ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕೋರ್ ಕಮಿಟಿ ಕಳುಹಿಸಿದ್ದ ಶಿಫಾರಸುಗಳಿಗೆ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.
ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಭೆ ನಡೆಸಲಾಯಿತು. ಹತ್ತು ಹಲವು ಹೆಸರು ಚರ್ಚೆಗೆ ಬಂದರೂ ಅಂತಿಮವಾಗಿ ಪಕ್ಷ ಭರವಸೆ ನೀಡಿದ್ದ ನಾಲ್ಕು ಹೆಸರುಗಳನ್ನು ಮಾತ್ರ ಶಿಫಾರಸು ಮಾಡಲಾಗಿದೆ.
ರಾಜ್ಯಸಭಾ ಚುನಾವಣೆಗೆ ಕೋರ್ ಕಮಿಟಿ ಶಿಫಾರಸು ಮಾಡಿದ್ದ ಹೆಸರುಗಳಿಗೆ ಕೇಂದ್ರ ಒಪ್ಪದೆ ಕಾರ್ಯಕರ್ತರನ್ನು ಆರಿಸಿತ್ತು. ಇದರಿಂದ ಬೇರೆ ಸಂದೇಶ ರವಾನೆ ಆಗಿತ್ತು. ಆದ್ದರಿಂದ ಈ ಬಾರಿ ಆಯ್ಕೆ ಹೊಣೆ ರಾಜ್ಯ ಮುಖಂಡರಿಗೆ ಬಿಡಲಾಗುತ್ತದೆ ಎಂದು ಹೇಳಲಾಗಿತ್ತು. ಪಕ್ಷದ ಮುಖಂಡರು ಆರ್. ಶಂಕರ್, ಎಂ.ಟಿ.ಬಿ. ನಾಗರಾಜ್, ಎಚ್. ವಿಶ್ವನಾಥ್, ಸುನೀಲ್ ವಲ್ಯಾಪುರೆ ಅವರ ಹೆಸರನ್ನು ಶಿಫಾರಸು ಮಾಡಲು ತೀರ್ವನಿಸಿದ್ದರೂ ಬಹಿರಂಗ ಪಡಿಸದಿರುವ ನಿರ್ಧಾರಕ್ಕೆ ಬಂದಿದ್ದಾರೆ.
ನಾಲ್ವರಿಗೂ ಚುನಾವಣೆ ಸಂದರ್ಭದಲ್ಲಿ ಭರವಸೆಗಳನ್ನು ನೀಡಲಾಗಿತ್ತು. ಕಾಂಗ್ರೆಸ್-ಜೆಡಿಎಸ್ ಬಿಟ್ಟು ಬರುವ ಸಂದರ್ಭದಲ್ಲಿ ಬಿಜೆಪಿ ವರಿಷ್ಠರು ಸಹ ಒಪ್ಪಿದ್ದರು. ಆ ಹಿನ್ನೆಲೆಯಲ್ಲಿ ಮೂವರನ್ನು ಆಯ್ಕೆ ಮಾಡಲಾಗಿದೆ. ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾದ ಚಿಂಚೋಳಿಗೆ ಉಪ ಚುನಾವಣೆ ನಡೆದ ಸಂದರ್ಭದಲ್ಲಿ ಸುನೀಲ್ ವಲ್ಯಾಪುರೆಗೂ ವಿಧಾನ ಪರಿಷತ್​ನಲ್ಲಿ ಅವಕಾಶ ನೀಡುವ ಭರವಸೆ ನೀಡಿದ್ದರಿಂದ ಅವರ ಹೆಸರನ್ನು ಪರಿಗಣಿಸಲಾಗಿದೆ ಎಂದು ಕೋರ್ ಕಮಿಟಿ ಸದಸ್ಯರೊಬ್ಬರು ಸ್ಪಷ್ಟಪಡಿಸಿದರು.
ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲೂ ವಿಶ್ವನಾಥ್, ನಾಗರಾಜ್ ಹಾಗೂ ಶಂಕರ್ ಚುನಾವಣೆಯಲ್ಲಿ ಗೆದ್ದು ಸದನ ಪ್ರವೇಶಿಸಬೇಕೆಂದು ಹೇಳಿದೆ. ಈಗ ಚುನಾವಣೆ ನಡೆಯುವುದರಿಂದ ಅವರು ಸದನಕ್ಕೆ ಬರಲು ಅಡ್ಡಿ ಇಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಮೇಲ್ಮನೆಯ ಐದು ಸ್ಥಾನಗಳಿಗೆ ನಾಮನಿರ್ದೇಶನ ನಡೆಯಬೇಕಾಗಿದೆ. ಆ ಐದು ಸ್ಥಾನಗಳಿಗೆ ಪಕ್ಷದ ಕಾರ್ಯಕರ್ತರನ್ನು ಆಯ್ಕೆ ಮಾಡುವ ನಿರ್ಧಾರ ಮಾಡಲಾಯಿತು. ಸೋಮವಾರದ ಸಭೆಯಲ್ಲಿ ಯಾವುದೇ ಹೆಸರು ಚರ್ಚಿಸಲಿಲ್ಲ. ಹೈಕಮಾಂಡ್ ಸದ್ಯಕ್ಕೆ ನಾಮ ನಿರ್ದೇಶನ ಬೇಡವೆಂದು ಸೂಚಿಸಿರುವುದರಿಂದ ಮತ್ತೊಂದು ಸಭೆ ಸೇರಲು ತೀರ್ವನಿಸಲಾಯಿತು.
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ರಾಜ್ಯ ಘಟಕದಿಂದ ಹಲವು ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲು ತೀರ್ವನಿಸಲಾಗಿದೆ ಎಂದು ಸಭೆ ಬಳಿಕ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದರು. ಅಂತಿಮವಾಗಿ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ ಹೆಸರನ್ನು ಘೊಷಿಸಲಿದೆ ಎಂದು ಹೆಸರು ಬಹಿರಂಗ ಪಡಿಸಲು ನಿರಾಕರಿಸಿದರು.
ವಲಸಿಗರಿಂದ ಮುಖ್ಯಮಂತ್ರಿ ಭೇಟಿ:ಕೋರ್ ಕಮಿಟಿ ಸಭೆ ಹಿನ್ನೆಲೆಯಲ್ಲಿ ವಲಸಿಗ ಮುಖಂಡರು ಸೋಮವಾರ 2 ಬಾರಿ ಸಿಎಂ ಬಿಎಸ್​ವೈ ಅವರನ್ನು ಭೇಟಿ ಮಾಡಿದ್ದಾರೆ. ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್, ರೋಷನ್​ಬೇಗ್, ಮುನಿರತ್ನ ಹಾಗೂ ಇತರ ವಲಸಿಗರು ಕುಮಾರಕೃಪಾ ಅತಿಥಿಗೃಹದಲ್ಲಿ ಸಭೆ ಮಾಡಿ ರ್ಚಚಿಸಿದರು. ಬಳಿಕ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ರೋಷನ್​ಬೇಗ್ ಸಹ ತಮ್ಮ ಹೆಸರನ್ನು ಪರಿಗಣಿಸುವಂತೆ ಒತ್ತಾಯಿಸಿದರು. ಸದ್ಯಕ್ಕೆ ಕಷ್ಟವೆಂದು ಸಿಎಂ ಮನವರಿಕೆ ಮಾಡಿಕೊಟ್ಟರು. ಸಭೆ ಬಳಿಕ ಸಂಜೆ ಪುನಃ ಭೇಟಿ ಮಾಡಿದ ವಿಶ್ವನಾಥ್, ನಾಗರಾಜ್ ಮತ್ತಿತರರು ಸಿಎಂಗೆ ಧನ್ಯವಾದ ತಿಳಿಸಿದರು. ಕೋರ್ ಕಮಿಟಿಗೂ ಮುನ್ನ ಸಿಎಂ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾದ ನಳೀನ್​ಕುಮಾರ್ ಕಟೀಲ್, ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಆದ ರೀತಿ ಆಗುವುದಿಲ್ಲ, ಕೋರ್ ಕಮಿಟಿ ತೀರ್ವನವನ್ನೇ ಪರಿಗಣಿಸುವುದಾಗಿ ಹೈಕಮಾಂಡ್ ಭರವಸೆ ನೀಡಿದೆ ಎಂದು ತಿಳಿಸಿದರು ಎನ್ನಲಾಗಿದೆ.
ಜಿಲ್ಲಾಮಟ್ಟದಲ್ಲೂ ವರ್ಚುವಲ್ ರ‍್ಯಾಲಿ:ಕೇಂದ್ರ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದರಿಂದ ನಡೆಸಿದ ವರ್ಚುವಲ್ ರ್ಯಾಲಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಜಿಲ್ಲಾಮಟ್ಟದಲ್ಲೂ ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ.ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಜಿಲ್ಲಾಮಟ್ಟದಲ್ಲಿ ರ್ಯಾಲಿಗಳ ಮೂಲಕ ಗ್ರಾಮಾಂತರ ಪ್ರದೇಶಕ್ಕೆ ತಲುಪಬೇಕೆಂದು ನಿರ್ಧರಿಸಲಾಯಿತು.
ಸಭೆ ಬಳಿಕ ಸುದ್ದಿಗಾರರಿಗೆ ವಿವರಿಸಿದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಹೋಬಳಿ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುವರು ಎಂದರು. ಭಾನುವಾರ ನಡೆದ ಕರ್ನಾಟಕ ಜನಸಂವಾದ ವರ್ಚುವಲ್ ರ್ಯಾಲಿಯಲ್ಲಿ ವಿಶ್ವದೆಲ್ಲೆಡೆಯಿಂದ 2 ಕೋಟಿಗೂ ಅಧಿಕ ಜನ ಭಾಗವಹಿಸಿದ್ದರು. ರಾಜ್ಯದಲ್ಲಿ 58.23 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಫೇಸ್​ಬುಕ್​ನಲ್ಲಿ 50.50 ಲಕ್ಷ, ಟ್ವಿಟ್ಟರ್​ನಲ್ಲಿ 21 ಲಕ್ಷ, ದೂರದರ್ಶನದಲ್ಲಿ 7 ಲಕ್ಷ ಜನ ವೀಕ್ಷಿಸಿದ್ದಾರೆ ಎಂದರು. ಜೂ.18ರಂದು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕರೊನಾ ವಿರುದ್ಧ ಜನಜಾಗೃತಿ ಜಾಥಾ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಜನಜಾಗೃತಿ ನಡಿಗೆ ಆಯೋಜಿಸಲಾಗಿದ್ದು ಇದರಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಉಳಿದೆಡೆ ಎಲ್ಲ ಜನಪ್ರತಿನಿಧಿ, ಪದಾಧಿಕಾರಿಗಳು 50ಕ್ಕಿಂತ ಹೆಚ್ಚು ಜನ ಸೇರದಂತೆ ಭಾಗವಹಿಸಬೇಕೆಂದು ತಿಳಿಸಲಾಗಿದೆ ಎಂದರು.
ಗೌಡರ ನಿರ್ಧಾರವೇ ಅಂತಿಮ:ಬೆಂಗಳೂರು: ಮೇಲ್ಮನೆಗೆ ತೀವ್ರ ಪೈಪೋಟಿ ಉಂಟಾಗಿರುವುದರಿಂದ ಅಭ್ಯರ್ಥಿ ಆಯ್ಕೆಯ ಅಂತಿಮ ತೀರ್ವನದ ವಿವೇಚನೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ಬಿಟ್ಟುಕೊಡಲು ತೀರ್ವನಿಸಲಾಯಿತು. ಜೆ.ಪಿ. ಭವನದಲ್ಲಿ ನಡೆದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸುದೀರ್ಘ ಸಭೆ ನಡೆಸಿ ಶಾಸಕರು, ಮೇಲ್ಮನೆ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿದರು. ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ಆಯ್ಕೆಯಾಗುವ ಈ ಚುನಾವಣೆಯಲ್ಲಿ ಜೆಡಿಎಸ್ ಶಾಸಕರ ಬಲದ ಆಧಾರದ ಮೇಲೆ ಒಂದು ಸ್ಥಾನ ಲಭ್ಯವಾಗಲಿದೆ.
ಜಾತಿ, ಪ್ರದೇಶ, ಋಣಭಾರ ಆಧರಿಸಿ ಟಿಕೆಟ್ ನೀಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಹಾಲಿ ಸದಸ್ಯ ಟಿ.ಎ.ಶರವಣ ಮತ್ತೊಮ್ಮೆ ಅವಕಾಶ ಕೋರಿದ್ದಾರೆ. ರಾಜ್ಯಸಭೆ ಸ್ಥಾನ ಬಿಟ್ಟುಕೊಟ್ಟ ಕಾರಣಕ್ಕೆ ತಮಗೆ ಮೇಲ್ಮನೆ ಸ್ಥಾನ ನೀಡಬೇಕು ಎಂದು ಕುಪೇಂದ್ರ ರೆಡ್ಡಿ ಕೇಳಿದ್ದಾರೆ. ಜತೆಗೆ ಉತ್ತರ ಕರ್ನಾಟಕ, ಲಿಂಗಾಯತ ಸಮುದಾಯಕ್ಕೆ ಕೊಡುವ ಚರ್ಚೆಗಳೂ ಪಕ್ಷದ ಆಂತರಿಕ ವಲಯದಲ್ಲಿ ಗರಿಗೆದರಿವೆ. ಅಂತಿಮವಾಗಿ ದೇವೇಗೌಡರು ಬುಧವಾರ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆಗಳಿವೆ.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ, ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದಿದೆ. ದೇವೇಗೌಡರು ರಾಜ್ಯಸಭೆಗೆ ಆಯ್ಕೆ ಆಗಿದ್ದಕ್ಕೆ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ರಾಜ್ಯದ ಶಕ್ತಿಯಾಗಿ ರಾಜ್ಯಸಭೆಯಲ್ಲಿ ದೇವೇಗೌಡರು ಹೋರಾಡಲಿದ್ದಾರೆ ಎಂದರು. ಅಂತಿಮವಾಗಿ ದೇವೇಗೌಡರು ಪರಿಷತ್ ಚುನಾವಣೆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡರೂ ಎಲ್ಲರೂ ಅದಕ್ಕೆ ಬದ್ಧರಿರಲು ನಿರ್ಣಯಿಸಲಾಯಿತು ಎಂದರು. ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ, ಟಿ.ಎ. ಶರವಣ, ವೈ.ಎಸ್.ವಿ. ದತ್ತ ಸಹಿತ ಹಲವರ ಹೆಸರಿದೆ. ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ತುರ್ತು ಕಾರಣದಿಂದ ಬರಲಾಗಿಲ್ಲ. ಬಸವರಾಜ ಹೊರಟ್ಪಿ ಕೂಡ ಅನುಮತಿ ಪಡೆದು ಗೈರಾಗಿದ್ದರು ಎಂದರು.
ಹೈಕಮಾಂಡ್​ಗೆ ಮೊರೆಹೋದ ಕೆಪಿಸಿಸಿ:ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ಲಭ್ಯವಿರುವ ಎರಡು ಸ್ಥಾನಗಳನ್ನು ಯಾವ ಸಮುದಾಯಕ್ಕೆ ನೀಡಬೇಕೆಂಬ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದ ಕಾಂಗ್ರೆಸ್ ರಾಜ್ಯ ನಾಯಕರು, ಹೈಕಮಾಂಡ್ ತೀರ್ವನಕ್ಕೆ ಬಿಟ್ಟಿದ್ದಾರೆ.
ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಪೈಕಿ ಯಾರನ್ನೇ ಕಡೆಗಣಿಸಿದರೂ ಬೇರೆ ಸಂದೇಶ ಹೋಗಬಹುದೆಂಬ ಕಾರಣಕ್ಕೆ ಎರಡೂ ವರ್ಗಕ್ಕೆ ಸೇರಿದ ಐವರ ಹೆಸರನ್ನು ದೆಹಲಿಗೆ ಕಳಿಸಿಕೊಟ್ಟಿದ್ದಾರೆ. ದೂರವಾಣಿ ಮೂಲಕವೇ ರ್ಚಚಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ತಮ್ಮ ಹಿಂದಿನ ಲೆಕ್ಕಾಚಾರದಂತೆ 2 ವರ್ಗಕ್ಕೆ ಸೀಮಿತಗೊಳಿಸಿ ತಮ್ಮ ಅಭಿಪ್ರಾಯ ಹೈಕಮಾಂಡ್​ಗೆ ಕಳಿಸಿದರು.
ಒಂದು ವೇಳೆ ಹೈಕಮಾಂಡ್ ಬೇರೆ ಲೆಕ್ಕಾಚಾರದಲ್ಲಿ ಹೆಸರನ್ನು ಪ್ರಸ್ತಾಪಿಸಿದರೆ ಒಪ್ಪಬೇಕಾಗಬಹುದು. ಆಗ ಅದು ಹೈಕಮಾಂಡ್ ತೀರ್ಮಾನ ಎಂದಾಗುವುದರಿಂದ ಸಮಸ್ಯೆ ಆಗದು. ಅಲ್ಪಸಂಖ್ಯಾತರು ಮತ್ತು ಹಿಂದುಳಿದವರಿಗೆ 2 ಸ್ಥಾನ ಮೀಸಲು ಎಂದು ನಾವು ಹೇಳಿದ್ದು, ಈಗ ನಿಲುವು ಬದಲಿಸಿದರೆ ತಪ್ಪಾಗುತ್ತದೆ ಎಂದು ಇಬ್ಬರೂ ಕೂಡಿ ಈ ನಿರ್ಧಾರಕ್ಕೆ ಬಂದರೆಂದು ತಿಳಿದುಬಂದಿದೆ. ಪರಿಷತ್ ಚುನಾವಣೆ ದಿನಾಂಕ ಪ್ರಕಟ ಆದಾಗ ಮಹಿಳಾ ಕೋಟಾಗೆ ಅವಕಾಶ ಕೊಡಬೇಕೆಂದು ಲಾಬಿ ನಡೆದಿತ್ತು. ಅದೇ ರೀತಿ ರಾಜ್ಯಸಭೆ, ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಬೇರೆಯವರಿಗೆ ಅವಕಾಶ ಬಿಟ್ಟುಕೊಟ್ಟು ರಾಜಕೀಯವಾಗಿ ನೆಲೆ ಕಾಣದೇ ಕಂಗಾಲಾದವರು ಯತ್ನಿಸಿದ್ದರು. ಆದರೆ, ಸಿದ್ದರಾಮಯ್ಯ ಅಲ್ಪಸಂಖ್ಯಾತ, ಹಿಂದುಳಿದ ವರ್ಗಕ್ಕೆ ಅವಕಾಶ ಎಂದು ನಿರ್ಧರಿಸಿದ್ದು, ಅದನ್ನು ಡಿಕೆಶಿ ಒಪ್ಪುವಂತೆ ಮಾಡಿದರು.
ಇದೀಗ ಅಲ್ಪಸಂಖ್ಯಾತರಲ್ಲಿ ಕ್ರಿಶ್ಚಿಯನ್ನರಿಗೆ ನೀಡಬೇಕೋ ಅಥವಾ ಮುಸ್ಲಿಮರಿಗೆ ನೀಡಬೇಕೋ ಎಂಬುದನ್ನು ತೀರ್ವನಿಸುವ ಸಂದಿಗ್ಧಕ್ಕೆ ಸಿಲುಕಿ, ಈ ಜವಾಬ್ದಾರಿ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದಾರೆ. ಎರಡೂ ಸಮುದಾಯಗಳು ಪಕ್ಷದ ಜತೆ ಇವೆ. ಯಾರನ್ನೂ ಕಡೆಗಣಿಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ. ಈ ಮಧ್ಯೆ ಎಚ್.ಎಂ.ರೇವಣ್ಣ, ಬಿ.ಬಿ. ಚಿಮ್ಮನಕಟ್ಟಿ ಅವರಂಥವರು ಪೈಪೋಟಿಗಿಳಿದಿದ್ದು ಅರಗಿಸಿಕೊಳ್ಳಲು ರಾಜ್ಯ ನಾಯಕರಿಗೆ ಕಷ್ಟವಾಯಿತು. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರಿಗೆ ಅವಕಾಶ ಮಾಡಿಕೊಟ್ಟ ಮುದ್ದಹನುಮೇಗೌಡರಿಗೆ ಅವಕಾಶ ಕೊಡಬೇಕಾಗುತ್ತದೆ ಎಂದು ಬಹುತೇಕ ನಾಯಕರು ಅಭಿಪ್ರಾಯ ನೀಡಿದ್ದರು. ಆದರೆ, ಈಗ ರಾಜ್ಯದಿಂದ ದೆಹಲಿಗೆ ಹೋಗಿರುವ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಒಂದು ವೇಳೆ ಹೈಕಮಾಂಡ್ ಅವರ ಹೆಸರನ್ನು ಅನುಮೋದಿಸಿದರೂ ಅಚ್ಚರಿಪಡಬೇಕಿಲ್ಲ.
https://www.vijayavani.net/murder-convicts-presence-at-wedding-of-kerala-cms-daughter-kicks-up-row/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
