ಬೆಂಗಳೂರು:ಕರೊನಾ ಭೀತಿಯ ನಡುವೆ, ಪಾಲಕರ, ಮಕ್ಕಳ ಅರ್ಧಂಬರ್ಧ ಮನಸ್ಸಿನ ನಡುವೆ ನಡೆದ ಎಸ್‌ಎಸ್ಎಲ್‌ಸಿ ಪರೀಕ್ಷೆಯ ಮೊದಲ ದಿನದ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾಹಿತಿ ನೀಡಿದ್ದು, ಈ ಪರೀಕ್ಷೆ ಎಲ್ಲರ ಐತಿಹಾಸಿಕ ಗೆಲುವು ಎಂದಿದ್ದಾರೆ.
ಪರೀಕ್ಷೆಯ ನಂತರ ಪರೀಕ್ಷೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಯಾವುದೇ ಸಮಸ್ಯೆ ಇಲ್ಲದೇ ಪರೀಕ್ಷೆಯು ಅತ್ಯಂತ ಯಶಸ್ವಿಯಾಗಿ ನಡೆದು ಇತಿಹಾಸವನ್ನೇ ಸೃಷ್ಟಿಸಿದೆ ಎಂದರು.
ಮೊದಲನೆ ದಿನವಾದ ಇಂದು ನಡೆದ ದ್ವಿತೀಯ ಭಾಷೆ ಆಂಗ್ಲ ಮತ್ತು ಕನ್ನಡ ವಿಷಯಗಳ ಪರೀಕ್ಷೆಗೆ ನೋಂದಾಯಿತ 7,85,140 ವಿದ್ಯಾರ್ಥಿಗಳ ಪೈಕಿ 7,71,878 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 98.3 ರಷ್ಟು ಇಂದು ಹಾಜರಾತಿ ಇದೆ. 13,212 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮೊದಲ ಬಾರಿಗೆ 7,43,688 ಶಾಲಾ ವಿದ್ಯಾರ್ಥಿಗಳು ಹಾಗೂ 20,892 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು. ತಾವು ಬೆಂಗಳೂರಿನ 12 ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿರುವುದಾಗಿ ಇದೇ ಸಂದರ್ಭದಲ್ಲಿ ಸಚಿವ ಸುರೇಶ್ ಕುಮಾರ್ ಹೇಳಿದರು.
ಕಂಟೈನ್ಮೆಂಟ್ ಪ್ರದೇಶಗಳ 998 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 201 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯವುದೇ ವಿದ್ಯಾರ್ಥಿಯೂ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಪ್ರಕರಣಗಳು ಇರುವುದಿಲ್ಲ. ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1438 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 614 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 59 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 555 ಪರೀಕ್ಷೆ ಬರೆದಿದ್ದಾರೆ. 12644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12,548 ವಿದ್ಯಾರ್ಥಿಗಳು ಹಾಜರಾಗಿದ್ದರೆ, 96 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ವಿವರಿಸಿದರು. ಪರೀಕ್ಷಾ ಕೇಂದ್ರಕ್ಕೆ 3,212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಒಟ್ಟಾರೆಯಾಗಿ ಇಂದು 2879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್ ಪರೀಕ್ಷಾ ಕೇಂದ್ರಗಳಲ್ಲಿ ಇಂಗ್ಲಿಷ್ ಭಾಷಾ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಸ್ವಯಂ ಸೇವಕರು ಅತ್ಯಂತ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾನು ನೀಡಿದ ಭರವಸೆಯಂತೆ ಪರೀಕ್ಷೆ ಸುವ್ಯಸ್ಥಿತವಾಗಿ ನಡೆದಿದೆ. ಮುಂದೆ ಬಾಕಿ ಇರುವ ಪರೀಕ್ಷೆಗಳ ಯಶಸ್ಸಿಗೂ ಅವರ ಬದ್ಧತೆ ಇದೇ ರೀತಿ ಇರಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ವ್ಯವಸ್ಥೆಯ ಕುರಿತು ವಿಶ್ವಾಸವನ್ನಿಟ್ಟುಕೊಳ್ಳಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದರು.
ಇದನ್ನೂ ಓದಿ:ಮನೆ ತೊರೆದಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನೆರವಾದ ‘ವಿಜಯವಾಣಿ’
ಈ ಬಾರಿಯ ಪರೀಕ್ಷೆ ಶಿಕ್ಷಣ ಇಲಾಖೆಗೆ ಮಾತ್ರವೇ ಸೀಮಿತವಾಗಿಲ್ಲ. ಇಡೀ ರಾಜ್ಯ ಸರ್ಕಾರವೇ ಟೊಂಕಕಟ್ಟಿ ನಿಂತಿದ್ದು, ಸುಲಲಿತವಾಗಿ ಪರೀಕ್ಷೆ ನಡೆಯುತ್ತಿರುವುದರ ಹಿಂದೆ ಇಡೀ ಸರ್ಕಾರದ ಪ್ರಾಮಾಣಿಕ ಪ್ರಯತ್ನ ಮತ್ತು ಆಡಳಿತ ಯಂತ್ರದ ಸಮರ್ಪಣೆ ಇದೆ. ಕೋವಿಡ್ ಪ್ರಸರಣದ ಕಾಲಘಟ್ಟದ ಮಧ್ಯೆ ನಡೆದ ಈ ಪರೀಕ್ಷೆಗೆ ವ್ಯವಸ್ಥೆಯೊಂದಿಗೆ ಸಾರ್ವಜನಿಕರು, ಪೋಷಕರು ಎಲ್ಲರೂ ಒಟ್ಟಾಗಿ ಕೈಜೋಡಿಸಿ ಒಂದು ಸಂಘಟಿತ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು.
ಇಂದು ನಡೆದ ಈ ಪರೀಕ್ಷೆಯ ಪೂರ್ವದಲ್ಲಿ ತೆಗೆದುಕೊಂಡ ಯೋಜನಾಬದ್ಧ ನಿರ್ಧಾರಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸಿದ ವೃತ್ತಿಪರ ವ್ಯವಸ್ಥೆ ಎಷ್ಟೊಂದು ಅಚ್ಚುಕಟ್ಟಿಗೆ ನಾಂದಿಯಾಗಿದೆ ಎಂದು ಹೇಳಿದ ಸುರೇಶ್ ಕುಮಾರ್ ಅದಕ್ಕೆ ಪೂರಕವಾದ ಹಲವಾರು ನಿದರ್ಶನಗಳನ್ನು ನೀಡಿದರು:
ಅವರು ಹೇಳಿರುವುದು ಇಷ್ಟು:ಕೇರಳದ ಗಡಿ ಭಾಗಗಳಲ್ಲಿ ನೆಲೆಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಲೆಗಳಲ್ಲಿ ಕಲಿಯುತ್ತಿರುವ 367 ವಿದ್ಯಾರ್ಥಿಗಳನ್ನು ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳ-ಕರ್ನಾಟಕದ ತಾಳಪಾಡಿ ಗಡಿ ಬಳಿ ಸ್ವಾಗತಿಸಿ ರಾಜ್ಯ ಸಾರಿಗೆ ಸಂಸ್ಥೆಯ 92 ಬಸ್ ಗಳಲ್ಲಿ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಕರೆತರಲಾಗಿದೆ. ಯಾವುದೇ ವಿದ್ಯಾರ್ಥಿಗೆ ಯಾವುದೇ ತೊಂದರೆಯಾಗಿಲ್ಲ. ಕೇರಳ ರಾಜ್ಯದ ವಿದ್ಯಾರ್ಥಿಗಳು ಪೂರ್ಣಪ್ರಮಾಣದಲ್ಲಿ ಹಾಜರಾಗಿರುವುದು ವಿಶೇಷ.
ಮಂಗಳೂರಿನಲ್ಲಿ ಕಸಬಾ ಬೇಂಗ್ರೆ ಭಾಗದ 27 ಭಾಗದ ವಿದ್ಯಾರ್ಥಿಗಳು ಬಂದು ಮಂಗಳೂರಿನ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇವರನ್ನು ಬೋಟಿನಿಂದ ಇಳಿದ ತಕ್ಷಣವೇ ಅರೋಗ್ಯ ಪರೀಕ್ಷೆ ನಡೆಸಿ ಪರೀಕ್ಷಾ ಕೇಂದ್ರಗಳಿಗೆ ವಾಹನದಲ್ಲಿ ಕರೆತರಲಾಯಿತು. ಮಹಾರಾಷ್ಟ್ರದ ಗೋರೆಗಾಂವ್ ಭಾಗ ಇಚಲಕರಂಜಿ ಮತ್ತು ಇತರೆಡೆಯ 51 ವಿದ್ಯಾರ್ಥಿಗಳು ರಾಜ್ಯದ ಚಿಕ್ಕೋಡಿ ಜಿಲ್ಲೆಯ ಬೋರ್ಗಾಂವ್, ಜಡಿಕೆಹಾಳ, ಕಾಗವಾಡ, ನಿಪ್ಪಾಣಿ ಪರೀಕ್ಷಾ ಕೇಂದ್ರಗಳಲ್ಲಿ ಬಂದು ಪರೀಕ್ಷೆಯನ್ನು ಬರೆಯುವುದಕ್ಕೆ ಜಿಲ್ಲಾಡಳಿತ ಅತ್ಯಂತ ಅಚ್ಚುಕಟ್ಟಾದ ನಿರ್ವಹಣೆ ಮಾಡಿದೆ. ಬೆಳಗ್ಗೆ 6 ಗಂಟೆಗೆ ನಮ್ಮ ಅಧಿಕಾರಿಗಳು ಖುದ್ದಾಗಿ ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೋಗಿ ಮಕ್ಕಳನ್ನು ಬರಮಾಡಿಕೊಂಡು ಆರೋಗ್ಯ ತಪಾಸಣೆ ಮಾಡಿ ಎಲ್ಲ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಆಯಾಯ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿದ್ದಾರೆ.
ಗೋವಾದಲ್ಲಿ ಈ ಬಾರಿ ಎರಡು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ನಿಟ್ಟಿನಲ್ಲಿ ಗೋವಾ ರಾಜ್ಯ ಸರ್ಕಾರ ನೀಡಿದ ಸಹಕಾರ ತುಂಬಾ ದೊಡ್ಡದು. ಗೋವಾದ ವಾಸ್ಕೋ ಯಲ್ಲಾ ಲಿಂಗೇಶ್ವರ ಶಾರದಾ ಮಂದಿರ ಪೀಠ ಪ್ರೌಢಶಾಲೆ ಹಾಗೂ ವಾಸ್ಕೋ ಬೈನಾದ ಯಲ್ಲಾಲಿಂಗೇಶ್ವರ ಶಾರದಾ ಪೀಠ ಪ್ರೌಢಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ನಮ್ಮ 47 ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶವನ್ನು ಗೋವಾ ಸರ್ಕಾರ ಕಲ್ಪಿಸಿಕೊಟ್ಟಿದೆ. ಪರೀಕ್ಷಾ ಪೂರ್ವದಲ್ಲಿ ಗಡಿಭಾಗಕ್ಕೆ ಗೋವಾ ರಾಜ್ಯದ ಪರೀಕ್ಷಾ ಮಂಡಳಿಯ ಅಧಿಕಾರಿಗಳು ಸಶಸ್ತ್ರ ಪಡೆಯೊಂದಿಗೆ ಬಂದು ಸುರಕ್ಷಿತವಾಗಿ ನಮ್ಮ ಅಧಿಕಾರಿಗಳಿಂದ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಬಂಡಲ್ ಗಳನ್ನು ಕೊಂಡೊಯ್ದು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿದೆ. ನಮ್ಮ ಇಲಾಖೆಯ ಅಧಿಕಾರಿಗಳನ್ನು ಈ ಪರೀಕ್ಷೆಗೆ ವೀಕ್ಷಕರಾಗಿ ನಿಯೋಜಿಸಲಾಗಿದ್ದು, ಆ ಪರೀಕ್ಷಾ ಕೇಂದ್ರಗಳಲ್ಲಿ ವಿಶೇಷ ಕಣ್ ಗಾವಲು ಇಟ್ಟಿದ್ದಾರೆ. ಒಬ್ಬ ಕೋವಿಡ್ ಸೋಂಕಿತ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಾಗಿದ್ದು, ಅವನಿಗೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುವುದು.
ಇದನ್ನೂ ಓದಿ:‘ಫೇರ್​ ಆ್ಯಂಡ್​ ಲವ್ಲೀ’ಯಲ್ಲಿ ಇನ್ನು ಮುಂದೆ ಇರೋದಿಲ್ಲ ಫೇರ್​; ಏನು ಹೇಳುತ್ತೆ ಕಂಪನಿ ?
ತೆಲಂಗಾಣ ರಾಜ್ಯದ ಕೃಷ್ಣಾ ಗ್ರಾಮದಿಂದ ತಮ್ಮ ಪೋಷಕರೊಂದಿಗೆ ಬಂದು ನಾಲ್ಕು ಮಂದಿ ವಿದ್ಯಾರ್ಥಿಗಳು ರಾಯಚೂರಿನ ಶಕ್ತಿನಗರದ ಡಿಎವಿ ಶಾಲೆಯ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇವರನ್ನು ಸಹ ನಮ್ಮ ಅಧಿಕಾರಿಗಳು ಗಡಿಭಾಗದಲ್ಲೇ ಬರಮಾಡಿಕೊಂಡು ಅವಶ್ಯ ಸುರಕ್ಷಾ ಕ್ರಮಗಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ.ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಲು ಶಾಲಾವರಣವನ್ನು ತಳಿರುತೋರಣದಿಂದ ಸಿಂಗರಿಸಿ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಆಗಮಿಸಿದ ಪರೀಕ್ಷಾರ್ಥಿಗಳಿಗೆ ಅಧಿಕಾರಿಗಳು ಮತ್ತು ಶಿಕ್ಷಕರು ಗೌರವ ವಂದನೆಯೊಂದಿಗೆ ಬರಮಾಡಿಕೊಂಡದ್ದು ವಿಶೇಷವಾಗಿತ್ತು. ಇದು ಈ ವಿದ್ಯಾರ್ಥಿಗಳ ಪರೀಕ್ಷಾ ದುಗುಡ-ದುಮ್ಮಾನಗಳನ್ನು ದೂರಮಾಡಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.ಗದಗ ನಗರದಲ್ಲಿ ಅಲ್ಲಿನ ಸ್ಥಳೀಯ ಆಟೋ ಚಾಲಕ ಸಂಘದವರು ಎಸ್ಸೆಸ್ಸೆಲ್ಸಿ ಪರೀಕ್ಷಾಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ತಂತಮ್ಮ ಆಟೋರಿಕ್ಷಾಗಳಲ್ಲಿ ಉಚಿತವಾಗಿ ಕರೆತಂದು ಮಕ್ಕಳ ಹಿತದೃಷ್ಟಿಯಿಂದ ತಮ್ಮ ಪಾಲಿನ ಸೇವೆ ಸಲ್ಲಿಸಿ ಪರೀಕ್ಷೆಯ ಯಶಸ್ಸಿನ ಪಾಲುದಾರರಾಗಿದ್ದಾರೆ.
ಶಿರಹಟ್ಟಿ ತಾಲೂಕಿನ ಶಿಗ್ಲಿ ಪರೀಕ್ಷಾ ಕೇಂದ್ರಕ್ಕೆ ಬರಬೇಕಿದ್ದ ಇಬ್ಬರು ವಿದ್ಯಾರ್ಥಿಗಳು ಬಸ್ ಅಲಭ್ಯತೆ ಹಿನ್ನೆಲೆಯಲ್ಲಿ ಪರದಾಡುತ್ತಿದ್ದುದನ್ನು ಗಮನಿಸಿದ ಲಕ್ಷ್ಮೇಶ್ವರದ ಪೊಲೀಸರು ತಮ್ಮ ವಾಹನದಲ್ಲಿ ಅವರನ್ನು ನಿಗದಿತ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ್ದಾರೆ.
ಪಾವಗಡದ ಸ್ವಾಮಿ ಜಪಾನಂದರು ಪಾವಗಡ ತಾಲೂಕಿನಲ್ಲಿ ಪರೀಕ್ಷೆ ಬರೆಯುತ್ತಿರುವ 3300 ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಮಾಸ್ಕ್, ಸ್ಯಾನಿಟೈಜರ್ಗಳನ್ನು ಪೂರೈಸುತ್ತಿದ್ದಾರೆ. ಪಾವಗಡ ತಾಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಪ್ರತಿದಿನ ಸ್ಯಾನಿಟೈಜ್ ಮಾಡಿಸುತ್ತಿದ್ದಾರೆ. ಹಲವಾರು ಜನಪ್ರತಿನಿಧಿಗಳು, ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಮಾಸ್ಕ್ಗಳು, ಸ್ಯಾನಿಟೈಜರ್ ಮತ್ತು ಆಹಾರ ಪೊಟ್ಟಣಗಳನ್ನು ನೀಡುತ್ತಿದ್ದಾರೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಬೇಸರದ ವಿಷಯವನ್ನೂ ಪ್ರಸ್ತಾಪಿಸಿದ ಅವರು, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ತನ್ನ ತಂದೆಯ ವಾಹನದಲ್ಲಿ ಬರುತ್ತಿದ್ದಾಗ ವಾಹನ ಅಪಘಾತಕ್ಕೀಡಾಗಿ ವಿದ್ಯಾರ್ಥಿ ವಿಶ್ವನಾಥ ಗಟ್ಟಿಮನಿಯವರ ತಂದೆ ಮೃತಪಟ್ಟಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ವಿದ್ಯಾರ್ಥಿಯ ಕುಟುಂಬದ ದುಃಖದಲ್ಲಿ ನಾನು ಭಾಗಿ. ಸದರಿ ವಿದ್ಯಾರ್ಥಿಗೆ ಮುಂದಿನ ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ. ಸ್ಥಳೀಯ ವಿಧಾನಸಭಾ ಸದಸ್ಯರಾದ ಶ್ರೀ ಶಿವನಗೌಡ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಮೃತರ ಅಂತ್ಯಕ್ರಿಯೆಗೆ ಸಹಕಾರ ನೀಡಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಮೃತ ವ್ಯಕ್ತಿ ದೇವದುರ್ಗ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ 57 ವರ್ಷದ ಶ್ರೀ ನಾಗಿರೆಡ್ಡಿ ಗಟ್ಟಿಮನಿ ಎಂಬುವರಾಗಿದ್ದು, ಕ್ಷಿಪ್ರ ಅವಧಿಯಲ್ಲಿ ಅವರ ಕುಟುಂಬಕ್ಕೆ ಮರಣೋತ್ತರ ಸೌಲಭ್ಯಗಳನ್ನು ನೀಡಲು ಈಗಾಗಲೇ ಸೂಚನೆ ನೀಡಿದ್ದೇನೆ ಎಂದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಯೊಬ್ಬನ ತಾಯಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈಗಾಗಲೇ ಆತನಿಗೆ ಈ ಪರೀಕ್ಷೆಯನ್ನು ನಿರಾಕರಿಸಲಾಗಿತ್ತು. ಇಂದು ಆತನಿಗೂ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸದರಿ ವಿದ್ಯಾರ್ಥಿಗೆ ಮುಂದಿನ ಪೂರಕ ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಎಫ್ಐಆರ್ ದಾಖಲು:ಸಾಮಾಜಿಕ ಜಾಲತಾಣಗಳಲ್ಲಿ ಎಸ್ಎಸ್ಎಲ್ಸಿ ಆಂಗ್ಲ ಭಾಷಾ ಪತ್ರಿಕೆ ಎಂದು ನಕಲಿ ಪ್ರಶ್ನೆಪತ್ರಿಕೆ ಹರಿ ಬಿಟ್ಟ ವ್ಯಕ್ತಿ ವಿರುದ್ಧ ಇನ್ಫರ್ಮೇಷನ್ ಟೆಕ್ನಾಲಜಿ ಆಕ್ಟ್ 2000, ಐಪಿಸಿ ಆಕ್ಟ್ ಪ್ರಕಾರ ಎಫ್ಐಆರ್ ದಾಖಲಾಗಿದೆ ಎಂದು ವಿವರ ನೀಡಿದರು.ಇದೇ ಸಂದರ್ಭದಲ್ಲಿ ಸಾರ್ವಜನಿಕರು-ಪೋಷಕರಲ್ಲಿ ಮನವಿ ಮಾಡಿಕೊಂಡ ಸಚಿವರು, ಇಂದಿನ ಪರೀಕ್ಷೆ ಸಮಯ ಮುಗಿದ ನಂತರ ಹಲವು ಪರೀಕ್ಷಾ ಕೇಂದ್ರಗಳ ಬಳಿ ಪೋಷಕರು ಗುಂಪುಗುಂಪಾಗಿ ನಿಂತಿದ್ದು, ಸಾಮಾಜಿಕ ಅಂತರಕ್ಕೆ ವ್ಯತ್ಯಯ ಉಂಟಾಗಿದೆ ಎಂಬ ಬೆರಳೆಣಿಕೆಯ ಸಂಗತಿಯ ವರದಿಗಳಿವೆ. ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರ ಹಿತದೃಷ್ಟಿಯಿಂದ ಆ ರೀತಿ ಗುಂಪುಗೂಡದೇ ಸಾಮಾಜಿಕ ಅಂತರ ಕಾಪಾಡಿ ಪರೀಕ್ಷೆಯ ಯಶಸ್ಸಿಗೆ ಸಹಕರಿಸಬೇಕೆಂದು ಕೋರಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − seven =
Remember me
