ಬೆಂಗಳೂರು:ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೂರು ಕೃಷಿ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ, ಕರ್ನಾಟಕ ಭೂ ಸುಧಾರಣೆ ವಿಧೇಯಕವನ್ನು ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಪ್ರತಿಪಕ್ಷದ ಆಕ್ರೋಶ ಹಾಗೂ ಆಡಳಿತ ಪಕ್ಷದ ಕೆಲ ಸದಸ್ಯರ ಅಸಮಾಧಾನದ ನಡುವೆ ಕಂದಾಯ ಸಚಿವ ಆರ್. ಅಶೋಕ್ ವಿಧೇಯಕ ಮಂಡಿಸಿದರು. ಕಳೆದ ಕೆಲವು ತಿಂಗಳಿನಿಂದ ರಾಜ್ಯದ ರೈತ ಸಮುದಾಯದಲ್ಲೂ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಕೃಷಿ ಭೂಮಿ ಖರೀದಿಗೆ ಇರುವ ಎಲ್ಲ ನಿಬಂಧನೆಗಳನ್ನು ಮುಕ್ತಗೊಳಿಸುವ ಈ ತಿದ್ದುಪಡಿಯನ್ನು ಸರ್ಕಾರ ಈಗಾಗಲೇ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದೆ. ಅದನ್ನು ಕಾನೂನು ಮಾಡಿಕೊಳ್ಳಲು ವಿಧಾನಮಂಡಲದಲ್ಲಿ ಮಂಡಿಸಿದೆ. ಚರ್ಚೆಯ ನಂತರ ಇದು ಅಂಗೀಕಾರವಾಗಬೇಕಾಗಿದೆ.
ಸರ್ಕಾರದ ಸಮರ್ಥನೆ:ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ 1961ರ 79ಎ ಮತ್ತು 79ಬಿ ಪ್ರಕರಣದ ಉಪಬಂಧಗಳ ಉಲ್ಲಂಘನೆಗಳಿಗಾಗಿ ಕೆಲವು ಪ್ರಕರಣ ನೋಂದಣಿಯಾಗಿದೆ.
ಕೃಷಿ ಭೂಮಿಯ ಖರೀದಿಗಾಗಿ ಇರುವ ನಿರ್ಬಂಧವನ್ನು ತೆಗೆದುಹಾಕಲು ಭಾರಿ ಪ್ರಮಾಣದಲ್ಲಿ ಮನವಿ ಸ್ವೀಕರಿಸುತ್ತಿರುವುದರಿಂದ ಈ ತಿದ್ದುಪಡಿ ವಿಧೇಯಕ ಮಂಡಿಸುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ.
ವಿಧಾನ ಪರಿಷತ್​ನ ಸವಾಲು:ವಿಧಾನಸಭೆಯಲ್ಲಿ ಆಡಳಿತ ಪಕ್ಷಕ್ಕೆ ಸಂಖ್ಯಾಬಲ ಇದೆ. ಆದ್ದರಿಂದ ವಿಧೇಯಕಗಳು ಸುಲಭವಾಗಿ ಅಂಗೀಕಾರವಾಗುತ್ತವೆ. ಆದರೆ ನಿಜವಾದ ಸವಾಲು ಇರುವುದು ವಿಧಾನ ಪರಿಷತ್​ನಲ್ಲಿ. ಅಲ್ಲಿ ಬಿಜೆಪಿಯ ಬಲ ಕೇವಲ 27. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ವಿಧೇಯಕ ಅಂಗೀಕಾರವಾಗಲು ಬಿಡದಿದ್ದರೆ ಸರ್ಕಾರಕ್ಕೆ ಮುಜುಗರ ಆಗಲಿದೆ. ವಿಧಾನಸಭೆಯಲ್ಲಿ ಮತ್ತೊಮ್ಮೆ ಅಂಗೀಕಾರ ಮಾಡಲು ಅವಕಾಶ ಇದೆ. ಆದರೆ ವಿಧಾನ ಪರಿಷತ್​ನಲ್ಲಿಯೇ ಜಂಟಿ ಪರಿಶೀಲನಾ ಸಮಿತಿಗೆ ಒಪ್ಪಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಆಡಳಿತ ಪಕ್ಷದ ಮುಖಂಡರ ಅಸಮಾಧಾನ!:ಆಡಳಿತ ಪಕ್ಷದ ಕುಮಾರ ಬಂಗಾರಪ್ಪ ಹಾಗೂ ಕೆಲ ಶಾಸಕರು ವಿಧೇಯಕ ಮಂಡನೆ ನಂತರ ಕಂದಾಯ ಸಚಿವ ಅಶೋಕ್ ಬಳಿ ಅಸಮಾಧಾನ ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ವಿಧೇಯಕ ಬೇಕಾಗಿರಲಿಲ್ಲ. ರಾಜ್ಯದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ಮುಖ್ಯಮಂತ್ರಿ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಕೆಲ ಶಾಸಕರು ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ ಸೇರಿ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಯುತ್ತಿದೆ. ಈ ವಿಧೇಯಕದ ಬಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಚರ್ಚೆ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಹೋರಾಟ:ಬೆಂಗಳೂರಿನಲ್ಲಿ ಎರಡು ದಿನಗಳಿಂದ ರೈತರು ಬೃಹತ್ ಹೋರಾಟ ನಡೆಸುತ್ತಿದ್ದಾರೆ. ಪರ್ಯಾಯ ಅಧಿವೇಶನದ ಮೂಲಕ ತಿದ್ದುಪಡಿ ವಿರೋಧಿಸುವ ನಿರ್ಣಯ ಅಂಗೀಕಾರ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಇನ್ನಿತರ ಮುಖಂಡರು ಭೇಟಿ ನೀಡಿ, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಕೈಗಾರಿಕೆಗಳ ವಿಧೇಯಕ ಮಂಡನೆ
ಕೈಗಾರಿಕೆಗಳಿಗೆ ಪೋ›ತ್ಸಾಹ ನೀಡಲು ಈ ಹಿಂದೆ ಸುಗ್ರೀವಾಜ್ಞೆ ಜಾರಿ ಮಾಡಿದ್ದ ಸರ್ಕಾರ ಇದೀಗ ನಿಯಮದಂತೆ ವಿಧೇಯಕವನ್ನು ಶಾಸನ ಸಭೆ ಮುಂದೆ ಮಂಡಿಸಿದೆ. 2019ರಲ್ಲಿ ಗುಜರಾತ್ ಮತ್ತು ರಾಜಸ್ಥಾನ ರಾಜ್ಯ ಸರ್ಕಾರಗಳು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಸ್ಥಾಪಿಸಲು ಕೆಲವು ಅನುಮೋದನೆ ಮತ್ತು ತಪಾಸಣೆಗಳಿಂದ ವಿನಾಯಿತಿ ನೀಡಲು ಅಧ್ಯಾದೇಶ ಪರಿಚಯಿಸಿದ್ದವು. ಅದೇ ಮಾದರಿಯನ್ನು ಕರ್ನಾಟಕವೂ ಅನುಸರಿಸಿದೆ.
ತಿದ್ದುಪಡಿಗೆ ಕಾಂಗ್ರೆಸ್ ವಿರೋಧ
ಡಿ. ದೇವರಾಜ ಅರಸು ಜಾರಿಗೊಳಿಸಿದ ಉಳುವವನೆ ಹೊಲದ ಒಡೆಯ ಕಾಯ್ದೆಯು, ಉಳ್ಳವನೇ ಹೊಲದ ಒಡೆಯ ಎಂಬುದಾಗಿ ಬದಲಾಗಬಹುದು ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಐಕ್ಯ ಹೋರಾಟ ಸಮಾವೇಶದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸೇವಾ ವಲಯದ ಆದಾಯ ಕೇವಲ ಶೇ.20. ಕೃಷಿ ವಲಯ ಶೇ. 27 ರಿಂದ 28 ಆದಾಯ ನೀಡುತ್ತದೆ. ಕೃಷಿ ಭೂಮಿಯನ್ನು ರೈತರಿಂದ ಕಿತ್ತುಕೊಂಡು ಕಾಪೋರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಬಿಜೆಪಿ ಸರ್ಕಾರ ನಿಂತಿದೆ . 79ಎ ಅಡಿಯಲ್ಲಿ 13,814 ಪ್ರಕರಣ ದಾಖಲಾಗಿದ್ದವು. ಈಗ ಅದಕ್ಕೆಲ್ಲ ಎಳ್ಳುನೀರು ಬಿಡಲಾಗಿದೆ. ಅನುಚ್ಛೇದ 63ರ ಪ್ರಕಾರ ಒಬ್ಬರಿಗೆ 10,20,30,40 ಯೂನಿಟ್​ಗಿಂತ ಹೆಚ್ಚಿರಬಾರದು ಎಂಬ ನಿಯಮವಿತ್ತು. ಆದರೆ, ಪ್ರಸ್ತುತ ಅದನ್ನು ದುಪ್ಪಟ್ಟು ಮಾಡುವುದಲ್ಲದೆ, ಯಾರು ಹೇಗೆ ಬೇಕಾದರೂ ರೈತರ ಭೂಮಿಯನ್ನು ಕಸಿದುಕೊಳ್ಳುವಂತಹ ತಿದ್ದುಪಡಿ ತಂದಿರುವುದು ಖಂಡನೀಯ ಎಂದರು.
ತಿದ್ದುಪಡಿಗಳೇನು?
ರೈತರ ಹಕ್ಕೊತ್ತಾಯಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eleven =
Remember me
