ಬೆಂಗಳೂರು:ಭವಿಷ್ಯದಲ್ಲಿ ದೆಹಲಿ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಬಹುದು ಎಂದು ಹೇಳಿಕೆ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ ಪದಚ್ಯುತಿಗೆ ಆಗ್ರಹಿಸಿ 3ನೇ ದಿನವಾದ ಶುಕ್ರವಾರವೂ ವಿಧಾನ ಮಂಡಲದ ಉಭಯ ಸದನಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದ್ದು, ಕಲಾಪವನ್ನು ಸ್ತಂಭನಗೊಳಿಸಿದೆ. ಉಭಯ ಸದನಗಳನ್ನು ಸೋಮವಾರದ ತನಕ ಮುಂದೂಡಿದ್ದರೂ ಕಾಂಗ್ರೆಸ್ ಸದಸ್ಯರು ಅಹೋರಾತ್ರಿ ಧರಣಿಯನ್ನು ಶನಿವಾರ, ಭಾನುವಾರವೂ ಮುಂದುವರಿಸಲು ನಿರ್ಧರಿಸಿದ್ದಾರೆ. ಶುಕ್ರವಾರ ಎರಡೂ ಸದನಗಳು ಸೇರುತ್ತಿದ್ದಂತೆ ಧರಣಿ, ಧಿಕ್ಕಾರ, ಕೋಲಾಹಲ ಮರುಕಳಿಸಿದವು. ಈ ಗದ್ದಲದ ಮಧ್ಯೆ ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಜಿ.ಬಿ. ಮಂಟೂರು ಅವರಿಗೆ ಸಂತಾಪ ಸೂಚನೆ ಮಂಡಿಸಿ, ಅಂಗೀಕರಿಸಿದರು. ಪ್ರಶ್ನೋತ್ತರ ಕಲಾಪದ ಜತೆಗೆ ಎರಡು ಮಹತ್ವದ ಮಸೂದೆಗಳ ಮಂಡನೆಗೂ ಅವಕಾಶ ಕಲ್ಪಿಸಿದರು. ಸ್ಪೀಕರ್ ಪದೇಪದೆ ಮನವಿ ಮಾಡಿದರೂ ಚರ್ಚೆಗೆ ಕೈ ಶಾಸಕರು ಒಪ್ಪದಿದ್ದಾಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ‘ಸಲ್ಲದ ನಡೆಯಿದು’ ಎಂದು ಅಸಹನೆ ತೋಡಿಕೊಂಡರು. ಸಚಿವ ಸ್ಥಾನದಿಂದ ಈಶ್ವರಪ್ಪ ವಜಾಗೊಳ್ಳ ಬೇಕು ಎಂದು ಕಾಂಗ್ರೆಸ್ ನಾಯಕರು ಘೋಷಣೆ ಮೊಳಗಿಸಿದರು.
ಎರಡು ಬಾರಿ  ಸಂಧಾನ ಯತ್ನ ವಿಫಲ:ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರ ಕಾಂಗ್ರೆಸ್ ನಾಯಕರೊಂದಿಗೆ ಶುಕ್ರವಾರ ಎರಡು ಬಾರಿ ರಾಜಿ ಸಂಧಾನದ ಪ್ರಯತ್ನ ವಿಫಲವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರು ಭೇಟಿ ಮಾಡಿ ಧರಣಿ ಕೈಬಿಟ್ಟು, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದು ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಗುರುವಾರ ರಾತ್ರಿಯೂ ಎರಡು ತಾಸು ಮಾತುಕತೆ ನಡೆಸಿದರೂ ಕೈ ನಾಯಕರು ನಿಲುವು ಸಡಿಲಿಸಿರಲಿಲ್ಲ.
ಮೇಲ್ಮನೆಯಲ್ಲೂ ಗದ್ದಲ:ಮೇಲ್ಮನೆಯಲ್ಲೂ ಗದ್ದಲದ ವಾತಾವರಣ ಇತ್ತು. ಬಿಜೆಪಿ ರಾಜ್ಯಾಧ್ಯಕ್ಷರು ನೀಡಿದರು ಎನ್ನಲಾದ ಹೇಳಿಕೆ ಪ್ರಸ್ತಾಪಿಸಿ, ‘ನನಗೆ ಬೆದರಿಕೆಯಿದೆ ರಕ್ಷಣೆ ಕೊಡಿ’ ಎಂದು ಸಭಾಪತಿಗೆ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮನವಿ ಮಾಡಿದ್ದು ವಿಶೇಷ. ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸುತ್ತಲೇ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕೆ, ಟಿಪ್ಪಣಿ ಮಾಡತೊಡಗಿದಾಗ ಬಿಜೆಪಿ ಸದಸ್ಯರು ವಿರೋಧಿಸಿದರು. ಮಧ್ಯೆ ಪ್ರವೇಶಿಸಿದ ಸಭಾಪತಿ, ಈ ಸದನದ ಸದಸ್ಯರಲ್ಲದವರ ಬಗ್ಗೆ ಟೀಕೆ ಸರಿಯಲ್ಲವೆಂದು ಕಿವಿಮಾತು ಹೇಳಿದರು.
ಸಿಎಂ ಬೊಮ್ಮಾಯಿ ವಾಗ್ದಾಳಿ:ಶಾಲೆ-ಕಾಲೇಜು ಮಕ್ಕಳ ಸಮಸ್ಯೆ ಬಗೆಹರಿಯಬೇಕಾಗಿದೆ. ಜನರ ಸಮಸ್ಯೆಗಳ ಬಗ್ಗೆ ರ್ಚಚಿಸಿ ಪರಿಹಾರ ಕಂಡುಕೊಳ್ಳಲು ಸರ್ಕಾರ ಸಿದ್ಧವಿದೆ. ಆದರೆ, ಈಶ್ವರಪ್ಪನವರು ಹೇಳದ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಹಿಂದೆಲ್ಲ ಬಡವರು, ರೈತರು, ಶೋಷಿತರ ಪರವಾಗಿ ಸದನದಲ್ಲಿ ಧರಣಿ ನಡೆಯುತ್ತಿದ್ದವು. ಆದರೆ ಕ್ಷುಲ್ಲಕ ಕಾರಣಕ್ಕೆ ವಿರೋಧ ಪಕ್ಷದವರು ಧರಣಿ ನಡೆಸಿ, ಅಮೂಲ್ಯ ಸಮಯ ಮತ್ತು ಅರ್ಥಪೂರ್ಣ ಚರ್ಚೆ ಹಾಳು ಮಾಡುತ್ತಿದ್ದಾರೆ.
ಜನರು ನಮ್ಮ ಮಾಲೀಕರು; ಅವರ ಭಾವನೆಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ಈಶ್ವರಪ್ಪ ನೀಡದ ಹೇಳಿಕೆಯನ್ನು ಸೃಷ್ಟಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದೀರಿ. ಈ ತರಹದ ಸನ್ನಿವೇಶ ವಿಧಾನಸಭೆ ಇತಿಹಾಸದಲ್ಲೇ ನೋಡಿಲ್ಲ. ಜನವಿರೋಧಿ ನಿಲುವಿಗಾಗಿ ದೇಶಾದ್ಯಂತ ಜನರು ನಿಮ್ಮನ್ನು (ಕಾಂಗ್ರೆಸ್) ತಿರಸ್ಕರಿಸಿದ್ದು, ಇದೇ ರೀತಿ ಮುಂದುವರಿದರೆ ಹೇಳಹೆಸರಿಲ್ಲದಂತಾಗುತ್ತೀರಿ ಎಂದು ಬೊಮ್ಮಾಯಿ ಕೆಣಕಿದರೂ ಕಾಂಗ್ರೆಸ್ ಶಾಸಕರು ಧರಣಿ ಬಿಟ್ಟು ಕದಲಲಿಲ್ಲ.
ಪ್ರತಿಪಕ್ಷದ ಧೋರಣೆ ಸಂವಿಧಾನ ಮತ್ತು ಸಂಸದೀಯ ವ್ಯವಸ್ಥೆಗೆ ಬಗೆದ ದ್ರೋಹ. ಇದರಲ್ಲಿ ಜನಹಿತ, ರಾಜ್ಯದ ಹಿತವಿಲ್ಲ. ಜನರ ಸಮಸ್ಯೆಗೆ ಪರಿಹಾರವಿಲ್ಲ. ರಾಜಕೀಯ ಲಾಭಕ್ಕಾಗಿ ಜವಾಬ್ದಾರಿ ಮರೆತು ನಡೆಸುತ್ತಿರುವ ಪ್ರತಿಭಟನೆ. ರಾಜದ್ರೋಹದ ಕೆಲಸವಿದು.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಮುಂದುವರಿಸಲಾಗುವುದು. ರಾಷ್ಟ್ರಧ್ವಜಕ್ಕೆ ಅಪಮಾನಿಸಿದ ಸಚಿವ ಈಶ್ವರಪ್ಪ ರಾಜೀನಾಮೆ ನೀಡುವತನಕ ಪ್ರತಿಭಟನೆ ಕೈಬಿಡುವುದಿಲ್ಲ. ಸಂವಿಧಾನ ವಿರೋಧಿ ಕೃತ್ಯ ಸಹಿಸುವುದಿಲ್ಲ.
|ಸಿದ್ದರಾಮಯ್ಯವಿಧಾನಸಭೆ ಪ್ರತಿಪಕ್ಷದ ನಾಯಕ
ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಸಂವಿಧಾನವಿರೋಧಿ ಹೇಳಿಕೆ ನೀಡಿರುವ ಈಶ್ವರಪ್ಪ ಸಚಿವ ಸ್ಥಾನದಲ್ಲಿರಕೂಡದು. ರಾಷ್ಟ್ರಧ್ವಜಕ್ಕೆ ಅಪಮಾನಿಸಿದ ಅವರನ್ನು ಸಂಪುಟದಿಂದ ಕೈಬಿಡಲೇಬೇಕು. ಈ ವಿಷಯದಲ್ಲಿ ಯಾವುದೇ ಒತ್ತಡ, ಬೆದರಿಕೆಗಳಿಗೆ ಕಾಂಗ್ರೆಸ್ ಬಗ್ಗಲ್ಲ, ಜಗ್ಗಲ್ಲ.
|ಬಿ.ಕೆ. ಹರಿಪ್ರಸಾದ್ವಿಧಾನಪರಿಷತ್ ಪ್ರತಿಪಕ್ಷದ ನಾಯಕ
ಸಸ್ಪೆಂಡ್ ಜಿಜ್ಞಾಸೆ:ಸಂವಿಧಾನದ ಮೌಲ್ಯ ಎತ್ತಿಹಿಡಿಯಬೇಕು ಎಂಬ ಕಳಕಳಿ, ಧ್ವನಿಗೆ ವಿರುದ್ಧವಾದ ಕಾಂಗ್ರೆಸ್ ನಡವಳಿಕೆ ಸರಿಯಲ್ಲವೆಂದು ಸ್ಪೀಕರ್ ಬೇಸರ ಹೊರಹಾಕಿದಾಗ, ಕಾಂಗ್ರೆಸ್​ನ ರಮೇಶ್ ಕುಮಾರ್ ಅವರು ಸಸ್ಪೆಂಡ್ ಮಾಡ್ಬಿಡಿ ಎಂದರೆ, ಜೆಡಿಎಸ್​ನ ಎಚ್.ಡಿ.ರೇವಣ್ಣ ಈ ಮಾತಿಗೆ ಧ್ವನಿಗೂಡಿಸಿದರು. ‘ನೀವು ಹಾಗೆ ಕೇಳುವುದು, ನಾವು ಸಸ್ಪೆಂಡ್ ಮಾಡುವುದು ಎರಡೂ ಸರಿಯಲ್ಲ. ಇಷ್ಟಕ್ಕೂ ನಿಮಗೆ (ರಮೇಶ್​ಕುಮಾರ್) ಸಸ್ಪೆಂಡ್ ಆಗುವ ಯೋಚನೆಯಿದ್ದರೆ ಹಾಗಂತ ಲೆಟರ್ ಕೊಡಿ’ ಎಂದು ಸ್ಪೀಕರ್ ತಿವಿದರು.
ಸಭಾಪತಿ ನೋವು:ಸದನದ ಎಲ್ಲ ಸದಸ್ಯರ ಅಭಿಪ್ರಾಯ, ಭಾವನೆ ವ್ಯಕ್ತಪಡಿಸಲು ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿದೆ. ಆದರೂ ಕಲಾಪ ಸುಸೂತ್ರವಾಗಿ ನಡೆಯಲು ಬಿಡುತ್ತಿಲ್ಲ. ನಿಮ್ಮ (ಕಾಂಗ್ರೆಸ್) ವರ್ತನೆಯು ಸದನದ ನಡವಳಿಕೆಗೆ ವಿರುದ್ಧವಾಗಿದ್ದು, ಬಹಳ ನೋವಿನಿಂದ ಕಲಾಪವನ್ನು ಸೋಮವಾರ ಬೆಳಗ್ಗೆ 11ಕ್ಕೆ ಮುಂದೂಡುತ್ತಿರುವೆ ಎಂದು ವಿಧಾನಪರಿಷತ್ ಸಭಾಪತಿ ಬಸವ ರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.
ಧರಣಿ ಮುಂದುವರಿಸಲು ಫರ್ಮಾನು:ಹಗಲಿರುಳು ಧರಣಿ ಬಿಟ್ಟು ಸ್ವಕ್ಷೇತ್ರದತ್ತ ಮುಖ ಮಾಡಿದ್ದ ‘ಕೈ’ ಶಾಸಕರಿಗೆ ಪಕ್ಷದ ಹೈಕಮಾಂಡ್ ಬ್ರೇಕ್ ಹಾಕಿದೆ. ರಾಷ್ಟ್ರಧ್ವಜಕ್ಕೆ ಬಿಜೆಪಿ ಸಚಿವರೇ ಅಪಮಾನಿಸಿದ್ದು ದೇಶಕ್ಕೆ ಗೊತ್ತಾಗಬೇಕಿದೆ. ಇನ್ನೆರಡು ದಿನ ಧರಣಿ ಮುಂದುವರಿಸಿ ಎಂದು ಕಾಂಗ್ರೆಸ್ ವರಿಷ್ಠರು ಫರ್ವನು ಹೊರಡಿಸಿದ್ದಾರೆ. ಬೆನ್ನಲ್ಲೇ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆಯಂತೆ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯ್ ಸಿಂಗ್ ವಿಪ್ ಜಾರಿಗೊಳಿಸಿ, ಸೋಮವಾರದವರೆಗೆ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವೆಂದು ಸೂಚಿಸಿದ್ದಾರೆ.
ನಸುಕಿನವರೆಗೂ ಸದಸ್ಯರ ಹರಟೆ:ವಿಧಾನಸಭೆ ಸಭಾಂಗಣದಲ್ಲಿ ಗುರುವಾರ ರಾತ್ರಿಯೂ ರಾಜಕೀಯ ಮಾತಿನ ಸದ್ದು. ಹಗಲಿರುಳು ಧರಣಿಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಶಾಸಕರು ದೇಶದ ರಾಜಕೀಯ ವಿದ್ಯಮಾನ, ಪಕ್ಷವಾರು ಸ್ಥಿತಿಗತಿ ಹರಟೆ, ಲೋಕಾಭಿರಾಮ ಮಾತುಕತೆಯಲ್ಲಿ ಮುಳುಗಿದರು. ಶುಕ್ರವಾರ ನಸುಕಿನ ಜಾವ 3ರ ಬಳಿಕ ನಿದ್ದೆಗೆ ಜಾರಿದರು.
ಟ್ವೆಂಟಿ-20 ಕ್ರಿಕೆಟ್ ಪಂದ್ಯ ವೀಕ್ಷಣೆ:ಉಭಯ ಸದನಗಳು ಸೋಮವಾರಕ್ಕೆ ಮುಂದೂಡಿಕೆ ಯಾದ ಬಳಿಕ ‘ಕೈ’ ಶಾಸಕರು ಯಥಾರೀತಿ ಧರಣಿ ಹಾದಿ ಹಿಡಿದರು. ವಿಧಾನಸಭೆ ಮೊಗಸಾಲೆಯಲ್ಲಿ ಸಂಜೆ ಕಡ್ಲೆಪುರಿ ತಿನ್ನುತ್ತ ಕೆಲವರು ಹರಟೆ ಹೊಡೆದರು. ಜತೆಗೆ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ಭಾರತ-ವೆಸ್ಟ್ ಇಂಡೀಸ್ ನಡುವಣ ಟಿ-20 ಕ್ರಿಕೆಟ್ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಿದರು.
ಅಪ್ಪು ಜನ್ಮದಿನದಂದು ‘ಜೇಮ್ಸ್​’ ಉತ್ಸವ; 31 ಕಟೌಟ್ಸ್​, ಹೆಲಿಕಾಪ್ಟರ್​​ನಲ್ಲಿ ಹೂಮಳೆ; ಇನ್ನೇನಿರಲಿದೆ ಅಲ್ಲಿ?

ಬರೀ ಚಿಲ್ಲರೆ ಹಣದಲ್ಲೇ ಸ್ಕೂಟರ್ ಖರೀದಿಸಿದ ಭೂಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
