ಬೆಂಗಳೂರು:ಓದಿದ್ದು ಬಿಎಸ್​ಸಿ. ಶಿಕ್ಷಕರಾಗುವ ಆಕಾಂಕ್ಷೆಯೊಂದಿಗೆ ನಂತರ ಬಿ.ಇಡಿ ವ್ಯಾಸಂಗವನ್ನೂ ಮಾಡಿದ್ದಾಯ್ತು. ಜತೆಗೆ, ಶಿಕ್ಷಕರರಾಗುವ ಅರ್ಹತೆ ಪಡೆಯಲು ನಿಗದಿಯಾಗಿರುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ ಅಥವಾ ಅರ್ಹತೆ ಗಳಿಸಿಕೊಂಡಿದ್ದಾರೆ. ನಾಲ್ಕು ವರ್ಷಗಳಿಂದ ನೇಮಕಾತಿಗಾಗಿ ಕಾಯ್ದು ಕುಳಿತಿದ್ದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವಾಗ ಶಿಕ್ಷಣ ಇಲಾಖೆ ಶಾಕ್ ನೀಡಿದೆ. ಈ ಮೂಲಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಗೊಂದಲಗಳು ಮುಂದುವರಿದಿವೆ. ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿಗೆ ಮುಂದಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು ಆಕಾಂಕ್ಷಿಗಳಿಗೆ ವರದಾನವಾಗಿ ಪರಿಣಮಿಸಿತ್ತು. ಜೀವವಿಜ್ಞಾನ ವಿಷಯದಲ್ಲಿ ಇದೇ ಮೊದಲ ಬಾರಿಗೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆದರೆ, ಇದಕ್ಕೆ ತತ್ಸಮಾನ ವಿಷಯ ಪರಿಗಣಿಸುವಾಗ ಆಯ್ದ ವಿಷಯಗಳನ್ನಷ್ಟೇ ಪರಿಗಣಿಸಿರುವುದು ಇತರ ಅಭ್ಯರ್ಥಿಗಳಿಗೆ ಸಹಜವಾಗಿಯೇ ನಿರಾಶೆಯುಂಟು ಮಾಡಿದೆ.
ನಿಯಮ ಏನಿದೆ?:ಗಣಿತ ಹಾಗೂ ವಿಜ್ಞಾನ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಪದವಿಯಲ್ಲಿ ಗಣಿತ ಹಾಗೂ ಭೌತಶಾಸ್ತ್ರವನ್ನು ಮೂರು ವರ್ಷವೂ ಕಡ್ಡಾಯವಾಗಿ ಓದಿರಬೇಕು. ಜತೆಗೆ, ಎಲೆಕ್ಟ್ರಾನಿಕ್ಸ್, ಗಣಕಶಾಸ್ತ್ರ, ಸಂಖ್ಯಾಶಾಸ್ತ್ರ, ಭೂಗರ್ಭಶಾಸ್ತ್ರ ಓದಿರಬೇಕು ಎಂದು ನಿಯಮ ರೂಪಿಸಲಾಗಿದೆ.
ಅಂತೆಯೇ, ಜೀವವಿಜ್ಞಾನ ಶಿಕ್ಷಕರ ಹುದ್ದೆಗೆ ರಸಾಯನಶಾಸ್ತ್ರವನ್ನು ಪದವಿಯ ಮೂರು ವರ್ಷವೂ ಅಧ್ಯಯನ ಮಾಡಿರಬೇಕು. ಜತೆಗೆ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ರೇಷ್ಮೆ, ಕೃಷಿ, ಪರಿಸರ ವಿಜ್ಞಾನ, ತಳಿಶಾಸ್ತ್ರ, ಜೈವಿಕ ತಂತ್ರಜ್ಞಾನ ಅಥವಾ ಸೂಕ್ಷ್ಮಜೀವಿಶಾಸ್ತ್ರಗಳ ಪೈಕಿ ಎರಡೂ ವಿಷಯಗಳನ್ನು ವ್ಯಾಸಂಗ ಮಾಡಿರಬೇಕು ಎಂದು ನಿಯಮ ರೂಪಿಸ ಲಾಗಿದೆ. ಆದರೆ, ರೇಷ್ಮೆ ಕೃಷಿ ವಿಷಯ ಜೀವವಿಜ್ಞಾನಕ್ಕೆ ಹತ್ತಿರವಾಗುವುದಾದರೆ, ಮೀನುಗಾರಿಕೆ ಏಕಿಲ್ಲ ಎನ್ನುವ ಪ್ರಶ್ನೆ ಅಭ್ಯರ್ಥಿಗಳದ್ದಾಗಿದೆ. ಪದವಿಯಲ್ಲಿ ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಓದಿ, ಮೂರನೇ ವಿಷಯವಾಗಿ ಮೀನುಗಾರಿಕೆಯನ್ನು ಆಯ್ದುಕೊಂಡಿದ್ದಾರೆ. ಎರಡು ವಿಷಯಗಳು ಜೀವವಿಜ್ಞಾನ ಶಿಕ್ಷಕರ ನೇಮಕಾತಿ ಅರ್ಹತೆ ಒದಗಿಸಿದರೂ ಮೂರನೇ ವಿಷಯದಿಂದ ಅನರ್ಹರಾಗುವಂತಾಗಿದೆ ಎನ್ನುವುದು ಅಭ್ಯರ್ಥಿಗಳ ಅಳಲು. ಇಂಜಿನಿಯರಿಂಗ್ ಓದಿದವರಿಗೆ ಸಿಗುತ್ತಿರುವ ಅರ್ಹತೆ, ಬಿಎಸ್​ಸಿ ಪದವೀಧರರಿಗೇ ಇಲ್ಲದಂತಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ.
ಅರ್ಹರನ್ನು ಒಳಗೊಳ್ಳುವಂತಿರಲಿ:ಅಭ್ಯರ್ಥಿಗಳು ಬಿ.ಇಡಿ ವ್ಯಾಸಂಗ ಮಾಡುವ ಉದ್ದೇಶವೇ ಬೋಧನಾ ವೃತ್ತಿಯನ್ನು ಕೈಗೊಳ್ಳುವುದಾಗಿರುತ್ತದೆ. ಅದರಲ್ಲೂ ಟಿಇಟಿಯಲ್ಲಿ ಪಾಲ್ಗೊಳ್ಳುವುದು ಶಿಕ್ಷಕರಾಗಬೇಕು ಎನ್ನುವ ಕಾರಣಕ್ಕೆ. ಇವೆರಡಕ್ಕೂ ಅಡ್ಡಿಯಾಗದ ಅರ್ಹತೆ ವಿಚಾರ ನೇಮಕಾತಿ ಹಂತದಲ್ಲಿ ಉದ್ಭವಿಸುವ ಕಾರಣವಾದರೂ ಏನು ಎನ್ನುವುದು ಅಭ್ಯರ್ಥಿಗಳ ಪ್ರಶ್ನೆ. ಇವೆರಡಲ್ಲಿಯೂ ಅರ್ಹತೆ ಪಡೆದವರನ್ನು ಒಳಗೊಳ್ಳುವ ನಿಯಮಗಳನ್ನು ನೇಮಕಾತಿ ಹಂತದಲ್ಲಿ ರೂಪಿಸಬೇಕೆ ಹೊರತು, ಹೊರಗಿಡುವಂತಾಗಬಾರದು ಎನ್ನುತ್ತಾರೆ ಅಭ್ಯರ್ಥಿಗಳು. ಜೀವವಿಜ್ಞಾನಕ್ಕೆ ರೇಷ್ಮೆ ಕೃಷಿ ಪರಿಗಣಿಸುವುದಾದರೆ, ಮೀನುಗಾರಿಕೆ ಏಕಿಲ್ಲ ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಬೇಕಾಗಿದೆ.
ಅಧಿಕಾರಿಗಳು ಹೇಳೋದೇನು?
ಅರ್ಜಿ ಸಲ್ಲಿಕೆಗಾಗಿ ನಿಯಮಗಳನ್ನು ರೂಪಿಸಿ ಪಾಲಿಸಲಾಗುತ್ತಿದೆ. ಕರಡು ನಿಯಮಗಳನ್ನು ಬಿಡುಗಡೆ ಮಾಡಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಆಗ ಬಂದ ಹಲವು ಸಲಹೆ, ಆಕ್ಷೇಪಣೆಗಳನ್ನು ಪರಿಗಣಿಸಿ ನಿಯಮಗಳನ್ನು ಅಂತಿಮಗೊಳಿಸಲಾಗಿದೆ. ಆಯಾ ವಿಷಯಗಳಿಗೆ ತತ್ಸಮಾನ ವಿಷಯಗಳನ್ನು ತಜ್ಞರ ಶಿಫಾರಸಿನಂತೆ ಪರಿಗಣಿಸಲಾಗಿದೆ ಎನ್ನುವುದು ಅಧಿಕಾರಿಗಳ ವಾದ. ಆದರೆ, ಬಿಇಡಿ, ಟಿಇಟಿ ಬಳಿಕವೂ ಶಿಕ್ಷಕರ ನೇಮಕಾತಿಯಿಂದ ಹೊರಗುಳಿವುದಾದರೆ ಇಷ್ಟು ವರ್ಷಗಳ ವ್ಯಾಸಂಗ ಹಾಗೂ ಪರಿಶ್ರಮಕ್ಕೆ ದೊರೆತ ಫಲವಾದರೂ ಏನು? ಭವಿಷ್ಯವೇನು ಎನ್ನುತ್ತಾರೆ ನೊಂದ ಆಕಾಂಕ್ಷಿಗಳು.
ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಹಾಗೂ ಕೈಗಾರಿಕಾ ಮೀನುಗಾರಿಕೆ ವಿಷಯದಲ್ಲಿ ಬಿಎಸ್​ಸಿ ಪದವಿ ಪಡೆದಿದ್ದೇನೆ. ಬಿ.ಇಡಿ ಮುಗಿಸಿ ಟಿಇಟಿ ಯಲ್ಲೂ ಅರ್ಹತೆ ಗಳಿಸಿದ್ದೇನೆ. ಆದರೆ, ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲಾಗದ ಅಸಹಾಯಕತೆ ನನ್ನದಾಗಿದೆ.
|ಪ್ರಶಾಂತ ಸಂಕೇಶ್ವರನೊಂದ ಅಭ್ಯರ್ಥಿ
|ಅವಿನಾಶ ಎಸ್.ಮೈಸೂರು
ಹೆಜ್ಜೆ ಹೆಜ್ಜೆಗೂ ತೊಡಕುಗಳನ್ನೇ ಹೊದ್ದು ಮಲಗಿರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಶಿಕ್ಷಣಾರ್ಥಿಗಳ ಪಾಲಿಗೆ ದೊಡ್ಡ ಪ್ರಹಸನವಾಗಿದ್ದು, ಪದವಿಯಲ್ಲಿ ‘ಸಾರ್ವಜನಿಕ ಆಡಳಿತ’ ಓದಿರುವ ವಿದ್ಯಾರ್ಥಿಗಳು ಎಲ್ಲ ಅರ್ಹತೆ ಗಳಿಸಿಯೂ ಶಿಕ್ಷಣ ಇಲಾಖೆ ಎಡವಟ್ಟಿನಿಂದ ಅರ್ಜಿ ಹಾಕಲಾಗದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಆಯುಕ್ತರು, ಸಚಿವರಿಗೆ ಪತ್ರ ಬರೆದು ಲೋಪ ಸರಿಪಡಿಸಲು ಮನವಿ ಮಾಡಿದರೂ ಯಾರೊಬ್ಬರು ಗಮನಹರಿಸದೆ ಇರುವುದು ಆಡಳಿತ ವರ್ಗದ ನಿರ್ಲಕ್ಷ್ಯ್ಕೆ ಸಾಕ್ಷಿಯಾಗಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ಇಲಾಖೆಯ ಆದೇಶ ನುಂಗಲಾರದ ತುತ್ತಾಗಿದೆ. ಕಾಲೇಜಿನ ಕಲಾ ವಿಭಾಗದಲ್ಲಿ ಸಾರ್ವಜನಿಕ ಆಡಳಿತ, ಪತ್ರಿಕೋದ್ಯಮ, ಆಂಗ್ಲಭಾಷಾ (ಪಿಜೆಇ) ವಿಷಯದಲ್ಲಿ ಪದವಿ ಪಡೆದು ಇಂಗ್ಲಿಷ್ ವಿಷಯದಲ್ಲಿ ಬಿ.ಇಡಿ ಮತ್ತು ಟಿಇಟಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಇದೀಗ ಅರ್ಜಿ ಸಲ್ಲಿಸಲು ಹೋದರೆ ಸಾರ್ವಜನಿಕ ಆಡಳಿತ ವಿಷಯವನ್ನೇ ಪರಿಗಣಿಸದಿ ರುವುದು ಬೆಳಕಿಗೆ ಬಂದಿದೆ. ಸರ್ಕಾರದ ಈ ದ್ವಂದ್ವ ನೀತಿಯಿಂದಾಗಿ ನೂರಾರು ವಿದ್ಯಾರ್ಥಿಗಳ ಭವಿಷ್ಯ ಮಂಕಾಗಿದೆ.
ರಾಜ್ಯಶಾಸ್ತ್ರಕ್ಕೆ ತತ್ಸಮಾನಗೊಳಿಸಿ:ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ಸಂದರ್ಭದಲ್ಲಿಯೂ ಇದೇ ಸಮಸ್ಯೆ ಉದ್ಭವಿಸಿತ್ತು. ಆ ವೇಳೆ ‘ಸಾರ್ವಜನಿಕ ಆಡಳಿತ’ ವಿಷಯವನ್ನು ‘ರಾಜ್ಯಶಾಸ್ತ್ರ’ ವಿಷಯಕ್ಕೆ ತತ್ಸಮಾನ ಎಂದು ಪರಿಗಣಿಸಿ ಅರ್ಜಿ ಸ್ವೀಕರಿಸಲಾಗಿತ್ತು. ಈಗಲೂ ಅದೇ ಮಾದರಿಯನ್ನು ಅನುಸರಿಸಿ ನ್ಯಾಯ ಒದಗಿಸಿ ಎಂಬುದು ಅವಕಾಶ ವಂಚಿತ ವಿದ್ಯಾರ್ಥಿಗಳ ಆಗ್ರಹವಾಗಿದೆ. ಸಮಸ್ಯೆ ಹೇಳಿಕೊಂಡು ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಸಚಿವರಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ.
ಅರ್ಜಿ ಸ್ವೀಕಾರ ಅವಧಿ ಮುಂದೂಡಿ:ಅರ್ಜಿ ಸ್ವೀಕಾರಕ್ಕೆ ಏ.22 ಕೊನೆಯ ದಿನವಾಗಿದ್ದು, ಅಷ್ಟರೊಳಗೆ ಇಲಾಖೆ ಸೂಚಿಸಿರುವ ಮಾನದಂಡಗಳೊಂದಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಮೈಸೂರು ವಿವಿಯಲ್ಲಿ ಉಂಟಾಗಿರುವ ಗ್ರೇಡ್ ಪಾಯಿಂಟ್ ಸಮಸ್ಯೆ, ‘ಸಾರ್ವಜನಿಕರ ಆಡಳಿತ’ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪದವಿಯಲ್ಲಿ ಇಂಗ್ಲಿಷ್ ಐಚ್ಛಿಕ ಓದುವವರಿಗೆ ‘ಸಾರ್ವಜನಿಕ ಆಡಳಿತ’ ವಿಷಯ ಅನಿವಾರ್ಯ ಆಯ್ಕೆ ಯಾಗಿತ್ತು. ಆದರೆ, ಈಗ ಅದನ್ನು ಒಂದು ವಿಷಯವಾಗಿ ಪರಿಗಣಿಸದಿರುವುದು ಎಷ್ಟು ಸರಿ? ‘ಸಾರ್ವಜನಿಕ ಆಡಳಿತ’ ವಿಷಯವನ್ನು ‘ರಾಜ್ಯಶಾಸ್ತ್ರ’ದ ತತ್ಸಮಾನ ಎಂದು ಪರಿಗಣಿಸಿ ನಮಗೆ ನ್ಯಾಯ ಒದಗಿಸಿ.
|ಪಲ್ಲವಿಅಭ್ಯರ್ಥಿ ಕೆ.ಆರ್.ಪೇಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
