ರಾತ್ರೋರಾತ್ರಿ ಓಪನ್, 13% ಕಿಕ್​ಬ್ಯಾಕ್ ಗುಮಾನಿ | ಗುತ್ತಿಗೆದಾರರ ವಲಯದಲ್ಲಿ ಅಪಸ್ವರ
| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಹಿಂದಿನ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿ ಅಧಿಕಾರಕ್ಕೆ ಬಂದಿರುವ ಹಾಲಿ ಸರ್ಕಾರದಲ್ಲೂ ಕಾಮಗಾರಿ ಟೆಂಡರ್ ವಿಚಾರದಲ್ಲಿ ಪಾರದರ್ಶಕತೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಮತ್ತೊಂದು ಮಹಾ ಫಿಕ್ಸಿಂಗ್​ನ ಕಂಪನ ಎದ್ದಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಬರೋಬ್ಬರಿ ನಾಲ್ಕು ಸಾವಿರದ ನಾನೂರು ಕೋಟಿ ರೂ.ಗಳ ಕಾಮಗಾರಿ ಇಷ್ಟರಲ್ಲೇ ನಡೆಯುವುದಿದೆ. ಕೇಂದ್ರದಿಂದ ಒಂದೂವರೆ ಸಾವಿರ ಕೋಟಿ ರೂ. ಸಹಭಾಗಿತ್ವವಿದೆ. ಇದಕ್ಕೆ ಪೂರ್ವಭಾವಿಯಾಗಿ ಟೆಂಡರ್ ಪ್ರಕ್ರಿಯೆ ಕೊನೆಯ ಹಂತ ತಲುಪಿರುವಂತೆ ಗುತ್ತಿಗೆದಾರರ ವಲಯದಿಂದ ಅಪಸ್ವರ ಕೇಳಿಬಂದಿದೆ. ರಾಜ್ಯದ ಉದ್ದಗಲಕ್ಕೂ ರಾಜ್ಯ ಹೆದ್ದಾರಿ ಮೇಲ್ದರ್ಜೆಗೇರಿಸುವ, ಅಭಿವೃದ್ಧಿಪಡಿಸುವ, ವಿಸ್ತರಿಸುವುದು ಸೇರಿದಂತೆ ವಿವಿಧ ಹಂತದ ಕಾಮಗಾರಿ ಕೈಗೊಳ್ಳಲು ಕೆಲಸ ಆರಂಭವಾಗುತ್ತಿದೆ. ಇದಕ್ಕೆ ಪೂರ್ವಭಾವಿ ಟೆಂಡರ್ ಪ್ರಕ್ರಿಯೆ ಭಾಗವಾಗಿ ತಾಂತ್ರಿಕ ಬಿಡ್, ಹಣಕಾಸು ಬಿಡ್ ಕಾರ್ಯ ಮುಗಿದು, ವರ್ಕ್ ಆರ್ಡರ್ ಕೊಡಲು ತಯಾರಿ ನಡೆಯುತ್ತಿದೆ.
ಈ ಹಂತದಲ್ಲೇ ಸಾಲುಸಾಲು ಅನುಮಾನಗಳು ಹುಟ್ಟಿಕೊಂಡಿದ್ದು, ಲೋಕಾಯುಕ್ತ ಮೆಟ್ಟಿಲೇರಲು ಒಂದು ತಂಡ ಸಿದ್ಧವಾಗಿದೆ.ಟೆಂಡರ್ ಪ್ರಕ್ರಿಯೆಯಲ್ಲಿ ಅನುಮಾನ ಮೂಡಿದೆ. ಫಿಕ್ಸಿಂಗ್ ನಡೆದಿರುವುದಾಗಿ ಗುತ್ತಿಗೆದಾರರು ಬಲವಾಗಿ ನಂಬಿದ್ದಾರೆ. ಗುತ್ತಿಗೆ ಯಾರಿಗೆ ಕೊಡಬೇಕೆಂಬುದು ಪೂರ್ವ ನಿರ್ಧರಿತವಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕೆಳಹಂತದ ಅಧಿಕಾರಿಗಳೇ ಹೇಳುತ್ತಿದ್ದಾರೆ.
ಲೋಕಸಭೆ ಚುನಾವಣೆ ನೀತಿಸಂಹಿತೆ ತೆರವಾಗುತ್ತಿದ್ದಂತೆ ಟೆಂಡರ್ ತೆರೆಯಲಾಗಿದೆ. ಟೆಂಡರ್ ತೆರೆದ ಸಮಯದ ಕುರಿತೇ ಚರ್ಚೆ ನಡೆದಿದೆ. ಸಂಬಂಧಪಟ್ಟ ಅಧಿಕಾರಿ ಮುಖ್ಯಮಂತ್ರಿಗಳ ಹೆಸರು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಕಚೇರಿ ಅವಧಿ ಮುಗಿದು ಮೂರು ತಾಸಿನ ಬಳಿಕ ರಾತ್ರಿ ಟೆಂಡರ್ ಓಪನ್ ಮಾಡಿದ್ದು, ಯಾರೆಲ್ಲ ಟೆಂಡರ್ ಹಾಕಿದ್ದಾರೆಂಬ ಮಾಹಿತಿ ಲೀಕ್ ಆಗಿದೆ. ಮುಖ್ಯವಾಗಿ ವಿಧಾನಸಭಾ ಕ್ಷೇತ್ರವಾರು ಕಾಮಗಾರಿಗೆ ಯಾರೆಲ್ಲ ಟೆಂಡರ್ ಹಾಕಿದ್ದಾರೆ ಎಂದು ಗಮನಿಸಿದ್ದು ಒಂದು ಕಡೆಯಾದರೆ, ಟೆಂಡರ್ ಯಾರಿಗೆಂಬುದು ಮುಂಚಿತವಾಗಿಯೇ ಭಾಗಶಃ ನಿಗದಿಯಾಗಿತ್ತು. ಕೆಲವು ಕ್ಷೇತ್ರಗಳಲ್ಲಿ 2-3 ಮಂದಿ ಮಾತ್ರ ಟೆಂಡರ್ ಹಾಕಿರುವುದು ಬೆಳಕಿಗೆ ಬಂದಿದೆ.
ಬಂಧು ಬಳಗಕ್ಕೆ ಆದ್ಯತೆ:ಕೆಲವು ಕ್ಷೇತ್ರದಲ್ಲಿ ಕಾಮಗಾರಿ ಕೈಗೊಳ್ಳಲು ಅರ್ಹರಲ್ಲದವರು ಟೆಂಡರ್​ನಲ್ಲಿ ಪಾಲ್ಗೊಂಡಿರುವುದು ವಿಶೇಷ. ಸಿಂಗಲ್ ಟೆಂಡರ್ ಹಾಕಿದಲ್ಲಿ ಪುನಃ ಟೆಂಡರ್ ಕರೆಯಬೇಕಾಗುತ್ತದೆಂಬ ಕಾರಣಕ್ಕೆ ಅನರ್ಹರನ್ನು ಟೆಂಡರ್​ನಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ ಎಂಬ ಆರೋಪವಿದೆ. ಶಾಸಕರ ಅತೀ ಹತ್ತಿರದ ಬಂಧುವಿಗೆ ಟೆಂಡರ್ ಸಿಗುವಂತೆ ಮಾಡುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆ. ಸಚಿವರು ಅಥವಾ ಶಾಸಕರ ಸಹೋದರ, ಬಾಮೈದ ಸೇರಿ ಹತ್ತಿರದ ಬಂಧು ಅವಕಾಶ ಪಡೆಯುವ ಅನಿವಾರ್ಯ ಸಂದರ್ಭ ಸೃಷ್ಟಿಸಲಾಗಿದೆ.
ಅಧೀನರ ನಿಯಂತ್ರಣದಲ್ಲಿ:ಯೋಜನಾಧಿಕಾರಿ ರಬ್ಬರ್ ಸ್ಟಾ್ಯಂಪ್​ನಂತೆ ಮೂಲೆಗುಂಪು ಮಾಡಿದ್ದು, ಅವರ ಅಧೀನ ಇಬ್ಬರು ಅಧಿಕಾರಿಗಳು ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ. ಸೂತ್ರಧಾರಿಗಳ ಪರವಾಗಿ ಇವರು ಪಾತ್ರಧಾರಿಗಳಂತೆ ವರ್ತಿಸುತ್ತಿದ್ದಾರೆ. ಟೆಂಡರ್​ನಲ್ಲಿ ಸ್ಪರ್ಧೆ ಇರುವ ಕಡೆ ಶಾಸಕರ ಒಪ್ಪಿಗೆಯೊಂದಿಗೆ ಬಗೆಹರಿಸಿಕೊಂಡು ಬರಲು ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಟ್ಟಿರುವ ಉದಾಹರಣೆಯೂ ಇದೆ. ಒಟ್ಟಾರೆ ಮೂರು ಸಾವಿರ ಕೋಟಿ ಟೆಂಡರ್​ನಲ್ಲಿ ಫಿಕ್ಸಿಂಗ್, ಕಿಕ್​ಬ್ಯಾಕ್ ಸಹಿತ ಸ್ವಜನಪಕ್ಷಪಾತದ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳನ್ನು ಮಾತಿಗೆಳೆದರೆ, ಕೆಲವರು ಟೆಂಡರ್​ನಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿಸಿಲ್ಲ ಮತ್ತು ಇಂಥವೆಲ್ಲ ಸಾಮಾನ್ಯ ಬೆಳವಣಿಗೆ, ಹಿಂದೆಯೂ ಇತ್ತು ಮುಂದೆಯೂ ಇರುತ್ತದೆ ಎಂದು ತೇಲಿಸುತ್ತಾರೆ.
ಲೋಕೋಪಯೋಗಿ ಇಲಾಖೆ ಜಿಲ್ಲಾವಾರು ಮಾಡಬೇಕಾದ ಟೆಂಡರ್ ಪ್ರಕ್ರಿಯೆಯನ್ನು ಒಬ್ಬನೇ ವ್ಯಕ್ತಿ ರೂಪಿಸುತ್ತಿದ್ದು ಕೇಂದ್ರ ಸರ್ಕಾರದ ನೆರವಿನಲ್ಲಿ ಸ್ಪಷ್ಟ ಮಾರ್ಗ ಸೂಚಿ ಇದ್ದರೂ ಎಸ್ಸಿ ಎಸ್ಟಿ ಗುತ್ತಿಗೆದಾರರಿಗೆ ಮೀಸಲು ನೀಡಬೇಕಿದ್ದರೂ ಎಲ್ಲ ನಿಯಮಾವಳಿ ಗಾಳಿಗೆ ತೂರಿ ಸುಮಾರು 85 ಟೆಂಡರ್​ಗಳಿಗೆ ಇಬ್ಬರೇ ಇರುವಂತೆ ನೋಡಿಕೊಳ್ಳಲಾಗಿದೆ. ಜತೆಗೆ ನಕಲಿ ವಹಿವಾಟು ಪ್ರಮಾಣ ಪತ್ರ ಬಳಸಿ ವ್ಯವಹಾರ ನಡೆಸಲಾಗುತ್ತಿದೆ. ಕೆಲವು ಸ್ಟಾರ್ ಗುತ್ತಿಗೆದಾರರಿಗೆ ಮಾತ್ರ ಈ ಕಾಮಗಾರಿ ಸಿಗುತ್ತಿರುವುದಕ್ಕೆ ಲೋಕೋಪಯೋಗಿ ಸಚಿವರು ಗರಂ ಆಗಿದ್ದಾರೆಂಬ ಮಾಹಿತಿ ಇದೆ. ನಿಶ್ಚಿತವಾಗಿ ಇಂತಹವರಿಗೇ ಟೆಂಡರ್ ಕೊಡುವ ಸಲುವಾಗಿ ಅರ್ಹರಲ್ಲದವರು ಪ್ರಕ್ರಿಯೆಯ ಭಾಗವಾಗಿರುವುದು ಒಂದು ರೀತಿಯ ಬೆಳವಣಿಗೆಯಾದರೆ, ಇನ್ನು ಕೆಲವು ಕ್ಷೇತ್ರಗಳಲ್ಲಿ ಅರ್ಹತೆ ಇಲ್ಲದವರಿಗೆ ಟೆಂಡರ್ ಸಿಗುವಂತೆ ಮಾಡುವ,
ಇಷ್ಟರಲ್ಲೇ ವರ್ಕ್ ಆರ್ಡರ್ ನೀಡುವ ಪ್ರಯತ್ನ ನಡೆದಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಟೆಂಡರ್ ಪಡೆಯಲು ಶೇ. 13ರಿಂದ 15ರಷ್ಟು ಕಮಿಷನ್ ಪಡೆಯುತ್ತಿರುವ ಚರ್ಚೆ ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿದೆ. ಟೆಂಡರ್ ಪಡೆಯಲು ಮುಂಚಿತವಾಗಿಯೇ ಕಿಕ್​ಬ್ಯಾಕ್ ಪಡೆದಿರುವ ಉದಾಹರಣೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಶೇ.7ರಿಂದ 8 ಕಮಿಷನ್ ‘ದೊಡ್ಡವರಿಗೆ’ ಕೊಡಬೇಕು ಎಂದು ಹೇಳಿಯೇ ಅಧಿಕಾರಿಗಳ ತಂಡ ಗುತ್ತಿಗೆದಾರರಿಗೆ ಮಾಹಿತಿ ಹಂಚಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಬಿಹಾರ: ಅರ್ಹ ಯುವಕರಿಗೆ ‘ನಿರುದ್ಯೋಗ ಭತ್ಯೆ’ ನೀಡುವುದಾಗಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಘೋಷಣೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
