ವಿಧಾನಸಭೆಯಿಂದ ವಿಧಾನಪರಿಷತ್​ಗೆ ಜೂ.29ರಂದು ಚುನಾವಣೆ ನಡೆಯಲಿದೆ. ಬಿಜೆಪಿಗೆ 4, ಕಾಂಗ್ರೆಸ್​ಗೆ 2 ಹಾಗೂ ಜೆಡಿಎಸ್​ಗೆ 1 ಸ್ಥಾನ ಲಭಿಸಲಿದೆ. ಈ ಒಂದಂಕಿಯಲ್ಲಿರುವ ಸ್ಥಾನಗಳಿಗೆ ಮೂರಂಕಿ (ನೂರಾರು) ಆಕಾಂಕ್ಷಿಗಳಿದ್ದಾರೆ. ನಾಮಪತ್ರ ಸಲ್ಲಿಕೆಗೆ ಜೂ.18 ಕೊನೇ ದಿನ. ಹೀಗಾಗಿ, ಮೂರೂ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಮೇಲಾಟ ಶುರುವಾಗಿದೆ. ಈ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.
ಬೆಂಗಳೂರು: ಬಿಜೆಪಿಯಲ್ಲಿ ಬಣಗಳ ರಾಜಕೀಯ ತಾರಕಕ್ಕೇರಿದೆ. ಸೋಮವಾರ (ಜೂ.15) ಕೋರ್ ಕಮಿಟಿ ನಡೆಯಲಿದ್ದು, ಟಿಕೆಟ್ ನೀಡಿಕೆಯಲ್ಲಿ ಬಿ.ಎಲ್.ಸಂತೋಷ್ ಕೈ ಮೇಲಾಗದಂತೆ ನೋಡಿಕೊಳ್ಳಲು ಯಡಿಯೂರಪ್ಪ ಮೇಲೆ ಬೆಂಬಲಿಗರು ತೀವ್ರ ಒತ್ತಡ ಹೇರಿದ್ದಾರೆ. ರಾಜ್ಯಸಭಾ ಚುನಾವಣಾ ಟಿಕೆಟ್ ಹಿನ್ನಡೆ ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿರುವ ಬಿಎಸ್​ವೈ
ಬೆಂಬಲಿಗರು, ಪರಿಷತ್ ಚುನಾವಣೆ ಮೇಲೆ ಕಣ್ಣಿಟ್ಟು ಕುಳಿತಿದ್ದಾರೆ. ಸರ್ಕಾರ ರಚನೆ ಸಂದರ್ಭದಿಂದಲೂ ನಡೆಯುತ್ತಿರುವ ಆಂತರಿಕ ಸಂಘರ್ಷ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ. ವಲಸಿಗರು ಮತ್ತು ಮೂಲ ಬಿಜೆಪಿ ನಡುವೆ ವಿಶ್ವಾಸದ ಕೊರತೆಗೆ ಆಗಿಂದಾಗ್ಗೆ ತೇಪೆ ಹಾಕಿದರೂ ಪ್ರಯೋಜನಕ್ಕೆ ಬಂದಿಲ್ಲ. ಕೋರ್ ಕಮಿಟಿ ಶಿಫಾರಸು ಮಾಡುವ ಹೆಸರಿನಲ್ಲಿ ಹೈಕಮಾಂಡ್ ಮೂಗು ತೂರಿಸಿದರೆ, ನಾವು ಕಠಿಣ ಹಾದಿ ಹಿಡಿಯಬೇಕಾಗುತ್ತದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಹೈಕಮಾಂಡ್​ಗೆ ಯಡಿಯೂರಪ್ಪ ಬೆಂಬಲಿಗರು ತಲುಪಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು, ಹೊಂದಾಣಿಕೆ ತಂತ್ರ ಅನುಸರಿಸುವುದೊಂದೇ ಪರಿಹಾರ ದಾರಿ. ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ತೀರ್ಮಾನ ತೆಗೆದುಕೊಂಡರೆ ಸಮಸ್ಯೆ ಬಗೆಹರಿದು, ಸರ್ಕಾರ ಸುಸೂತ್ರವಾಗಿ ನಡೆಯಲು ಸಾಧ್ಯವಾಗಬಹುದು ಎಂದು ಮೂಲಗಳು ತಿಳಿಸಿವೆ.
ಉತ್ತರ ಕರ್ನಾಟಕ ಪ್ರಾತಿನಿಧ್ಯಕ್ಕೆ ಪೈಪೋಟಿ:ಅಭ್ಯರ್ಥಿ ಆಯ್ಕೆ ಸಂಬಂಧ ಶಾಸಕರು, ಮೇಲ್ಮನೆ ಸದಸ್ಯರ ಅಭಿಪ್ರಾಯ ಸಂಗ್ರಹಿಸುವ ಕೆಲಸವನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡೆಸಿದ್ದಾರೆ. ಸೋಮವಾರ ಕೂಡ ಸಭೆ ನಡೆಸಲಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಸ್ಥಾನ ಬಿಟ್ಟುಕೊಟ್ಟ ಕುಪೇಂದ್ರ ರೆಡ್ಡಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ವೀರಶೈವ ಲಿಂಗಾಯತ ವಿರೋಧಿ ಪಟ್ಟದಿಂದ ಹೊರ ಬರಲು ಮತ್ತು ಪಕ್ಷವನ್ನು ಬಲವರ್ಧನೆಗೊಳಿಸುವ ಉದ್ದೇಶದಿಂದ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದವರನ್ನು ಮೇಲ್ಮನೆಗೆ ಕಳುಹಿಸಬೇಕು ಎನ್ನುವ ಚರ್ಚೆ ಪಕ್ಷದ ಆಂತರಿಕ ವಲಯದಲ್ಲಿ ನಡೆದಿದೆ. ಉತ್ತರ ಕರ್ನಾಟಕ ಭಾಗದಿಂದ ಮಾಜಿ ಶಾಸಕ ಹಾಗೂ ಮೈತ್ರಿ ಸರ್ಕಾರದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿದ್ದ ಎನ್.ಎಚ್.ಕೋನರೆಡ್ಡಿ, ಬಾದಾಮಿಯಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಸೋತಿರುವ ಹನುಮಂತ ಮಾವಿನಮರದ್ ಹಾಗೂ ಬಾಗಲಕೋಟೆ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ನವಲಿ ಹಿರೇಮಠ ಹೆಸರು ಮುಂಚೂಣಿಯಲ್ಲಿವೆ. ಈಗಾಗಲೇ ಕೋನರೆಡ್ಡಿಗೆ ಅಧಿಕಾರ ಕೊಟ್ಟಾಗಿದೆ. ಹಾಗಾಗಿ ಹನುಮಂತ ಮಾವಿನ ಮರದ ಹಾಗೂ ನವಲೀ ಹಿರೇಮಠ ಹೆಸರನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಜತೆಗೆ ಹಾಲಿ ಸದಸ್ಯ ಟಿ.ಎ.ಶರವಣ ಇನ್ನೊಂದು ಅವಧಿಗೆ ಮುಂದುವರಿಸುವಂತೆ ವರಿಷ್ಠರಲ್ಲಿ ಕೇಳಿಕೊಂಡಿದ್ದಾರೆ. ಇನ್ನೊಂದೆಡೆ, ಮಾಜಿ ಶಾಸಕ ವೈ.ಎಸ್.ವಿ.ದತ್ತ ಆಯ್ಕೆ ಆಲೋಚನೆಯೂ ಇದೆ. ರಾಮನಗರ, ಚನ್ನಪಟ್ಟಣ ಭಾಗದಲ್ಲಿ ಮುಸ್ಲಿಂ ಸಮುದಾಯದ ಮತಗಳು ಹೆಚ್ಚಿರುವುದರಿಂದ ಆ ಸಮುದಾಯದ ವ್ಯಕ್ತಿಯೊಬ್ಬರನ್ನು ಪರಿಗಣಿಸಬೇಕೆಂಬ ಚಿಂತನೆಯೂ ವರಿಷ್ಠರ ಮನಸ್ಸಿನಲ್ಲಿ ಮನೆ ಮಾಡಿದೆ. ಈ ಹಿಂದೆ ಆ ಭಾಗದ ಮುದೀರ್ ಆಗಾ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಲಾಗಿತ್ತು.
ಇನ್ನು ಶೇ.33 ಮಹಿಳಾ ಮೀಸಲಾತಿ ಪರವಾಗಿಯೇ ದೇವೇಗೌಡರು ಪದೇಪದೆ ಮಾತನಾಡುತ್ತಾರೆ. ಮೇಲ್ಮನೆ ಆಯ್ಕೆ ವಿಚಾರ ಬಂದಾಗ ಮಹಿಳೆಯರನ್ನು ಗೌಡರು ಕಡೆಗಣಿಸುತ್ತಾರೆಂಬ ಮಾತು ಕೇಳಿ ಬರುತ್ತಿವೆ.
ಅಲ್ಪಸಂಖ್ಯಾತರಿಗೋ, ಹಿಂದುಳಿದವರಿಗೋ?:ಪಕ್ಷದಿಂದ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕೆಂಬ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇನ್ನೆರಡು ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ. ಅಲ್ಪಸಂಖ್ಯಾತರಿಗೆ ಅವಕಾಶ ಕೊಡಬೇಕೋ ಅಥವಾ ಹಿಂದುಳಿದ ವರ್ಗದವರಿಗೆ ಮಣೆ ಹಾಕಬೇಕೋ ಎಂಬ ತೀರ್ವನಕ್ಕೆ ಇವರಿಬ್ಬರು ಮೊದಲು ತೀರ್ವನಿಸಿ ಹೈಕಮಾಂಡ್​ಗೆ ವರದಿ ರವಾನಿಸುವ ಸಾಧ್ಯತೆ ಇದೆ.
ಆರಂಭದಲ್ಲಿ ಈ ಎರಡೂ ವರ್ಗಕ್ಕೆ ಅವಕಾಶ ಕೊಡಬೇಕೆಂಬ ವಾದ ಸಿದ್ದರಾಮಯ್ಯ ಅವರದ್ದಾಗಿತ್ತು. ಮಾಜಿ ಸಂಸದ ಮುದ್ದಹನುಮೇಗೌಡರ ಪರ ಪಕ್ಷದ ಬಹುತೇಕ ನಾಯಕರು ಒಲವು ವ್ಯಕ್ತಪಡಿಸಿದ್ದು, ಅವರ ಹೆಸರು ಅಂತಿಮಗೊಳ್ಳುವ ಸಾಧ್ಯತೆ ದಟ್ಟವಾಗಿದೆ. 2019ರ ಲೋಕಸಭೆ ಚುನಾವಣೆ ವೇಳೆ ಮೈತ್ರಿ ಕಾರಣಕ್ಕೆ ಎಚ್.ಡಿ.ದೇವೇಗೌಡರಿಗೆ ತುಮಕೂರು ಕ್ಷೇತ್ರ ಬಿಟ್ಟುಕೊಡಲು ನಿರಾಕರಿಸಿದಾಗ ಖುದ್ದು ಹೈಕಮಾಂಡ್ ಕರೆ ಮಾಡಿ ಮುಂದೆ ಅವಕಾಶ ಮಾಡಿಕೊಡುವುದಾಗಿ ಹೇಳಿತ್ತು. ಪರಿಷತ್​ನ 2 ಸ್ಥಾನಗಳಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾರಿಗೆ ಅವಕಾಶ ಕೊಡಿಸಬೇಕೆಂಬ ಸಿದ್ದರಾಮಯ್ಯ ಲೆಕ್ಕಾಚಾರ ಇಲ್ಲಿ ಕೈಕೊಟ್ಟಿದೆ.
ಪರಿಷತ್​ಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂದರ್ಭ ಮುಸ್ಲಿಮರನ್ನೇ ಪರಿಗಣಿಸಬೇಕೆಂಬ ವಾದವೆದ್ದಿದೆ. ಅಲ್ಪಸಂಖ್ಯಾತರ ನಿಯೋಗಗಳು ಮುಖಂಡರ ಮನೆ ಬಾಗಿಲು ತಟ್ಟಿ ತಮ್ಮ ಅಹವಾಲು ಮಂಡಿಸಿವೆ. ಇಲ್ಲಿ ಸಹ ಅಲ್ಪಸಂಖ್ಯಾತರಿಗೆ ಅವಕಾಶಕೊಡಬೇಕೆಂದು ಬಂದಾಗ ಕ್ರೖೆಸ್ತ ಸಮುದಾಯಕ್ಕೆ ಸೇರಿದ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವ ಮತ್ತು ಐವಾನ್ ಡಿಸೋಜಾ ಮುಂಚೂಣಿಗೆ ಬರುತ್ತಾರೆ. ಕ್ರೖೆಸ್ತ ಸಮುದಾಯ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದೆ, ಇವರಿಬ್ಬರಲ್ಲಿ ಒಬ್ಬರಿಗೆ ಅವಕಾಶ ಕೊಡಬೇಕಾದ ಸಂದಿಗ್ಧತೆಯಲ್ಲಿ ಕೈನಾಯಕರು ಸಿಲುಕಿದ್ದಾರೆ. ಮಾರ್ಗರೇಟ್ ದೆಹಲಿ ಮಟ್ಟದಲ್ಲಿ ಕದ ತಟ್ಟಿದ್ದಾರೆ. ಇನ್ನು ಮುಸ್ಲಿಂ ಸಮುದಾಯಕ್ಕೇ ಟಿಕೆಟ್ ನೀಡಬೇಕು ಎಂಬ ವಾದಕ್ಕೆ ಜೋತುಬಿದ್ದರೆ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಪೈಕಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಹಿಂದುಳಿದ ವರ್ಗಕ್ಕೆ ಅವಕಾಶ ನೀಡುವುದಾದರೆ ನನಗೇ ಅವಕಾಶ ಸಿಗಬೇಕೆಂದು ಎಚ್.ಎಂ.ರೇವಣ್ಣ, ಎಂ.ಸಿ.ವೇಣುಗೋಪಾಲ್, ಬಿ.ಬಿ.ಚಿಮ್ಮನಕಟ್ಟಿ ಪಟ್ಟುಹಿಡಿದಿದ್ದಾರೆ.
ಹೈಕಮಾಂಡ್ ಆಯ್ಕೆ:ಒಂದು ವೇಳೆ ಯಾವ ವರ್ಗಕ್ಕೆ ಸ್ಥಾನ ಮೀಸಲಿಡಬೇಕೆಂದು ತೀರ್ವನಿಸಲು ರಾಜ್ಯ ನಾಯಕರಿಗೆ ಸಾಧ್ಯವಾಗದೆ ಹೋದರೆ ಹೈಕಮಾಂಡ್ ಹಂತದಲ್ಲಿ ನಿರ್ಧಾರವಾಗಲಿದೆ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಶಿಫಾರಸಿಗೆ ಮನ್ನಣೆ ಸಿಗಲಿದೆ. ಜತೆಗೆ ಪಕ್ಷದ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಆಯ್ಕೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಿದರೆ ಅಚ್ಚರಿ ಆಯ್ಕೆ ಆಗಲೂಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + fifteen =
Remember me
