ಬೆಂಗಳೂರು:ಈ ಸಲ ಮುಂಗಾರು ವಾಡಿಕೆಗಿಂತ ತಡವಾಗಿ ರಾಜ್ಯಕ್ಕೆ ಆಗಮಿಸಿ ಆರಂಭದಲ್ಲೇ ದುರ್ಬಲಗೊಂಡ ಪರಿಣಾಮ ಇನ್ನೂ ಕೃಷಿ ಚಟುವಟಿಕೆಗಳು ಆರಂಭವಾಗಿಲ್ಲ ಅಥವಾ ಕುಂಠಿತಗೊಂಡಿವೆ. ಮೇನಲ್ಲಿ ಅಲ್ಪಸ್ವಲ್ಪ ಬಿದ್ದ ಮುಂಗಾರುಪೂರ್ವ ಮಳೆಯಿಂದಾಗಿ ಜಮೀನು ಹದಗೊಳಿಸಿದ್ದ ರೈತರು ಪ್ರಸಕ್ತ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಕಾರ್ಯ ನಡೆಸಿದ್ದರು. ಇನ್ನೂ ಮಳೆಯಾಗದ ಹಿನ್ನೆಲೆ ಬೆಳೆಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಈ ನಡುವೆ, ಸೋಮವಾರದಿಂದ ಮಳೆ ಚುರುಕಾಗಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೈತರ ಚಿತ್ತ ಆಗಸದತ್ತ ನೆಟ್ಟಿದೆ.
ಬೆಂಗಳೂರು ಗ್ರಾಮಾಂತರ ದಲ್ಲಿ ಮುಂಗಾರು ಹಂಗಾಮಿನಲ್ಲಿ 71,246 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಅಂದಾಜಿಸಲಾಗಿದೆ. 59,100 ಹೆಕ್ಟೇರ್​ನಲ್ಲಿ ರಾಗಿ, 8,136 ಹೆಕ್ಟೇರ್ ಜೋಳ, 948 ಹೆಕ್ಟೇರ್ ತೊಗರಿ, 215 ನೆಲಗಡಲೆ ಬಿತ್ತನೆ ನಿರೀಕ್ಷಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಪ್ರಸ್ತುತ 1.54 ಲಕ್ಷ ಹೆಕ್ಟೇರ್ ಗುರಿಗೆ 152 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಹುತೇಕ ಕಡೆ ಅಂತರ್ಜಲ ಮಟ್ಟ ಕುಸಿದಿದ್ದು, ನೀರಿನ ಅಭಾವ ಎದುರಾಗುತ್ತಿದೆ.
ಕೋಲಾರದಲ್ಲಿ ಈ ಬಾರಿ ಮುಂಗಾರುಪೂರ್ವ ಮಳೆ ಉತ್ತಮವಾಗಿದೆ. 10,980 ಹೆಕ್ಟೇರ್​ನಲ್ಲಿ ನೆಲಗಡಲೆ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ, ಮಳೆ ಕೊರತೆಯಿಂದ 53 ಹೆಕ್ಟೇರ್​ನಲ್ಲಿ ಮಾತ್ರ ನೆಲಗಡಲೆ, ಎಳ್ಳು ಬಿತ್ತನೆ ಮಾಡಲಾಗಿದೆ. ತುಮಕೂರಲ್ಲಿ ಮಳೆ ಅಭಾವದಿಂದಾಗಿ ಮುಂಗಾರಿಗೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದ್ದರೂ ಕೃಷಿ ಚಟುವಟಿಕೆ ಆರಂಭವಾಗಿಲ್ಲ. ರಾಮನಗರ ಜಿಲ್ಲೆ ಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದ್ದರೂ ಕೃಷಿ ಚಟುವಟಿಕೆ ಆರಂಭವಾಗಿಲ್ಲ.
92,655 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಪೂರ್ವ ಮುಂಗಾರಿನಲ್ಲಿ 1,414 ಹೆಕ್ಟರ್ ಪ್ರದೇಶದಲ್ಲಿ ಎಳ್ಳು ಇತರ ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಮಳೆ ಬೇಕಾಗಿದೆ. ಮಳೆಯಾಶ್ರಿತ ಚಾಮರಾಜನಗರದಲ್ಲಿ ಹಲಸು, ಉದ್ದು, ಸೂರ್ಯಕಾಂತಿ, ಹೆಸರುಕಾಳು, ಜೋಳ ಬಿತ್ತಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಾಗದಿದ್ದರೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಲಿದೆ. ಮಂಡ್ಯದಲ್ಲಿ ಪೂರ್ವಮುಂಗಾರು ಹಾಗೂ ಮುಂಗಾರು ಕೈ ಕೊಟ್ಟಿದ್ದರಿಂದ ಶೇ.9ರಷ್ಟು ಬಿತ್ತನೆ ಕಾರ್ಯವಷ್ಟೇ ನಡೆದಿದೆ. ಬೆಳೆದು ನಿಂತಿರುವ ಕಬ್ಬನ್ನು ಉಳಿಸುವ ನಿಟ್ಟಿನಲ್ಲಿ ಕೆಆರ್​ಎಸ್ ಡ್ಯಾಂನಿಂದ ನಾಲೆಗಳಿಗೆ ನೀರು ಹರಿಸಲಾಗಿದೆ. ಮೈಸೂರು ಭಾಗದಲ್ಲಿ ಬರದ ಛಾಯೆ ಇದೆ. ಕುಡಿಯುವ ನೀರಿಗೆ ಸದ್ಯಕ್ಕೆ ತೊಂದರೆ ಇಲ್ಲ.
ಶಿವಮೊಗ್ಗ ಜಿಲ್ಲೆಯಾದ್ಯಂತ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಜಿಲ್ಲೆಯಲ್ಲಿ 77,640 ಹೆಕ್ಟೇರ್ ಭತ್ತ, 48,770 ಹೆಕ್ಟೇರ್ ಮುಸುಕಿನ ಜೋಳ, 490 ಹೆಕ್ಟೇರ್ ಏಕದಳ, 415 ಹೆಕ್ಟೇರ್ ದ್ವಿದಳ ಧಾನ್ಯ ಮತ್ತು 1,223 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು, ವಾಣಿಜ್ಯ ಬೆಳೆಗಳ ಕೃಷಿಗೆ ಸಿದ್ಧತೆ ನಡೆದಿದೆ. ಅರ್ಧ ಜೂನ್ ಕಳೆದರೂ ಮಲೆನಾಡಿಗೆ ಮುಂಗಾರು ಕಾಲಿಟ್ಟಿಲ್ಲ. ಚಿಕ್ಕಮಗಳೂರಲ್ಲಿ ಮುಂಗಾರುಪೂರ್ವದಲ್ಲಿ ಆದ ಅಲ್ಪ ಮಳೆಗೆ ಕೆಲ ರೈತರು ಜಮೀನನ್ನು ಹದ ಮಾಡಿಕೊಂಡಿದ್ದು, ಬಿತ್ತನೆ ಮಾಡಲು ಮಳೆಗೆ ಎದುರು ನೋಡುವಂತಾಗಿದೆ. ಕಾಫಿ ಫಸಲು ಕಟ್ಟುತ್ತಿದ್ದು ಮಳೆಯಿಲ್ಲದ ಕಾರಣದಿಂದ ತೇವಾಂಶವಿಲ್ಲದೆ ಹೂಗಳೆಲ್ಲ ಒಣಗುತ್ತಿವೆ. ಕಾವೇರಿ ಕಣಿವೆ ಕೊಡಗಿನ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಒಣಗುತ್ತಿದೆ. ಭತ್ತ ಬೆಳೆಯಲು ಈ ದಿನಗಳಲ್ಲಿ ನಡೆಸಬೇಕಿದ್ದ ಪೂರ್ವ ಸಿದ್ಧತೆಗೆ ಮಳೆ ಕೊರತೆಯಿಂದ ಅಡ್ಡಿಯಾಗಿದೆ. ಮಧ್ಯೆಮಧ್ಯೆ ಮಳೆ ಬಂದಿದ್ದರಿಂದ ಕಾಫಿ ಮತ್ತು ಕರಿಮೆಣಸಿಗೆ ಸದ್ಯಕ್ಕೆ ತೊಂದರೆ ಇಲ್ಲ. ಹಾಸನದಲ್ಲಿ 2.45 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ 69 ಸಾವಿರ ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದೆ.
ಕರಾವಳಿಯಲ್ಲೂ ಕೃಷಿ ಕುಂಠಿತ:ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಈ ಬಾರಿ 47,390 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಗುರಿ ಹೊಂದಲಾಗಿದೆ. ಇನ್ನೂ ಕೃಷಿ ಚಟುವಟಿಕೆ ಶುರುವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ, ಮುಂಡಗೋಡ ಭಾಗದಲ್ಲಿ ಒಣ ಬೇಸಾಯದ ಭತ್ತ, ಕಬ್ಬು ಕಮರುತ್ತಿದೆ. ಕೆರೆಗಳು ಒಣಗಿವೆ. ಕೆಲವೆಡೆ ಅಡಕೆ ತೋಟಕ್ಕೆ ಹಾನಿಯಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಇಂಥ ಗಂಭೀರ ಪರಿಸ್ಥಿತಿ ಸೃಷ್ಟಿಯಾಗಿದೆ.
ಮಳೆರಾಯನ ಜಪ:ಬೆಳಗಾವಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ನೆಲಕಚ್ಚಿದ್ದು, ಟ್ಯಾಂಕರ್ ಮೂಲಕ ನೀರುಣಿಸುತ್ತಿದ್ದಾರೆ. ಕೃಷ್ಣಾ ತೀರದ ಚಿಕ್ಕೋಡಿ ಭಾಗದ ಪ್ರದೇಶಗಳ ಜನ ಮತ್ತು ಜಾನುವಾರುಗಳಿಗೆ ನೀರಿನ ಅಭಾವ ಎದುರಾಗಿದೆ. ನೀರಿನ ಅಭಾವದಿಂದಾಗಿ ಬೆಳಗಾವಿಯಲ್ಲಿನ ಸೇಂಟ್ ಪಾಲ್ ಶಾಲೆ ಭೌತಿಕ ತರಗತಿಗೆ ವಿದಾಯ ಹೇಳಿ, ಆನ್​ಲೈನ್ ತರಗತಿ ಆರಂಭಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಬಿತ್ತನೆ ಚಟುವಟಿಕೆಗಳಿಗೆ ಗ್ರಹಣ ಹಿಡಿದಿದೆ. ಭೀಮಾ ನದಿ ಒಣಗುತ್ತಿದೆ. ನಗರದಲ್ಲಿರುವ ಅಪ್ಪನ ಕೆರೆ ಸಹ ಒಣಗಲು ಆರಂಭಿಸಿದೆ. ಹಳ್ಳಿಗಳಲ್ಲಿನ ಹಳ್ಳಗಳು ಸಂಪೂರ್ಣ ಒಣಗಿವೆ. ಗಡಿ ಜಿಲ್ಲೆ ಬೀದರ್​ನಲ್ಲಿ ಕೇವಲ ಶೇ.3 ಬಿತ್ತನೆಯಾಗಿದೆ. ಯಾದಗಿರಿಯಲ್ಲಿ ಮಳೆರಾಯನ ಸುಳಿವು ಕಾಣಿಸುತ್ತಿಲ್ಲ. ಇಷ್ಟೊತ್ತಿಗಾಗಲೇ ಮೃಗಶಿರ ಮಳೆ ಬಿದ್ದು ರೈತಾಪಿ ವರ್ಗ ಹೆಸರು ಬಿತ್ತನೆಯಲ್ಲಿ ಮಗ್ನರಾಗಿರುತ್ತಿದ್ದರು.
ಬೀಜ ಖರೀದಿಗೆ ನಿರಾಸಕ್ತಿ:ರಾಯಚೂರಲ್ಲಿ ಬಿತ್ತನೆ ಕಾರ್ಯ ಆರಂಭವಾಗಿಲ್ಲ. 5.41 ಲಕ್ಷ ಹೆಕ್ಟೇರ್ ಪೈಕಿ ಶೇ.10 ಕೂಡ ಬಿತ್ತನೆಯಾಗಿಲ್ಲ. ಜಲಾಶಯದಿಂದ ನೀರು ಹರಿಸುವವರೆಗೆ ಭತ್ತ ನಾಟಿಯೂ ತಡವಾಗಲಿದೆ. ಜಿಲ್ಲೆಯ ಎಡಬಲದಲ್ಲಿ ನದಿಗಳು ಹರಿಯುತ್ತಿದ್ದರೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಂಕಷ್ಟ ತಲೆದೋರಿದೆ. ಬಳ್ಳಾರಿಯಲ್ಲೂ ಮುಂಗಾರು ಬಿತ್ತನೆ ಕುಂಠಿತಗೊಂಡಿದೆ. 1.73 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಮುಂಗಾರು ಪೂರ್ವದಲ್ಲಾದ ಮಳೆಯಿಂದಾಗಿ ಶೇ.10 ರೈತರು ಬಿತ್ತನೆ ಮಾಡಿದ್ದರು. ವಿಜಯನಗರದಲ್ಲಿ ಬಿತ್ತನೆ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಜಿಲ್ಲೆಯ 2.89 ಲಕ್ಷ ಹೆಕ್ಟರ್ ಬಿತ್ತನೆ ಗುರಿಯಲ್ಲಿ ಕೇವಲ 3,325 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕೊಪ್ಪಳದಲ್ಲಿ ಮಳೆ ಕೊರತೆಯಿಂದ ಶೇ.25ರ ಬದಲು ಶೇ.11 ಬಿತ್ತನೆಯಾಗಿದೆ. ಪೂರ್ವ ಮುಂಗಾರಿನಲ್ಲಿ ಹೆಸರು ಬಿತ್ತನೆಯಾಗಿದ್ದು, ನೀರಿಲ್ಲದೆ ಒಣಗುತ್ತಿದೆ. ದಾವಣಗೆರೆಯಲ್ಲೂ ಬಿತ್ತನೆ ಕಾರ್ಯ ಶುರುವಾಗಿಲ್ಲ. ಜಿಲ್ಲೆಯಲ್ಲಿ ಈವರೆಗೆ ವಾಡಿಕೆಯಂತೆ 2.45 ಲಕ್ಷ ಹೆಕ್ಟೇರ್ ಬಿತ್ತನೆಯಾಗಬೇಕಿತ್ತು. ಆದರೆ, 1,134 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಚಿತ್ರದುರ್ಗದಲ್ಲಿ ಬಹುತೇಕ ಮಳೆಯಾಶ್ರಿತ ಕೃಷಿಯಾಗಿದ್ದು, ಈವರೆಗೂ ವರುಣ ಕೃಪೆ ತೋರಿಲ್ಲ. ಹೀಗಾಗಿ ಬಿತ್ತನೆ ಚಟುವಟಿಕೆಯಲ್ಲಿ ರೈತೋತ್ಸಾಹ ಕಂಡು ಬರುತ್ತಿಲ್ಲ. ಬೀಜ ಖರೀದಿಯಲ್ಲೂ ನಿರಾಸಕ್ತಿ ಕಂಡುಬಂದಿದೆ.
ಕೃಷಿ ಚಟುವಟಿಕೆ ಅತ್ಯಲ್ಪ:ಧಾರವಾಡದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಮಳೆ ಸುರಿಯದಿದ್ದರೆ ಬರಗಾಲ ಉಂಟಾಗಲಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿ ಜಿಲ್ಲೆಯ ವಿವಿಧೆಡೆಗೆ ಕುಡಿಯುವ ನೀರು ಪೂರೈಸುವ ಸವದತ್ತಿಯ ರೇಣುಕಾಸಾಗರ ಜಲಾಶಯದಲ್ಲಿ 4.5 ಟಿಎಂಸಿ ಅಡಿ ನೀರು ಸಂಗ್ರಹ ಇದ್ದು, ಸದ್ಯಕ್ಕೆ ಕೊರತೆ ಇಲ್ಲ. ಗ್ರಾಮಾಂತರದ ಕೆರೆಗಳಲ್ಲಿ ನೀರು ಕಡಿಮೆಯಾಗಿದೆ. ಹಾವೇರಿಯಲ್ಲಿ ಅಲ್ಪಸ್ವಲ್ಪ ಫಸಲು ಒಣಗುತ್ತಿದೆ. ಗದಗದಲ್ಲಿ ಕೃಷಿ ಚಟುವಟಿಕೆ ಸೊರಗಿದೆ. ವಿಜಯಪುರದಲ್ಲಿ ಇನ್ನೂ ಮಳೆಯಾಗಿಲ್ಲ. ಮಹಾರಾಷ್ಟ್ರದ ಕೃಷ್ಣಾ, ಭೀಮಾ ಜಲಾನಯನ ಪ್ರದೇಶದಲ್ಲೂ ಮಳೆಯಾಗದೆ ನದಿಗಳ ಒಡಲು ಬರಿದಾಗಿದೆ. ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿದೆ. ಜಮೀನಿನಲ್ಲಿರುವ ಕಬ್ಬು ಮತ್ತಿತರ ದೀರ್ಘಾವಧಿ ಬೆಳೆಗಳು ಒಣಗುತ್ತಿವೆ. ಬಾಗಲಕೋಟೆಯಲ್ಲಿ ಕೃಷಿ ಚಟುವಟಿಕೆಗೆ ಭಾರಿ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ 2.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರಿನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ವಾಣಿಜ್ಯ ಬೆಳೆ ಕಬ್ಬು ಸೇರಿದಂತೆ ಹೆಸರು, ಸೋಯಾ ಬೀನ್, ಉದ್ದು, ಗೋವಿನಜೋಳ, ತೊಗರಿ, ಮುಂಗಾರು ಜೋಳದ ಬೆಳೆಗಳನ್ನು ಬೆಳೆಯಲಾಗುತ್ತದೆ. ಮಳೆಯಾಶ್ರಿತವಷ್ಟೇ ಅಲ್ಲದೆ ನೀರಾವರಿ ಪ್ರದೇಶದಲ್ಲೂ ಮಳೆ ವಿಳಂಬ ದಿಂದಾಗಿ ಬಿತ್ತನೆ ಚಟುವಟಿಕೆ ನಡೆದಿಲ್ಲ.
ಬೆಂಗಳೂರು:ದುರ್ಬಲವಾಗಿಯೇ ಮುಂದುವರಿದಿರುವ ಮುಂಗಾರು ಕಾರಣದಿಂದ ಪ್ರಸಕ್ತ ತಿಂಗಳಲ್ಲಿ ಭಾರಿ ಮಳೆ ಕೊರತೆಯಾಗಿದೆ. ಜೂ.1ರಿಂದ 18ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 109 ಮಿಮೀ ಮಳೆ ಆಗಬೇಕಿತ್ತು. ಆದರೆ, 32 ಮಿಮೀ ಮಳೆಯಾಗಿದ್ದು, ಶೇ.71 ಕಡಿಮೆಯಾಗಿದೆ. ಸೋಮವಾರದಿಂದ (ಜೂ.19) ರಾಜ್ಯದಲ್ಲಿ ಮಳೆ ಚುರುಕುಗೊಳ್ಳುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಏಳು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ವಾರದಲ್ಲಿ ಉತ್ತರ ಕರ್ನಾಟಕ ಭಾಗದಾದ್ಯಂತ ಮಾರುತಗಳು ಆವರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 13 =
Remember me
