ಭಾರತದಲ್ಲಿ ರೈತರು ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮಾಡುತ್ತಾರೆ. ಈ ಪೈಕಿ ಬಹುತೇಕವಾಗಿ ಬಳಕೆಯಾಗುವುದೇ ಯೂರಿಯಾ. ರಸಗೊಬ್ಬರಗಳನ್ನು ಯೋಗ್ಯ ಬೆಲೆಯಲ್ಲಿ ಹಾಗೂ ಸಬ್ಸಿಡಿ ದರದಲ್ಲಿ ರೈತರಿಗೆ ಪೂರೈಕೆ ಮಾಡಲಾಗುತ್ತದೆ. 2022-23ನೇ ಹಣಕಾಸು ಸಾಲಿನಲ್ಲಿ ಈ ಸಬ್ಸಿಡಿ ಮೊತ್ತವು ದಾಖಲೆಯ 2 ಲಕ್ಷ ಕೋಟಿ ರೂಪಾಯಿ ದಾಟಿದೆ.
ಯೂಕ್ರೇನ್ ಯುದ್ಧವು ಆಹಾರ, ರಸಗೊಬ್ಬರ ಮತ್ತು ಇಂಧನ ಸಬ್ಸಿಡಿ ಮೇಲಿನ ಸರ್ಕಾರದ ವೆಚ್ಚವನ್ನು ಶೇ. 70ರಷ್ಟು ಹೆಚ್ಚಿಸಿದೆ. 2022-23ರಲ್ಲಿ ಕೇಂದ್ರ ಸರ್ಕಾರದ ರಸಗೊಬ್ಬರ ಸಬ್ಸಿಡಿಯು ಈಗಾಗಲೇ -ಠಿ; 2 ಲಕ್ಷ ಕೋಟಿ ದಾಟಿದೆ. ರಷ್ಯಾವು ದ್ರವೀಕೃತ ನೈಸರ್ಗಿಕ ಅನಿಲದ ಪ್ರಮುಖ ರಫ್ತುದಾರನಾಗಿದೆ. ಯೂರಿಯಾದ ಉತ್ಪಾದನೆಗೆ ಇದು ಪ್ರಮುಖ ವಸ್ತುವಾಗಿದೆ. ಇದರಿಂದಾಗಿಯೇ ಬೆಲೆ ಹೆಚ್ಚಳವಾಗಿದೆ.
2022ರ ಏಪ್ರಿಲ್ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ ರಸಗೊಬ್ಬರಗಳ ಒಟ್ಟು ಬಳಕೆ 40.71 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಆಗಿದ್ದರೆ ನಮ್ಮ ದೇಶದಲ್ಲಿ ಉತ್ಪಾದನೆಯಾಗಿದ್ದು 32.076 ಎಂಎಂಟಿ. 12.839 ಎಂಎಂಟಿ ರಸಗೊಬ್ಬರವನ್ನು ಆಮದು ಮಾಡಿಕೊಳ್ಳಲಾಗಿದೆ. ಪ್ರತಿ ತಿಂಗಳು ರಾಜ್ಯವಾರು ಅಗತ್ಯತೆಯ ಮೌಲ್ಯಮಾಪನ; ಯೂರಿಯಾಕ್ಕೆ ಬೇವಿನ ಲೇಪನ (ಇದು ಪೋಷಕಾಂಶದ ದಕ್ಷತೆಯನ್ನು ಹೆಚ್ಚಿಸುತ್ತದೆ); ಬೆಳೆ ಇಳುವರಿ ಮತ್ತು ಮಣ್ಣಿನ ಆರೋಗ್ಯದ ಮೇಲ್ವಿಚಾರಣೆ ಮತ್ತು ಸಮಗ್ರ ರಸಗೊಬ್ಬರ ನಿಗಾ ವ್ಯವಸ್ಥೆ ಮೂಲಕ ರಸಗೊಬ್ಬರಗಳ ಚಲನೆಯ ಆನ್​ಲೈನ್ ಮೇಲ್ವಿಚಾರಣೆ- ಇಂತಹ ಕ್ರಮಗಳ ಮೂಲಕ ರಸಗೊಬ್ಬರ ಲಭ್ಯತೆಯನ್ನು ಸುಧಾರಿಸಲು ಸರ್ಕಾರ ಮುಂದಾಗಿದೆ. ಅಲ್ಲದೆ, ಬೇಡಿಕೆ ಮತ್ತು ಉತ್ಪಾದನೆಯ ನಡುವಿನ ಅಂತರವನ್ನು ಸಕಾಲಿಕ ಆಮದುಗಳ ಮೂಲಕ ಪೂರೈಸಲಾಗಿದೆ.
ಅಧಿಕ ಬಳಕೆಯಿಂದ ದುಷ್ಪರಿಣಾಮ:ರಾಸಾಯನಿಕ ಗೊಬ್ಬರಗಳಿಗೆ ದೊರೆಯುವ ಭಾರಿ ಸಬ್ಸಿಡಿಯಿಂದಾಗಿ ಅನೇಕ ರೈತರು ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾದಂತಹ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ಇದರಿಂದಾಗಿ ರಸಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವಂತಾಗಿದೆ. ಆದರೆ, ಜಮೀನಿನಲ್ಲಿ ರಸಗೊಬ್ಬರ ಬಳಕೆಯು ದೀರ್ಘಾವಧಿಯಲ್ಲಿ ಮಣ್ಣಿನ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ರಸಗೊಬ್ಬರಗಳ ಅತಿಯಾದ ಮತ್ತು ಅಸಮರ್ಪಕ ಬಳಕೆಯು ಪರಿಸರದಲ್ಲಿನ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ. ವಿಶ್ವ ಸಂಸ್ಥೆಯ ವರದಿ ಪ್ರಕಾರ ಅಸುರಕ್ಷಿತ ಶೇಖರಣಾ ಅಭ್ಯಾಸಗಳಿಂದಾಗಿ ಕುಡಿಯುವ ನೀರಿನ ಮಾಲಿನ್ಯ ಮತ್ತು ಮಾನವ ಜೀವನದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ, ಸಬ್ಸಿಡಿಯನ್ನು ನೇರವಾಗಿ ಕಂಪನಿಗಳಿಗೆ ಬಿಡುಗಡೆ ಮಾಡುವ ಮೂಲಕ ಸೂಕ್ತ ತಂತ್ರಜ್ಞಾನ ಇಲ್ಲದ ಕಂಪನಿಗಳನ್ನು ಕೂಡ ರಕ್ಷಿಸಲಾಗುತ್ತಿದೆ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ರಸಗೊಬ್ಬರ ನೀತಿಯನ್ನು ಸುಧಾರಿಸಲು ಪ್ರಯತ್ನಗಳು ನಡೆದಿದ್ದರೂ, ವಿವಿಧ ವಲಯಗಳ ಒತ್ತಡದ ಕಾರಣಗಳಿಂದಾಗಿ ಅದು ಸಾಧ್ಯವಾಗಿಲ್ಲ.
ಒಂದು ರಾಷ್ಟ್ರ ಒಂದು ರಸಗೊಬ್ಬರ:2022ರಲ್ಲಿ ರಸಗೊಬ್ಬರ ಇಲಾಖೆಯು ಯೂರಿಯಾ ಮತ್ತು ಪೋಷಕಾಂಶ ಆಧಾರಿತವಾಗಿ ಸಬ್ಸಿಡಿಗಳನ್ನು ವಿತರಿಸಿತು. ನೇರ ಲಾಭ ವರ್ಗಾವಣೆ ಮೂಲಕ ಈ ಸಬ್ಸಿಡಿಯನ್ನು ವಿತರಿಸಲಾಯಿತು. ರಸಗೊಬ್ಬರಗಳ ಸಕಾಲಿಕ ಪೂರೈಕೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿರುವ ’ಒಂದು ರಾಷ್ಟ್ರ ಒಂದು ರಸಗೊಬ್ಬರ’ ಯೋಜನೆಯನ್ನು ಸಹ ಅದು ಜಾರಿಗೆ ತಂದಿತು. ಯೂರಿಯಾದ ಒಂದೇ ಬ್ರಾ್ಯಂಡ್ ಪರಿಚಯಿಸುವ ಮೂಲಕ ಹಲವು ಬ್ರಾಂಡ್​ಗಳಿಂದ ಆಯ್ಕೆ ಮಾಡುವ ಸಂದಿಗ್ಧತೆಯನ್ನು ನಿವಾರಿಸಿತು. ಈಗಿರುವ ಗ್ರಾಮ, ಬ್ಲಾಕ್, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ರಸಗೊಬ್ಬರ ಚಿಲ್ಲರೆ ಮಾರಾಟ ಮಳಿಗೆಗಳನ್ನು ಮಾದರಿ ರಸಗೊಬ್ಬರ ಚಿಲ್ಲರೆ ಮಾರಾಟ ಮಳಿಗೆಗಳಾಗಿ ಪರಿವರ್ತಿಸಲಾಗುತ್ತಿದೆ.
ಸಾವಯವ ಗೊಬ್ಬರಕ್ಕೆ ಉತ್ತೇಜನ:ಸ್ಥಳೀಯ ರಸಗೊಬ್ಬರ ತಯಾರಕರ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಆಮದು ಮಾಡಿಕೊಂಡ ಪಾಸ್ಪರಿಕ್ ಆಮ್ಲದ ಮೇಲೆ ಕಡಿಮೆ ಸುಂಕವನ್ನು ಹಾಗೂ ಸಾವಯವ ಗೊಬ್ಬರಗಳನ್ನು ಉತ್ತೇಜಿಸಲು ಅಧಿಕ ಪೋ›ತ್ಸಾಹ ನೀಡಲು ಸರ್ಕಾರ ಉದ್ದೇಶಿಸಿದೆ. ನೀತಿ ಆಯೋಗದ ಅಡಿಯಲ್ಲಿ ಜೈವಿಕ ಗೊಬ್ಬರ ಮತ್ತು ಸಾವಯವ ಗೊಬ್ಬರಗಳ ಕಾರ್ಯಪಡೆಯನ್ನು ಈಗಾಗಲೇ ರಚಿಸಲಾಗಿದೆ. ಕೃಷಿಯ ದೀರ್ಘಾವಧಿಯ ಹಿತಾಸಕ್ತಿ ಮತ್ತು ಅಜೈವಿಕ ರಸಗೊಬ್ಬರಗಳ ಬಳಕೆಯ ಪರಿಣಾಮಗಳನ್ನು ಪರಿಗಣಿಸಿ, ಸಬ್ಸಿಡಿ ಬೆಂಬಲದ ಖಾತೆಯಲ್ಲಿ ದೊಡ್ಡ ಮೊತ್ತವನ್ನು ಉಳಿಸಲು ಆಲೋಚಿಸಲಾಗುತ್ತಿದೆ.
ನ್ಯಾನೊ ಯೂರಿಯಾ ತಯಾರಿಕೆಯತ್ತ ಗಮನ:ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ (ಆರ್​ಸಿಎಫ್) ಮತ್ತು ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್​ಸಿಎಫ್) ನ್ಯಾನೊ ಯೂರಿಯಾ ತಯಾರಿಸಲು ಇಫ್ಕೋ ಲಿಮಿಟೆಡ್​ನ ಪರವಾನಗಿ ಅಡಿಯಲ್ಲಿ ಐದು ಹೊಸ ಕಾರ್ಖಾನೆಗಳನ್ನು ನಿರ್ವಿುಸಲು ಯೋಜಿಸಿದೆ. ಹೆಚ್ಚುತ್ತಿರುವ ರಸಗೊಬ್ಬರ ಸಬ್ಸಿಡಿ ಹೊರೆಯನ್ನು ಕಡಿಮೆಗೊಳಿಸಲು ಇದರಿಂದ ಸಾಧ್ಯವಾಗಲಿದೆ. ನ್ಯಾನೊ-ಯೂರಿಯಾದ ಪೇಟೆಂಟ್ ಹೊಂದಿರುವ ಸಹಕಾರಿ ವಲಯದ ಉತ್ಪಾದಕ ಕಂಪನಿಯಾದ ಇಫ್ಕೋ ಜತೆಗೆ ಆರ್​ಸಿಎಫ್ ಮತ್ತು ಎನ್​ಸಿಎಫ್ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಸಾಂಪ್ರದಾಯಿಕ ಯೂರಿಯಾಕ್ಕಿಂತ 100 ಪಟ್ಟು ಹೆಚ್ಚು ಪರಿಣಾಮಕಾರಿಯಾದ ನ್ಯಾನೊ ತಂತ್ರಜ್ಞಾನ ಆಧಾರಿತ ಉತ್ಪನ್ನವಾದ ನ್ಯಾನೊ ಯೂರಿಯಾವನ್ನು ಉತ್ಪಾದಿಸಲು ಇಫ್ಕೋಗೆ ರಾಯಧನವನ್ನು (ರಾಯಲ್ಟಿ) ಈ ಎರಡೂ ಕಂಪನಿಗಳು ಪಾವತಿಸಲಿವೆ. ಅಲ್ಲದೆ, ಉತ್ಪಾದನಾ ಘಟಕಗಳ ಸ್ಥಾಪನೆಗೆ ಈ ಕಂಪನಿಗಳೇ ಹಣ ಪಾವತಿಸಲಿವೆ. ಇದು ರಸಗೊಬ್ಬರ ಬಳಕೆಯ ಪ್ರಮಾಣವನ್ನು ಕುಗ್ಗಿಸುತ್ತದೆ. ಅಲ್ಲದೆ, ಸಬ್ಸಿಡಿ ಹೊರೆಯನ್ನೂ ಕಡಿಮೆ ಮಾಡುತ್ತದೆ. ನ್ಯಾನೊ ಯೂರಿಯಾವು ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ, ಉತ್ಪಾದಕತೆಯನ್ನು ಅಧಿಕಗೊಳಿಸುತ್ತದೆ. ಮಣ್ಣಿನ ಫಲವತ್ತತೆ ಕಾಪಾಡಲು ಕೂಡ ನೆರವಾಗುತ್ತದೆ. ರಸಗೊಬ್ಬರ ಉತ್ಪಾದನೆಯಿಂದಾಗುವ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಭಾರತವು ಈಗಾಗಲೇ ವರ್ಷಕ್ಕೆ 17 ಕೋಟಿ ನ್ಯಾನೋ ಯೂರಿಯಾ ಬಾಟಲಿಗಳನ್ನು ತಯಾರಿಸುತ್ತಿದೆ. ಇದು 75 ಲಕ್ಷ ಟನ್ ಸಾಂಪ್ರದಾಯಿಕ ಯೂರಿಯಾಕ್ಕೆ ಸಮನಾಗಿದೆ. 2025ರ ವೇಳೆಗೆ 2 ಕೋಟಿ ಟನ್ ಯೂರಿಯಾಕ್ಕೆ ಸಮನಾಗಿರುವ ವರ್ಷಕ್ಕೆ 44 ಕೋಟಿ ಬಾಟಲಿಗಳನ್ನು ಉತ್ಪಾದಿಸುವ ಎಂಟು ಉತ್ಪಾದನಾ ಘಟಕಗಳನ್ನು ಹೊಂದುವ ಆಲೋಚನೆ ಇದೆ. ಇದು ಸರ್ಕಾರದ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುವುದರ ಜತೆಗೆ ಪರಿಸರ ರಕ್ಷಣೆಗೂ ಅನುಕೂಲ ಮಾಡಿಕೊಡಲಿದೆ.
ಹೊಸ ಬಜೆಟ್​ನಲ್ಲಿ 1.75 ಲಕ್ಷ ಕೋಟಿ ಮೀಸಲು:ಈಚೆಗೆ ಮಂಡಿಸಲಾದ 2023-24ರ ಬಜೆಟ್​ನಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ 1,75,099 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಇನ್ನು, 2022-23ರ ಪರಿಷ್ಕೃತ ಬಜೆಟ್ ಅಂದಾಜಿನಲ್ಲಿ ರಸಗೊಬ್ಬರ ಸಬ್ಸಿಡಿಯು 2,25,220 ಕೋಟಿ ರೂ.ಗೆ ತಲುಪಿದೆ. ಇದಕ್ಕೆ ಹೋಲಿಸಿದರೆ ಪ್ರಸ್ತುತ ಬಜೆಟ್​ನಲ್ಲಿ ಅಂದಾಜು 50 ಸಾವಿರ ಕೋಟಿ ರೂಪಾಯಿ ಕಡಿಮೆ ಹಣವನ್ನು ನಿಗದಿ ಮಾಡಲಾಗಿದೆ. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಸಬ್ಸಿಡಿಯಲ್ಲಿ ಸರಿಸುಮಾರು ಶೇ. 22ರಷ್ಟು ಕಡಿತ ಮಾಡಲಾಗಿದೆ. ನ್ಯಾನೊ ಯೂರಿಯಾ ಗೊಬ್ಬರ ತಯಾರಿಕೆ ಹಾಗೂ ಬಳಕೆ ಹೆಚ್ಚಿಸುವ ಮೂಲಕ ಸಬ್ಸಿಡಿ ಕಡಿತವನ್ನು ನಿಭಾಯಿಸಲು ಸರ್ಕಾರ ಉದ್ದೇಶಿಸಿದೆ.
ಆಮದಿನಲ್ಲಿ 3ನೇ ಸ್ಥಾನ:ಭಾರತವು ವಿಶ್ವದಲ್ಲೇ 3ನೇ ಅತಿದೊಡ್ಡ ರಸಗೊಬ್ಬರ ಆಮದುದಾರನಾಗಿದೆ. ತನಗೆ ಅಗತ್ಯವಿರುವ ಹೆಚ್ಚಿನ ರಸಗೊಬ್ಬರವನ್ನು ರಷ್ಯಾ, ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸ್ಪೇನ್​ನಿಂದ ಆಮದು ಮಾಡಿಕೊಳ್ಳುತ್ತದೆ. ರಸಗೊಬ್ಬರವನ್ನು ಅಧಿಕ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಬ್ರೆಜಿಲ್ ಮೊದಲ ಹಾಗೂ ಅಮೆರಿಕ ದ್ವಿತೀಯ ಸ್ಥಾನದಲ್ಲಿವೆ. ಜಾಗತಿಕವಾಗಿ ರಷ್ಯಾ ದೇಶವು ಅತಿಹೆಚ್ಚು ಪ್ರಮಾಣದಲ್ಲಿ ರಸಗೊಬ್ಬರವನ್ನು ರಫ್ತು ಮಾಡುತ್ತದೆ.
ವಿದೇಶಗಳಲ್ಲಿ ಹೂಡಿಕೆ:ಬೆಲೆ ಚಂಚಲತೆ ವಿರುದ್ಧ ರಕ್ಷಣೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಭಾರತೀಯ ರಸಗೊಬ್ಬರ ಮತ್ತು ರಾಸಾಯನಿಕ ಕಂಪನಿಗಳು ಖನಿಜ ಸಂಪನ್ಮೂಲವಿರುವ ಉತ್ತರ ಆಫ್ರಿಕಾದ ರಾಷ್ಟ್ರಗಳಲ್ಲಿ ಹೂಡಿಕೆಯನ್ನು ತೀವ್ರಗೊಳಿಸಿವೆ. ಈಜಿಪ್ಟ್, ಸೆನೆಗಲ್, ಇಸ್ರೇಲ್, ಓಮನ್, ಕೆನಡಾ, ಸೌದಿ ಅರೇಬಿಯಾ ಮತ್ತು ಜೋರ್ಡಾನ್ ಜತೆ ಒಪ್ಪಂದಗಳನ್ನು ನಿರೀಕ್ಷಿಸಲಾಗಿದೆ. ದೀರ್ಘಾವಧಿಯ ಒಪ್ಪಂದಗಳ ಮೂಲಕ ರಸಗೊಬ್ಬರ ಬೆಲೆಯಲ್ಲಿ ರಿಯಾಯಿತಿ ಪಡೆದುಕೊಳ್ಳಲು ಭಾರತ ಮುಂದಾಗಿದೆ. ರಸಗೊಬ್ಬರದ ವಾರ್ಷಿಕ ದೇಶೀಯ ಬೇಡಿಕೆಯ ಮೂರನೇ ಒಂದು ಭಾಗವನ್ನು ಪೂರೈಸಲು ಭಾರತವು ಆಮದುಗಳನ್ನು ಅವಲಂಬಿಸಿದೆ.
ಒಂದೇ ದಿನದಲ್ಲಿ 2,300ಕ್ಕೂ ಅಧಿಕ ಮಂದಿ ಸಾವು; ಒಂದರ ಹಿಂದೊಂದರಂತೆ ಸಂಭವಿಸಿದ ಮೂರು ಭೀಕರ ಭೂಕಂಪ

ಶಾಸಕರ ಪುತ್ರಿಯನ್ನು ಕಾಲೇಜಿನಿಂದ ಕರೆತರಲು ಹೋಗಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು, ನಾಲ್ವರಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
