| ಸಿ.ಎಸ್.ದೀಪಕ್ ಕೆ.ಆರ್.ಸಾಗರ
ಕೆಆರ್​ಎಸ್ ಅಣೆಕಟ್ಟೆಯಿಂದ ‘ಕೃಷ್ಣರಾಜಸಾಗರ’ ಗ್ರಾಮ ವಿಶ್ವವಿಖ್ಯಾತಿಯಾಗಿದ್ದರೂ ಸರ್ಕಾರಿ ದಾಖಲೆಯಲ್ಲಿ ‘ಹೊಂಗಹಳ್ಳಿ’ ಹೆಸರಿನಿಂದಲೇ ಗುರುತಿಸಿಕೊಂಡಿದ್ದ ಕಾಲ ಅಂತ್ಯವಾಗಿದೆ. ಇನ್ನು ಮುಂದೆ ದಾಖಲಾತಿಗಳಲ್ಲಿ ಕೆಆರ್​ಎಸ್ ಗ್ರಾಮ ಎನ್ನುವ ಮುದ್ರೆ ಬೀಳಲಿದೆ.
ರಾಜ್ಯ ಸರ್ಕಾರ ನ.19ರಂದು ಗೆಜೆಟ್​ನಲ್ಲಿ ಕೃಷ್ಣರಾಜಸಾಗರವನ್ನು ಕಂದಾಯ ಗ್ರಾಮವೆಂದು ಘೊಷಣೆ ಮಾಡಿದೆ. ಶಾಸಕ ರವೀಂದ್ರ ಶ್ರೀಕಂಠಯ್ಯ, ಗ್ರಾಪಂ ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಈ ಗ್ರಾಮ ಸುಮಾರು 110 ಎಕರೆ ವಿಸ್ತೀರ್ಣವಿದ್ದು, ರಾಜ್ಯದಲ್ಲೇ ದೊಡ್ಡ ಕಂದಾಯ ಗ್ರಾಮ ಎನ್ನುವ ಹೆಗ್ಗಳಿಕೆೆ ಹೊಂದಲಿರುವುದು ಗಮನಾರ್ಹ.
ದಾಖಲೆಯಲ್ಲೇ ಇರಲಿಲ್ಲ: ಕೆಆರ್​ಎಸ್ ಅಣೆಕಟ್ಟೆ ಖ್ಯಾತಿಯ ಹಣೆಪಟ್ಟಿ ಇದ್ದರೂ ಕಂದಾಯ ಗ್ರಾಮವೆಂದು ಘೋಷಣೆ ಮಾಡದ ಪರಿಣಾಮ ಕಂದಾಯ ಇಲಾಖೆ ದಾಖಲೆಗಳಲ್ಲಿ ಹೊಂಗಹಳ್ಳಿ ಹೆಸರಿನಲ್ಲಿತ್ತು. ಯಾವುದೇ ದಾಖಲೆ ಪಡೆದರೂ ಇದೇ ಹೆಸರಿನ ಮುದ್ರೆ ಬೀಳುತ್ತಿತ್ತು.
ಇದಲ್ಲದೆ, ಅಣೆಕಟ್ಟೆ ಮತ್ತು ಬೃಂದಾವನ ಒಳಗೊಂಡಿದ್ದರೂ ಗ್ರಾಮ ಠಾಣಾ ನಿಗದಿಯಾಗಿರಲಿಲ್ಲ. ಅಂತೆಯೆ ಸಾರ್ವಜನಿಕರ ಉಪಯೋಗಕ್ಕಾಗಿ ಜಿಲ್ಲಾಡಳಿತ ಜಮೀನು ಮಂಜೂರು ಮಾಡಲು ಸಾಧ್ಯವಾಗದಂತಹ ಸ್ಥಿತಿ ಇತ್ತು. ಇನ್ನು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರು ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದರು.
ಈ ಎಲ್ಲ ಸಮಸ್ಯೆಗಳಿಗೆ ಕಂದಾಯ ಗ್ರಾಮವೆಂಬ ಘೋಷಣೆಯೊಂದಿಗೆ ಶಾಶ್ವತ ಪರಿಹಾರ ಸಿಕ್ಕಿದೆ. ಸರ್ಕಾರದ ಎಲ್ಲ ದಾಖಲೆಗಳಲ್ಲಿಯೂ ಕೃಷ್ಣರಾಜಸಾಗರ ಎಂಬ ಅಧಿಕೃತ ಮುದ್ರೆ ಬೀಳಲಿದೆ. ಗ್ರಾಮ ಠಾಣಾವೂ ನಿಗದಿಯಾಗಿರುವುದರಿಂದ ಗ್ರಾಮದ ವಿಸ್ತೀರ್ಣವೂ ಸಿಕ್ಕಂತಾಗಿದೆ. ಜೀವನ ನಿರ್ವಹಣೆ ಮತ್ತು ಡ್ಯಾಂ ನಿರ್ವಣಕ್ಕೆಂದು ಹಲವು ವರ್ಷದ ಹಿಂದೆ ಎಲ್ಲೆಲ್ಲಿದಲೋ ಬಂದು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದವರಿಗೆ ಹಕ್ಕುಪತ್ರ ಸಿಗಲಿದೆ. ಸ್ಮಶಾನ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲಕ್ಕೆ ಜಾಗ ನೀಡಲು ಜಿಲ್ಲಾಡಳಿತವೇ ನಿರ್ಧರಿಸಬಹುದು.
ಹೋರಾಟಕ್ಕೆ ಸಿಕ್ಕಿತು ಫಲ
1979ನೇ ಇಸವಿಯಲ್ಲಿ ಕೃಷ್ಣರಾಜಸಾಗರ ಅಧಿಸೂಚಿತ ಪ್ರದೇಶವೆಂದು ಘೊಷಣೆ ಮಾಡಲಾಗಿತ್ತು. ಅಭಿವೃದ್ಧಿಯ ದೃಷ್ಟಿಯಿಂದ 1998ರಲ್ಲಿ ಕೆ.ಆರ್.ಸಾಗರ ಗ್ರಾಪಂ ರಚನೆ ಮಾಡಲಾಯಿತು. 2000ರಲ್ಲಿ ಗ್ರಾಪಂಗೆ ಪ್ರಥಮ ಚುನಾವಣೆ ನಡೆಯಿತು. ಇಷ್ಟೆಲ್ಲ ಬೆಳವಣಿಗೆ ನಡೆದರೂ ಕೃಷ್ಣರಾಜಸಾಗರ ಕಂದಾಯ ಗ್ರಾಮವಾಗಿರಲಿಲ್ಲ. ಬೇರೆ ಗ್ರಾಮದ ಹೆಸರಿನಿಂದ ಗುರುತಿಸಿಕೊಳ್ಳುವುದನ್ನು ತಪ್ಪಿಸುವಂತೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯರಿಂದ ಮನವಿ ಸಲ್ಲಿಕೆಯಾಗುತ್ತಲೇ ಇತ್ತು.
ಈ ನಡುವೆ 2018ರಲ್ಲಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ, ಕೆಆರ್​ಎಸ್ ಡ್ಯಾಂಗೆ ಬಾಗಿನ ಅರ್ಪಿಸಲು ಬಂದಿದ್ದ ವೇಳೆ ಶಾಸಕ ರವೀಂದ್ರಶ್ರೀಕಂಠಯ್ಯ ಗ್ರಾಮ ಮುಖಂಡರೊಂದಿಗೆ ಕಂದಾಯ ಗ್ರಾಮ ಘೊಷಣೆ ಮಾಡುವ ಬಗ್ಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಎಚ್​ಡಿಕೆ, ಕಂದಾಯ ಗ್ರಾಮವನ್ನು ಕಾರ್ಯ ರೂಪಕ್ಕೆ ತರುವ ಸಂಬಂಧ ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಆದರೆ ವರ್ಷಗಳೇ ಕಳೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ, ರಾಜಕೀಯ ಬೆಳವಣಿಗೆಯಿಂದ ಮೈತ್ರಿ ಸರ್ಕಾರವೂ ಅಂತ್ಯವಾಯಿತು.
2019ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡ್ಯಾಂಗೆ ಬಾಗಿನ ಅರ್ಪಿಸಲು ಬಂದಿದ್ದಾಗ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಬಿಎಸ್​ವೈ, ಗ್ರಾಮ ಠಾಣಾ ರಚನೆ ಮತ್ತು ಸರ್ಕಾರದ ಮಾರ್ಗ ಸೂಚಿಗಳನ್ನು ಕಾರ್ಯರೂಪಕ್ಕೆ ತರುವಂತೆ ಸ್ಥಳದಲ್ಲಿಯೇ ಡಿಸಿಗೆ ಸೂಚಿಸಿದರು.
ಈ ಹಿನ್ನೆಲೆಯಲ್ಲಿ ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿ ಗ್ರಾಮ ಠಾಣಾ ನಿಗದಿಪಡಿಸಿದ, ಹೊಂಗಹಳ್ಳಿ ಮತ್ತು ಹುಲಿಕೆರೆ ಗ್ರಾಮಕ್ಕೆ ಸೇರಿಕೊಂಡಿದ್ದ 148 ಸರ್ವೆ ನಂಬರ್​ಗಳನ್ನು ಸೇರಿಸಿ ಕಂದಾಯ ಗ್ರಾಮದ ವರದಿ ಸಲ್ಲಿಸಿದ್ದರು. ಅಂತಿಮವಾಗಿ ಎಲ್ಲ ಅಂಶಗಳನ್ನು ಪರಿಶೀಲಿಸಿ ಕಂದಾಯ ಗ್ರಾಮದ ಘೋಷಣೆಯಾಗಿದೆ. ಕೃಷ್ಣರಾಜಸಾಗರ ಕಂದಾಯ ಗ್ರಾಮದ ಜನವಸತಿ ಪ್ರದೇಶವಾದ ಸರ್ ಎಂ.ವಿಶ್ವೇಶ್ವರಯ್ಯಪುರವನ್ನು ಮಜರೆ ಗ್ರಾಮವನ್ನಾಗಿ ಬದಲಾಯಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + seventeen =
Remember me
