕೊಳ್ಳಲಾಗಿದೆ. ಅಂದರೆ, ಪೂರ್ವಾನುಮತಿ ಇಲ್ಲದೇ ಆರೋಪಿತರ ಆಸ್ತಿಯನ್ನು ಪರಭಾರೆ ಮಾಡದಂತೆ ಕ್ರಮ ವಹಿಸಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.|ಚೇತನ ಭಾವಿಕಟ್ಟಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ವಿಜಯಪುರ
ಸಂಘದ ಉಪ ಹಣಕಾಸು ಖಾತೆ (ಕ್ಯಾಶ್‌ಬುಕ್)ನಿಂದ ಮುಖ್ಯ ಹಣಕಾಸು ಖಾತೆಗೆ ಹಣವನ್ನು ಸರಿಯಾಗಿ ಜಮಾ ತೆಗೆದುಕೊಳ್ಳದೇ ಸಂಘದ ನಗದು ಶಿಲ್ಕಿನಲ್ಲಿ ವ್ಯತ್ಯಾಸ ಮಾಡಿ 16,82,848 ರೂಪಾಯಿ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಉಪ ಹಣಕಾಸು ಖಾತೆಯಲ್ಲಿ ಜಮಾ ಖರ್ಚಿನ ಬದಿಯಲ್ಲಿ ತಪ್ಪಾಗಿ ಲೆಕ್ಕ ಮಾಡಿ ಶಿಲ್ಕಿನಲ್ಲಿ ವ್ಯತ್ಯಾಸವುಂಟು ಮಾಡಿ 7,30,028 ರೂಪಾಯಿ ದುರುಪಯೋಗ ಮಾಡಿಕೊಂಡಿದ್ದಾರೆ. ಗೊಬ್ಬರ ಸ್ಟಾಕ್‌ದಲ್ಲಿ ಕೊರತೆಯನ್ನುಂಟು ಮಾಡಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. 2021-22ನೇ ಸಾಲಿನಲ್ಲಿ ಸಾಲ ಮತ್ತು ಠೇವು ಯಾದಿಗೆ ಹಾಗೂ ಅಡಾವೆಗೆ ಅಂತರ ಮಾಡಿ 1,39,45,538-44 ರೂಪಾಯಿ ಸೇರಿ ಒಟ್ಟು 1,76,18, 014-44 ರೂಪಾಯಿ ದುರುಪಯೋಗ ಪಡಿಸಿಕೊಳ್ಳಲಾಗಿದೆ.ಈ ಎಲ್ಲ ಹಣ ರೈತರು ಹಾಗೂ ಸರ್ಕಾರಕ್ಕೆ ಸಂಬಂಧಿಸಿದ್ದಾಗಿರುತ್ತದೆ. ರೈತರಿಂದ ಎಫ್‌ಡಿ ಇರಿಸಿಕೊಂಡಿದ್ದು, ಸಾಲದ ಮೇಲಿನ ಬಡ್ಡಿ ಹಣ, ಫಿಗ್ನಿಗೆ ಸಂಬಂಧಿಸಿದಂತೆ ಸಂಗ್ರಹಗೊಂಡ ಹಣವಾಗಿದೆ. ದುರುಪಯೋಗಪಡಿಸಿಕೊಂಡ ಹಣ ಕೂಡಲೇ ಪಾವತಿಸುವಂತೆ ಈ ಮುಂಚೆಯೆ ಸೂಚಿಸಲಾಗಿದೆ. ಆದರೆ, ಗಡುವು ಮುಗಿದರೂ ಹಣ ಪಾವತಿಸದ ಹಿನ್ನೆಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉಪಾಧ್ಯಕ್ಷ ಬಸನಗೌಡ ರಾಮನಗೌಡ ಬಿರಾದಾರ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
