|ರಮೇಶ ದೊಡ್ಡಪುರಬೆಂಗಳೂರು
ಕರೊನಾ ನಿಯಂತ್ರಣದ ಸಲುವಾಗಿ ಕಳೆದೆರಡು ವರ್ಷದಲ್ಲಿ ವಿಧಿಸಲಾದ ಸಾಲು ಸಾಲು ಲಾಕ್​ಡೌನ್, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂಗಳಿಂದ ನಲುಗಿರುವ ಆಟೋರಿಕ್ಷಾ ಚಾಲಕರಿಗೆ ಇನ್ನೊಂದು ತಿಂಗಳಲ್ಲಿ ಮತ್ತೊಂದು ಆಘಾತ ಎದುರಾಗಲಿದೆ.
ಬೆಂಗಳೂರಿನಲ್ಲಿ ಮಾಲಿನ್ಯ ನಿಯಂತ್ರಣದ ಸಲುವಾಗಿ ಟು-ಸ್ಟ್ರೋಕ್ ಆಟೋಗಳ ಅರ್ಹತಾ ಪ್ರಮಾಣಪತ್ರ (ಎಫ್​ಸಿ) ಅವಧಿಯನ್ನು ಮಾ.31ಕ್ಕೆ ಮುಕ್ತಾಯಗೊಳಿಸುವುದಾಗಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ 10 ಸಾವಿರ ಟು-ಸ್ಟ್ರೋಕ್ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ.
2018ರಲ್ಲಿ ಮೊದಲ ಆದೇಶ:ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾಲಿನ್ಯ ಮಿತಿಮೀರಿ ಹೆಚ್ಚಳವಾದಂತೆಯೇ ಬೆಂಗಳೂರಿನಲ್ಲೂ ವಾಯುಮಾಲಿನ್ಯ ನಿಯಂತ್ರಿಸಲು ಸರ್ಕಾರಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ. ಟು-ಸ್ಟ್ರೋಕ್ ಆಟೋಗಳು ನವೀಕರಿಸಲಾಗದ ಪೆಟ್ರೋಲ್ ಬಳಸುವುದರಿಂದ ಹಾಗೂ ಅವುಗಳ ಕಾರ್ಯಕ್ಷಮತೆ ಕ್ಷೀಣಿಸುವುದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗಿರುತ್ತದೆ. ಅವುಗಳು ಇತ್ತೀಚಿನ ಬಿಎಸ್ ಸರಣಿ ಮತ್ತು ಭಾರತ್ ಸರಣಿಯ ಮಾನದಂಡಕ್ಕಿಂತ ಹೆಚ್ಚು ಹೊಗೆ ಸೂಸುತ್ತವೆ ಎಂಬ ಕಾರಣಕ್ಕೆ 2017ರಲ್ಲಿ ನಿಷೇಧದ ಆದೇಶ ಹೊರಡಿಸಿತು. ಈ ಆದೇಶ 2018ರ ಏಪ್ರಿಲ್​ನಿಂದ ಜಾರಿಗೆ ಬರುತ್ತದೆ ಎಂದು ತಿಳಿಸಲಾಯಿತು.
ಹೊಸ ಆಟೋ ಖರೀದಿಸಲು ಆರ್ಥಿಕಹೊರೆಯಾಗುತ್ತದೆ ಎಂದು ಚಾಲಕರು ಪ್ರತಿಭಟನೆ ನಡೆಸಿದರು. ನಂತರ ಸರ್ಕಾರವು, ಪ್ರತಿ ಟು-ಸ್ಟ್ರೋಕ್ ಆಟೋವನ್ನು ಬದಲಿಸಿ ಫೋರ್-ಸ್ಟ್ರೋಕ್ ಆಟೋ ಖರೀದಿಸುವವರಿಗೆ 30 ಸಾವಿರ ರೂ. ಸಹಾಯಧನ ನೀಡುವುದಾಗಿ ಘೋಷಿಸಿತು.
ವಾಪಸಾಯಿತು 30 ಕೋಟಿ ರೂ.:ಟು-ಸ್ಟ್ರೋಕ್ ಆಟೋಗಳನ್ನು ಸ್ಕ್ರಾಪ್ ಮಾಡಿ 10 ಸಾವಿರ ಆಟೋಗಳನ್ನು 4-ಸ್ಟ್ರೋಕ್​ಗೆ ಬದಲಾಯಿಸುವವರಿಗೆ 30 ಸಾವಿರ ರೂ. ಸಹಾಯಧನ ನೀಡಲು 30 ಕೋಟಿ ರೂ. ನೀಡುವುದಾಗಿ 2017-18ರಲ್ಲಿ ಸಿದ್ದರಾಮಯ್ಯ ಬಜೆಟ್ ಘೋಷಣೆ ಮಾಡಿದರು. ಆದರೆ ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದಾಗಿ ಈ ಹಣ ಉಪಯೋಗವಾಗದೆ ವರ್ಷಾಂತ್ಯದಲ್ಲಿ ಸರ್ಕಾರಕ್ಕೆ ವಾಪಸಾಯಿತು ಹಾಗೂ ಬೇರೆ ಯೋಜನೆಗೆ ಉಪಯೋಗವಾಯಿತು ಎಂದು ಆಟೋರಿಕ್ಷಾ ಚಾಲಕರು ಆಪಾದಿಸುತ್ತಾರೆ.
ಮೊದಲ ಆದೇಶದ ನಂತರ ಇನ್ನೂ ಸುಮಾರು 15 ಸಾವಿರ ಟು-ಸ್ಟ್ರೋಕ್ ಆಟೊಗಳು ಇದ್ದದ್ದನ್ನು ಗಮನಿಸಿದ ಸರ್ಕಾರ, ಎಫ್​ಸಿ ಅವಧಿಯನ್ನು 2020ರ ಮಾ.31ರವರೆಗೆ ವಿಸ್ತರಣೆ ಮಾಡಿ 2018ರಲ್ಲಿ ಆದೇಶ ಹೊರಡಿಸಿತು. 2020ರಲ್ಲಿ ಕೋವಿಡ್ ಸೋಂಕು ಆವರಿಸಿಕೊಂಡಿದ್ದರಿಂದ 2020ರ ಜೂ.10ರಂದು ಸಾರಿಗೆ ಇಲಾಖೆ ಅಧಿಕಾರಿಗಳು ಆಟೋ ಸಂಘಟನೆಗಳ ಜತೆ ಸಭೆ ನಡೆಸಿ ಮತ್ತೆ ಎರಡು ವರ್ಷ ವಿಸ್ತರಣೆ ಮಾಡಿತು. ಇದೀಗ 2022ರ ಮಾ.31ಕ್ಕೆ ಎಫ್​ಸಿ ಅವಧಿ ಮುಕ್ತಾಯವಾಗುತ್ತದೆ ಎಂದು ಸಾರಿಗೆ ಇಲಾಖೆ ಕಳೆದ ವಾರ ಆದೇಶ ಹೊರಡಿಸಿದೆ. ಅಂದರೆ ಈ ಬಾರಿ ಯಾವುದೇ ಕಾರಣಕ್ಕೆ ಎಫ್​ಸಿ ಅವಧಿ ವಿಸ್ತರಣೆ ಮಾಡುವುದಿಲ್ಲ. ಅವಧಿಯ ನಂತರ ಬೆಂಗಳೂರು ವ್ಯಾಪ್ತಿಯಲ್ಲಿ ಟು-ಸ್ಟ್ರೋಕ್ ಆಟೋ ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಸರ್ಕಾರದ ಅಸಡ್ಡೆ:ಸರ್ಕಾರ ಪ್ರತಿ ಆಟೋಗೆ 30 ಸಾವಿರ ರೂ. ಸಹಾಯಧನ ಘೊಷಣೆ ಮಾಡಿದಾಗ ಪ್ರತಿ ಹೊಸ ಆಟೋ ದರ ಅಂದಾಜು 1.5 ಲಕ್ಷ ರೂ. ಇತ್ತು. ಹಾಗಾಗಿ ಈ ಮೊತ್ತವನ್ನು 50 ಸಾವಿರ ರೂ.ಗೆ ಹೆಚ್ಚಿಸಲು ಆಟೊರಿಕ್ಷಾ ಮಾಲೀಕರು ಹಾಗೂ ಸಂಘಟನೆಗಳು ಮನವಿ ಮಾಡಿದ್ದವು. ಆದರೆ ಸರ್ಕಾರ ಅದನ್ನು ಪರಿಗಣಿಸಲಿಲ್ಲ. ಹೆಚ್ಚಿಸದಿದ್ದರೂ ಸರಿ, ಘೋಷಣೆಯಾದ ಮೊತ್ತವನ್ನೂ ಸರ್ಕಾರ ನೀಡಲಿಲ್ಲ. ನಮ್ಮ ಮೂಲಕ 15ಕ್ಕೂ ಹೆಚ್ಚು ಆಟೋರಿಕ್ಷಾ ಚಾಲಕರು ತಮ್ಮ ಆಟೋಗಳನ್ನು ಸ್ಕ್ರಾಪ್ ಮಾಡಿಸಿ ಪ್ರಮಾಣಪತ್ರವನ್ನು ಸರ್ಕಾರಕ್ಕೆ ನೀಡಿದರು. ಆದರೆ ಇಲ್ಲಿಯವರೆಗೆ ಒಬ್ಬರಿಗೂ ಸಹಾಯಧನ ಬಂದಿಲ್ಲ ಎಂದು ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ. ಮಂಜುನಾಥ್ ತಿಳಿಸಿದ್ದಾರೆ.
ಸರ್ಕಾರ ಘೋಷಿಸಿದ ಸಹಾಯಧನ ನೀಡುತ್ತಿಲ್ಲ. ಈಗ ಹೊಸ ಆಟೋ ದರ 2.6 ಲಕ್ಷ ರೂ. ಆಗಿದೆ. ಕರೊನಾ ಸಮಯದಲ್ಲಿ ಚಾಲಕರು ಆದಾಯವಿಲ್ಲದೆ, ಇನ್ನಿತರೆ ಸಾಲಗಳನ್ನು ಸಮಯಕ್ಕೆ ಸರಿಯಾಗಿ ತೀರಿಸಲಾಗದೆ ಅವರ ಸಿಬಿಲ್ ಸ್ಕೋರ್ ಸಂಪೂರ್ಣ ಕುಸಿದಿದೆ. ಹೊಸ ಆಟೋ ಖರೀದಿಸಲು ಹೊರಗಿನವರೂ ಸಾಲ ನೀಡುವುದಿಲ್ಲ. ಇಂತಹ ಸ್ಥಿತಿಯಲ್ಲಿ ಚಾಲಕರ ಸಹಾಯಕ್ಕೆ ಸರ್ಕಾರ ಬರಬೇಕು.
| ಎಂ. ಮಂಜುನಾಥ್,ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ
ಸಾಲ ಮಾಡಿ ವಾಹನ ಖರೀದಿ:ಬೆಂಗಳೂರಿನ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ನಮ್ಮ ಕೊಡುಗೆಯೂ ಇರಲಿ ಎಂಬ ಕಾರಣಕ್ಕೆ ಅನೇಕ ಆಟೋ ಚಾಲಕರ ಮನವೊಲಿಸಿ ಟು-ಸ್ಟ್ರೋಕ್ ಆಟೋಗಳನ್ನು ಸ್ಕ್ರಾಪ್ ಮಾಡಿಸಿದೆವು. ಸರ್ಕಾರದ ಸಹಾಯಧನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಸಾಲ ಮಾಡಿ ಆಟೋ ಖರೀದಿ ಮಾಡಿದರು. ಆದರೆ ಇಲ್ಲಿಯವರೆಗೆ ಸರ್ಕಾರ ಹಣ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಆಟೋ ಚಾಲಕರ ಮನವೊಲಿಕೆ ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಈಗಲೂ 9-10 ಸಾವಿರ ಟು-ಸ್ಟ್ರೋಕ್ ಆಟೋಗಳು ಚಲಿಸುತ್ತಿವೆ. ಸರ್ಕಾರ ಯಾವುದೇ ಸಹಾಯಧನ ನೀಡದೆ ಕೇವಲ ಎಫ್​ಸಿ ಅವಧಿ ಮುಕ್ತಾಯದ ಆದೇಶ ಹೊರಡಿಸುವುದರಿಂದ ಚಾಲಕರ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಕೀಳು ಮಟ್ಟದ ವಿಚಾರಧಾರೆಗಳು ಬಿಜೆಪಿ ನಾಯಕರಿಗೆ ಮಾತ್ರ ಸೀಮಿತ; ಶಾಸಕ ಜಮೀರ್ ಹೇಳಿಕೆ ಖಂಡಿಸಿದ ಸುರ್ಜೇವಾಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 17 =
Remember me
