| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಎಲ್ಲ ವರ್ಗಗಳನ್ನು ಸ್ಪರ್ಶಿಸಲು ಬಜೆಟ್ ಮೂಲಕ ಪ್ರಯತ್ನ ನಡೆಸಿದ್ದರೂ, ಸರ್ಕಾರದ ಮುಂದಿರುವ ಅನೇಕ ವಿತ್ತೀಯ ಸವಾಲುಗಳನ್ನು ಎದುರಿಸಲು ಯಾವ ರೀತಿಯ ಕಾರ್ಯತಂತ್ರ ರೂಪಿಸಲಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳ ದೊಡ್ಡ ಪಟ್ಟಿ ಮಾಡುತ್ತಿರುವ ಸರ್ಕಾರ ಆರ್ಥಿಕ ಸುಧಾರಣೆ, ಉದ್ಯೋಗಾವಕಾಶ ಹೆಚ್ಚಳ, ಬಂಡವಾಳ ವೆಚ್ಚಕ್ಕೆ ಅನುದಾನ, ರಾಜಸ್ವ ಕೊರತೆ ತಗ್ಗಿಸುವ ನಿಟ್ಟಿನಲ್ಲಿ ಸವಾಲುಗಳನ್ನು ಎದುರಿಸಬೇಕಾಗಿರುವುದನ್ನು ಮಧ್ಯಮಾವಧಿ ವಿತ್ತೀಯ ಯೋಜನೆ ಗುರುತಿಸಿದೆ. ಅದೇ ವರದಿಯಲ್ಲಿಯೇ ಕೆಲ ಸಲಹೆಗಳನ್ನು ನೀಡಿದ್ದು ತಪ್ಪದೇ ಜಾರಿಗೆ ತರಬೇಕಾಗಿದೆ. ಗ್ಯಾರಂಟಿಗಳಿಂದ ಜಿಎಸ್​ಡಿಪಿ ಶೇ.12.3 ವೃದ್ಧಿ ಎಂಬುದನ್ನು ವರದಿ ಹೇಳಿದೆ. ಆದರೆ, ಅದರ ಜತೆಜತೆಗೆ ಸವಾಲುಗಳನ್ನು ಗುರುತಿಸಿ ಪರಿಹಾರಕ್ಕೆ ಮಾರ್ಗಗಳನ್ನು ಹೇಳಿದೆ.
ಕಾರ್ಯನೀತಿ ಹಾಗೂ ಆದ್ಯತೆ ಎಂಬ ಸಲಹೆಗಳನ್ನು ನೀಡಲಾಗಿದೆ. ಹಣಕಾಸಿನ ಸೀಮಿತ ಅವಕಾಶ ಇರುವುದರಿಂದ ಅಭಿವೃದ್ಧಿ ಆದ್ಯತೆಗೆ ಅನುಗುಣವಾಗಿ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.
ಅನೇಕ ರಾಷ್ಟ್ರಗಳಲ್ಲಿ ಜಾಗತಿಕ ಆರ್ಥಿಕದ ಪರಿಣಾಮ, ಹಣದುಬ್ಬರ ಹೆಚ್ಚಳ, ವಿದೇಶಿ ನೇರ ಹೂಡಿಕೆ ಹಾಗೂ ರಫ್ತು ಕಡಿಮೆಯಾಗಿರುವುದು ಹಾಗೂ ರಾಜ್ಯದಲ್ಲಿ ಬದ್ಧ ವೆಚ್ಚಗಳು ಮಿತಿ ಮೀರಿರುವುದರಿಂದ ಸರ್ಕಾರಕ್ಕೆ ವಿತ್ತೀಯ ನಿರ್ವಹಣೆ ಹಗ್ಗದ ಮೇಲಿನ ನಡೆಯೇ ಆಗಿದೆ ಎಂಬ ಆತಂಕ ವರದಿಯಲ್ಲಿದೆ. ರಾಜಸ್ವ ಕೊರತೆ 12,523 ಕೋಟಿ ರೂ.ಗಳಿಂದ 27,354 ಕೋಟಿ ರೂ.ಗಳಿಗೆ ತಲುಪುತ್ತಿದೆ. ವಿತ್ತೀಯ ಕೊರತೆ ಜಿಎಸ್​ಡಿಪಿಯ ಶೇ.3 ರೊಳಗೆ ಇರಬೇಕು, ಅದು ಈಗ ಶೇ.2.95ಕ್ಕೆ ಬರುತ್ತಿದೆ. ಸಾಲದ ಪ್ರಮಾಣ ಜಿಎಸ್​ಡಿಪಿಯ ಶೇ.25 ರೊಳಗೆ ಇರಬೇಕು, ಕಳೆದ ವರ್ಷ ಶೇ.23.97 ಇದ್ದದ್ದು ಈಗ ಶೇ.23.68ಕ್ಕೆ ಇಳಿದಿದೆ. ಕಳೆದ ವರ್ಷ ಬಜೆಟ್​ನಲ್ಲಿ ನಿಗದಿಯಾಗಿದ್ದ ಸಂಪನ್ಮೂಲ ಸಂಗ್ರಹ ಪ್ರಮಾಣವನ್ನು ಸಿದ್ದರಾಮಯ್ಯ ಪರಿಷ್ಕರಣೆ ಮಾಡಿದ್ದರು. ತೆರಿಗೆ ಸಂಗ್ರಹ ಆಗಿದೆಯಾದರೂ ಪರಿಷ್ಕರಣೆ ಪ್ರಮಾಣಕ್ಕಿಂತ ಅಂದಾಜು 10 ಸಾವಿರ ಕೋಟಿ ರೂ. ಕಡಿಮೆಯಾಗಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅನುತ್ಪಾದಕ ವೆಚ್ಚ ತಗ್ಗಿಸುವತ್ತ ಗಮನ ಹರಿಸಬೇಕು. ಆ ಮೂಲಕ ಬದ್ಧ ವೆಚ್ಚಗಳನ್ನು ಕಡಿಮೆ ಮಾಡಿದರೆ ಮಾತ್ರ ಸವಾಲುಗಳನ್ನು ಎದುರಿಸಲು ಸಾಧ್ಯವೆಂಬುದನ್ನು ವರದಿ ಹೇಳಿದೆ.
ಅಪಾಯದ ಸ್ಥಿತಿಯಲ್ಲಿ ವಿದ್ಯುತ್ ಕಂಪನಿಗಳು:ಎಸ್ಕಾಂಗಳು ಹಾಗೂ ಕೆಪಿಸಿಎಲ್ ಅಪಾಯದ ಸ್ಥಿತಿಯಲ್ಲಿರುವುದನ್ನು ಮಧ್ಯಮಾವಧಿ ವಿತ್ತೀಯ ಯೋಜನೆ ಗುರುತಿಸಿದೆ. ಎಸ್ಕಾಂಗಳಿಗೆ 65,282 ಕೋಟಿ ರೂ.ಗಳ ಬಾಕಿ ಇದ್ದರೆ, ಕೆಪಿಸಿಎಲ್​ಗೆ 31,145 ಕೋಟಿ ರೂ.ಗಳ ಬಾಕಿ ಇದೆ. ವಿದ್ಯುತ್ ಕಂಪನಿಗಳು 36,657 ಕೋಟಿ ರೂ.ಗಳ ಖಾತರಿ ಪಡೆದಿವೆ. ಈ ಅಪಾಯದ ಸ್ಥಿತಿಯಿಂದ ಹೊರ ತರುವ ಪ್ರಯತ್ನ ನಡೆಸದಿದ್ದರೆ ಕಷ್ಟ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
ಬದ್ಧ ವೆಚ್ಚ ಹೆಚ್ಚಳ:ಸರ್ಕಾರ ಇದೇ ಮೊದಲ ಬಾರಿಗೆ ಯೋಜನೇತರ ಬದ್ಧ ವೆಚ್ಚ ಹಾಗೂ ಯೋಜನೆ ಆಧಾರಿತ ಬದ್ಧವೆಚ್ಚಗಳೆಂದು ವಿಂಗಡಿಸಿದ್ದು, ಎರಡೂ ಸೇರಿದರೆ 2.70 ಲಕ್ಷ ಕೋಟಿ ರೂ.ಗಳಾಗುತ್ತದೆ. ಈ ಬದ್ಧ ವೆಚ್ಚಗಳನ್ನು ನಿರ್ವಹಣೆ ಮಾಡಿಕೊಂಡೇ ಬಂಡವಾಳ ವೆಚ್ಚದತ್ತ ಗಮನಹರಿಸಬೇಕಾಗಿದೆ. ಯೋಜನೇತರ ಬದ್ಧ ವೆಚ್ಚದಲ್ಲಿ ಸಂಬಳಕ್ಕೆ 80,434 ಕೋಟಿ ರೂ.ಗಳು, ಪಿಂಚಣಿಗೆ 32,355 ಕೋಟಿ ರೂ., ಬಡ್ಡಿ ಪಾವತಿಗೆ 40,263 ಕೋಟಿ ರೂ.ಗಳು, ಆಡಳಿತ ವೆಚ್ಚ 6,474 ಕೋಟಿ ರೂ. ಸೇರಿ 1,59,626 ಕೋಟಿ ರೂ.ಗಳಾಗುತ್ತದೆ. ಯೋಜನೆ ಆಧಾರಿತ ಬದ್ಧ ವೆಚ್ಚದಲ್ಲಿ ಸಹಾಯಧನಗಳಿಗೆ 25,904 ಕೋಟಿ ರೂ.ಗಳು, ಗ್ಯಾರಂಟಿಗಳಿಗೆ 52,009 ಕೋಟಿ ರೂ.ಗಳು, ಸಾಮಾಜಿಕ ಭದ್ರತಾ ಪಿಂಚಣಿಗೆ 10,230 ಕೋಟಿ ರೂ.ಗಳು, ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ 20,447 ಕೋಟಿ ರೂ.ಗಳು ಸೇರಿ 1,10,957 ಕೋಟಿ ರೂ.ಗಳಾಗುತ್ತದೆ.
ಆಸ್ತಿ ನಗದೀಕರಣ, ಪಿಪಿಪಿ:ಸರ್ಕಾರ ವೆಚ್ಚ ನಿಯಂತ್ರಿಸಿ ಸಂಪನ್ಮೂಲ ಕ್ರೋಡೀಕರಣಕ್ಕೆ ಎರಡು ಪ್ರಮುಖ ಮಾರ್ಗ ಕಂಡುಕೊಂಡಿದೆ. ಆಸ್ತಿ ನಗದೀಕರಣ ಜತೆಗೆ, ಖಾಸಗಿ ಸಹಭಾಗಿತ್ವಕ್ಕೆ ಆದ್ಯತೆ ನೀಡಿದೆ. ಖಾಸಗಿ ಅವಲಂಬನೆ ಹೆಚ್ಚಿರುವುದು ಆತಂಕಕ್ಕೂ ಕಾರಣವಾಗುತ್ತದೆ. ಆಸ್ತಿ ನಗದೀಕರಣ ಹೇಗೆಂಬ ಪ್ರಶ್ನೆ ಹುಟ್ಟು ಹಾಕಿದೆ.
16ನೇ ಹಣಕಾಸು ಆಯೋಗಕ್ಕೆ ಅವಲಂಬನೆ:ಹದಿನೈದನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂಬುದನ್ನು ಮುಂದು ಮಾಡಿ ಸರ್ಕಾರ ನವದೆಹಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿತ್ತು. ಹದಿನಾರನೇ ಹಣಕಾಸು ಆಯೋಗದ ಮುಂದೆ ಹೆಚ್ಚಿನ ಪಾಲಿಗೆ ಪ್ರಯತ್ನ ಮಾಡುವ ಅಗತ್ಯವನ್ನು ವರದಿ ಹೇಳಿದೆ. ಸರ್ಕಾರ 2027-28ಕ್ಕೆ ರಾಜಸ್ವ ಉಳಿತಾಯದ ಕಡೆ ಹೋಗುವುದಾಗಿ ಹೇಳಿದ್ದು, ಆ ಗುರಿ ಸಾಧನೆಗೆ 16 ನೇ ಹಣಕಾಸು ಆಯೋಗದಿಂದ ಹೆಚ್ಚಿನ ನೆರವು ಪಡೆಯುವುದು ಅಗತ್ಯವಾಗಿದೆ ಎಂಬುದನ್ನು ಒತ್ತಿ ಹೇಳಿದೆ.
ವೇತನ ಆಯೋಗವೂ ಹೊರೆ:ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಶಿಫಾರಸು ಮುಂದಿನ ಹಣಕಾಸು ವರ್ಷದಲ್ಲಿ ಜಾರಿಗೆ ಬಂದರೆ ಬೊಕ್ಕಸಕ್ಕೆ 15 ರಿಂದ 20 ಸಾವಿರ ಕೋಟಿ ರೂ. ಹೊರೆ ಬೀಳುತ್ತದೆ. ವಿತ್ತೀಯ ಕೊರತೆ ತಗ್ಗಿಸುವ ಗುರಿಗೆ ಇದೊಂದು ದೊಡ್ಡ ಸವಾಲೇ ಆಗಿದೆ. ಬದ್ಧ ವೆಚ್ಚಗಳು ಹೆಚ್ಚುವುದರಿಂದ ಬಂಡವಾಳ ವೆಚ್ಚ ಕಡಿಮೆಯಾಗಲಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಎನ್​ಪಿಎಸ್ ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವುದು ಶೇ.4.5 ಹೆಚ್ಚಿನ ಹೊರೆ ಎಂಬ ಆರ್​ಬಿಐ ಪ್ರಸ್ತಾಪವೂ ಇದೆ. ಈ ಹೊರೆಗಳು ಕಲ್ಯಾಣ ಮತ್ತು ಅಭಿವೃದ್ಧಿ ವೆಚ್ಚದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಪ್ರಸ್ತಾಪಿಸಲಾಗಿದೆ. ಇದರಿಂದ ಸರ್ಕಾರ ನೌಕರರನ್ನು ಹೇಗೆ ಸಂಭಾಳಿಸಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ನಾಲ್ಕು ಅಂಶಗಳ ಕಾರ್ಯನೀತಿ
1) ರಾಜಸ್ವ ಹೆಚ್ಚಿಸುವುದು: ಹೊಸ ಮಾರ್ಗಗಳ ಅನ್ವೇಷಣೆ, ತೆರಿಗೆ ಸಂಗ್ರಹಣೆಯಲ್ಲಿ ದಕ್ಷತೆ ತರುವುದು, ಬಳಕೆದಾರರ ಶುಲ್ಕ ಪರಿಷ್ಕರಣೆ ಸೇರಿ ತೆರಿಗೆಯೇತರ ಆದಾಯ ಹೆಚ್ಚಳ.
2) ವೆಚ್ಚ ತರ್ಕಬದ್ಧ: ಅನವಶ್ಯಕ ಹುದ್ದೆಗಳ ರದ್ದು, ವೇತನದ ವೆಚ್ಚ ಕಡಿತ ಮಾಡುವುದು, ಕಲ್ಯಾಣ ಕಾರ್ಯಕ್ರಮಗಳಲ್ಲಿ ಸೋರಿಕೆ ತಪ್ಪಿಸುವುದು.
3) ಆಸ್ತಿ ನಗದೀಕರಣ: ರಾಜಸ್ವ ಸಂಗ್ರಹ, ಹೂಡಿಕೆ ಹೆಚ್ಚಳಕ್ಕೆ ಆಸ್ತಿ ನಗದೀಕರಣದ ಅವಕಾಶಗಳನ್ನು ಬಳಕೆ ಮಾಡುವುದು.
4) ಹೂಡಿಕೆ ಆಕರ್ಷಣೆ: ಹೂಡಿಕೆ ತರುವ ಯೋಜನೆಗಳಲ್ಲಿ ಅನುದಾನ ನೀಡುವುದು, ಸಣ್ಣ ಕೈಗಾರಿಕೆಗಳಿಗೆ ಆದ್ಯತೆ ನೀಡುವುದು.
ಆರು ಅಂಶಗಳ ಕಾರ್ಯತಂತ್ರಾತ್ಮಕ ಆದ್ಯತೆ
1)  ರಾಜಸ್ವ ಹೆಚ್ಚಳದ ಮೂಲಕ ಕೊರತೆ ತಗ್ಗಿಸುವುದು.
2) ಕೃಷಿ, ಆರೋಗ್ಯ, ಶಿಕ್ಷಣ, ನೀರಾವರಿ, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿಗಳಲ್ಲಿ ವೆಚ್ಚದ ಮರು ಆದ್ಯತೀಕರಣ.
3) ಬಂಡವಾಳ ವೆಚ್ಚ ಹೆಚ್ಚಳಕ್ಕೆ ಇಲಾಖೆಗಳಲ್ಲಿ ಮೂಲಸೌಕರ್ಯ ವೃದ್ಧಿ
4) ಫಲಾನುಭವಿಗಳಿಗೆ ಮಾತ್ರ ಕಲ್ಯಾಣ ಕಾರ್ಯಕ್ರಮ, ಸಾಮಾಜಿಕ ಸೇವೆ ಪರಿಣಾಮಕಾರಿ ಜಾರಿ ಹಾಗೂ ವೆಚ್ಚದಲ್ಲಿ ಗುಣಮಟ್ಟ ತರುವುದು.
5) ಸಾಲಗಳನ್ನು ಕಡಿಮೆ ಮಾಡುವುದು, ಅವಧಿಗೆ ಮುನ್ನ ತೀರಿಸಲು ಪ್ರಯತ್ನ
6) ಅಭಿವೃದ್ಧಿಯಲ್ಲಿ ಪರಿಸರಸ್ನೇಹಿ ಕಾರ್ಯಕ್ರಮಗಳ ಜಾರಿ
https://www.vijayavani.net/actor-darshan-gave-a-warning-on-stage-what-is-the-reason
ಚುನಾವಣೆ ಸಮೀಸುತ್ತಿದ್ದಂತೆ ಕಾಂಗ್ರೆಸ್​ಗೆ ಶಾಕ್! ​ಸಿಧು ಜೊತೆ 3 ‘ಕೈ’ ಶಾಸಕರು ಬಿಜೆಪಿ ಸೇರ್ಪಡೆ?

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಟ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:three × 2 =
Remember me
