| ಪ್ರತಾಪ್ ಟಿ. ಕೋಡಿನರಸೀಪುರ ನಂಜನಗೂಡು
ಕಪಿಲಾ, ನುಗು (ಭೃಗು) ಹಾಗೂ ಗುಪ್ತಗಾಮಿನಿ ನದಿಗಳ ತ್ರಿವೇಣಿ ಸಂಗಮ ಪ್ರಸಿದ್ಧ ಯಾತ್ರಾಸ್ಥಳ. ಕಪಿಲಾ ನದಿ ತುಂಬಿ ಹರಿದಾಗೆಲ್ಲ ಕ್ಷೇತ್ರದಲ್ಲಿ ಪ್ರವಾಹ ಭೀತಿ ಎದುರಾಗುತ್ತಿದ್ದು, ತಾಲೂಕಿನ ಪವಾಡ ಪುರುಷ ಸದ್ಗುರು ಶ್ರೀಮಹದೇವ ತಾತಾ ಐಕ್ಯ ಸನ್ನಿಧಾನದ ಸುತ್ತ ತಡೆಗೋಡೆ ನಿರ್ವಿುಸುವಂತೆ ಭಕ್ತ ಸಮೂಹ ಕೋರಿದೆ.
ಕಪಿಲಾ ನದಿ ತೀರದಲ್ಲಿ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯ, ಸುತ್ತೂರು ಮಠ, ಮಲ್ಲನಮೂಲೆ ಗುರುಕಂಬಳೀಶ್ವರ ಮಠಗಳಿದ್ದರೂ ಈ ಪ್ರದೇಶಗಳ ಸುತ್ತ ಪ್ರವಾಹ ಚಾಚಿ ನಿಲ್ಲುತ್ತದೆಯೇ ಹೊರತು ದೇವಾಲಯಗಳಿಗೆ ಹಾನಿಯ ಗೊಡವೆ ಇಲ್ಲ. ಆದರೆ, ನದಿಯಲ್ಲಿ 60 ಸಾವಿರ ಕ್ಯೂಸೆಕ್ ನೀರು ಹರಿದರೆ ಮಹದೇವ ತಾತಾ ಗದ್ದುಗೆ ಪ್ರದೇಶ ಸಂಪೂರ್ಣ ದ್ವೀಪದಂತಾಗುತ್ತದೆ. ಇದರಿಂದ ಇಲ್ಲಿರುವ ಅರ್ಚಕ ವೃಂದ, ಸಿಬ್ಬಂದಿ ವರ್ಗ ಹಾಗೂ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯೇ ಹೆಚ್ಚು.
ಮಹದೇವ ತಾತಾ ಜೀವಿತಾವಧಿಯಲ್ಲಿ ನೆಲೆಸಿದ್ದ ಗುಡಿ, ಬಳಸುತ್ತಿದ್ದ ಗಾಳಿಗುಂಡು ಬಂದೂಕು, ಜೋಳಿಗೆ, ಪಾದರಕ್ಷೆ, ಮೇಜು-ಕುರ್ಚಿ, ಪೆಟ್ಟಿಗೆ, ಪೂಜಾ ಸಾಮಗ್ರಿಗಳನ್ನು ಯಥಾಸ್ಥಿತಿಯಲ್ಲಿ ಸಂರಕ್ಷಿಸುವುದು ಭಕ್ತರ ಆಶಯವಾಗಿದೆ. ಮಳೆಗಾಲದಲ್ಲಿ ಪ್ರವಾಹ ಬಂದರೆ ತಾತಾ ವಾಸಿಸುತ್ತಿದ್ದ ಮನೆಗೆ ಹಾನಿ ಆತಂಕ ಕಾಡುತ್ತಿದೆ. ಪ್ರವಾಹ ಹೆಚ್ಚಾದರೆ ಹಾನಿಯ ತೀವ್ರತೆ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ತಡೆಗೋಡೆ ನಿರ್ವಿುಸಬೇಕೆಂಬುದು ಮಹದೇವ ತಾತಾ ಭಕ್ತಮಂಡಳಿ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಲಿ ಎಂಬುದು ಭಕ್ತ ವೃಂದದ ಒತ್ತಾಯವೂ ಆಗಿದೆ.
ಭಕ್ತರ ಆಕರ್ಷಣೀಯ ಪುಣ್ಯಕ್ಷೇತ್ರ
ಲೋಕ ಕಲ್ಯಾಣಕ್ಕಾಗಿ ಅವತಾರವೆತ್ತಿದ ಮಹದೇವ ತಾತಾ, ತಮ್ಮ ಸುದೀರ್ಘ ಜೀವಿತಾವಧಿಯಲ್ಲಿ ಲೋಕ ಸಂಚಾರ ನಡೆಸಿ ಅಪಾರ ಭಕ್ತವೃಂದ ಹೊಂದಿದ್ದರು. ತಾತಾ ನೆಲೆಯೂರಿದ ಕಡೆಯೆಲೆಲ್ಲ ಮಠಗಳು ನಿರ್ಮಾಣ ಗೊಂಡಿವೆ. ನಗರೂರು, ಬಳ್ಳಾರಿಯ ಅಲ್ಲೀಪುರ, ಹಂಪಸಾಗರ, ಹೊಳೆಗುಂದಿ, ಧಾರವಾಡ, ಆದವಾನಿ, ನಂದೀಪುರ, ಕತ್ತೇಬೆನ್ನೂರು ಸೇರಿ ಒಟ್ಟು 9 ಕಡೆ ಮಠಗಳಿವೆ. ತಾತಾ ಅವರು ಅಂತಿಮ ದಿನಗಳನ್ನು ನಂಜನಗೂಡು ತಾಲೂಕಿನ ಸಂಗಮ ಸುಕ್ಷೇತ್ರದಲ್ಲಿ ಕಳೆದರು. ಈ ಭಾಗದ ಭಕ್ತರ ಬವಣೆಗಳನ್ನು ನೀಗಿಸುತ್ತಾ ಕಾಯಕ ಯೋಗಿಯಾಗಿ ದವಸ ಧಾನ್ಯವನ್ನು ತಾವೇ ಬೆಳೆದು ಆಹಾರ ಮಾಡಿಕೊಂಡು ಜೀವಿಸಿದ್ದರು. 1987ರಲ್ಲಿ ಸಂಗಮದಲ್ಲಿ ಲಿಂಗೈಕ್ಯರಾದರು. ಅವರ ಐಕ್ಯಸ್ಥಳ ದೊಡ್ಡ ಧಾರ್ವಿುಕ ಕೇಂದ್ರವಾಗಿ ಬೆಳೆದು ನಿಂತಿದೆ. ಲಕ್ಷಾಂತರ ಭಕ್ತರ ಪಾಲಿನ ಇಷ್ಟಾರ್ಥ ಸಿದ್ಧಿಸುವ ಆಕರ್ಷಣೀಯ ಕೇಂದ್ರವೂ ಆಗಿದೆ. ಉದ್ಯಮಿಗಳು, ರಾಜಕಾರಣಿಗಳು, ರೈತಾಪಿವರ್ಗ ಮಹದೇವ ತಾತಾರ ಪರಮ ಭಕ್ತರಾಗಿದ್ದಾರೆ.
ಭೀಕರ ಪ್ರವಾಹ ಕರಿನೆರಳು
2019ರ ಆಗಸ್ಟ್​ನಲ್ಲಿ ಎದುರಾದ ಕಪಿಲಾ ನದಿ ಪ್ರವಾಹಕ್ಕೆ ಸಂಗಮ ಕ್ಷೇತ್ರ ತತ್ತರಿಸಿತ್ತು. ಪ್ರವಾಹಕ್ಕೆ ಅರ್ಚಕ ಕುಟುಂಬ, ಸಿಬ್ಬಂದಿ ಸಿಲುಕಿದ್ದರು. ಕಲ್ಯಾಣ ಮಂಟಪದಲ್ಲಿ ಗೋವುಗಳನ್ನು ರಕ್ಷಿಸಿ, ಅವುಗಳಿಗೆ ಮೇವು ಹಾಕಿ ಸಿಬ್ಬಂದಿ ಸಾಹಸ ಮೆರೆದಿದ್ದರು. ಸಿಬ್ಬಂದಿ ಕುಟುಂಬದವರನ್ನು ನುರಿತ ಈಜುಗಾರರಿಂದ ಬೋಟ್ ಮೂಲಕ ರಕ್ಷಿಸಲಾಗಿತ್ತು. ಹೀಗಾಗಿ ಪ್ರವಾಹ ನುಗ್ಗದಂತೆ ತಡೆಗೋಡೆ ನಿರ್ವಿುಸಿದರೆ ಇಂತಹ ದುಸ್ಥಿತಿ ಎದುರಾಗುವುದೇ ಇಲ್ಲ ಎಂಬುದು ಭಕ್ತರ ಕಳಕಳಿ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 + seven =
Remember me
