ಶ್ರೀರಾಮನಿಗೆ ಮಂಡಪೋಪಾಖ್ಯಾನವನ್ನು ಹೇಳುತ್ತಿರುವ ಶ್ರೀವಸಿಷ್ಠರು ಇದೀಗ ಕಥೆಯ ಮಗ್ಗುಲನ್ನು ಬದಲಾಯಿಸಿದ್ದಾರೆ. ಅಂದರೆ ಲೀಲಾಮಹಾರಾಣಿಯು ತನ್ನ ಹಿಂದಿನ ಜನ್ಮಗಳ ದರ್ಶನ ವನ್ನು ಪಡೆದ ನಂತರ ತನ್ನ ಪತಿಯ ಮುಂದಿನ ಜನ್ಮ ನಡೆಯುತ್ತಿರುವ ಸ್ಥಳಕ್ಕೆ ಬಂದಿದ್ದಾಳೆ. ಅಲ್ಲಿ ಯುದ್ಧದ ಸನ್ನಾಹ ನಡೆಯುತ್ತಿದೆ. ಕೆಲವು ಸಾಮಂತ ರಾಜರೇ ಸಾಮ್ರಾಟನಾದ ಅವಳ ಪತಿಯ ವಿರುದ್ಧ ಯುದ್ಧಕ್ಕೆ ಬಂದಿದ್ದಾರೆ. ಎರಡೂ ಕಡೆಗಳ ಸೇನೆಗಳು ಮುಖಾಮುಖಿಯಾಗಿ ಯುದ್ಧಕ್ಕೆ ಸಜ್ಜಾಗಿ ನಿಂತಿವೆ. ಈ ದೃಶ್ಯವನ್ನು ಶ್ರೀದೇವಿಯೊಂದಿಗೆ ಆಕಾಶದಲ್ಲಿಯೇ ನಿಂತು ಲೀಲಾಮಹಾರಾಣಿಯು ನೋಡುತ್ತಿದ್ದಾಳೆ.
ಶ್ರೀ ವಸಿಷ್ಠರು ಯುದ್ಧರಂಗದ ವರ್ಣನೆಯನ್ನು ಮುಂದುವರಿಸಿ ದ್ದಾರೆ – ‘ಶ್ರೀರಾಮ! ಅಲ್ಲಿ ದುಂದುಭಿಗಳು ಶಬ್ದಮಾಡುವುದನ್ನು ನಿಲ್ಲಿಸಿವೆ. ಏಕೆಂದರೆ ರಾಜನ ಆಜ್ಞೆಗಿಂತ ಮೊದಲೇ ಸೈನಿಕರು ಶಸ್ತ್ರಗಳ ಪ್ರಹಾರಗಳನ್ನು ಪ್ರಾರಂಭಿಸಿಬಿಡಬಹುದೆಂಬ ಸಂಶಯವಿದೆ. (ದುಂದುಭಿಯು ಮೊಳಗುತ್ತಿದ್ದರೆ ರಾಜಾಜ್ಞೆಯು ಸರಿಯಾಗಿ ಕೇಳಿಸುವುದಿಲ್ಲ. ಅದು ಕೇಳಿಸದಿದ್ದಾಗ ರಾಜಾಜ್ಞೆ ಆಯಿತೆಂಬ ಕಲ್ಪನೆಯಿಂದ ಸೈನಿಕರು ಮೊದಲೇ ಶಸ್ತ್ರಪ್ರಯೋಗವನ್ನು ಪ್ರಾರಂಭಿಸಬಹುದು. ಆಗ ಯುದ್ಧದ ನಿಯಂತ್ರಣ ಕೈತಪ್ಪಿಹೋಗುತ್ತದೆ. ಅದನ್ನು ತಪ್ಪಿಸುವುದಕ್ಕೋಸ್ಕರ ದುಂದುಭಿಗಳನ್ನು ಮೊಳಗಿಸದೇ ಇರಿಸಲಾಗಿದೆ.) ವ್ಯವಸ್ಥಿತವಾಗಿ ನಿಲ್ಲಿಸಲ್ಪಟ್ಟ ಯೋಧರ ಗುಂಪುಗಳಿಂದಾಗಿ ಇಡೀ ಸೇನೆಗಳು ಜಡವೋ ಎಂಬಂತೆ ಸ್ತಬ್ಧವಾಗಿ ನಿಂತಿದ್ದವು.’
‘ಎರಡು ಸೇನೆಗಳ ಮಧ್ಯದಲ್ಲಿ ಎರಡು ಬಿಲ್ಲುಗಳಷ್ಟು ಮಾತ್ರವೇ ಜನರಿಲ್ಲದ ಸ್ಥಳ ಬಿಟ್ಟುಕೊಂಡಿದೆ. ಕಲ್ಪಾಂತ್ಯದ ಪ್ರಳಯವಾತ (ಬಿರುಗಾಳಿ)ದಿಂದಾಗಿ ತಲ್ಲಣಗೊಂಡ ಸಾಗರವು ಎರಡು ಭಾಗವಾಗಿ ವಿಭಾಗಿಸಲ್ಪಟ್ಟು, ಮಧ್ಯದಲ್ಲಿ ಸೇತು (ಸೇತುವೆ) ವಿನಂತೆ ಖಾಲಿ ಸ್ಥಳ ನಿರ್ಮಾಣ ವಾಗುತ್ತದೆ. ಅದೇ ರೀತಿ ಎರಡು ಸೇನೆಗಳ ಮಧ್ಯದ ಖಾಲಿ ಸ್ಥಳ ಗೋಚರಿಸುತ್ತಿತ್ತು.’
‘ಎರಡೂ ಸೇನೆಗಳ ಕಟ್ಟಕಡೆಯ ಮುಖ್ಯಸ್ಥರಾಗಿರುವ ರಾಜರು ಸಂಕಟಮಯವಾದ ಸಂಗ್ರಾಮದ ಸ್ಥಿತಿ ನಿರ್ವಣವಾಗಿರುವ ಬಗ್ಗೆ ತುಂಬ ಚಿಂತಾಕ್ರಾಂತರಾಗಿದ್ದಾರೆ. ತಮ್ಮದೇ ಶರೀರದಂತಿರುವ ತಮ್ಮ ರಾಜ್ಯದ ಬಗ್ಗೆ ಅವರು ಚಿಂತಾಕ್ರಾಂತ ಸ್ಥಿತಿಯಲ್ಲಿ ಇರುವಾಗಲೇ ಎರಡೂ ಸೇನೆಗಳು ಸನ್ನದ್ಧವಾಗಿ ನಿಂತಿವೆ. ಆ ಯುದ್ಧದ ಭೀಕರತೆಯನ್ನು ಅರ್ಥಮಾಡಿಕೊಂಡ ಸಾಮಾನ್ಯ ದುರ್ಬಲ ಮನಸ್ಸಿನ ವ್ಯಕ್ತಿಗಳಿಗೆ ಎದೆ ನಡುಗುವಂತಿತ್ತು. ಭಯದಿಂದ ಕೂಗುವ ಕಪ್ಪೆಯ ಗಂಟಲಿನ ಚರ್ಮವು ವೇಗವಾಗಿ ನಡುಗುತ್ತಿರುತ್ತದೆ. ಹಾಗೆಯೇ ಭಯಪಡುವ ಸ್ವಭಾವ ಉಳ್ಳವರ ಹೃದಯದ ಗುಹೆಯು ವೇಗವಾಗಿ ಕಂಪಿಸುವಂತೆ ಮಾಡುವಷ್ಟು ಆ ವಾತಾವರಣ ಭಯಂಕರವಾಗಿತ್ತು.’
‘ತಮ್ಮ ಪ್ರಾಣವನ್ನು ಮತ್ತು ಸರ್ವಸ್ವವನ್ನೂ ತ್ಯಾಗ ಮಾಡಿ ಸಂಪೂರ್ಣ ತಮ್ಮನ್ನು ಯುದ್ಧಕ್ಕೆ ಸಮರ್ಪಿಸಿ ಕೊಂಡು, ಯುದ್ಧದಲ್ಲಿ ಉದ್ಯುಕ್ತರಾಗಿರುವ ಅಸಂಖ್ಯ ಸೈನಿಕರ ಸಮೂಹವು ಎರಡೂ ಸೇನೆಗಳಲ್ಲಿ ಸೇರಿತ್ತು. ಧನುರ್ಬಾಣಗಳನ್ನು ಧರಿಸಿದ ಯೋಧರು ಧನುಸ್ಸಿನ ಹಗ್ಗವನ್ನು ತಮ್ಮ ಕಿವಿಯವರೆಗೆ ಎಳೆದು ಬಾಣ ಸಮೂಹಗಳ ಪ್ರವಾಹವನ್ನೇ ಉಂಟುಮಾಡಲು ಸಿದ್ಧರಾಗಿ ನಿಂತಿದ್ದರು.’
‘ಶಸ್ತ್ರಗಳ ಪ್ರಹಾರ ಎಲ್ಲಿ ಆಗುತ್ತದೆ? (ಎಲ್ಲಿ ಆಗಬಹುದು?) ಎಂಬುದನ್ನು ಗಮನಿಸುತ್ತಾ, ಅದೇ ಏಕಾಗ್ರತೆಯಲ್ಲಿ ಉಳಿದ ಸ್ಪಂದನೆಗಳನ್ನೆಲ್ಲ ಬಿಟ್ಟು ನಿಂತಿರುವ ಅಸಂಖ್ಯ ಸೈನಿಕರು ಅಲ್ಲಿದ್ದರು. ಅವರು ಯುದ್ಧದ ಉತ್ಕಂಠತೆಯಿಂದ ಒಬ್ಬರು ಇನ್ನೊಬ್ಬರನ್ನು (ಒಂದು ಸೇನೆಯ ಸೈನಿಕರು ಇನ್ನೊಂದು ಸೇನೆಯ ಸೈನಿಕರನ್ನು) ಕ್ರೋಧದಿಂದ ಹುಬ್ಬು ಗಂಟಿಕ್ಕಿಕೊಂಡು ನೋಡುತ್ತಿರುವುದರಿಂದ ಇಡೀ ದೃಶ್ಯವು ನೋಡಲು ಬಿಗಿಯಾದ ವಾತಾವರಣದಿಂದ ಕೂಡಿತ್ತು. ಸೈನಿಕರು ಧರಿಸಿರುವ ಕವಚಗಳು ಪರಸ್ಪರ ತಿಕ್ಕಿಕೊಂಡಾಗ ಉಂಟಾಗುವ ಕಟುವಾದ ‘ಟಂಕಾರ ಶಬ್ದ ಅಲ್ಲಿ ಕೇಳಿಬರುತ್ತಿತ್ತು. ವೀರ ಯೋಧರ ಮುಖಗಳನ್ನು ನೋಡಿದಾಗ ರಣಹೇಡಿಗಳಿಗೆ ಭಯವಾಗುತ್ತಿತ್ತು. ವೀರ ಯೋಧರ ಮುಖಾಗ್ನಿಯಿಂದ ಬಾಡಿಹೋದ ಮುಖಗಳುಳ್ಳ ರಣಹೇಡಿಗಳು ಯುದ್ಧವು ಪ್ರಾರಂಭವಾಗುತ್ತಿದ್ದಂತೆಯೇ ಓಡಿ ಹೋಗಿ ತಪ್ಪಿಸಿಕೊಳ್ಳಲು ಯುದ್ಧರಂಗದ ಸುತ್ತಲಿನ ಗುಡ್ಡಗಳಲ್ಲಿ ಎಲ್ಲಿ ಮರದ ಪೊಟರೆಗಳಿವೆ ಎಂಬುದನ್ನೇ ಗಮನಿಸಿಕೊಳ್ಳುತ್ತಿದ್ದರು.’
‘ಪರಸ್ಪರ ಯುದ್ಧ ಪ್ರಾರಂಭವಾಗುವ ದೃಶ್ಯವನ್ನು ನೋಡುವವರೆಗೆ ಮಾತ್ರವೇ ತಮ್ಮ ಬದುಕು ನಿಶ್ಚಿತವಾಗಿರುತ್ತದೆ, ಅನಂತರ ಯಾವುದೇ ಕ್ಷಣದಲ್ಲೂ ತಮ್ಮ ಬದುಕು ಮುಗಿದುಹೋಗಬಹುದು ಎಂಬುದಾಗಿಯೇ ಎಲ್ಲರೂ ಭಾವಿಸುತ್ತಿದ್ದರು. ಅಂತಹ ಸ್ಥಿತಿಯಲ್ಲಿ ಆ ಸೇನೆಗಳು ನಿಂತಿದ್ದವು. ಅಲ್ಲಿರುವ ಆನೆಗಳು ಮತ್ತು ಮನುಷ್ಯರು ಎತ್ತರವಾದಂತೆ ಮತ್ತು ಉಬ್ಬಿದಂತೆ ಕಾಣುತ್ತಿದ್ದಾರೆ! ಏಕೆ ಗೊತ್ತೇ? ಅವರಿಗೆ ಉಂಟಾಗಿರುವ ರೋಮಾಂಚನದಿಂದ ಕೂದಲುಗಳು ಸೆಟೆದು ಎದ್ದು ನಿಂತಿದ್ದರಿಂದ, ಆ ಕೂದಲುಗಳು ಶರೀರವನ್ನೂ ಹೊರಗೆ ಮತ್ತು ಮೇಲೆ ಸೆಳೆದಿವೆ! ಇಂತಹ ರೋಮಾಂಚನವಾಗಿತ್ತು ಅಲ್ಲಿರುವ ಆನೆಗಳಿಗೆ ಮತ್ತು ಮನುಷ್ಯರಿಗೆ.’
‘ಯಾರ ಕಡೆಯಿಂದ ಮೊಟ್ಟಮೊದಲ ಪ್ರಹಾರ ಪ್ರಾರಂಭವಾಗುತ್ತದೆ? ಎಂಬುದನ್ನು ಕುತೂಹಲದಿಂದ ನೋಡುವುದರಲ್ಲಿಯೇ ಮಗ್ನವಾಗಿರುವ ಮನಃಸ್ಥಿತಿಯಲ್ಲಿ ಅಲ್ಲಿ್ಲ್ದವರಲ್ಲಿ ಇರುವುದರಿಂದ, ಎಲ್ಲ ವಿಧದ ಮಾತುಗಳ ಕಲರವ ನಿಂತುಹೋಗಿದೆ. ಒಂದು ರೀತಿಯ ನಿದ್ರೆಯ ಮುದ್ರೆಯನ್ನು ಎಲ್ಲರೂ ಧರಿಸಿದ್ದಾರೋ! ಎಂಬಂತಿತ್ತು ಆ ದೃಶ್ಯ.

ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:7 − 7 =
Remember me
