|ಮೃತ್ಯುಂಜಯ ಕಪಗಲ್ಬೆಂಗಳೂರು
ಕರೊನಾ ಸಾಂಕ್ರಾಮಿಕ ಪಿಡುಗಿನಿಂದ ಉಂಟಾಗಿದ್ದ ಆರ್ಥಿಕ ಸಂಕಷ್ಟ ನಿಧಾನಕ್ಕೆ ಕಡಿಮೆಯಾಗತೊಡಗಿದೆ. ರಾಜ್ಯದಲ್ಲಿ ಉದ್ಯಮ, ವಹಿವಾಟು, ತಯಾರಿ ವಲಯದ ಚಟುವಟಿಕೆಗಳು ಗರಿಗೆದರಿ, ಆರ್ಥಿಕತೆಗೆ ಉತ್ತೇಜನ ನೀಡಿದ್ದರ ಫಲ ಬಸವರಾಜ ಬೊಮ್ಮಾಯಿ ಆಡಳಿತಕ್ಕೆ ದಕ್ಕಿದೆ. ಬೊಕ್ಕಸಕ್ಕೆ ಆದಾಯ ಜಮೆ ದೃಷ್ಟಿಯಿಂದ ಪ್ರಸಕ್ತ ಆರ್ಥಿಕ ವರ್ಷ (2022-23)ದ ಮೊದಲ ತ್ರೖೆಮಾಸಿಕ ಆಶಾದಾಯಕವಾಗಿ ಮುಗಿದಿದ್ದು, ಮೊದಲ ಎರಡು ತಿಂಗಳಲ್ಲಿ 11,275 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಜೂನ್ ಕೊನೆಗೊಳ್ಳಲು ಇನ್ನೂ ನಾಲ್ಕು ದಿನಗಳಿರುವ ಕಾರಣ ಲೆಕ್ಕಪತ್ರ ನಿಕ್ಕಿಯಾದ ಬಳಿಕ ಸ್ವಂತ ಮೂಲಗಳಿಂದ ಶೇಖರಣೆಯಾದ ಆದಾಯ ಗೊತ್ತಾಗಲಿದೆ. ಎಲ್ಲ ವಲಯಗಳ ಕಾರ್ಯಚಟುವಟಿಕೆಗಳು ಮತ್ತೆ ಹಳಿಗೆ ಬಂದಿರುವ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಸಾಲಕ್ಕೆ ಸರ್ಕಾರ ಈ ಬಾರಿ ಕೈಚಾಚಿಲ್ಲ. ಸದ್ಯದ ಪ್ರಗತಿ ಗಮನಿಸಿದರೆ ಮುಂದಿನ ಮೂರು ತಿಂಗಳು ಅಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ ಆರ್ಥಿಕ ಇಲಾಖೆ ಮೂಲಗಳು ಹೇಳಿವೆ.
ಹಳೆಯ ತಂತ್ರ ಪ್ರಯೋಗ:ಕಳೆದ ಆರ್ಥಿಕ ವರ್ಷದ ಮೊದಲು ಮೂರು ತಿಂಗಳು (ಏಪ್ರಿಲ್ ನಿಂದ ಜೂನ್) ಇದೇ ರೀತಿ ಕಾದುನೋಡುವ ತಂತ್ರ ಅನುಸರಿಸಿತ್ತು. ಆದರೆ ಕೊನೆಯ ಆರು ತಿಂಗಳಲ್ಲಿ 51,000 ಕೋಟಿ ರೂ. ಅಧಿಕ ಸಾಲ ಪಡೆಯಿತು. ಚಾಲ್ತಿ ಹಣಕಾಸು ವರ್ಷದ ಬಜೆಟ್​ನಲ್ಲಿ 2.61 ಲಕ್ಷ ಕೋಟಿ ರೂ. ಆದಾಯ ಸ್ವೀಕೃತಿ ನಿರೀಕ್ಷೆ ಇಟ್ಟುಕೊಂಡಿದ್ದರೆ, ವೆಚ್ಚ 2.65 ಲಕ್ಷ ಕೋಟಿ ರೂ.ಗಳಾಗಿದೆ. ಹಾಗೆಯೇ 72,089 ಕೋಟಿ ರೂ. ಸಾಲ ಪಡೆಯುವುದಾಗಿ ಹೇಳಿದ್ದು, ಈ ಪೈಕಿ 67,911 ಕೋಟಿ ರೂ.ಗಳನ್ನು ಮುಕ್ತ ಮಾರುಕಟ್ಟೆ ಮೂಲಕ ಪಡೆಯಲು ತೀರ್ವನಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಸಾಲ ಪಡೆಯಲು ಮುಂಚಿತವಾಗಿ ಆರ್​ಬಿಐಗೆ ಪ್ರಸ್ತಾವನೆ ಸಲ್ಲಿಸಬೇಕಾಗಿದ್ದು, ಈ ಬಾರಿ ಮೊದಲ ತ್ರೖೆಮಾಸಿಕದಲ್ಲಿ ಸಾಲ ಪಡೆಯುವುದು ಬೇಡವೆಂಬ ನಿರ್ಧಾರ ಕೈಗೊಂಡಿದೆ. ಸಾಲ ಎತ್ತುವಳಿ ಹರಾಜಿನಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಭಾಗವಹಿಸಿವೆ. ಕರ್ನಾಟಕ ಆ ಗೋಜಿಗೆ ಹೋಗಿಲ್ಲ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಉದ್ಯಮ-ವಹಿವಾಟು ಫುಲ್ ಸ್ವಿಂಗ್​ನಲ್ಲಿದೆ, ತಯಾರಿಕಾ ವಲಯ ಏರುಮುಖದ ದಾರಿಯಲ್ಲಿದ್ದು, ಬಹುತೇಕ ಕಂಪನಿಗಳು ಮನೆಯಿಂದಲೇ ಕೆಲಸ ಕೈಬಿಟ್ಟಿರುವ ಕಾರಣ ಆತಿಥ್ಯ, ಪ್ರವಾಸೋದ್ಯಮ ಕ್ಷೇತ್ರ ಚೇತರಿಸಿಕೊಂಡು ಆರ್ಥಿಕತೆ ಸುಧಾರಿಸಿಕೊಳ್ಳುತ್ತಿದೆ. ಮೊದಲ ಎರಡು ತಿಂಗಳು ನಿಗದಿತ ಗುರಿಗಿಂತ ಹೆಚ್ಚಿನ ಆದಾಯ ಜಮೆಯಾಗಿದೆ. ಇದೇ ಬೆಳವಣಿಗೆ ಮುಂದುವರಿದರೆ ಮತ್ತೊಂದು ತ್ರೖೆಮಾಸಿಕವನ್ನು ಸಾಲವಿಲ್ಲದೆ ತಳ್ಳಬಹುದು ಎನ್ನುವ ಆಶಾಭಾವನೆ ಸರ್ಕಾರ ಹೊಂದಿದೆ.
ಜಿಎಸ್​ಟಿ ಪರಿಹಾರ ಅವಧಿಯನ್ನು 2026ರ ಮಾರ್ಚ್ 31ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸುವ ಮೂಲಕ ರಾಜ್ಯಗಳ ಮನವಿಗೆ ಸ್ಪಂದಿಸಿದೆ. ಕರೊನಾ ಸೃಷ್ಟಿಸಿದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಹಾಗೂ ಆರ್ಥಿಕ ಸದೃಢತೆ ಸಾಧಿಸಲು ಅನುಕೂಲವಾಗಲಿದೆ.
|ಬಿ.ಟಿ.ಮನೋಹರ್ತೆರಿಗೆ ತಜ್ಞ
ಕೇಂದ್ರದ ಬಲ:ರಾಜ್ಯವು ಸ್ವಂತ ಮೂಲಗಳಿಂದ ಏಪ್ರಿಲ್​ನಲ್ಲಿ 5,205.60 ಕೋಟಿ ರೂ., ಮೇ ತಿಂಗಳಲ್ಲಿ 6,000.15 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಅಲ್ಲದೆ, ಕೇಂದ್ರ ಸರ್ಕಾರವು ಜಿಎಸ್​ಟಿ ಪರಿಹಾರ ರೂಪದಲ್ಲಿ ಕಳೆದ ತಿಂಗಳು 8,542 ಕೋಟಿ ರೂ., ಮೇ ತಿಂಗಳ 8,633 ಕೋಟಿ ರೂ. ಈಗಾಗಲೆ ಬಿಡುಗಡೆ ಮಾಡಿದೆ. ಜೂನ್​ನ ಪರಿಹಾರ ಬಾಪ್ತು 6,000 ಕೋಟಿ ರೂ. ಶೀಘ್ರವೇ ಪಾವತಿಯಾಗುವ ಸಾಧ್ಯತೆಗಳಿದ್ದು, ಕೇಂದ್ರ ಸರ್ಕಾರದ ಸಕಾಲಿಕ ಸ್ಪಂದನೆ ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಬಲ ತುಂಬಿದೆ ಎಂದು ಮೂಲಗಳು ಸಂತಸ ವ್ಯಕ್ತಪಡಿಸಿವೆ.
ಚಂಡಿಗಢದಲ್ಲಿ 29ಕ್ಕೆ ಜಿಎಸ್​ಟಿ ಮಂಡಳಿ ಸಭೆ:ಬೆಂಗಳೂರು: ಚಂಡಿಗಢದಲ್ಲಿ ಜೂ.29ರಂದು ಆಯೋಜಿಸಿರುವ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ. ಪ್ರವಾಸ ಪಟ್ಟಿ ಪ್ರಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೂ.28ರ ರಾತ್ರಿ 7.05ಕ್ಕೆ ಬೊಮ್ಮಾಯಿ ಪ್ರಯಾಣ ಬೆಳೆಸಲಿ ದ್ದಾರೆ. 29ರ ಬೆಳಗ್ಗೆ 11ಕ್ಕೆ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 30ರ ಬೆಳಗ್ಗೆ 6.50ಕ್ಕೆ ಚಂಡಿಗಢದಿಂದ ವಾಪಸಾಗಲಿದ್ದಾರೆ.
ಅವಧಿ ವಿಸ್ತರಣೆಯಿಂದ ಆರ್ಥಿಕವಾಗಿ ಉತ್ತೇಜನ:ರಾಜ್ಯಗಳಿಗೆ ನೀಡುತ್ತಿರುವ ಜಿಎಸ್​ಟಿ ಪರಿಹಾರ ಅವಧಿಯನ್ನು 2026ರ ಮಾರ್ಚ್ ಅಂತ್ಯದವರೆಗೆ ವಿಸ್ತರಿಸಿ, ಕೇಂದ್ರ ಸರ್ಕಾರ ಶನಿವಾರ ಮಹತ್ವದ ಅಧಿಸೂಚನೆ ಪ್ರಕಟಿಸಿದೆ. ಆ ಮೂಲಕ ಕರೊನಾ ಸಾಂಕ್ರಾಮಿಕ ಮಾರಿ ನಿರಂತರ ಎರಡು ವರ್ಷಗಳ ತಂದೊಡ್ಡಿದ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ನೆರವಾಗಬೇಕೆಂಬ ರಾಜ್ಯಗಳ ಮೊರೆಗೆ ಸ್ಪಂದಿಸಿದೆ. ಜಿಎಸ್​ಟಿ ವ್ಯವಸ್ಥೆ ಜಾರಿಗೊಳಿಸಿದ ಸಂದರ್ಭದಲ್ಲೇ 2022ರ ಜೂನ್ ಅಂತ್ಯಕ್ಕೆ ಪರಿಹಾರ ಹಂಚಿಕೆ ಅಂತ್ಯವಾಗಲಿತ್ತು, ಎಲ್ಲ ರಾಜ್ಯಗಳ ನಿರಂತರ ಪ್ರಯತ್ನ ಫಲಪ್ರದವಾಗಿದೆ. ಜಿಎಸ್​ಟಿ ಪರಿಹಾರ ಅವಧಿ ವಿಸ್ತರಣೆಯಿಂದ ಆರ್ಥಿಕವಾಗಿ ಉತ್ತೇಜಿಸುವ ಜತೆಗೆ ಸಾಲದ ಹೊರೆ ತಗ್ಗಿಸಿ, ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಆರ್ಥಿಕ ಇಲಾಖೆ ಮೂಲಗಳು ವಿಶ್ಲೇಷಿಸಿವೆ.
ಮದ್ಯಪಾನಕ್ಕಾಗಿ ಹಣ ಕೊಡ್ಲಿಲ್ಲ ಅಂತ ಅಜ್ಜ-ಅಜ್ಜಿಯನ್ನೇ ಕೊಂದ; ಶವ ಕೊಳೆತ ಮೇಲೇ ಗೊತ್ತಾಗಿದ್ದು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × one =
Remember me
