ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದು ಕೊಡಲಾಗಿದೆ.

ನಾನು ನನ್ನ ಅಪ್ಪನನ್ನು ಅಪ್ಪಾಜಿ ಎಂದು ಕರೆಯುತ್ತಿದ್ದೆ. ಒಬ್ಬನೇ ಮಗನಾದ್ದರಿಂದ ಬಡತನದಲ್ಲೂ ಪ್ರೀತಿಯಿಂದ ಸಾಕಿದ್ದರು. ನಾನು ಅಪ್ಪನೊಂದಿಗೆ ಊಟ ಮಾಡುತ್ತಿದ್ದೆ. ಆಗ ಅನ್ನಕ್ಕೆ ಕ್ಷಾಮವಿದ್ದುದರಿಂದ ಅಪ್ಪ ತನ್ನ ಪಾಲಿನ ಅನ್ನವನ್ನೂ ನನಗೆ ಬಿಟ್ಟು ತಾನು ಬರೀ ರಾಗಿ ಮುದ್ದೆಯಲ್ಲೇ ತೃಪ್ತಿಪಟ್ಟುಕೊಳ್ಳುತ್ತಿದ್ದರು. ನಾನು ಚಿಕ್ಕವನಿದ್ದಾಗಲೇ ನನ್ನ ತಾಯಿ ತೀರಿಕೊಂಡರು. ಅನಂತರ ನನಗೆ ಅಪ್ಪನೇ ಎಲ್ಲವಾದರು. ಊಟ ಬಡಿಸುವುದರಿಂದ ಹಿಡಿದು ನನ್ನೆಲ್ಲಾ ಕಷ್ಟಸುಖಗಳಿಗೂ ಸ್ಪಂದಿಸುವ ತಾಯಿಯಾದರು. ಮಗ ಓದಿ ದೊಡ್ಡ ವಿದ್ಯಾವಂತನಾಗಬೇಕೆಂಬ ಮಹದಾಸೆ ಅವರಿಗಿತ್ತು. ನಾನು ಎಂ.ಎ. ಓದಲು ಮಾನಸ ಗಂಗೋತ್ರಿಗೆ ಹೋದಾಗ ಅತ್ತೂ ಕರೆದು ರಂಪ ಮಾಡಿದರು. ನನಗೆ ಬೆಂಗಳೂರಿನ ವಿಧಾನಸೌಧದಲ್ಲಿ ಕೆಲಸ ಸಿಕ್ಕಾಗ ಅಲ್ಲಿಗೆ ಹೋಗದಂತೆ ದುಃಖದ ಕೋಡಿಯನ್ನೇ ಹರಿಸಿದರು. ಜೀವನವಿಡೀ ನನಗೆ ಒಂದೇಟನ್ನು ಹೊಡೆಯದೆ ಸಾಕಿದ ಪುಣ್ಯಾತ್ಮನಮ್ಮಪ್ಪ. ಶಿಸ್ತು, ಪ್ರಾಮಾಣಿಕತೆ, ಸಮಯಪ್ರಜ್ಞೆ, ಸಮಚಿತ್ತದ ಆಲೋಚನೆ ನಮ್ಮಪ್ಪ ನನಗೆ ಕಲಿಸಿದ ಮಹತ್ವದ ಪಾಠಗಳು. ಅಪ್ಪ ನನ್ನನ್ನಗಲಿ ಹನ್ನೆರಡು ವರ್ಷಗಳು ಉರುಳಿಹೋಗಿವೆ.ಅಪ್ಪನ ಆದರ್ಶದ ಹಾದಿಯಲ್ಲಿ ನಡೆಯುತ್ತಿದ್ದೇನೆಂಬ ಕಿಂಚಿತ್ ಸಮಾಧಾನವಿದೆ. ಅಪ್ಪನನ್ನು ಬಹುಕಾಲ ಸುಖದಿಂದ ಸಾಕಿದ ಕರ್ತವ್ಯದ ತೃಪ್ತಿ ಇದೆ. ಅಷ್ಟೇ ಸಾಕು ನನ್ನೀ ಜೀವನಕೆ.
| ಮೊದುರು ಮಹೇಶಾರಾಧ್ಯ

ಪ್ರತಿಯೊಬ್ಬರ ಜೀವನದಲ್ಲಿ ಅಮ್ಮ ಕಣ್ಣಾದರೆ ಅಪ್ಪ ಕಣ್ಣನ್ನು ರಕ್ಷಿಸುವ ಕಣ್ಣ ರೆಪ್ಪೆಯಾಗಿ ಯಾವತ್ತೂ ವ್ಯಕ್ತಿಯ ಬದುಕಿಗೆ ಆಸರೆಯಾಗಿರುತ್ತಾರೆ. ನನ್ನ ಜೀವನದಲ್ಲೂ ಅಪ್ಪನ ಪಾತ್ರ ಅವರ್ಣಿನೀಯ. ತನ್ನ ಕಾಲಲ್ಲಿ ಹರಿದ ಚಪ್ಪಲಿ ಮತ್ತು ಮೈಯಲ್ಲಿ ಹರಿದ ಬಟ್ಟೆ ಇದ್ದರೂ ಪರವಾಗಿಲ್ಲ, ಮಗನು ನಾಲ್ಕು ಜನರ ಮಧ್ಯೆ ಇರುವುದರಿಂದ ಒಳ್ಳೆಯ ಚಪ್ಪಲಿ, ಬಟ್ಟೆ ಧರಿಸಲಿ ಎನ್ನುವ ಸ್ವಭಾವದವರು. ನನ್ನ ಪ್ರತಿಯೊಂದು ಆಸೆಗೆ ನೀರೆರೆಯುತ್ತ ನನ್ನ ಖುಷಿಯೇ ತನ್ನ ಖುಷಿ ಎಂದು ಹಗಲಿರುಳು ಶ್ರಮಿಸುವ ಶ್ರಮಜೀವಿ. ನಾನು ದುಡಿಯುವ ಸ್ಥಿತಿಯಲ್ಲಿದ್ದರೂ ಪ್ರತಿಸಲ ಮನೆಗೆ ಹೋಗಿ ಹಿಂದಿರುಗುವಾಗ ನನಗೆ ಗೊತ್ತಿರದಂತೆ ಬ್ಯಾಗಿನ ಯಾವುದಾದರೂ ಮೂಲೆಯಲ್ಲಿ ಒಂದಿಷ್ಟು ದುಡ್ಡು ಇಟ್ಟು ಆಮೇಲೆ ಕರೆ ಮಾಡಿ, ‘ನೀನು ಪಟ್ಟಣದಲ್ಲಿ ಇರುವವನು. ಖರ್ಚಿಗೆ ಬೇಕಾಗುತ್ತದೆ ಇಟ್ಟುಕೋ’ ಎನ್ನುವ ಔದಾರ್ಯದ ಪ್ರತಿರೂಪ ನನ್ನಪ್ಪ. ಇಳಿ ವಯಸ್ಸಿನಲ್ಲೂ ಕಾರ್ಯೋನ್ಮುಖರಾಗಿರುವ ನನ್ನಪ್ಪ ನನಗೆ ಎಂದಿಗೂ ಸ್ಪೂರ್ತಿಯ ಸೆಲೆ. ನನ್ನ ಜೀವನದ ಅಮೋಘ ಆಸ್ತಿ ನನ್ನಪ್ಪ.
| ವೆಂಕಟೇಶ ಬಿ ಪಾಟೀಲಶಹಾಪುರ, ಯಾದಗಿರಿ ಜಿಲ್ಲೆ
ಅಪ್ಪ ಎಂದರೆ ಅದೊಂದು ಶಕ್ತಿ, ಅವನೊಬ್ಬ ಸರ್ವಶಕ್ತ. ಈಗಲೂ ಅಷ್ಟೇ, ಅಪ್ಪ ನನ್ನ ಜತೆಗಿದ್ದರೆ ನನ್ನೆಲ್ಲ ಜವಾಬ್ದಾರಿ, ಭಾರಗಳು ಸರ›ಂತ ಇಳಿದುಹೋಗಿಹಗುರವಾದ ನಿರಾಳ ಭಾವ ಆವರಿಸುತ್ತದೆ. ಬರೋಬ್ಬರಿ ಸಾರ್ಥಕ ಎಂಬತ್ತ ಮೂರು ವರ್ಷಗಳನ್ನು ಪೂರೃೆಸಿ ದಿನವೂ ಲವಲವಿಕೆಯಿಂದಿರುವ ನನ್ನಪ್ಪ ಇಡೀ ಮನೆತನಕ್ಕೇ ಹಿರಿಯ. ಆದರೆ, ಮನೆಮಂದಿಯ ಪಾಲಿನ ಪುಟ್ಟ ಮಗು! ಜತೆಗೆ ನನ್ನ ಪಾಲಿಗೆ ಒಳ್ಳೆಯ ಗೆಳೆಯ ಕೂಡಾ ಹೌದು! ನಾನು ಕಾಲೇಜು ಮೆಟ್ಟಿಲನ್ನು ಹತ್ತಿದಾಗ, ‘ರಾಜೂ.. ವಿದ್ಯಾಭ್ಯಾಸ ನಿನ್ನ ಸಾಮರ್ಥ್ಯದಂತೆ ಮಾಡು, ಇದರಲ್ಲಿ ನನ್ನ ಯಾವುದೇ ಒತ್ತಡ ಇಲ್ಲ. ಆದರೆ, ಯಾವುದೇ ದುಷ್ಟಚಟಗಳನ್ನು ಕಲಿಯಬೇಡಾ. ಮನಸ್ಸಿನ ಮೇಲೆ ಹತೋಟಿ ಇದ್ದವನೇ ಮಹಾತ್ಮಾ. ನೆನಪಿನಲ್ಲಿಟ್ಟುಕೊ’ ಎಂದಿದ್ದ. ಪ್ರಾಮಾಣಿಕತೆ, ನ್ಯಾಯ, ನೀತಿ, ಸತ್ಯ, ಧರ್ಮದಿಂದ ಬದುಕು. ಬೆಟ್ಟದ ತುದಿಯಲ್ಲಿ ಒಬ್ಬನೇ ಕುಳಿತರೂ ಒಂದು ತುತ್ತು ಅನ್ನ ಸಿಗುತ್ತದೆ ಅಂದಿದ್ದರು.ಈಗಲೂ ಅನ್ನುತ್ತಲೇ ಇರುತ್ತಾರೆ. ಅಪ್ಪ ಅಂದ ಈ ಮಾತುಗಳನ್ನು ನಾನು ಮರೆತಿಲ್ಲ. ತತ್ಪಲವಾಗಿ ನನ್ನದು ಸಂತೃಪ್ತಿಯ ಜೀವನ.
| ರಾಜೂ ಶಂಕರಪ್ಪ ಪೇಟಕರ ವಿನಾಯಕ ನಗರ, ಹಾವೇರಿ
ಜನ್ಮ ಜನ್ಮಾಂತರದಲ್ಲೂ ಋಣ ತೀರಿಸಲಾಗದ ಭಗವಂತ ಅಪ್ಪಾ. ಅಪ್ಪಾ ಅಂದಾಗಲೆಲ್ಲಾ ನನಗೆ ನೆನಪಾಗುವುದು ನನ್ನ 12 ವಯಸ್ಸಿನಲ್ಲಿ ನಡೆದ ಒಂದು ಮರೆಯಲಾಗದ ಘಟನೆ. ನಾನು ಹುಟ್ಟಿದ ಗ್ರಾಮ ಆವಾಗ ಅಷ್ಟೇನೂ ವೈದ್ಯಕೀಯ ಸೌಲಭ್ಯಗಳಿಲ್ಲದ ದಿನಗಳು. ಅದೊಂದು ದಿನ ರಾತ್ರಿಯ ಸಮಯ 1 ಗಂಟೆ ನನಗೆ ವಿಪರೀತ ಜ್ವರ-ವಾಕರಿಕೆ ಬಂದು ಬಳಲುತ್ತಿದ್ದ ನನ್ನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು 1 ಕೀ.ಮಿ ನಡೆದು ಗ್ರಾಮದ ವೈದ್ಯರ ಮನೆಗೆ ಕತ್ತಲಲ್ಲಿ ತೆರಳಿದರು. ಮಗನಿಗೆ ಏನಾಗುತ್ತದೆಯೋ ಎಂದು ಗಾಬರಿಯಿಂದ ಕೂಗಿದಾಗ ವೈದ್ಯರು ಕಿಟಕಿಯಿಂದಲೇ ವಿಚಾರಿಸಿ ಮಾತ್ರೆಗಳನ್ನು ನೀಡಿದರು, ಆ ಮಧ್ಯರಾತ್ರಿ ನಮ್ಮ ತಂದೆಯವರು ಪಟ್ಟ ಶ್ರಮ ಇವತ್ತಿಗೂ ನೆನೆದಾಗ ಕಣ್ಣಂಚಿನಲ್ಲಿ ನೀರುಬರುವುದು. ತಂದೆ ತನ್ನ ಮಕ್ಕಳಿಗಾಗಿ ತನ್ನ ಜೀವನವನ್ನೇ ಲೆಕ್ಕಿಸದೆ ಹೋರಾಡುವ ಕಣ್ಣಿಗೆ ಕಾಣುವ ಭಗವಂತ.
| ಶ್ರೀಕಾಂತರಾವ್ ಕುಲಕರ್ಣಿಲಿಂಗಸುಗೂರು, ರಾಯಚೂರ ಜಿಲ್ಲೆ

ಸಾಮಾನ್ಯವಾಗಿ ಮಕ್ಕಳಿಗೆ ಅಮ್ಮನೆಂದರೆ ಇಷ್ಟ. ಹೆಣ್ಣು ಮಕ್ಕಳು ಅಪ್ಪನನ್ನು ಪ್ರೀತಿಸಿದರೆ, ಗಂಡು ಮಕ್ಕಳು ಅಮ್ಮನನ್ನು ಪ್ರೀತಿಸುವುದನ್ನು ನೋಡುತ್ತೇವೆ. ಆದರೆ, ನನ್ನ ಬದುಕಿನಲ್ಲಿ ಎಲ್ಲವೂ ಅಪ್ಪನೆ ಆಗಿದ್ದ. ಅಪ್ಪನೇ ನನ್ನ ಜೀವನದಲ್ಲಿ ನನಗೆ ದೊಡ್ಡ ರೋಲ್ ಮಾಡೆಲ್. ಸ್ವಾತಂತ್ರ್ಯಯೋಧರಾದ ನನ್ನಪ್ಪ ಸ್ವಾತಂತ್ರ್ಯಹೋರಾಟದಲ್ಲಿ ಜೈಲುವಾಸ ಅನುಭವಿಸಿದ ಅಪ್ಪಟ ರಾಷ್ಟ್ರಪ್ರೇಮಿಯಾಗಿದ್ದರು. ನನ್ನಪ್ಪ ಮಕ್ಕಳಿಗೆ ಪ್ರೀತಿಯ ಅಪ್ಪನಾಗಿ, ದಾರಿತೋರಿಸುವ ಮಾರ್ಗದರ್ಶಕನಾಗಿ, ನಮ್ಮ ಭವಿಷ್ಯದ ಬಗ್ಗೆ ಚಿಂತಿ ಸುವ ಚಿಂತಕನಾಗಿ, ಸಮಸ್ಯೆಯನ್ನು ಎದದುರಿಸುವ ತಂತ್ರಗಾರಿಕೆಯನ್ನು ನನಗೆ ಎರಕ ಹೊಯ್ದವ. ಸಾಮಾನ್ಯ ರೈತ ಕುಟುಂಬದಲ್ಲಿ ಬೆಳದ ನನಗೆ ನನ್ನಪ್ಪ ಮೀನು ತಂದು ಕೊಡಲಿಲ್ಲ. ಬದಲಾಗಿ ಮೀನನ್ನೆ ಹಿಡಿಯಲು ಕಲಿಸಿದ. ಅಪ್ಪ ದೈಹಿಕವಾಗಿ ನನ್ನ ಜೊತೆ ಇಲ್ಲದೆ ಇದ್ದರೂ ಇರುವಿಕೆಯ ಅನುಭವ ನೀಡುತ್ತಲೆ ಇರುತ್ತಾನೆ.
| ಬೀರಣ್ಣ ನಾಯಕ ಮೊಗಟಾ

ತಂದೆ ಎಂದರೆ ಶಕ್ತಿ, ಕೈ ಹಿಡಿದು ನಡೆಸುವಾತ, ಸುರಕ್ಷಿತ ಭಾವ, ತಿಂಡಿ-ತಿನುಸುಗಳ ಕೊಡಿಸುವಾತ. ದೈರ್ಯ ತುಂಬುವಾತ. ಇಂತಹ ತಂದೆಯ ಬಗ್ಗೆ ಏಷ್ಟು ಹೇಳಿದರೂ ಸಾಲದು. ನಾನು ಚಿಕ್ಕವನಿದ್ದಾಗ ನನ್ನನ್ನು ಎಂ.ಕೆ. ಹುಬ್ಬಳ್ಳಿ ನದಿಯಲ್ಲಿ ಈಜು ಕಲಿಸಿದ ನೆನಪು. ನಾನು ಕಿತ್ತೂರಿನ ದಾರಿಯಲ್ಲಿ ಹೋಗುತ್ತಿರುವಾಗ ಈಗಲೂ ನನಗೆ ನದಿಯ ದಂಡೆಯಲ್ಲಿ ಈಜಲು ಕಲಿಸಿದ ಆ ಕ್ಷಣ ಕಣ್ಣು ಮುಂದೆಯೇ ಬರುತ್ತದೆ. ಆಗ ನನಗೆ 3-4 ವರ್ಷವಿದ್ದಿರಬಹುದೇನೋ.. ಆದರೆ ಈಗ ನನಗೆ 54 ವರ್ಷ. ಆದರೂ ಆ ಹಾದಿ ನನ್ನ ತಂದೆಯವರನ್ನು ನೆನೆಪಿಸುತ್ತದೆ. ಚನ್ನಮ್ಮನ ಕಿತ್ತೂರಿನ ಅಲಂಕಾರ ಎಂಬ ಚಿಕ್ಕ ಹೊಟೇಲೊಂದರಲ್ಲಿ ಪೂರಿ-ಬಾಜಿ ತಿನಿಸಿದ ನೆನಪು, ಆ ರುಚಿ ಮತ್ತು ಸ್ವಾದ ಈಗ ರಾಜ್ಯಾದ್ಯಂತ ತಿರುಗುವ ನನಗೆ ಎಲ್ಲೋ ಅಪರೂಪ ಎಂಬಂತೆ ಸಿಕ್ಕರೆ, 50 ವರ್ಷದ ಹಿಂದಿನ ನೆನಪು ನನ್ನ ಮನದಲ್ಲಿ ಮೂಡುತ್ತದೆ.
| ಸಂಜಯ ಉಪರಿ

ನನ್ನ ಜೀವನದಲ್ಲಿ ನಡೆದ ಕಹಿ ಘಟನೆ. ಒಂದು ದಿನ ಅಪ್ಪಾ ನನಗೆ ಫೋನ್ ಮಾಡಿ, ‘ನಾನು ಇವತ್ತು ವಿಜಯಪುರಕ್ಕೆ ಬರ್ತಾ ಇದ್ದೀನಿ, ಲ್ಯಾಪ್​ಟಾಪ್ ಕೊಡಿಸೋಕೆ’ ಎಂದರು. ಅಪ್ಪ ಬಂದರು. ಇಬ್ಬರೂ ಲ್ಯಾಪ್​ಟಾಪ್ ತರಲು ಮಾಲ್​ಗೆ ಹೊರಟೆವು. ಲ್ಯಾಪ್​ಟಾಪ್ ಆಯ್ಕೆ ಮಾಡಿ ಅದಕ್ಕೆ 45,000 ರೂಪಾಯಿ ಪಾವತಿಸಬೇಕೆನ್ನುವಷ್ಟರಲ್ಲಿ ಆಘಾತ ಕಾದಿತ್ತು. ಅಪ್ಪಾ ಹಣ ಕೊಡಬೇಕು ಎಂದು ಜೇಬಿಗೆ ಕೈ ಹಾಕಿದಾಗ ಹಣವೇ ಇರಲಿಲ್ಲ. ಯಾರೋ 50 ಸಾವಿರ ರೂಪಾಯಿ ಕದ್ದಿದ್ದರು. ನನ್ನ ಕಣ್ಣಲ್ಲಿ ನೀರು ಬಂದು ಬಿಟ್ಟಿತು. ಹಾಸ್ಟೆಲ್​ಗೆ ವಾಪಸಾದೆ. ಮತ್ತೆ ಮರುದಿನ ಅಪ್ಪಾ ಬಂದರು. ಬೇಡ ಎಂದರೂ ಮೊದಲು ನೋಡಿದ ಲ್ಯಾಪ್​ಟಾಪನ್ನೇ ಕೊಡಿಸಿದರು. ಆ ದಿನಪೂರ್ತಿ ನನ್ನ ಜತೆಗೆ ಇದ್ದರೂ ಹಣ ಕಳೆದಿದ್ದರ ಬಗ್ಗೆ ಒಂದು ಮಾತು ಕೂಡ ಆಡಲಿಲ್ಲ. ಸಾರಿ ಅಪ್ಪಾ, ಕೇವಲ ಒಂದು ಲ್ಯಾಪ್​ಟಾಪ್​ಗೋಸ್ಕರ ನಿಮ್ಮಿಂದ ಒಂದು ಲಕ್ಷ ರೂಪಾಯಿ ಹಾಕಿಸಬೇಕಾಗಿ ಬಂತು. ನಿಮ್ಮ ಕನಸನ್ನು ನನಸು ಮಾಡುತ್ತೇನೆ. ನಿಮ್ಮಂಥ ಅಪ್ಪನನ್ನು ಪಡೆಯಲು ನೂರಾರು ಜನ್ಮದ ಪುಣ್ಯ ಮಾಡಿರಬೇಕು.
| ದೀಪಾ. ಎಸ್. ಮಂಜರಗಿ ವಿಜಯಪುರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − nine =
Remember me
