ಕೆಳಮಧ್ಯಮ ವರ್ಗದ ಬಡಕುಟುಂಬದ ಹದಿಹರೆಯದ ಯುವಕ ವೆಂಕಟ್ ರಾವ್ ಏನಾದರೂ ಮಾಡಿ ಬದುಕು ಕಟ್ಟಿಕೊಳ್ಳಬೇಕೆಂದು ಮೈಸೂರಿನ ತನ್ನ ಬಾಡಿಗೆ ಮನೆಯಿಂದ ಹೊರಬೀಳುತ್ತಾನೆ. ಹೊಟ್ಟೆಯ ಹಸಿವು ಆತನನ್ನು ಒಂದು ಹೋಟೆಲ್​ನಲ್ಲಿ ಕೆಲಸಕ್ಕೆ ಹಚ್ಚುತ್ತದೆ. ಅಲ್ಲಿ ಆತ ಮಾಣಿ ಕೆಲಸ ಮಾಡುತ್ತಲೇ ಗಮನ ಮತ್ತು ಗ್ರಹಿಕೆಯಿಂದ ಸಿಹಿ ಖಾದ್ಯಗಳ ತಯಾರು ಮಾಡುವ ವಿಧಾನವನ್ನು ಕಲಿಯುತ್ತಾನೆ. ಆತನ ಶ್ರದ್ಧೆಯೇ ಆತನಿಗೆ ಗುರುವಾಗಿ ಪಾಕಪ್ರವೀಣನನ್ನಾಗಿಸುತ್ತದೆ. ಈತನ ಕೈಯಿಂದ ತಯಾರಿಸಿದ ಸಿಹಿತಿಂಡಿಗಳಿಗೆ ಎಲ್ಲೆಡೆ ಬಹಳಷ್ಟು ಪ್ರಶಂಸೆ ಬರುತ್ತದೆ, ಜೊತೆಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಬಹಳಷ್ಟು ಹೋಟೆಲ್​ಗಳಿಗೆ, ಕಾರ್ಯಕ್ರಮಗಳಿಗೆ ಸಿಹಿ ತಿಂಡಿ ತಯಾರಿಸಿ ಕೊಡುತ್ತಾನೆ. ಪ್ರಮಾಣ ಎಷ್ಟೇ ದೊಡ್ಡದಿರಲಿ, ಪ್ರಯಾಣ ಎಷ್ಟೇ ದೂರದ್ದಿರಲಿ ಇವರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ರಟ್ಟೆಯಲ್ಲಿ ಶಕ್ತಿ, ಗುಂಡಿಗೆಯಲ್ಲಿ ಛಲ ಹೊಂದಿದ್ದ ವೆಂಕಟ್ ರಾವ್ ದುಡಿಮೆಯಲ್ಲಿ ದೇವರನ್ನು ಕಂಡರೆ, ದುಡಿದು ಸಾರ್ಥಕತೆಯನ್ನು ಕಂಡುಕೊಳ್ಳುತ್ತಾನೆೆ. ಹಣವನ್ನೂ ಸಮಯವನ್ನು ಯಾವತ್ತೂ ಪೋಲು ಮಾಡಿದ ವ್ಯಕ್ತಿಯಲ್ಲ.
ಸಿಹಿ ತಯಾರಿಸುವುದನ್ನೇ ಅನಾಯಾಸವಾಗಿ ಕಲಿತಿದ್ದ ಈತನಿಗೆ ಅಡುಗೆ ಕೆಲಸ ಕಲಿಯುವುದು ಹೆಚ್ಚೇನೂ ತ್ರಾಸವೆನಿಸಲಿಲ್ಲ. ದೋಸೆ, ಇಡ್ಲಿ, ಪೂರಿ, ಸಾಗು, ಪಲಾವು, ಊಟ… ಹೀಗೆ ಎಲ್ಲಾ ತರಹದ ಬಗೆಬಗೆಯ ತಿನಿಸುಗಳನ್ನು ರುಚಿ ರುಚಿಯಾಗಿ ತಯಾರಿಸುವುದನ್ನು ಯಾವುದೇ ತಯಾರಿ ಇಲ್ಲದೇ ಕಲಿತುಬಿಟ್ಟ. ಕೆಲವೇ ತಿಂಗಳುಗಳ ಅಂತರದಲ್ಲಿ ವೆಂಕಟ್ ರಾವ್ ಅದ್ಭುತ ಬಾಣಸಿಗ ಆಗಿ ಸಜ್ಜುಗೊಂಡ.
ಕೈತುಂಬ ಕೆಲಸ ಜೇಬು ತುಂಬ ಹಣ ಹರಿದು ಬರುತ್ತಿದ್ದರೂ ಆತನ ಮನಸ್ಸು ಮತ್ತೇನನ್ನೋ ಹುಡುಕುತ್ತಿತ್ತು. ಕೈಯಲ್ಲಿ ಕಲಿತಿದ್ದ ಕೆಲಸವಿದ್ದ ಕಾರಣ ಆತ ಒಬ್ಬರ ಕೈಯಡಿ ಕೆಲಸ ಮಾಡಬಾರದೆಂದು ತೀರ್ವನಿಸಿ ತಾನೇ ಒಂದು ಹೋಟೆಲ್ ಮಾಡಲು ಸ್ಥಳ ಹುಡುಕತೊಡಗಿದ.
ಅಡುಗೆ ಕೆಲಸಕ್ಕೆಂದು ಊರೂರು ತಿರುಗುತ್ತಿದ್ದ ಆತ ಕೋಲಾರದ ಗಡಿ ಭಾಗ ಅಂದರೆ ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ ಎಂದು ಕರೆಸಿಕೊಳ್ಳುವ ಆಂಧ್ರದ ಗಡಿಗೆ ಸಮೀಪವಿರುವ ಗೌರಿಬಿದನೂರಿನಲ್ಲಿ ಒಂದು ಸಣ್ಣ ಜಾಗವನ್ನು ಪತ್ತೆಹಚ್ಚುತ್ತಾನೆ. ಅದೂ ಒಂದು ದೇವಸ್ಥಾನದ ಜಾಗ. ಇಲ್ಲಿ ‘ಗಜಾನನ ಭವನ’ ಎಂಬ ಹೆಸರಿನ ಶುದ್ಧ ಸಸ್ಯಾಹಾರಿ ಹೋಟೆಲ್ ಆರಂಭಿಸಿದ ನಂತರ ವೆಂಕಟರಾಯರು ಎಂದು ಕರೆಸಿಕೊಳ್ಳತೊಡಗಿದ.

ಟೌನಿನ ಮುಖ್ಯರಸ್ತೆಯಲ್ಲಿ ಈ ಹೋಟೆಲ್ ಇದ್ದು, ಸಗಟು ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಬಸ್ ಸ್ಟಾ್ಯಂಡು ಈ ಮೂರಕ್ಕೂ ಹತ್ತಿರವಿದ್ದ ಕಾರಣ ಜೊತೆಗೆ ವೆಂಕಟರಾಯರ ಅದ್ಭುತ ಕೈ ರುಚಿಯ ಕಾರಣ ಹೋಟೆಲ್ ಸದಾ ಗ್ರಾಹಕರಿಂದ ತುಂಬಿ ತುಳುಕುತ್ತದೆ.
ರಾಯರು ಗಿರಾಕಿಗಳನ್ನು ಸಂಬಾಳಿಸಲು, ಸಹಾಯಕ್ಕೆ ಅಂತ ಬಾಣಸಿಗರನ್ನು, ಒಂದಿಬ್ಬರು ಮಾಣಿಗಳನ್ನು ಕೆಲಸಕ್ಕೆ ನೇಮಿಸಿಕೊಂಡರು. ಏನೇ ಸಹಾಯಕರನ್ನು ನೇಮಿಸಿಕೊಂಡರೂ ಅವರು ಗಲ್ಲದ ಮೇಲೆ ಕೂತು ಮೈಮರೆಯಲಿಲ್ಲ. ಬದಲಿಗೆ ಅಡುಗೆಮನೆಯಲ್ಲಿ ಬೆವರು ಸುರಿಸುತ್ತಿದ್ದರು. ನೋಡುನೋಡುತ್ತಲೇ ‘ಗಜಾನನ ಭವನ’ ತನ್ನ ಸ್ವಾದಿಷ್ಟ ರುಚಿಗೆ ಹೆಸರುವಾಸಿಯಾಯಿತು .
ಈ ಮಧ್ಯೆ ಹೋಟೆಲ್ಲಿಗೆ ಪ್ರತಿನಿತ್ಯ ಬರುತ್ತಿದ್ದ ಗ್ರಾಹಕರಲ್ಲಿ ಹಿರಿಯರೊಬ್ಬರು ಬ್ರಹ್ಮಚಾರಿ ವೆಂಕಟರಾಯರಿಗೆ ಮದುವೆ ಆಗುವಂತೆ ಸಲಹೆ ನೀಡುತ್ತಿದ್ದರು. ಬರೀ ಸಲಹೆಯನ್ನಷ್ಟೇ ನೀಡದೆ ಅವರಿಗೆ ಹತ್ತಿರದ ಪರಿಚಯವಿರುವ ಒಂದು ಸಂಬಂಧವನ್ನೂ ತೋರಿಸಿದರು. ಬಡವರ ಮನೆಯ ಹುಡುಗಿ ‘ಸುಮಿತ್ರ ’ ರೂಪವಂತೆಯೂ ಗುಣವಂತೆಯೂ ಆಗಿದ್ದಳು. ನೋಡಿದ ಕೂಡಲೇ ಒಪ್ಪಿಗೆ ಸೂಚಿಸಿದ ರಾಯರು ಸುಮಿತ್ರಳ ಮನೆಯ ಪರಿಸ್ಥಿತಿಯನ್ನು ಅರಿತು ಮದುವೆಯನ್ನು ತಮ್ಮ ಖರ್ಚಿನಲ್ಲಿಯೇ ಮಾಡಿಕೊಂಡು ಮನೆತುಂಬಿಸಿಕೊಂಡರು.

ಇವರ ದಾಂಪತ್ಯಕ್ಕೆ ಸಾಕ್ಷಿಯೆಂಬಂತೆ ಸುಮಿತ್ರಮ್ಮ ಗಂಡುಮಗುವಿಗೆ ಜನ್ಮ ನೀಡಿದಳು. ಆ ಒಂದು ಕ್ಷಣ ರಾಯರ ಸಂತಸಕ್ಕೆ ಪಾರವೇ ಇರಲಿಲ್ಲ. ಊರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದರು. ಮಡದಿಯನ್ನು ಮಗುವನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ರಾಯರಿಗೆ ಒಂದು ಹೆಣ್ಣು ಮಗುವಿನ ಆಸೆಯಾಯಿತು. ಪ್ರತಿಬಾರಿ ಆಸೆ ಪ್ರಯತ್ನವಾಗುತ್ತಿತ್ತು. ಆದರೆ ಫಲ ಗಂಡು ಮಗುವಾಗುತ್ತಿತ್ತು. ರಾಯರಿಗೆ ಒಂದರ ಹಿಂದೆ ಒಂದರಂತೆ ಒಟ್ಟು ಆರು ಗಂಡು ಮಕ್ಕಳಾದವು. ಏಳನೆಯದು ಹೆಣ್ಣಾಯಿತು .
ಮಂಜುನಾಥ, ಪ್ರಭಾಕರ, ಶ್ರೀನಿವಾಸ, ಲೋಕೇಶ, ಸುರೇಶ, ನಾಗರಾಜ ಎಂದು ಆರು ಪುತ್ರರಿಗೆ, ಪೂರ್ಣಿಮಾ ಎಂದು ಏಕೈಕ ಪುತ್ರಿಗೆ ಹೆಸರುಗಳನ್ನಿಟ್ಟರು .ದಿನಕಳೆದಂತೆ ಇತ್ತ ಹೋಟೆಲ್ಲಿನಲ್ಲಿ ಗ್ರಾಹಕರೂ ಹೆಚ್ಚಾದರು, ವ್ಯಾಪಾರವೂ ಹೆಚ್ಚಾಯಿತು ಸಂಪಾದನೆಯೂ ಹೆಚ್ಚಾಯಿತು. ಅತ್ತ ಮನೆಯಲ್ಲಿ ಸಂಸಾರವೂ ದೊಡ್ಡದಾಯಿತು, ಮಕ್ಕಳೂ ದೊಡ್ಡವರಾದರು, ಜವಾಬ್ದಾರಿಯೂ ದೊಡ್ಡದಾಯಿತು.
ರಾಯರು ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಹೋಟೆಲ್ಲಿನಲ್ಲಿ ಹಗಲೂ ರಾತ್ರಿ ದುಡಿದು, ಮನೆ ಸಂಸಾರವನ್ನು ನಿಭಾಯಿಸುತ್ತ, ಮಕ್ಕಳನ್ನು ಒಳ್ಳೆಯ ಶಾಲೆಗಳಿಗೆ ಸೇರಿಸಿ ಓದಿಸಿದರು. ಮಾಲೀಕನಾಗಿ ತಂದೆಯಾಗಿ ತಮ್ಮ ಬದುಕನ್ನೇ ಅವರಿಗಾಗಿ ಅವರ ಸಂತೋಷಕ್ಕಾಗಿ ಮುಡುಪಾಗಿಟ್ಟರು.
ವರುಷಗಳು ಉರುಳಿದವು. ಎಲ್ಲಾ ಮಕ್ಕಳು ಎದೆಯೆತ್ತರಕ್ಕೆ ಬೆಳೆದರು, ಹೆಣ್ಣು ಮಗಳು ಪೂರ್ಣಿಮಾ ವಯಸ್ಸಿಗೆ ಬಂದು ಕಾಲೇಜಿಗೂ ದಾಖಲಾದಳು. ಬರೋಬ್ಬರಿ ಐವತ್ತು ವರುಷಗಳ ಕಾಲ ವಿಶ್ರಾಂತಿ ಇಲ್ಲದೆ ಒಂದೇ ಸಮನೆ ದುಡಿದ ಪರಿಣಾಮ ರಾಯರಿಗೆ ಆರೋಗ್ಯ ಸ್ವಲ್ಪ ಮಟ್ಟಿಗೆ ಕೈಕೊಡುತ್ತ ಬಂದಿತ್ತು, ಸಾಕಷ್ಟು ದಣಿದಿದ್ದರು ಕೂಡ. ಇನ್ನು ಸಾಕು ತಾನು ದುಡಿದಿದ್ದು, ಆರೋಗ್ಯದ ಕಡೆ ಕೊಂಚ ಗಮನ ಕೊಡೋಣವೆಂದು ತೀರ್ವನಿಸಿದರು .
ಹಿರಿಯ ಮಗ ಮಂಜುನಾಥ ಎಲ್ ಐ ಸಿ ಏಜೆಂಟ್ ಆಗಿ ಜೊತೆಗೆ ಚೀಟಿಯನ್ನು ಆರಂಭಿಸಿದ . ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಯ ಮುಂಬಾಗ ಎರಡನೆಯ ಮಗ ಪ್ರಭಾಕರನಿಗೆ ಸ್ವಂತವಾಗಿ ರಕ್ತ ಪರೀಕ್ಷೆ ಮಾಡುವ ಲ್ಯಾಬೊಂದನ್ನು ಹಾಕಿಕೊಟ್ಟರು, ಮೂರನೆಯ ಮಗ ಶ್ರೀನಿವಾಸನಿಗೆ ಪಕ್ಕದ ವಿದುರಾಶ್ವತ್ಥ ಎಂಬ ಗ್ರಾಮದಲ್ಲಿ ಒಂದು ಮೆಡಿಕಲ್ ಸ್ಟೋರು ಮಾಡಿಕೊಟ್ಟರು. ಇನ್ನುಳಿದ ಮೂವರು ಗಂಡು ಮಕ್ಕಳಿಗೆ ಹೋಟೆಲ್​ನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಬಿಟ್ಟರು.
ಕಷ್ಟಪಟ್ಟು ದುಡಿದುಳಿಸಿದ ಹಣದಲ್ಲಿ ಊರಿನ ಸಮೀಪವೇ ಒಂದು ದೊಡ್ಡ ಸೈಟೊಂದನ್ನು ಖರೀದಿ ಮಾಡಿಟ್ಟಿದ್ದರು.
ಗಂಡು ಮಕ್ಕಳಿಗೆ ಒಂದೊಂದು ದಾರಿ ತೋರಿಸಿ ಮಗಳು ಪೂರ್ಣಿಮಾಳ ಮದುವೆ ಮಾಡಿ ಅವಳನ್ನು ಗಂಡನ ಮನೆ ಸೇರಿಸಿದರೆ ಅಲ್ಲಿಗೆ ತಮ್ಮ ಜವಾಬ್ದಾರಿ ಮುಗಿಯಿತೆಂದು ಅಂದುಕೊಂಡಿದ್ದರು. ಅಷ್ಟರಲ್ಲಿ ವಿಧಿ ರಾಯರ ಕುಟುಂಬದೊಂದಿಗೆ ಆಟವಾಡಲು ಶುರು ಮಾಡಿತು .
ಹಿರಿಯ ಮಗ ಮಂಜುನಾಥ ನಡೆಸುತ್ತಿದ್ದ ಚೀಟಿ ವ್ಯವಹಾರ ನಷ್ಟ ಅನುಭವಿಸಿತು. ಚೀಟಿ ಹಾಕಿದವರು ರಾಯರ ಹೋಟೆಲ್ಲು, ಮನೆ ಮುಂದೆ ಬಂದು ಹಣಕ್ಕಾಗಿ ಒತ್ತಾಯಿಸತೊಡಗಿದರು. ಶ್ರೀನಿವಾಸನ ಮೆಡಿಕಲ್ ಸ್ಟೋರ್ ವ್ಯಾಪಾರ ಕೈಕೊಟ್ಟ ಕಾರಣ ಅವನು ಬಾಗಿಲಿಗೆ ಬೀಗ ಜಡಿದ. ಪ್ರಭಾಕರ ಇನ್ನಿಲ್ಲದಂತೆ ಮದ್ಯವಸನಿಯಾಗಿದ್ದ, ಅವನೂ ಲ್ಯಾಬನ್ನು ಮುಚ್ಚಿ ನಷ್ಟದ ರಸೀದಿಯನ್ನು ತಂದೆಗೆ ರವಾನಿಸಿದ.
ಮರ್ಯಾದೆಗೆ ಹೆದರಿದ ರಾಯರು ಮೂವರೂ ಮಕ್ಕಳು ಮಾಡಿಕೊಂಡ ಸಾಲ ತೀರಿಸಿ ಸರಿ ಮಾಡುವಷ್ಟರಲ್ಲಿ ಹೈರಾಣಾಗಿದ್ದರು .ಅಷ್ಟೊತ್ತಿಗಾಗಲೇ ರಾಯರ ಆರೋಗ್ಯ ತುಂಬಾನೇ ಅನ್ನುವಷ್ಟು ಹದಗೆಟ್ಟು ಅದೊಂದು ದಿನ ಹಾಸಿಗೆ ಹಿಡಿದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ತಾಯಿಯೊಂದಿಗೆ ಎಲ್ಲಾ ಮಕ್ಕಳು ಒಟ್ಟಿಗೆ ಸೇರಿ ರಾಯರ ಅಂತಿಮ ವಿಧಿವಿದಾನಗಳನ್ನು ನೆರವೇರಿಸಿದರು.
ಇದರ ಮದ್ಯೆ ಮಗಳು ಪೂರ್ಣಿಮಾ ಬೇರೊಂದು ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ಅಣ್ಣಂದಿರಿಗೆ ಗೊತ್ತಾಗಿ ಅವಳಿಗೆ ಬೈದು, ಹೊಡೆದು ಗೃಹಬಂಧನದಲ್ಲಿಟ್ಟರು. ಅದೇನಾಯಿತೊ ಒಮ್ಮೆ ಆಕೆ ಕೆಟ್ಟ ನಿರ್ಧಾರ ತೆಗೆದುಕೊಂಡು ಮೈಮೇಲೆ ಸೀಮೆಯೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡುಬಿಟ್ಟಳು. ತೀವ್ರ ಸುಟ್ಟ ಗಾಯಗಳಿಂದ ಬೆಂದಿದ್ದ ಆ ಹುಡುಗಿಯ ಜೀವ ಉಳಿಯಲಿಲ್ಲ. ಅಲ್ಲಿಂದ ಮಂಜುನಾಥ ಮತ್ತೆ ಶ್ರೀನಿವಾಸ ಬೇರೆ ಬೇರೆ ಉದ್ಯೋಗಗಳನ್ನರಸಿ ಬೆಂಗಳೂರು ಸೇರಿಕೊಂಡರು . ಸ್ವಲ್ಪ ದಿನಗಳ ನಂತರ ಸುಮಿತ್ರಮ್ಮನೂ ಮನೆ ಖಾಲಿ ಮಾಡಿಕೊಂಡು ಬೆಂಗಳೂರಿಗೆ ಹೋಗಿ ಹಿರಿಯ ಮಗನೊಂದಿಗೆ ಇದ್ದು ಬಿಟ್ಟಳು .
ಇತ್ತ ಊರಿನಲ್ಲಿ ಪ್ರಭಾಕರ ಕುಡುಕನೆಂಬ ಹಣೆಪಟ್ಟಿ ಕಟ್ಟಿಕೊಂಡುಬಿಟ್ಟ. ಹೋಟೆಲ್ಲಿನ ಜವಾಬ್ದಾರಿ ತೆಗೆದುಕೊಂಡಿದ್ದ ಲೋಕೇಶ, ಸುರೇಶ, ನಾಗರಾಜ ತಂದೆಯ ನಿಧನದ ನಂತರ ತಮ್ಮ ತಮ್ಮ ಒಳಜಗಳಗಳ ಕಾರಣ ಹೋಟೆಲ್ಲನ್ನು ಅಷ್ಟಾಗಿ ನಿರ್ವಹಿಸಲು ಆಗಲಿಲ್ಲ . ಹೋಟೆಲ್ ನ ರುಚಿಯು ಕೆಟ್ಟಿತು. ಗಿರಾಕಿಗಳು ಬೆನ್ನು ತೋರಿಸಲು ಶುರು ಮಾಡಿದರು. ಅಲ್ಪಸ್ವಲ್ಪ ವ್ಯಾಪಾರವಾಗಿ ಬಂದ ಹಣವನ್ನು ಮೂವರೂ ಕುಡಿದು ಪೋಲು ಮಾಡಿ ಸಾಲ ಮಾಡಿಕೊಂಡರು. ಆ ಸಾಲಗಳನ್ನು ತೀರಿಸಲು ತಂದೆಯು ಮಾಡಿಟ್ಟಿದ್ದ ಸೈಟನ್ನೂ ಮಾರಿಕೊಂಡರು . ನೋಡು ನೋಡುತ್ತಿದ್ದಂತೆ ಲೋಕೇಶನೂ ಸುರೇಶನೂ ಪ್ರಭಾಕರನ ದಾರಿ ಹಿಡಿದು ಅವರೂ ಮದ್ಯಕ್ಕೆ ದಾಸರಾದರು.
ಚಟ ಇವರಿಗೆ ಯಾವ ಮಟ್ಟಕ್ಕೆ ಅಂಟಿತ್ತೆಂದರೆ ತೀರಾ ಮುಂಜಾನೆಯೇ ಕುಡಿಯಲು ಶುರು ಮಾಡಿಕೊಂಡರು. ಅತಿಯಾದ ಕುಡಿತದ ಪರಿಣಾಮ ಯಕೃತ್ ಅಂದರೆ ಲಿವರ್ ಕೈಕೊಟ್ಟು ಪ್ರಭಾಕರ ಗೌರಿಬಿದನೂರಿನ ಬೀದಿಯಲ್ಲಿ, ಲೋಕೇಶ ಚಿಕ್ಕಬಳ್ಳಾಪುರದ ಬಸ್ ಸ್ಟಾ್ಯಂಡಿನಲ್ಲಿ ಜೀವ ಬಿಟ್ಟು ಅನಾಥ ಶವಗಳಾದರು. ಖಿನ್ನತೆಯಿಂದ ಮಾನಸಿಕವಾಗಿ ಘಾಸಿಗೊಂಡಿದ್ದ ಸುರೇಶ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಅಸುನೀಗಿದ.
ಪತಿ, ಮಕ್ಕಳ ಸಾಲು ಸಾಲು ಸಾವುಗಳ ಸುದ್ದಿ ಜೊತೆಗೆ ಅನಾರೋಗ್ಯ ಸುಮಿತ್ರಮ್ಮನನ್ನು ಇನ್ನಿಲ್ಲದಂತೆ ಹಿಂಡಿಹಾಕಿತು. ಅದೊಂದು ದಿನ ನಸುಕಿನ ವೇಳೆ ಹಿರಿಯ ಮಗನ ಸಣ್ಣ ಬಾಡಿಗೆ ಮನೆಯಲ್ಲಿ ಆಕೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಳು.
ಎಂಬತ್ತು-ತೊಂಬತ್ತರ ದಶಕದ ಗೌರಿಬಿದನೂರಿನ ಜನರಲ್ಲಿ ಗಜಾನನ ಭವನ ತಿಂಡಿಯ ರುಚಿ ನೋಡದವರೇ ಇಲ್ಲ. ಟೌನಿನ ಮುಖ್ಯರಸ್ತೆಯಲ್ಲಿ ಇವತ್ತಿಗೂ ಕಟ್ಟಡ ಹಾಗೇ ಉಳಿದಿದೆ. ಆದರೆ ಅದನ್ನು ಕಟ್ಟಿದ ವೆಂಕಟರಾಯರು ಮಾತ್ರ ಇಲ್ಲ. ಅವರ ಮಡದಿ ಸುಮಿತ್ರಮ್ಮನೂ ಇಲ್ಲ. ಅವರ ಏಳು ಮಕ್ಕಳಲ್ಲಿ ನಾಲ್ವರು ಉಳಿದಿಲ್ಲ, ಉಳಿದ ಮೂವರು ಬೆಂಗಳೂರಿನಲ್ಲಿ ವಾಸವಿದ್ದಾರೆ. ವಿಪರ್ಯಾಸವೇನೆಂದರೆ ಅವರಿಗೆ ಆ ಹೋಟೆಲ್ಲಿನ ಬಗ್ಗೆ ಯಾವುದೇ ಆಸಕ್ತಿ ಉಳಿದಿಲ್ಲ.ಸಿಹಿ ತಿಂಡಿ ಮಾಡಿ ಬದುಕನ್ನು ಸಿಹಿಯಾಗಿ ಕಟ್ಟಿಟ್ಟುಕೊಂಡಿದ್ದ ವೆಂಕಟರಾಯರ ಕುಟುಂಬದಲ್ಲಿ ವಿಧಿ ಅಟ್ಟಹಾಸ ಮೆರೆದಿದ್ದು ನಿಜಕ್ಕೂ ದುರ್ಧೆವ.
| ಮಾಸ್ತಿ, ಚಲನಚಿತ್ರ ಸಂಭಾಷಣಕಾರ
ಶ್ರೀರಾಮನವಮಿ ಆಚರಿಸಿ ಹೋಗುತ್ತಿದ್ದವರನ್ನ ಅಡ್ಡಗಟ್ಟಿ ಅನ್ಯಕೋಮಿನ ಯುವಕರಿಂದ ಬೆದರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
