|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಆರ್ಥಿಕ ಹಿಂಜರಿತ, ಕರೊನಾದಿಂದಾಗಿ ಕುಗ್ಗಿರುವ ತೆರಿಗೆ ಸಂಗ್ರಹ, ಮುಂದಿನ ವರ್ಷಗಳಲ್ಲಿ ಕಡಿಮೆಯಾಗಲಿರುವ ಜಿಎಸ್​ಟಿ ಪರಿಹಾರಗಳಿಂದ ಉದ್ಭವಗೊಳ್ಳಬಹುದಾದ ಸಮಸ್ಯೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರವೀಗ ಸಂಪನ್ಮೂಲ ಸಂಗ್ರಹಕ್ಕಾಗಿ ಪರ್ಯಾಯ ಮೂಲಗಳತ್ತ ದೃಷ್ಟಿ ಹರಿಸಿದೆ.
ದಿನೇ ದಿನೆ ಹೆಚ್ಚುತ್ತಿರುವ ಆಡಳಿತಾತ್ಮಕ ವೆಚ್ಚ, ತುಟ್ಟಿಭತ್ಯೆಗಳ ಪರಿಷ್ಕರಣೆ, ಕಾನೂನು ಸುವ್ಯವಸ್ಥೆ ಕಾಪಾಡುವುದು, ಬದ್ಧತಾ ವೆಚ್ಚ, ಪ್ರಕೃತಿ ವಿಕೋಪ, ಸಮಾಜ ಕಲ್ಯಾಣ ಕಾರ್ಯಗಳಿಗೆ ನೀಡಬೇಕಾಗಿರುವ ಆದ್ಯತೆಯ ಪರಿಣಾಮ ವೆಚ್ಚ ಹೆಚ್ಚಾಗಿ ಸಂಪನ್ಮೂಲ ಸಂಗ್ರಹದ ಮೇಲೆ ಪರಿಣಾಮ ಗೋಚರಿಸಿದೆ. ಹೀಗಾಗಿ ಪರ್ಯಾಯ ಮೂಲ ಕಂಡುಕೊಂಡರೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗದೆಂಬುದು ಸರ್ಕಾರದ ಉದ್ದೇಶ.

ಆರ್ಥಿಕ ಹಿಂಜರಿತದಿಂದ ರಾಜ್ಯ ಚೇತರಿಸಿಕೊಳ್ಳುವ ಮುನ್ನವೇ ಕರೊನಾ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಪರಿಸ್ಥಿತಿ ಕೊಂಚ ಸುಧಾರಿಸುತ್ತಿದ್ದರೂ ಸಂಪನ್ಮೂಲ ಸಂಗ್ರಹ ಮಾತ್ರ ಮೇಲೇಳುವ ಸಾಧ್ಯತೆ ಕಾಣುತ್ತಿಲ್ಲ. ಇದರ ಜತೆಗೆ ಸ್ವಂತ ತೆರಿಗೆ ಕಡಿಮೆಯಾಗುವ ಸಾಧ್ಯತೆಗಳೂ ಕಂಡು ಬಂದಿವೆ.

ಎಷ್ಟು ಕಡಿಮೆ ಆಗಬಹುದು?:ಹಣಕಾಸು ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ ಅಂತ್ಯದವರೆಗೆ ಸ್ವಂತ ಸಂಪನ್ಮೂಲ ಸಂಗ್ರಹಣೆ ನಿಗದಿತ ಗುರಿಗಿಂತ ಸುಮಾರು 18 ಸಾವಿರ ಕೋಟಿ ರೂ. ಕಡಿಮೆಯಾಗಿದೆ. ವ್ಯಾಪಾರ ವಹಿವಾಟು ಸ್ವಲ್ಪ ಚೇತರಿಸಿಕೊಂಡಿದ್ದರೂ ಗುರಿ ಸಾಧಿಸುವುದು ಕಷ್ಟ. ಹೀಗಾಗಿ 30 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಕೊರತೆ ಆಗಬಹುದೆಂದು ಅಂದಾಜಿಸಲಾಗಿದೆ. ಕಳೆದ ವರ್ಷ ಮೊದಲ ಆರು ತಿಂಗಳಲ್ಲಿ ಶೇ.49.37 ಸ್ವಂತ ಸಂಪನ್ಮೂಲಗಳ ಸಂಗ್ರಹಣೆ ಆಗಿದ್ದರೆ ಈ ವರ್ಷ ಶೇ.34.53 ಮಾತ್ರ ಆಗಿದೆ.
ಪರ್ಯಾಯ ಚಿಂತನೆ:ಸ್ವಂತ ತೆರಿಗೆ ಮೊತ್ತ ಹೆಚ್ಚಿಸಿಕೊಳ್ಳುವುದು ಕಷ್ಟ. ಆದ್ದರಿಂದಲೇ ತೆರಿಗೆಯೇತರ ಆದಾಯ ಸೇರಿ ಬೇರೆ ಬೇರೆ ಪರ್ಯಾಯಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಅದೇ ನಿಟ್ಟಿನಲ್ಲಿ ಈಗ ಇಲಾಖೆಗಳಿಗೂ ಸೂಚನೆ ರವಾನಿಸಿದೆ. ಆ ಮೂಲಕ ಸರ್ಕಾರ ತನ್ನ ವೆಚ್ಚಗಳನ್ನು ನಿಭಾಯಿಸಲು ನಿರ್ಧರಿಸಿರುವುದಾಗಿ ಹಣಕಾಸು ಇಲಾಖೆ ಮೂಲಗಳು ಖಚಿತಪಡಿಸಿವೆ.

ಇಲಾಖೆಗಳಿಗೆ ಪತ್ರ:ಒಂದಷ್ಟು ಸುಧಾರಣಾ ಕ್ರಮಗಳಿಗೆ ಮುಂದಾಗಿರುವ ಹಣಕಾಸು ಇಲಾಖೆ ಎಲ್ಲ ಇಲಾಖೆಗಳಿಗೆ ಪತ್ರ ಬರೆದಿದೆ. ಸರ್ಕಾರದ ಜಮೀನು ಎಷ್ಟಿದೆ? ಜಮೀನು ಯಾರ ಹೆಸರಿನಲ್ಲಿದೆ. ಅದರಲ್ಲಿ ಕಟ್ಟಡ ಇದೆಯಾ? ಇದ್ದರೆ ಆಯಸ್ಸೆಷ್ಟು? ವಾಹನಗಳು ಎಷ್ಟಿವೆ? ತೆರಿಗೆಯೇತರ ಆದಾಯ ಹೆಚ್ಚಿಸಲು ಕೈಗೊಂಡಿರುವ ಕ್ರಮ ಗಳೇನು? ಎಂಬ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.

4 ಲಕ್ಷ ಕೋಟಿ ದಾಟಲಿದೆ ಸಾಲ:ರಾಜ್ಯ ಸರ್ಕಾರದ ಸಾಲ ಈ ವರ್ಷ 4 ಲಕ್ಷ ಕೋಟಿ ರೂ. ದಾಟಲಿದೆ. ಈ ವರ್ಷ ಬಜೆಟ್​ನಲ್ಲಿ 3,68, 992 ಕೋಟಿ ರೂ. ಗಳಾಗುತ್ತದೆ. ಆದರೆ ಕೇಂದ್ರ ಈ ವರ್ಷದ ಮಟ್ಟಿಗೆ ಜಿಎಸ್​ಡಿಪಿಯ ಶೇ.2 ಹೆಚ್ಚುವರಿ ಸಾಲ ಮಾಡಲು ಒಪ್ಪಿಗೆ ನೀಡಿದೆ. ಶೇ.2 ಸಾಲ ಮಾಡಿದರೆ 36 ಸಾವಿರ ಕೋಟಿ ರೂ.ಗಳಾಗುತ್ತದೆ. ಕೇಂದ್ರದ 4 ಷರತ್ತುಗಳಲ್ಲಿ 3 ಪೂರೈಸಿರುವುದರಿಂದ ಶೇ.1.75 ಹೆಚ್ಚುವರಿ ಸಾಲಕ್ಕೆ ರಾಜ್ಯ ಅರ್ಹವಾಗಿದೆ. ಕೇಂದ್ರದಿಂದ ಈಗ ಅನುಮತಿ ಸಿಕ್ಕ ಪರಿಣಾಮ ಆರ್​ಬಿಐನಿಂದ ಸಾಲ ಮಾಡುವ ಪ್ರಕ್ರಿಯೆ ಆರಂಭವಾಗಬೇಕಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − five =
Remember me
