ಬೆಂಗಳೂರು:ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್​ ವಿರುದ್ಧ ಭೂಕಬಳಿಕೆ ಮತ್ತು ಜಾತಿ ನಿಂದನೆ ಆರೋಪ ಕೇಳಿಬಂದಿದ್ದು, ಸಚಿವರು ಸೇರಿದಂತೆ ಮೂವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಕೂಡಲೇ ಸಚಿವರನ್ನು ಸಂಪುಟದಿಂದ ವಜಾಗೊಳಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ವಿಪಕ್ಷ ನಾಯಕರು ಪಟ್ಟು ಹಿಡಿದಿದ್ದಾರೆ.
ಸುಬ್ಬಮ್ಮ ಎಂಬುವರು ನೀಡಿರುವ ದೂರಿನ ಆಧಾರದ ಮೇಲೆ ಸುಧಾಕರ್​ ವಿರುದ್ಧ ಯಲಹಂಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಧಾಕರ್​ ಮಾತ್ರವಲ್ಲದೆ, ಶ್ರೀನಿವಾಸ್​ ಮತ್ತು ಭಾಗ್ಯಮ್ಮ ಎಂಬುವರ ವಿರುದ್ಧವೂ ದೂರು ದಾಖಲಾಗಿದೆ. ಭೂಕಬಳಿಸಿ ವಂಚನೆ ಮಾಡಿದ್ದಾರೆ, ಹಲ್ಲೆ ಮಾಡಿ ದೌರ್ಜನ್ಯ ನಡೆಸಿದ್ದಲ್ಲದೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದು, ಈ ಪ್ರಕರಣದಲ್ಲಿ ಸುಧಾಕರ್​ ಅವರು ಎರಡನೇ ಆರೋಪಿಯಾಗಿದ್ದಾರೆ.
ಇದನ್ನೂ ಓದಿ:ಕಾವೇರಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್​ಗೆ ಒತ್ತಾಯ ಮಾಡಿ, ಕೇಂದ್ರ ಸರ್ಕಾರಕ್ಕಲ್ಲ: ಬಸವರಾಜ ಬೊಮ್ಮಾಯಿ
ಸಚಿವ ಸುಧಾಕರ್​ ಅವರು ಸೆವೆನ್​ ಹಿಲ್ಸ್​ ಡೆವಲಪರ್ಸ್​ ಮತ್ತು ಟ್ರೇಡರ್ಸ್​ ಕಂಪನಿಯ ಪಾಲುದಾರರಾಗಿದ್ದಾರೆ. ಯಲಹಂಕ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂಬರ್​ 108/1ರ ಜಮೀನನ್ನು ಶ್ರೀನಿವಾಸ್​ ಮತ್ತು ಭಾಗ್ಯಮ್ಮ ಎಂಬುವರ ಜತೆ ಸೇರಿ ಮೋಸದಿಂದ ಕಬಳಿಸಿದ್ದಾರೆ ಎನ್ನಲಾಗಿದೆ. ಈ ಜಮೀನಿನ ವ್ಯಾಜ್ಯ ಕೋರ್ಟ್​ನಲ್ಲಿ ಇನ್ನೂ ಬಾಕಿ ಇದ್ದರೂ ಧಮ್ಕಿ ಹಾಕಿ, ಹಲ್ಲೆ ಮಾಡಿದ್ದಾರೆ. ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ನಡೆಸಿದ್ದಾರೆ. ಜೆಸಿಬಿ ಯಂತ್ರದ ಮೂಲಕ ಮನೆಗಳನ್ನು ಕೆಡವಿದ್ದಾರೆ. ಅಲ್ಲದೆ, ಮಗಳ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಸುಬ್ಬಮ್ಮ ಎಂಬುವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ಕಂಪನಿಗೆ ಸಂಬಂಧಿಸಿದ ಆಸ್ತಿಗೆ 11 ಮಂದಿ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿ ಸುಧಾಕರ್ ಅವರ ಪುತ್ರ ಸುಹಾಸ್ ಪೊಲೀಸ್ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಭೂಮಿ ಖರೀದಿ ಮಾಡಿ ಹತ್ತು ವರ್ಷಗಳ ಮೇಲಾಯಿತು. ದೂರು ಕೊಟ್ಟ ಕಂಪನಿಯಲ್ಲಿ ನಾನೂ ಒಬ್ಬ ಡೈರೆಕ್ಟರ್. ಕಾನೂನು ಪ್ರಕಾರವೇ ಭೂಮಿ ಖರೀದಿಯಾಗಿದೆ. ಇದು ಬಹಳ ವರ್ಷದ ಹಿಂದೆಯೇ ನಡೆದ ವ್ಯವಹಾರ ಆಗಿದೆ. ಅವರ ಮುಖ ಕೂಡ ನನಗೆ ನೆನಪಿಲ್ಲ. ನಲವತ್ತು ವರ್ಷದದಿಂದ ಯಾವುದೇ ಕಪ್ಪು ಚುಕ್ಕೆಯನ್ನು ನನ್ನ ಜೀವನದಲ್ಲಿ ಹೊಂದಿಲ್ಲ. ಹಿಂದೆ ಕೂಡ ನನ್ನ ವಿರುದ್ಧ ಷಡ್ಯಂತ್ರ ನಡೆದಿತ್ತು. ಆದರೆ, ನಾನು ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದೇನೆ. ನಾನು ಯಾವುದೇ ಜಾತಿ‌ ನಿಂದನೆ ಮಾಡಿಲ್ಲ. ರಾಜಕೀಯ ದುರುದ್ದೇಶದಿಂದ ಈ ಆರೋಪ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಇರೋದು ಶುದ್ಧ ಸುಳ್ಳು. ವಿಡಿಯೋವನ್ನು ನಾನು ನೋಡಿಲ್ಲ ಮತ್ತು ಹಿಂದಿನ ವಿಡಿಯೋ ಬಗ್ಗೆಯೂ ನನಗೆ ಗೊತ್ತಿಲ್ಲ. ಯಾರೋ ಬಂದು ವಿಡಿಯೋ ಮಾಡಿಕೊಂಡು‌ ಹೋಗಿರ್ತಾರೆ. ವಿಡಿಯೋದಲ್ಲಿ ಏನ್ ಎಡಿಟ್ ಆಗಿದೇಯೋ ಗೊತ್ತಿಲ್ಲ. ಹಲವಾರು ವರ್ಷಗಳ ಹಿಂದೆ ಆಗಿರೋದು ಇದು. ಎಸ್ಸಿ-ಎಸ್ಟಿ ಭೂಮಿ ಕಾನೂನು ಪ್ರಕಾರವೇ ಆಗಿದೆ. ಕೋರ್ಟ್ ಎಲ್ಲವನ್ನೂ ನೋಡಿ ನ್ಯಾಯ ತೀರ್ಮಾನ ಮಾಡುತ್ತದೆ. ಅಟ್ರಾಸಿಟಿ ಕೇಸ್ ಹಾಕಿದ್ದರ ಬಗ್ಗೆ ಸಿಎಂ ಹಾಗೂ ಗೃಹ ಸಚಿವರ ಭೇಟಿ ಮಾಡಿದ್ದೇನೆ. ಪಾರದರ್ಶಕ ತನಿಖೆ ಮಾಡಿ‌ ನ್ಯಾಯ ಕೊಡಿಸಿ ಅಂತ ಕೇಳಿದ್ದೇನೆ ಎಂದಿದ್ದಾರೆ.
ಬಿಜೆಪಿಯವರು ಏನು ಬೇಕಾದರೂ ಕುತಂತ್ರ ಮಾಡಲಿ. ಇದು ನಾಗರಿಕ ವಿವಾದವಾಗಿದೆ. ನಾನು ಕೂಡ ಸಂಪೂರ್ಣ ವರದಿ ಪಡೆದಿದ್ದೇನೆ. ಅಧಿಕಾರಿಗಳಿಂದಲೂ ಮಾಹಿತಿ ಪಡೆದಿದ್ದೇನೆ. ಜಮೀನು ಖರೀದಿ ಮಾಡಿದ್ದಾರೆ. ಎಲೆಕ್ಷನ್ ಸಂದರ್ಭದಲ್ಲಿ ಯಾರೋ ಹೋಗಿ ಕಾಂಪೌಂಡ್ ಹಾಕಿದ್ದಾರೆ. ಖರೀದಿ ಮಾಡಿದ ಜಮೀನಿಗೆ, ಸಂಬಂಧಪಟ್ಟವರು ಇಲ್ಲದೆ ಹೋದಾಗ, ಅವರ ಕಡೆಯವರು ಜಾಗ ಸುಭದ್ರ ಮಾಡಲು ಹೋಗಿದ್ದಾರೆ. ಆದರೆ, ಅವರ ಮೇಲೆ ಯಾರೋ ದೂರು ಕೊಟ್ಟಿದ್ದಾರೆ. ಆದರೆ, ಪರಿಶಿಷ್ಠ ಜಾತಿಯವರು ದೂರು ನೀಡಿದಾಗ ದೂರು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ಸುಳ್ಳು ಕೇಸ್. ಯಾರು ಬೇಕಾದ್ರು ದೂರು ಕೊಡಬಹುದು, ನನ್ನ ಮೇಲೂ ದೂರು ನೀಡಬಹುದು. ಸುಧಾಕರ್​, ರಾಜೀನಾಮೆ ಕೊಡ್ತಾರೆ ಎಂದು ತಿಳಿದಿದ್ದರೆ ಅದು ಬಿಜೆಪಿಯವರ ಭ್ರಮೆಯಾಗಿದೆ. ಅವರು ಕನಸು ಕಾಣ್ತಿದಾರೆ. ಏನಾದ್ರು ತಪ್ಪು ಮಾಡಿದ್ರೆ ನೋಡಬಹುದು. ಕಾನೂನು ಎಲ್ಲರಿಗೂ ಒಂದೇ, ನನಗೂ ಒಂದೇ ಕಾನೂನು, ಸುಧಾಕರ್​ಗೂ ಒಂದೇ ಕಾನೂನು ಮತ್ತು ನಿಮಗೂ ಒಂದೇ ಕಾನೂನು. ಇದು ಸತ್ಯಕ್ಕೆ ದೂರವಾದ ಪ್ರಕರಣ. ನಾನು ಕೂಡ ಪೇಪರ್​ನಲ್ಲಿ ನೋಡಿ ಗಾಬರಿ ಆದೆ. ಸುಧಾಕರ್ ಕರೆಸಿಕೊಂಡು ಮಾತನಾಡಿದ್ದೇನೆ ಮತ್ತು ದಾಖಲೆ ತರಿಸಿ ಪರಿಶೀಲನೆ ನಡೆಸಿದ್ದೇನೆ. ಸುಧಾಕರ್​ ವಿರುದ್ಧ ದೂರು ದಾಖಲಿಸಿದಾಗ ಅವರು ಚಿತ್ರದುರ್ಗದಲ್ಲಿದ್ರು. ಧಮ್ಕಿಗೂ ಪಿಸಿಆರ್ ಆಕ್ಟ್​ಗೂ ವ್ಯತ್ಯಾಸ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸಚಿವ ಸುಧಾಕರ ಮೇಲೆ FIR ವಿಚಾರವಾಗಿ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ್, ದಲಿತರ ಮೇಲೆ ದೌರ್ಜನ್ಯವೆಸಗಿದ ಸುಧಾಕರ್ ರಾಜೀನಾಮೆ ಪಡೆಯಬೇಕು ಇಲ್ಲವೆ ವಜಾ ಮಾಡಿ. ಕಾಂಗ್ರೆಸ್ ಸರ್ಕಾರದಲ್ಲಿ ದಲಿತರಿಗೆ ಎಷ್ಟು ಗೌರವ ಇದೆ, ಕಾಳಜಿ ಇದೆ ಅನ್ನೋದು ಈ ಘಟನೆಯಿಂದ ಗೊತ್ತಾಗುತ್ತದೆ. ಸಿಎಂ ತಕ್ಷಣವೇ ಸುಧಾಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಅಥವಾ ವಜಾ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಯತ್ನಾಳ್​ ಪಟ್ಟು ಹಿಡಿದರು.
ಇದನ್ನೂ ಓದಿ:ಸರ್ಕಾರದ ಹಣೆ ಬರಹ ಯಾರ ಕೈಯಲ್ಲಿದೆ ಗೊತ್ತಾ? ಖುದ್ದು ಡಿಸಿಎಂ ಹೇಳಿದ್ದಾರೆ ನೋಡಿ!
ಜಾತಿ‌ ನಿಂದನೆ ಕೇಸಿನ ಕಾರ್ಯವ್ಯಾಪ್ತಿ ಏನು ಅಂತ ಎಲ್ರಿಗೂ ಗೊತ್ತಿದೆ. ಸಣ್ಣವರ ಮೇಲೂ ಜಾತಿನಿಂದನೆ ಕೇಸ್ ಹಾಕಿ ಎಷ್ಟೆಲ್ಲ ಕಿರುಕುಳ ಕೊಡ್ತಾರೆ. ಬೇರೆಯವರ ಥರನೇ ಡಿ.ಸುಧಾಕರ್ ಅವರನ್ನು ಮೊದಲು ಒಳಗೆ ಹಾಕಿ ತನಿಖೆ ಮಾಡಲಿ. ಕಾಂಗ್ರೆಸ್ ದಲಿತರ ಪರ ಅನ್ನುತ್ತೆ ಆದ್ರೆ, ಅವರ ನಾಯಕರಿಂದಲೇ ಎಸ್.ಸಿ, ಎಸ್ಟಿ ಸಮುದಾಯದವರಿಗೆ ಅನ್ಯಾಯ ಆಗ್ತಿದೆ. ಇದರ ಬಗ್ಗೆ ಸಿದ್ದರಾಮಯ್ಯ ಏನಂತಾರೆ? ಯಾವುದೇ ಸ್ಥಾನ ಇರಲಿ ಮೊದಲು ಅವರನ್ನ ಹಿಡಿದು ಒಳಗೆ ಹಾಕಬೇಕು. ವಿಚಾರಣೆ ಮಾಡಿ ನಂತರ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಸದಾನಂದಗೌಡ ಹೇಳಿಕೆ ನೀಡಿದರು.
* ಐಪಿಸಿ ಸೆಕ್ಷನ್ 147 – ಗುಂಪು ಕಟ್ಟಿಕೊಂಡು ಗಲಭೆ ಮಾಡುವುದು
* ಸೆಕ್ಷನ್ 447 – ಅತಿಕ್ರಮಣ ಪ್ರವೇಶ್ ಮಾಡುವುದು
* ಸೆಕ್ಷನ್ 323 – ಸ್ವಯಂಪ್ರೇರಣೆಯಿಂದ ನೋವುಂಟು ಮಾಡುವುದು
* ಸೆಕ್ಷನ್ 427 – ಕಿಡಿಗೇಡಿತನದಿಂದ ಹಾನಿ ಉಂಟು ಮಾಡುವುದು
ವಿರಾಟ್​ ಕೊಹ್ಲಿ ಬದಲಿಗೆ ಈ ಆಟಗಾರನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು: ಗೌತಮ್​ ಗಂಭೀರ್​

ಸರ್ಕಾರದ ಹಣೆ ಬರಹ ಯಾರ ಕೈಯಲ್ಲಿದೆ ಗೊತ್ತಾ? ಖುದ್ದು ಡಿಸಿಎಂ ಹೇಳಿದ್ದಾರೆ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 2 =
Remember me
